'ತ್ರಿವಳಿ ತಲಾಖ್’ವಿರುದ್ಧ ಅರ್ಜಿಗಳ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಮೇ 11: ‘ತ್ರಿವಳಿ ತಲಾಖ್’ ಸಿಂಧುತ್ವದ ಬಗ್ಗೆ ಪ್ರಶ್ನಿಸಿ ಮುಸ್ಲಿಂ ಮಹಿಳೆಯರು, ವಿವಿಧ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುರುವಾರ ಆರಂಭಿಸಿದ್ದು, ಆರು ದಿನಗಳ ಕಾಲ ವಿಚಾರಣೆ ನಡೆಸಲು ನಿರ್ಧರಿಸಿದೆ.
ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಮೂಲಭೂತ ತತ್ವವೇ? ಇದು ಜಾರಿಗೊಳಿಸಬಹುದಾದ ಹಕ್ಕು ಹೌದೇ? ಹೌದಾಗಿದ್ದಲ್ಲಿ ಆ ಕುರಿತು ಮಧ್ಯಪ್ರವೇಶಿಸುವುದಿಲ್ಲ ಸುಪ್ರೀಂಕೋರ್ಟ್ ಪೀಠ ತಿಳಿಸಿದೆ.
ತ್ರಿವಳಿ ತಲಾಖ್ ರದ್ದುಪಡಿಸಬೇಕು, ಅದು ಅಸಾಂವಿಧಾನಿಕ. ಇದನ್ನು ಹಲವು ದೇಶಗಳಲ್ಲಿ ರದ್ದುಪಡಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅಧ್ಯಕ್ಷತೆಯ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಮುಸ್ಲಿಂ ಮಹಿಳೆಯರು ಸಲ್ಲಿಸಿದ ಐದು ಪ್ರತ್ಯೇಕ ಅರ್ಜಿ ಸಹಿತ ಒಟ್ಟು ಏಳು ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ವಿಚಾರಣೆಯ ಪೀಠದಲ್ಲಿ ನ್ಯಾ.ಕುರಿಯನ್ ಜೋಸೆಫ್, ರೋಹಿನ್ಟ್ಟನ್ ನಾರಿಮನ್, ಉದಯ ಲಲಿತ್, ಅಬ್ದುಲ್ ನಝೀರ್ ಅವರಿದ್ದಾರೆ. ನ್ಯಾಯ ಪೀಠ ಸರ್ವಧರ್ಮ ಸಮನ್ವಯದಿಂದ ಕೂಡಿದೆ.
ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಸಿಖ್ ಧರ್ಮಕ್ಕೆ ಸೇರಿದವರು. ಜಸ್ಟಿಸ್ ಕುರಿಯನ್ ಜೋಸೆಫ್ ಕೇರಳ ಕ್ರಿಶ್ಚಿಯನ್, ಜಸ್ಟಿಸ್ ರೋಹಿನ್ಟ್ಟನ್ ನಾರಿಮನ್ ಪಾರ್ಸಿ ಸಮುದಾಯಕ್ಕೆ ಸೇರಿದವರು. ಜಸ್ಟಿಸ್ ಉದಯ್ ಲಲಿತ್ ಹಿಂದೂ ಧರ್ಮದವರು ಹಾಗೂ ಜಸ್ಟಿಸ್ ಅಬ್ದುಲ್ ನಝೀರ್ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ.