ರಹಸ್ಯವಾಗಿ ನನ್ನನ್ನು ಭೇಟಿಯಾಗುತ್ತಿದ್ದ ಮಗಳು ಕೈಯಲ್ಲಿದ್ದ ಗಾಯಗಳನ್ನು ಮುಚ್ಚಿಕೊಳ್ಳುತ್ತಿದ್ದಳು : ಅಲಿ ಅಹ್ಮದ್

Update: 2017-05-16 07:14 GMT

ಸುಮಾರು ಐದು ವರ್ಷಗಳ ತನಕ ನನ್ನ ಮಗಳು ನನ್ನನ್ನು ರಹಸ್ಯವಾಗಿ ಭೇಟಿಯಾಗಲು ಬರುತ್ತಿದ್ದಳು. ಆಕೆಯ ಪತಿ ಮನೆಗೆ ಭೇಟಿ ನೀಡುವುದು ನನಗೆ ನಿಷಿದ್ಧವಾಗಿತ್ತು. ಅವರಿಗೆ ಹೆಚ್ಚು ಹಣ ಕೊಡಲು ನನಗೆ ಸಾಧ್ಯವಿಲ್ಲವೆಂದಾದರೆ ನಾನು ಮತ್ತೆ ನನ್ನ ಮಗಳ ಮುಖ ನೋಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ನನ್ನ ಮಗಳನ್ನು ಭೇಟಿಯಾಗುವಾಗ ನಾನು ಬಹಳ ಎಚ್ಚರಿಕೆಯಿಂದಿರಬೇಕಿತ್ತು. ಪ್ರತಿ ಬಾರಿ ಆಕೆಯಲ್ಲಿ ನೀನು ಹೇಗಿದ್ದಿ ಎಂದು ಕೇಳಿದಾಗ ಆಕೆ ಬಹಳಷ್ಟು ನಗುತ್ತಿದ್ದಳು ಅಗತ್ಯಕ್ಕಿಂತ ಹೆಚ್ಚು ನಗುತ್ತಿದ್ದಳು. ಒಂದು ದಿನ ನಾವಿಬ್ಬರು ಯಾವುದೇ ಅಂಜಿಕೆಯಿಲ್ಲದೆ ಭೇಟಿಯಾಗಲು ಸಾಧ್ಯವೆಂದು ಕೆಲವೊಮ್ಮೆ ಆಕೆ ನನಗೆ ಹೇಳುತ್ತಿದ್ದಳು. ನಾನು ಎರಡು ಪಟ್ಟು ಹೆಚ್ಚು ದುಡಿಯುತ್ತಿರುವುದರಿಂದ ಆ ದಿನ ಬೇಗನೇ ಬರಲಿದೆಯೆಂದು ನಾನು ಆಕೆಗೆ ಹೇಳುತ್ತಿದ್ದೆ.

‘‘ನಿಮ್ಮ ಎಲ್ಲಾ ನೋವುಗಳಿಗೆ ನಾನು ಕಾರಣವಲ್ಲವೇ ಬಾಬಾ?’’ ಎಂದು ಆಕೆ ನನ್ನನ್ನು ನೋಡಿ ನಕ್ಕು ಹೇಳುತ್ತಿದ್ದಳು. ಆದರೆ ಆಕೆಯ ಮಾತನ್ನು ಅರ್ಧದಲ್ಲಿಯೇ ನಿಲ್ಲಿಸಿ ನಾನು ಜೀವದಿಂದಿರಲು ಆಕೆಯೊಬ್ಬಳೇ ಕಾರಣ ಎಂದು ಹೇಳುತ್ತಿದ್ದೆ. ನಮಗೆ ಒಬ್ಬರನ್ನೊಬ್ಬರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇನ್ನೊಂದು ಕೆಲ ತಿಂಗಳು ನಾನು ಉಳಿತಾಯ ಮಾಡಬೇಕಿತ್ತು.

