ನನ್ನ ಮಗಳ ಕಾಲೇಜು ಫೀಸು ಕೊಡಲು ಇಲ್ಲದಾಗ ನನ್ನ ಸಹೋದ್ಯೋಗಿ ಕೂಲಿ ಕಾರ್ಮಿಕರು ಏನು ಮಾಡಿದರು ಗೊತ್ತೇ ? : ಇದ್ರೀಸ್

Update: 2017-05-09 10:38 GMT

ನನ್ನ ಉದ್ಯೋಗವೇನೆಂದು ನಾನು ನನ್ನ ಮಕ್ಕಳಿಗೆ ಯಾವತ್ತೂ ಹೇಳಿರಲಿಲ್ಲ. ಅವರು ನನ್ನಿಂದ ನಾಚಿಕೆಗೀಡಾಗುವುದು ನನಗೆ ಯಾವತ್ತೂ ಬೇಕಾಗಿರಲಿಲ್ಲ. ನಾನ್ಯಾವ ಕೆಲಸ ಮಾಡುತ್ತೇನೆಂದು ನನ್ನ ಕಿರಿಯ ಪುತ್ರಿ ನನ್ನಲ್ಲಿ ಕೇಳಿದಾಗ ನಾನೊಬ್ಬ ಕೂಲಿಯೆಂದು ತಡವರಿಸಿ ಹೇಳಿದ್ದೆ.

ನಾನೇನು ಉದ್ಯೋಗ ಮಾಡುತ್ತಿದ್ದೇನೆಂದು ಅವರಿಗೆ ತಿಳಿಯದಿರಲೆಂದು ಮನೆಗೆ ಹಿಂದಿರುಗುವ ಮುನ್ನ ನಾನು ಸಾರ್ವಜನಿಕ ಶೌಚಾಲಯದಲ್ಲಿ ಸ್ನಾನ ಮಾಡುತ್ತಿದ್ದೆ, ನನ್ನ ಪುತ್ರಿಯರು ಶಾಲೆಗೆ ಹೋಗಿ ಶಿಕ್ಷಿತರಾಗಬೇಕೆಂದು ನಾನು ಬಯಸಿದ್ದೆ. ಇತರರೆದುರು ಅವರು ಘನತೆಯಿಂದ ಇರಬೇಕೆಂದು ನನ್ನ ಇಚ್ಛೆಯಾಗಿತ್ತು.

ನನ್ನನ್ನು ಕೀಳು ದೃಷ್ಟಿಯಿಂದ ಜನ ನೋಡಿದಂತೆ ಇತರರು ನನ್ನ ಮಕ್ಕಳನ್ನು ನೋಡಬಾರದೆಂಬುದು ನನ್ನ ಬಯಕೆಯಾಗಿತ್ತು. ಜನರು ಯಾವತ್ತೂ ನನ್ನನ್ನು ಅವಮಾನಿಸುತ್ತಿದ್ದರು. ನನ್ನ ದುಡಿಮೆಯ ಪ್ರತಿಯೊಂದು ಪೈಸೆಯನ್ನೂ ನಾನು ನನ್ನ ಪುತ್ರಿಯಂದಿರ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದೆ. ನಾನು ಯಾವತ್ತೂ ಹೊಸ ಶರ್ಟ್ ಖರೀದಿಸಲಿಲ್ಲ, ಬದಲಾಗಿ ಆ ಹಣದಿಂದ ನನ್ನ ಮಕ್ಕಳಿಗೆ ಪುಸ್ತಕಗಳನ್ನು ಖರೀದಿಸುತ್ತಿದ್ದೆ.

ನನಗಾಗಿ ಗೌರವವನ್ನು ಅವರು ಸಂಪಾದಿಸಬೇಕೆಂಬುದು ನನ್ನ ಇಚ್ಛೆಯಾಗಿತ್ತು. ನನ್ನ ಪುತ್ರಿಯ ಕಾಲೇಜು ಪ್ರವೇಶಾತಿಯ ಕೊನೆಯ ದಿನದ ಹಿಂದಿನ ದಿನ ನನಗೆ ಆಕೆಯ ಕಾಲೇಜು ಫೀಸಿಗೆ ಹಣ ಹೊಂದಿಸಲು ಆಗಲಿಲ್ಲ. ಆ ದಿನ ನನಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಗಲೀಜು ಸ್ಥಳವೊಂದರ ಬಳಿ ಕುಳಿತಿದ್ದ ನಾನು ನನ್ನ ಕಣ್ಣೀರನ್ನು ತಡೆಯಲು ಬಹಳ ಪ್ರಯತ್ನಿಸಿದ್ದೆ.

ಆ ದಿನ ನನಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನನ್ನ ಸಹೋದ್ಯೋಗಿಗಳು ನನ್ನನ್ನು ನೋಡುತ್ತಿದ್ದರೂ ಯಾರೂ ನನ್ನ ಬಳಿ ಮಾತನಾಡಲು ಬರಲಿಲ್ಲ. ನಾನು ವಿಫಲನಾಗಿದ್ದೆ, ನನ್ನ ಹೃದಯ ಒಡೆದು ಹೋಗಿತ್ತು ಮನೆಗೆ ಹಿಂದಿರುಗಿದಾಗ ನನ್ನ ಮಗಳು ಕಾಲೇಜು ಫೀಸು ಬಗ್ಗೆ ಕೇಳಿದಾಗ ಅವಳನ್ನು ಹೇಗೆ ಎದುರಿಸುವುದೆಂದು ನನಗೆ ತಿಳಿದಿರಲಿಲ್ಲ.

