ಫೇಲಾದವರು ಯಾರು?

Update: 2017-05-12 18:43 GMT

ಒಂದೆಡೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್. ಮಗದೊಂದೆಡೆ ಎಸೆಸೆಲ್ಸಿ, ಪಿಯುಸಿ ಫಲಿತಾಂಶದ ಗದ್ದಲ. ಎರಡಕ್ಕೂ ಎಲ್ಲೋ ಒಂದಿಷ್ಟು ಸಾಮ್ಯವಿದೆ. ಹಲವರು ಐಪಿಎಲ್ ಕ್ರಿಕೆಟ್‌ನ್ನೇ ಬದುಕು ಎಂದು ನಂಬಿ ನೋಡೋದಿದೆ. ಬೆಟ್ಟಿಂಗ್ ಕಟ್ಟಿ ಸರ್ವಸ್ವವನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುವುದಿದೆ. ಎಸೆಸೆಲ್ಸಿ, ಪಿಯುಸಿಯ ನೊಗವನ್ನು ಮಕ್ಕಳ ಮೇಲೆ ಹೇರುವ ಪಾಲಕರೂ ಈ ಕ್ರಿಕೆಟ್ ಬೆಟ್ಟಿಂಗ್ ಕಟ್ಟಿದವರ ಮನಸ್ಥಿತಿಯನ್ನೇ ಹೊಂದಿರುತ್ತಾರೆ. ಭವಿಷ್ಯದ ಜೂಜಿಗೆ ಮಕ್ಕಳ ಬದುಕನ್ನೇ ಒಡ್ಡಿರುತ್ತಾರೆ. ಅಂತಿಮವಾಗಿ ಇದರ ಪರಿಣಾಮವನ್ನು ಅನುಭವಿಸುವುದು ಈ ಎಳೆ ಮಕ್ಕಳು. ಪ್ರತೀ ವರ್ಷ ಫಲಿತಾಂಶದ ಹೊತ್ತಿನಲ್ಲಿ ಮಕ್ಕಳ ಆತ್ಮಹತ್ಯೆ ಸುದ್ದಿಯಾಗುತ್ತಿರುತ್ತವೆ.

‘ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ, ಫೇಲಾದ ಕಾರಣಕ್ಕೆ ಆತ್ಮಹತ್ಯೆ’ ಎಂದು ಸಾವಿಗೆ ಮತ್ತೆ ಮಕ್ಕಳನ್ನೇ ನಾವು ಹೊಣೆ ಮಾಡಿ, ಪ್ರಕರಣವನ್ನು ಮುಗಿಸಿ ಬಿಡುತ್ತೇವೆ. ಅವರ ಮೇಲೆ ಒತ್ತಡವನ್ನು ಹೇರಿದವರು ಈ ‘ಆತ್ಮಹತ್ಯೆಯೆಂಬ ಪರೋಕ್ಷ ಕೊಲೆ’ಯಲ್ಲಿ ಸುಲಭವಾಗಿ ಪಾರಾಗಿ ಬಿಡುತ್ತಾರೆ. ತಮ್ಮ ಕಾಲೇಜಿಗೆ ನೂರು ಶೇ. ಫಲಿತಾಂಶ ಬರಬೇಕೆಂಬ ಆಡಳಿತ ಮಂಡಳಿಯ ಒತ್ತಡ, ಡಿಸ್ಟಿಂಕ್ಷನ್ ಪಡೆದು ಇಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಪಾಲಕರ ಒತ್ತಡ, ಸಮಾಜದ ಕೆಂಗಣ್ಣು, ಅಂಕಪಟ್ಟಿಯೇ ಬದುಕಿನ ಎಲ್ಲವನ್ನೂ ನಿರ್ಧರಿಸುತ್ತದೆ ಎನ್ನುವ ವ್ಯವಸ್ಥೆಯ ನಡವಳಿಕೆ ಅಂತಿಮವಾಗಿ ವಿದ್ಯಾರ್ಥಿಗಳನ್ನು ಆತ್ಮಹತ್ಯೆಯ ಸ್ಥಿತಿಗೆ ತಲುಪಿಸುತ್ತದೆ. ಎಸೆಸೆಲ್ಸಿ ಫಲಿತಾಂಶ ಹೊರ ಬಿದ್ದ ಬೆನ್ನಿಗೇ ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಫೇಲಾಗಿರುವುದು ನಮ್ಮ ಶಿಕ್ಷಣ ವ್ಯವಸ್ಥೆ ಎನ್ನುವುದನ್ನು ಈ ಆತ್ಮಹತ್ಯೆ ಘೋಷಿಸಿದೆ. ಪ್ರತಿಭೆಯನ್ನು ಅರಳಿಸಬೇಕಾದ ಶಿಕ್ಷಣ ಇಬ್ಬರು ಎಳೆಯರನ್ನು ಕೊಂದಿರುವುದರ ಹೊಣೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆಯೇ ಹೊತ್ತುಕೊಳ್ಳಬೇಕು.

