ನನ್ನನ್ನು ಎಂದಿಗೂ ಅಳಲು ಬಿಡುವುದಿಲ್ಲ ಎಂಬ ಮಾತನ್ನು ಅಬ್ಬಾಸ್ ಮಿಯಾ ಉಳಿಸಿಕೊಂಡರು : ರಝಿಯಾ ಬೇಗಂ

Update: 2017-05-15 06:33 GMT

ಮತ್ತೆ ಪ್ರೇಮಪಾಶದಲ್ಲಿ ಬೀಳಲು ಬಹಳ ಕಷ್ಟವಿದೆ, ಮುಖ್ಯವಾಗಿ ವೇಶ್ಯೆಯೊಬ್ಬಳಿಗೆ. ನಾನು ಜೀವನವನ್ನು ಅರ್ಥಮಾಡಿಕೊಂಡಿರುವುದರಿಂದ ನನ್ನ ಆತ್ಮದ ಪ್ರತಿಯೊಂದು ಇಂಚು ಕೂಡ ನೋವನ್ನನುಭವಿಸಿದೆ. ನನ್ನ ವಯಸ್ಸೆಷ್ಟು ಅಥವಾ ನನ್ನ ಹೆತ್ತವರು ಯಾರೆಂದು ನನಗೆ ತಿಳಿದಿಲ್ಲ. ನನ್ನ ಜೀವಮಾನವೆಲ್ಲಾ ನಾನು ರಸ್ತೆಯಲ್ಲಿಯೇ ಕಳೆದಿದ್ದೇನೆ. ನಾನು ಜೀವದಿಂದಿರಲು ಒಂದೇ ಕಾರಣ ನನ್ನ ಮಗಳಾಗಿದ್ದಳು. ನನ್ನ ವೃತ್ತಿಯೇನೆಂದು ನಾನು ಯಾವತ್ತೂ ಆಕೆಗೆ ಹೇಳಿರಲಿಲ್ಲ. ಆಕೆಯೊಬ್ಬಳು ಮುದ್ದಾದ ಹುಡುಗಿಯಾಗಿದ್ದಳು.

ಮುಖ್ಯವಾಗಿ ಆಕೆ ನಗುವಾಗ ಆಕೆಗೆ ಸುಳ್ಳು ಹೇಳುವುದು ಕಷ್ಟವಾಗಿತ್ತು. ‘‘ಅಮ್ಮಾ ನೀನೇಕೆ ರಾತ್ರಿ ಹೊತ್ತು ಕೆಲಸಕ್ಕೆ ಹೋಗುತ್ತೀಯಾ?’’ ಎಂದು ಆಕೆ ಕೇಳಿದಾಗಲೆಲ್ಲಾ ನನಗೆ ಕಷ್ಟವಾಗುತ್ತಿತ್ತು. ಆಕೆಯಲ್ಲಿ ಮಾತನಾಡುವುದು ಅಸಾಧ್ಯವಾಗುತ್ತಿತ್ತು. ‘‘ನನಗೆ ರಾತ್ರಿ ಹೊತ್ತು ಕೆಲಸ ಮಾಡುವುದು ಯಾವತ್ತೂ ಬೇಕಿರಲಿಲ್ಲ,’’ ಎಂದು ಕೆಲವೊಮ್ಮೆ ಆಕೆಗೆ ಹೇಳುತ್ತಿದ್ದೆ.

ಯಾವುದೂ ಅರ್ಥವಾಗದೆ ಆಕೆ ನಾನು ಹೊರ ಹೋಗುವ ಮುಂಚೆ ನನ್ನನ್ನು ಬಿಗಿದಪ್ಪಿಕೊಳ್ಳುತ್ತಿದ್ದಳು. ಆ ಗ್ಯಾಂಗಿನಿಂದ ಹೊರ ಬರಬೇಕೆಂದು ನನಗನಿಸುತ್ತಿತ್ತು. ಹಲವಾರು ಬಾರಿ ತಪ್ಪಿಸಕೊಂಡು ಹೋಗಲೂ ಯತ್ನಿಸಿದ್ದೆ. ನನ್ನ ಜೀವವುಳಿಸುವುದು ನನಗೆ ಬೇಕಿತ್ತು. ಆದರೆ ನನಗೆ ಯಾರೂ ಗೊತ್ತಿರಲಿಲ್ಲ. ನಾನು ಈ ಕೆಟ್ಟ ಜಗತ್ತಿನಲ್ಲಿ ಏಳುವುದರಿಂದ ಯಾರೂ ನನ್ನ ಸಹಾಯಕ್ಕೆ ಬರುವುದಿಲ್ಲ. ಎಲ್ಲರೂ ನನ್ನನು ಬಳಸಿಕೊಂಡರು ನನ್ನ ಹೃದಯದೊಂದಿಗೆ ಚೆಲ್ಲಾಟವಾಡಿದರು ನನ್ನನ್ನು ಹತಾಶೆಗೊಳಿಸಿದರು. ನಾನೆಲ್ಲಿ ಹೋಗುತ್ತಿದ್ದೇನೆಂಬುದರ ಅರಿವೆಯೇ ನನಗಿರಲಿಲ್ಲ.

