ಸುಪ್ರೀಂಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿದ ನ್ಯಾ. ಕರ್ಣನ್
ಕೋಲ್ಕತಾ/ಚೆನ್ನೈ, ಮೇ 11: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿಎಸ್ ಕರ್ಣನ್ ಸುಪ್ರೀಂಕೋರ್ಟಿಗೆ ಮತ್ತೊಮೆ ಅರ್ಜಿ ಸಲ್ಲಿಸಿದ್ದಾರೆ.
ಕರ್ಣನ್‌ರನ್ನು ಬಂಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಂಗಾಳ ಹಾಗೂ ತಮಿಳುನಾಡಿನ ಪೊಲೀಸರು ಕರ್ಣನ್‌ಗಾಗಿ ಹುಡುಕಾಟ ನಡೆಸುತ್ತಿದ್ದು, ಅವರು ಈ ತನಕ ಪತ್ತೆಯಾಗಿಲ್ಲ. ಕರ್ಣನ್ ಗಡಿದಾಟಿ ಬಾಂಗ್ಲಾದೇಶ ಅಥವಾ ನೇಪಾಳಕ್ಕೆ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.
‘‘ಕರ್ಣನ್ ದೇಶ ಬಿಟ್ಟು ಹೋಗಿಲ್ಲ, ಅವರು ಚೆನ್ನೈಯಲ್ಲಿದ್ದಾರೆ. ಕರ್ಣನ್ ಸಲ್ಲಿಸಿರುವ ಕ್ಷಮೆಯಾಚನೆಯನ್ನು ನ್ಯಾಯಾಲಯ ಪರಿಗಣಿಸಬೇಕು’’ ಎಂದು ಕರ್ಣನ್ ಪರ ವಕೀಲರು ಹೇಳಿದ್ದಾರೆ. ‘‘ಕರ್ಣನ್ ಅಜ್ಞಾತ ಸ್ಥಳದಲ್ಲಿದ್ದಾರೆ’’ ಎಂದು ಇನ್ನೊಬ್ಬ ವಕೀಲ ಹೇಳಿಕೆ ನೀಡಿದ್ದಾರೆ.
ಡಿಜಿಪಿ(ಹೋಮ್‌ಗಾರ್ಡ್)ರಾಜ್ ಕನೋಜಿಯಾ ನೇತೃತ್ವದ ಐವರು ಸದಸ್ಯರನ್ನೊಳಗೊಂಡ ಬಂಗಾಳದ ಪೊಲೀಸ್ ತಂಡ ಬುಧವಾರ ಬೆಳಗ್ಗೆಯೇ ಚೆನ್ನೈಗೆ ಆಗಮಿಸಿತ್ತು. ಚೆನ್ನೈ ಪೊಲೀಸ್ ಕಮಿಶನರ್ ಕರಣ್ ಸಿಂಘಾರನ್ನು ಭೇಟಿಯಾಗಿ ಕರ್ಣನ್ ಪತ್ತೆಗೆ ವಾಹನಗಳ ಸೌಕರ್ಯವನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ. ಪೊಲೀಸರ ತಂಡ ಹಲವು ಕಡೆ ಶೋಧಿಸಿದರೂ ನ್ಯಾಯಾಧೀಶರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
‘‘ಸುಮಾರು 50ರಷ್ಟಿದ್ದ ಪೊಲೀಸರು ನನ್ನನ್ನು ಸುತ್ತುವರಿದು ನ್ಯಾ.ಕರ್ಣನ್ ಬಗ್ಗೆ ಮಾಹಿತಿ ಕೇಳಿದ್ದಾರೆ. ನ್ಯಾ.ಕರ್ಣನ್ ಆಂಧ್ರಪ್ರದೇಶದ ತಿರುಪತಿ ಸಮೀಪವಿರುವ ಕಾಳಹಸ್ತಿ ದೇವಾಲಯಕ್ಕೆ ತೆರಳಿರುವುದಾಗಿ ತಿಳಿಸಿದ್ದೇನೆ. ಪೊಲೀಸರು ಕಾಳಹಸ್ತಿಗೆ ತೆರಳಿ ವಾಪಸಾಗಿದ್ದಾರೆ. ಕರ್ಣನ್ ತಮಿಳುನಾಡಿನ ತ್ರಿವಂಡ್ರಮ್‌ನಲ್ಲಿದ್ದಾರೆಂಬ ವದಂತಿ ಹಬ್ಬಿತ್ತು. ಆದರೆ ಅಲ್ಲಿಯೂ ಅವರು ಪತ್ತೆಯಾಗಿಲ್ಲ. ನ್ಯಾಯಾಧೀಶರ ಚಾಲಕನನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆಂದು ಜಸ್ಟಿನ್ ಕರ್ಣನ್ ಪರ ವಕೀಲರಾದ ಪೀಟರ್ ಪ್ರೇಮ್‌ಕುಮಾರ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಮಂಗಳವಾರ ನೀಡಿರುವ ತೀರ್ಪಿನಲ್ಲಿ ನ್ಯಾ.ಕರ್ಣನ್‌ರನ್ನು ತಕ್ಷಣವೇ ಬಂಧಿಸಬೇಕು ಎಂದು ಆದೇಶಿಸಿತ್ತು. ಪಶ್ಚಿಮಬಂಗಾಳದ ಪೊಲೀಸ್ ಮಹಾ ನಿರ್ದೇಶಕರಿಗೆ ಕಾನೂನು ಜಾರಿಗೆ ತರುವಂತೆ ಸೂಚಿಸಿತ್ತು.