ಪ್ರತೀ ವರ್ಷ ಇಂತಹ ಆತ್ಮಹತ್ಯೆಗಳು ಘಟಿಸುತ್ತಲೇ ಇವೆಯಾದರೂ, ಈ ಬಗ್ಗೆ ತನಿಖೆಯನ್ನು ನಡೆಸಿ ಒಂದು ವರದಿಯನ್ನು ತರಿಸಿಕೊಳ್ಳಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಮಾನಸಿಕ ತಜ್ಞರು, ಶಿಕ್ಷಣ ತಜ್ಞರು, ಪೊಲೀಸ್ ಅಧಿಕಾರಿಗಳು ಅಥವಾ ನ್ಯಾಯಾಧೀಶರನ್ನೊಳಗೊಂಡ ತಂಡವೊಂದು ಈವರೆಗೆ ನಡೆದಿರುವ ಆತ್ಮಹತ್ಯೆಯ ಹಿಂದಿರುವ ಪಾತ್ರಧಾರಿಗಳನ್ನು ಗುರುತಿಸಿ, ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಒಂದು ವರದಿಯನ್ನು ಕೊಡುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ಬಾರಿಯ ಫಲಿತಾಂಶದ ಹಿನ್ನೆಲೆಯಲ್ಲಾದರೂ ಅಂತಹದೊಂದು ತನಿಖೆ ನಡೆಯಬೇಕಾಗಿದೆ. ಆಗ ಮಾತ್ರ, ನಡೆಯುತ್ತಿರುವುದು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎನ್ನುವುದು ಬೆಳಕಿಗೆ ಬರಬಹುದು. ಯಾವುದೇ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಮೊತ್ತ ಮೊದಲು ಆ ವಿದ್ಯಾಸಂಸ್ಥೆಯೇ ಆ ಸಾವಿನ ಹೊಣೆ ಹೊರಬೇಕು. ಆ ಸಂಸ್ಥೆಯ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆಯಿಂದ ನೋಟಿಸು ಹೋಗಬೇಕು.

ಪದೇ ಪದೇ ಇಂತಹ ಆತ್ಮಹತ್ಯೆಗಳು ನಡೆದರೆ, ಅಂತಹ ವಿದ್ಯಾಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳಬೇಕು. ಹಾಗಾದಾಗ ಮಾತ್ರ ಈ ಎಳೆ ಹೂಗಳು ಅರಳುವ ಮುನ್ನವೇ ಬಾಡುವ ಪ್ರಕರಣಗಳು ಕೊನೆಯಾದೀತು. ಇದೇ ಸಂದರ್ಭದಲ್ಲಿ ಈ ಬಾರಿಯ ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದ ಒಂದು ಮುಖ್ಯ ಅಂಶವನ್ನು ಗಮನಿಸಬೇಕು. ಎರಡೂ ಫಲಿತಾಂಶಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಂದಿದೆ. ಹಾಗೆಯೇ ಬೀದರ್ ಕೊನೆಯ ಸ್ಥಾನದಲ್ಲಿದೆ. ಬೀದರ್ ಪ್ರತೀ ಬಾರಿಯೂ ಶಾಲಾ ಫಲಿತಾಂಶದ ಸಂದರ್ಭದಲ್ಲಿ ಹಿನ್ನಡೆ ಅನುಭವಿಸುವ ಮೂಲಕವೇ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಯಾಕೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ. ಬೀದರ್ ಬಡವರ ಜಿಲ್ಲೆ. ಇಂದು ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿಯ ಹೆಸರಿನಲ್ಲಿ ಬೀಗುತ್ತಿದ್ದರೆ, ಅದಕ್ಕೆ ಕಾರಣರು ಬೀದರ್ ನಂತಹ ಜಿಲ್ಲೆಗಳಿಂದ ವಲಸೆ ಬಂದ ಕಟ್ಟಡ ಕಾರ್ಮಿಕರು.