ಆ ದಿನ ಜೋರಾಗಿ ಮಳೆ ಬರುತ್ತಿತ್ತು. ನಾನು ಮರವೊಂದರ ಕೆಳಗೆ ನಿಂತಿದ್ದೆ, ಸೂರ್ಯ ಮುಳುಗಲು ಕಾದಿದ್ದೆ. ಆ ಮರದ ಇನ್ನೊಂದು ಬದಿಯಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಭಿಕ್ಷುಕನನ್ನು ನಾನು ಗಮನಿಸಿಯೇ ಇರಲಿಲ್ಲ. ನಾನು ಜೋರಾಗಿ ಅಳುತ್ತಿದ್ದೆ, ಮಳೆ ನೀರು ನನ್ನ ಮುಖಕ್ಕೆ ರಾಚುತ್ತಿತ್ತು. ಎಷ್ಟು ಹೊತ್ತು ನಾನು ಸಿಟ್ಟು ಹಾಗೂ ನೋವಿನಿಂದ ಅರಚುತ್ತಿದ್ದೆನೆಂದು ನನಗೇ ತಿಳಿದಿರಲಿಲ್ಲ. ನನ್ನ ಮಗಳ ಬಳಿ ಹೋಗಬೇಕೆಂದೆನಿಸಿತು.

ಯಾವ ಅಪರಿಚಿತನೊಂದಿಗೂ ಎಲ್ಲಿಗೂ ಹೋಗುವುದು ನನಗೆ ಬೇಕಿರಲಿಲ್ಲ. ನನಗೆ ತುಂಬಾ ಸುಸ್ತಾಗಿತ್ತು. ಎಲ್ಲರೂ ಎಲ್ಲ ಕಡೆಯಲ್ಲೂ ನನ್ನನ್ನು ಶೋಷಿಸುತ್ತಿದ್ದುದರಿಂದ ಬೇಸತ್ತು ಹೋಗಿತ್ತು. ಒಮ್ಮೆಗೇ ನನಗೆ ಗಾಲಿಕುರ್ಚಿಯ ಸದ್ದಾಯಿತು. ಆತ ಜೋರಾಗಿ ಕೆಮ್ಮಿ ನನ್ನ ಗಮನ ಸೆಳೆಯಲು ಯತ್ನಿಸಿದರು. ನಾನು ನನ್ನ ಕಣ್ಣೀರನ್ನು ಒರೆಸದೆ ಭಿಕ್ಷುಕನಿಗೆ ನೀಡಲು ನನ್ನ ಬಳಿ ಹಣವಿಲ್ಲವೆಂದು ಹೇಳಿದೆ.

