ಇಸ್ರೋ ಐತಿಹಾಸಿಕ ಸಾಧನೆ

Update: 2017-05-05 14:23 GMT

►235 ಕೋಟಿ ವೆಚ್ಚದ ಉಪಗ್ರಹ ಯೋಜನೆ

►ಯೋಜನೆಯ ಸಂಪೂರ್ಣ ವೆಚ್ಚ ಭರಿಸಿದ ಭಾರತ

►ಸಾರ್ಕ್ ರಾಷ್ಟ್ರಗಳ ನಡುವೆ ದೂರಸಂಪರ್ಕ, ಟಿವಿ, ಡಿಟಿಎಚ್, ವಿಸ್ಯಾಟ್‌ಗಳು, ಟೆಲಿ-ಶಿಕ್ಷಣ ಹಾಗೂ ಟೆಲಿಮೆಡಿಸಿನ್ ಸಂಪರ್ಕ ವ್ಯವಸ್ಥೆ

►ಪ್ರವಾಹ, ಭೂಕಂಪ, ಸುನಾಮಿ ಸಂದರ್ಭದಲ್ಲೂ ಸಂಪರ್ಕ ನೆರವು

►7 ಸಾರ್ಕ್ ರಾಷ್ಟ್ರಗಳ ನಡುವೆ ಹಾಟ್‌ಲೈನ್ ವ್ಯವಸ್ಥೆ

►ಯೋಜನೆಯಿಂದ ದೂರವುಳಿದ ಪಾಕಿಸ್ತಾನ

ಬೆಂಗಳೂರು, ಮೇ 5: ಭಾರತವು ಮಹತ್ವದ ದಕ್ಷಿಣ ಏಶ್ಯ ಸಂಪರ್ಕ ಉಪಗ್ರ ಜಿ-ಸ್ಯಾಟ್ 9 ಅನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆಗೊಳಿದೆ. ಸಂಪರ್ಕ ಸೌಲಭ್ಯವನ್ನು ಒದಗಿಸುವ ಹಾಗೂ ಪ್ರಾಕೃತಿ ವಿಕೋಪ ಸಂದರ್ಭಗಳಲ್ಲಿ ನೆರವಾಗುವ ಈ ಉಪಗ್ರಹವು ದಕ್ಷಿಣ ಏಶ್ಯದ ನೆರೆಹೊರೆಯ ದೇಶಗಳಿಗೆ ನೀಡಿರುವ ಅತ್ಯಂತ ಅಮೂಲ್ಯವಾದ ಉಡುಗೊರೆಯೆಂದು ಭಾರತ ಬಣ್ಣಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ನಿರ್ಮಿಸಿರುವ ಈ ಅತ್ಯಾಧುನಿಕ ಜಿಸ್ಯಾಟ್-9 ಸಂಪರ್ಕ ಉಪಗ್ರಹವು, ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಮುಂಜಾನೆ 4:57ರ ವೇಳೆಗೆ ಜಿಎಸ್‌ಎಲ್‌ವಿ-ಎಫ್09 ಉಪಗ್ರಹ ಉಡಾವಕದ ಮೂಲಕ ಬಾಹ್ಯಾಕಾಶಕ್ಕೆ ನೆಗೆಯಿತು.

ಜಿಸ್ಯಾಟ್-9 ದಕ್ಷಿಣ ಏಶ್ಯ ಉಪಗ್ರಹದ ಯಶಸ್ವಿ ಉಡಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಸ್ರೋವನ್ನು ಅಭಿನಂದಿಸಿದ್ದಾರೆ. ‘‘ಇದೊಂದು ಐತಿಹಾಸಿಕ ಕ್ಷಣವಾಗಿದೆ. ಒಡನಾಟದ ನೂತನ ಕ್ಷಿತಿಜಗಳನ್ನು ಅದು ತೆರೆಯಲಿದೆ. ದಕ್ಷಿಣ ಏಶ್ಯ ಹಾಗೂ ನಮ್ಮ ಪ್ರದೇಶದ ಪ್ರಗತಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ’’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

2230 ಕೆ.ಜಿ.ಭಾರದ ಜಿಸ್ಯಾಟ್-9 ಉಪಗ್ರಹವು ಸಂಪರ್ಕ ಉಪಗ್ರಹವಾಗಿದ್ದು ಅದು ದಕ್ಷಿಣ ಏಶ್ಯದ ರಾಷ್ಟ್ರಗಳಾದ್ಯಂತ ವಿವಿಧ ಸಂವಹನ ವ್ಯವಸ್ಥೆಗಳನ್ನು ಕ್ಯೂ-ಬ್ಯಾಂಡ್ ಮೂಲಕ ಒದಗಿಸಲಿದೆ. ದೂರಸಂಪರ್ಕ, ಟಿವಿ, ಡಿಟಿಎಚ್, ವಿಸ್ಯಾಟ್‌ಗಳು, ಟೆಲಿ-ಶಿಕ್ಷಣ ಹಾಗೂ ಟೆಲಿಮೆಡಿಸಿನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಉಪಗ್ರಹವು ಪೂರ್ಣ ಪ್ರಮಾಣದ ಸಂವಹನ ಸೇವೆಯನ್ನು ಒದಗಿಸಲಿದೆ.

ಭಾಗಿದಾರ ರಾಷ್ಟ್ರಗಳ ನಡುವೆ ಸುಭದ್ರವಾದ ಹಾಟ್‌ಲೈನ್ ವ್ಯವಸ್ಥೆಯನ್ನು ಕೂಡಾ ಅದು ಒದಗಿಸಲಿದ್ದು ಭೂಕಂಪ, ಚಂಡಮಾರುತ, ಪ್ರವಾಹ ಹಾಗೂ ಸುನಾಮಿಗಳಂತಹ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ನೆರವಾಗಲಿದೆ.235 ಕೋಟಿ ರೂ. ವೆಚ್ಚದ ಈ ಉಪಗ್ರಹದ ನಿರ್ಮಾಣಕ್ಕೆ ಭಾರತವೇ ಸಂಪೂರ್ಣ ಆರ್ಥಿಕ ನೆರವು ನೀಡಿದೆ.

ದಕ್ಷಿಣ ಏಶ್ಯದ ನೆರೆಹೊರೆಯ ರಾಷ್ಟ್ರಗಳಿಗೊಂದು ಅಮೂಲ್ಯ ಉಡುಗೊರೆಯೆಂದೇ ಬಣ್ಣಿಸಲ್ಪಟ್ಟಿರುವ ಈ ಯೋಜನೆಯಲ್ಲಿ ಪಾಕ್ ಹೊರತುಪಡಿಸಿ, ಉಳಿದ ಏಳು ಸಾರ್ಕ್ ರಾಷ್ಟ್ರಗಳಾದ ಭಾರತ,ಶ್ರೀಲಂಕಾ, ಭೂತಾನ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಮಾಲ್ಡೀವ್ಸ್ ಭಾಗವಹಿಸಿವೆ.
ಪಾಕಿಸ್ತಾನವು ತನ್ನದೇ ಆದ ಬಾಹ್ಯಾಕಾಶ ಯೋಜನೆಯನ್ನು ಹೊಂದಿರುವುದಾಗಿ ಹೇಳಿಕೊಂಡು, ಯೋಜನೆಯಿಂದ ಹೊರಗುಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News