ಮಂಗಳೂರಿನ ರಸ್ತೆ, ಸೇತುವೆ, ಬೃಹತ್ ಕಟ್ಟಡಗಳಲ್ಲಿ ಈ ಬೀದರ್‌ನ ಕಾರ್ಮಿಕರ ಬೆವರಿದೆ. ಕಣ್ಣೀರಿದೆ. ಆದುದರಿಂದ, ಬೀದರ್ ಒಂದು ವೇಳೆ ಶೈಕ್ಷಣಿಕವಾಗಿ ಹಿಂದುಳಿದಿದ್ದರೆ, ಅದನ್ನು ಮೇಲೆತ್ತುವ ಹೊಣೆಗಾರಿಕೆ ಮಂಗಳೂರು, ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಬದುಕುವ ಬುದ್ಧಿವಂತರಿಗೆ ಸೇರಿದೆ.ಕಳೆದ ಕೆಲವು ವರ್ಷಗಳಿಂದ ಬೀದರ್ ಈ ಶೈಕ್ಷಣಿಕ ಹಿನ್ನಡೆಯನ್ನು ಅನುಭವಿಸುತ್ತಾ ಬರುತ್ತಿದೆ ಎನ್ನುವಾಗ, ಆ ಜಿಲ್ಲೆಗಾಗಿ ವಿಶೇಷ ಗಮನವನ್ನು ನೀಡುವುದು, ಯಾವ ಕಾರಣದಿಂದ ಹಿಂದುಳಿದಿದೆಯೋ ಅದನ್ನು ಗುರುತಿಸಿ ಬೇಕಾದ ವಿಶೇಷ ಸವಲತ್ತನ್ನು ನೀಡುವುದು, ಆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ದುಪ್ಪಟ್ಟು ಅನುದಾನವನ್ನು ನೀಡುವುದು ಸರಕಾರದ ಕರ್ತವ್ಯ.ವಾಗಬೇಕಾಗಿತ್ತು. ಇನ್ನಾದರೂ ಬೀದರ್‌ನಂತಹ ಹಿಂದುಳಿದ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮೇಲೆತ್ತುವ, ಅಲ್ಲಿನ ಶಾಲೆಗಳಿಗೆ ಉಪನ್ಯಾಸಕರನ್ನು ನೇಮಿಸುವ, ಅತ್ಯಾಧುನಿಕ ಸಲಕರಣೆಗಳನ್ನು ನೀಡುವ ಕಾರ್ಯಕ್ಕೆ ಸರಕಾರ ಅನುವಾಗಬೇಕು. ಮುಂದಿನ ಬಾರಿ ಫಲಿತಾಂಶ ಹೊರಬೀಳುವಾಗ ಬೀದರ್ ಜಿಲ್ಲೆ ಮಂಗಳೂರಿಗಿಂತ ಎರಡು ಹೆಜ್ಜೆ ಮುಂದಿರಬೇಕು.