ಆತ ನನಗೆ 50 ಟಕಾ ನೋಟೊಂದನ್ನು ಈಡಿ ಆತನ ಬಳಿ ಅಷ್ಟೇ ಇರುವುದೆಂದು ಹೇಳಿದ. ಜೋರಾಗಿ ಬಿರುಗಾಳಿ ಬೀಸಬಹುದೆಂದು ಎಚ್ಚರಿಸಿದ ಆತ ನನಗೆ ಮನೆಗೆ ಹೋಗಲು ಹೇಳಿದ. ನಾನು ತಟಸ್ಥಳಾಗಿದ್ದೆ. ಆ ನೋಟು ಒದ್ದೆಯಾಗಿದ್ದರೂ ಅದನ್ನು ಪ್ರೀತಿಯಿಂದ ಇಟ್ಟುಕೊಂಡೆ. ಆತ ಮಳೆಯಲ್ಲಿಯೇ ತನ್ನ ಗಾಲಿ ಕುರ್ಚಿ ಎಳೆದುಕೊಂಡು ದೂರ ಸಾಗಿ ಬಿಟ್ಟ. ಮೊತ್ತ ಮೊದಲ ಬಾರಿಗೆ ಆ ಸಂಜೆ ನನ್ನನ್ನು ಉಪಯೋಗಿಸದೆ ಒಬ್ಬರು ನನಗೆ ಹಣ ನೀಡಿದ್ದರು. ನನ್ನ ಗುಡಿಸಲಿಗೆ ಹಿಂದಿರುಗುವಾಗ ಬಹಳಷ್ಟು ಅತ್ತು ಬಿಟ್ಟೆ. ಆ ದಿನ ಮೊದಲ ಬಾರಿಗೆ ಬೇರೊಬ್ಬರ ಪ್ರೀತಿ ನನಗೆ ದಕ್ಕಿತು ಎಂದುಕೊಂಡೆ.

ಅದೇ ಮಳೆಗಾಲದಲ್ಲಿ ನಾನು ಆತನಿಗೆ ಹಲವಾರು ದಿನಗಳ ಕಾಲ ಹುಡುಕಿದೆ. ಕೊನೆಗೊಂದು ದಿನ ಆತ ಮರದ ಕೆಳಗೆ ಕುಳಿತಿರುವುದನ್ನು ನೋಡಿದೆ. ಆತನ ಅಂಗವಿಕಲತೆಯಿಂದ ಆತನ ಪತ್ನಿ ಆತನನ್ನು ತ್ಯಜಿಸಿ ಹೋಗಿದ್ದಳೆಂದು ನನಗೆ ತಿಳಿದು ಬಂತು. ಮತ್ತೊಮ್ಮೆ ಪ್ರೀತಿ ಮಾಡಲು ನನಗೆ ಸಾಧ್ಯವಾಗುವುದಿಲ್ಲವಾದರೂ ಆತನ ಗಾಲಿಕುರ್ಚಿಯನ್ನು ಜೀವನಪರ್ಯಂತ ದೂಡಬಲ್ಲೆ ಎಂದು ಧೈರ್ಯದಿಂದ ಆತನಿಗೆ ಹೇಳಿದೆ.

ಆತ ಆಗ ನಕ್ಕು ‘‘ಪ್ರೀತಿಯಿಲ್ಲದೆ ಯಾರು ಕೂಡ ಗಾಲಿಕುರ್ಚಿ ನೂಕಲು ಸಾಧ್ಯವಿಲ್ಲ,’’ ಎಂದು ಬಿಟ್ಟ. ನಮಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಏನೇ ಆದರೂ ನನ್ನ ಕಣ್ಣಲ್ಲಿ ಮತ್ತೆ ನೀರು ಬರಿಸುವುದಿಲ್ಲ ಎಂದು ಮದುವೆಯ ಸಂದರ್ಭ ಆತ ಆಶ್ವಾಸನೆ ನೀಡಿದ್ದ. ಕೆಲವೊಮ್ಮೆ ನಮಗೆ ಊಟ ಕೂಡ ಇರುವುದಿಲ್ಲ. ಇಂದು ಕೂಡ ನಮ್ಮ ಬಳಿ ಒಂದು ಪ್ಲೇಟ್ ಚೊಟ್ಪೊಟಿ ಇದೆ ಅದನ್ನು ನಾವು ಹಂಚಿ ತಿನ್ನುತ್ತೇವೆ. ನಾವೀಗಾಗಲೇ ಹಲವಾರು ಕಷ್ಟಕರ ದಿನಗಳು, ತಿಂಗಳುಗಳು ಹಾಗೂ ವರ್ಷಗಳನ್ನು ಕಳೆದಿದ್ದೇವೆ. ಆದರೆ ಯಾವ ಮರದ ಕೆಳಗೆ ನಿಂತು ಕೂಡ ನಾನು ಮತ್ತೆ ಅಳಲಿಲ್ಲ. ಅಬ್ಬಾಸ್ ಮಿಯಾ ತನ್ನ ಮಾತನ್ನು ಉಳಿಸಿಕೊಂಡಿದ್ದರು.

- ರಝಿಯಾ ಬೇಗಂ

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News