ನಾನು ಹುಟ್ಟಿನಿಂದ ಬಡವ. ಒಬ್ಬ ಬಡವನಿಗೆ ಯಾವತ್ತೂ ಒಳ್ಳೆಯದು ನಡೆಯುವುದಿಲ್ಲವೆಂಬುದು ನನ್ನ ನಂಬಿಕೆಯಾಗಿತ್ತು. ಆ ದಿನದ ಕೆಲಸವಾದ ಮೇಲೆ ಎಲ್ಲಾ ಕೂಲಿಗಳೂ ನನ್ನ ಬಳಿ ಬಂದರು ನನ್ನ ಬಳಿ ಕುಳಿತು, ಅವರನ್ನು ನನ್ನ ಸಹೋದರನಂತೆ ನಾನು ತಿಳಿಯುತ್ತೇನೆಯೇ ಎಂದು ಕೇಳಿದರು. ನಾನು ಉತ್ತರಿಸುವ ಮೊದಲು ಅವರು ತಮ್ಮ ಆ ದಿನದ ವೇತನವನ್ನು ನನ್ನ ಕೈಗಿತ್ತರು.

ಅದನ್ನು ನಿರಾಕರಿಸಿದಾಗ ಅವರು ‘‘ಅಗತ್ಯ ಬಿದ್ದರೆ ಈ ದಿನ ನಾವು ಉಪವಾಸವಿರುತ್ತೇವೆ ಆದರೆ ನಮ್ಮ ಮಗಳು ಕಾಲೇಜಿಗೆ ಹೋಗಬೇಕು’’ ಎಂದು ಹೇಳಿದರು. ಅವರಿಗೆ ಉತ್ತರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆ ದಿನ ನಾನು ಸ್ನಾನ ಮಾಡಲಿಲ್ಲ. ಆ ದಿನ ನಾನು ನನ್ನ ಮನೆಗೆ ಒಬ್ಬ ಕೂಲಿ ಕಾರ್ಮಿಕನಂತೆಯೇ ಹೋದೆ. ನನ್ನ ಪುತ್ರಿ ಆಕೆಯ ಕಾಲೇಜು ಶಿಕ್ಷಣವನ್ನು ಸದ್ಯದಲ್ಲಿಯೇ ಮುಗಿಸಲಿದ್ದಾಳೆ. ಕೆಲಸ ಮಾಡಲು ಅವರು ಮೂವರೂ ನನಗೆ ಬಿಡುತ್ತಿಲ್ಲ.

ಅವಳಿಗೆ ಅರೆಕಾಲಿಕ ಉದ್ಯೋಗವಿದ್ದರೆ, ಮೂವರೂ ಟ್ಯೂಷನ್ ನೀಡುತ್ತಾರೆ. ಆದರೆ ಆಗಾಗ ನಾನು ಕೆಲಸ ಮಾಡುವ ಸ್ಥಳಕ್ಕೆ ನನ್ನನ್ನು ಆಕೆ ಕರೆದುಕೊಂಡು ಹೋಗುತ್ತಾಳೆ ಹಾಗೂ ಇತರ ಸಹೋದ್ಯೋಗಿ ಕೂಲಿ ಕಾರ್ಮಿಕರಿಗೂ ನನಗೂ ಆಹಾರ ನೀಡುತ್ತಾಳೆ. ಅವರೆಲ್ಲಾ ನಕ್ಕು ಏಕೆ ನಮಗೆ ಯಾವಾಗಲೂ ಆಹಾರ ಒದಗಿಸುತ್ತೀ ಎಂದು ಕೇಳುತ್ತಾರೆ. ‘‘ಇಂದು ನಾನು ಏನಾಗಿದ್ದೇನೆಯೋ ಹಾಗಾಗಲು ಆ ದಿನ ನೀವೆಲ್ಲರೂ ನನಗಾಗಿ ಉಪವಾಸವಿದ್ದಿರಿ.

ನಾನು ನಿಮಗೆಲ್ಲರಿಗೂ ಪ್ರತೀ ದಿನ ಆಹಾರವೊದಗಿಸುವಂತೆ ಆಗಲಿ ಎಂದು ನನಗಾಗಿ ಪ್ರಾರ್ಥಿಸಿ’’ ಎಂದು ಆಕೆ ಅವರಿಗೆ ಹೇಳಿದ್ದಳು. ಇತ್ತೀಚಿಗಿನ ದಿನಗಳಲ್ಲಿ ನಾನೊಬ್ಬ ಬಡವನೆಂದು ನನಗನಿಸುತ್ತಿಲ್ಲ. ಇಂತಹ ಮಕ್ಕಳಿರುವವನೊಬ್ಬ ಅದು ಹೇಗೆ ಬಡವನಾಗಿರಲು ಸಾಧ್ಯ ?

-ಇದ್ರೀಸ್

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News