ಇದೇ ಸಂದರ್ಭದಲ್ಲಿ ಈ ಬಾರಿಯ ಫಲಿತಾಂಶದಲ್ಲಿ ಕೆಲವು ಮಾದರಿ ವಿದ್ಯಾರ್ಥಿಗಳು ನಮ್ಮ ಮುಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಗರಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕುಖ್ಯಾತವಾಗಿವೆ ಮತ್ತು ದುಬಾರಿ ಶುಲ್ಕಗಳಿಗೂ. ಆದರೆ ಈ ಬಾರಿ ರಾಜ್ಯದಲ್ಲೇ ಅತ್ಯುತ್ತಮ ಸಾಧನೆಯನ್ನು ಮೆರೆದ ಹುಡುಗ ನಗರ ಪ್ರದೇಶದವನಲ್ಲ. ಕಡಬ ಎನ್ನುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಶೇ. 100 ಅಂಕ ಗಳಿಸಿದ್ದಾನೆ. ಎಲ್ಲಕ್ಕಿಂತ ದೊಡ್ಡ ಸಾಧನೆಯೆಂದರೆ, ಈತ ಕನ್ನಡ ಮಾಧ್ಯಮದಲ್ಲಿ ಕಲಿತು ಈ ಸಾಧನೆ ಮಾಡಿದ್ದಾನೆ. ತೀರಾ ಗ್ರಾಮೀಣ ಭಾಗವಾದ ಹಳ್ಳಂಗೇರಿ ಎಂಬಲ್ಲಿಂದ ಈತ ಶಾಲೆಗೆ ಹೋಗಬೇಕಾದ ಬಸ್ ಹಿಡಿಯಬೇಕಾದರೆ ಸುಮಾರು ಒಂದೂವರೆ ಕಿ.ಮೀ. ನಡೆಯಬೇಕಾಗಿತ್ತು.

ಗ್ರಾಮೀಣ ಪ್ರದೇಶದ ಶಾಲೆಗಳ ಬಗ್ಗೆ, ಕನ್ನಡ ಮಾಧ್ಯಮದ ಕುರಿತಂತೆ ಕೀಳರಿಮೆ ಹೊಂದಿದವರಿಗೆ ಈ ಹುಡುಗ ಭರವಸೆಯಾಗಿದ್ದಾನೆ. ಹಾಗೆಯೇ ಬೆಳ್ತಂಗಡಿಯ ಎಂಡೋಸಲ್ಫಾನ್ ಸಂತ್ರಸ್ತ ಅಂಧ ವಿದ್ಯಾರ್ಥಿಯೊಬ್ಬ ಶೇ. 71.51 ಅಂಕ ಗಳಿಸಿ ಸಾಧನೆ ಮೆರೆದಿದ್ದಾನೆ. ಪಾಲಕರ ಬೆಂಬಲ, ಪ್ರೋತ್ಸಾಹ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈತ ಉದಾಹರಣೆಯಾಗಿದ್ದಾನೆ. ಹಾಗೆಯೇ ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ವಸತಿ ಪಾಠಶಾಲೆ ಎಸೆಸೆಲ್ಸಿಯಲ್ಲಿ ಶೇ. ನೂರು ಫಲಿತಾಂಶ ಪಡೆದಿದೆ. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಇವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಹಾಗೆಯೇ ಫೇಲಾಗಿರುವ ವಿದ್ಯಾರ್ಥಿಗಳಿಗೆ ದುಪ್ಪಟ್ಟು ಅಭಿನಂದನೆಗಳು. ಯಾಕೆಂದರೆ, ಈ ಜಗತ್ತಿನಲ್ಲಿ ಬಹುದೊಡ್ಡದನ್ನು ಸಾಧಿಸಿದದವರಲ್ಲಿ ಫೇಲಾದವರೇ ಅಧಿಕ. ಫೆೇಲಾದ ವಿದ್ಯಾರ್ಥಿ ವಿಶೇಷ ಪ್ರತಿಭಾವಂತ. ಆ ಕಾರಣಕ್ಕಾಗಿಯೇ ಆತ ಫೇಲಾಗಿದ್ದಾನೆ. ಬದುಕು ಫೇಲಾಗಿರುವ ವಿದ್ಯಾರ್ಥಿಗಳಿಗಾಗಿ ಇನ್ನೇನೋ ವಿಶೇಷ ತೆಗೆದಿಟ್ಟಿದೆ.ಆ ಉಡುಗೊರೆಯನ್ನು ತನ್ನದಾಗಿಸಿಕೊಳ್ಳಲು ವಿದ್ಯಾರ್ಥಿಗಳು ಒಂದಿಷ್ಟು ತಾಳ್ಮೆ, ವಿವೇಕ, ಶ್ರದ್ಧೆ, ಶ್ರಮದೊಂದಿಗೆ ಮುಂದುವರಿಯಬೇಕು, ಅಷ್ಟೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News