ಕೆಲವೊಮ್ಮೆ ಆಕೆಯ ಕೈಗಳು ಹಾಗೂ ಕಾಲುಗಳಲ್ಲಿ ಕೆಲವು ನೇರಳೆ ಗಾಯದ ಗುರುತುಗಳನ್ನು ನಾನು ನೋಡುತ್ತಿದ್ದೆ. ಅವುಗಳನ್ನು ಆಕೆ ಮುಚ್ಚಿಕೊಳ್ಳುತ್ತಿದ್ದಳು ಹಾಗೂ ನನಗೆ ಆಕೆ ಉತ್ತರ ನೀಡುತ್ತಿರಲಿಲ್ಲ. ಆಕೆಯ ಕೈಗಳನ್ನು ಹಿಡಿದು ಆಕೆಯನ್ನು ಯಾರೂ ಹಿಂಸಿಸದ ನಮ್ಮ ಮನೆಗೆ ಕರೆದುಕೊಂಡು ಬರಬೇಕೆಂದು ನನಗೆ ಅನಿಸುತ್ತಿತ್ತು. ಆದರೆ ಹಾಗೆ ಮಾಡಲು ನನಗೆ ಸಾಧ್ಯವಿಲ್ಲವಾಗಿತ್ತು.

ಪ್ರತಿ ವರ್ಷ ಕಳೆದಂತೆ ಅವರು ಬೇಡಿಕೆಯಿಡುತ್ತಿದ್ದ ವರದಕ್ಷಿಣೆಗಾಗಿ ನಾನು ಉಳಿತಾಯ ಮಾಡುತ್ತಲೇ ಇದ್ದೆ. ಒಂದು ದಿನ ನಾನು ತುಂಬಾ ಸಂತೋಷದಿಂದಿದ್ದೆ. ಆಕೆಯ ಅತ್ತೆ ಮಾವ ನಮಗೆ ತೊಂದರೆಯುಂಟು ಮಾಡದೇ ಇರುವಂತೆ ಮಾಡಲು ನಮ್ಮ ಮನೆಯನ್ನು ಮಾರಾಟ ಮಾಡುವುದಾಗಿ ಒಂದು ದಿನ ನನ್ನ ಮಗಳಿಗೆ ಹೇಳಿದೆ. ಆಕೆ ನಿರ್ಲಿಪ್ತತೆಯಿಂದ ನನ್ನ ಮುಖವನ್ನೇ ನೋಡಿದಳು. ತನ್ನ ಕರವಸ್ತ್ರದಲ್ಲಿ ನನಗಾಗಿ ಸ್ವಲ್ಪ ನಟ್ಸ್ ತಂದಿದ್ದಳು. ಅದನ್ನು ನನಗೆ ನೀಡಿ ಸ್ವಲ್ಪ ಸಮಯ ನನ್ನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದಳು.

ಆ ಕರವಸ್ತ್ರವನ್ನು ನನ್ನ ಬಳಿಯೇ ಇಟ್ಟುಕೊಳ್ಳುವಂತೆ ಹಾಗೂ ನನಗೆ ಅದು ಆಕೆಯ ನೆನಪು ಮಾಡುವುದೆಂದು ಆಕೆ ಹೇಳಿದಳು. ನನ್ನಿಂದ ದೂರ ಹೋಗುತ್ತಿದ್ದ ಆ ಹುಡುಗಿಯ ನೆರಳನ್ನು ನಾನು ನೋಡಿದೆ. ಆಕೆಯನ್ನು ನಮ್ಮ ಮನೆಗೆ ಕರೆದುಕೊಂಡು ಬರಬೇಕೆಂದು ನನಗೆ ತುಂಬಾ ಅನಿಸುತ್ತಿತ್ತು ಆಕೆಯನ್ನು ಅಲ್ಲಿ ಕೂಡಿ ಹಾಕಿ ಯಾರು ಕೂಡ ಮತ್ತೆ ಹಣಕ್ಕಾಗಿ ಆಕೆಯನ್ನು ಹಿಂಸಿಸದಂತೆ ಮಾಡಬೇಕೆಂದು ಅನಿಸುತ್ತಿತ್ತು.

ಆ ರಾತ್ರಿ ನನ್ನಲ್ಲಿದ್ದ ಎಲ್ಲಾ ವಸ್ತುಗಳನ್ನೂ ನಾನು ಒಟ್ಟುಗೂಡಿಸಿದೆ. ಅಝಾನ್ ಕೇಳಲು ಹಾಗೂ ನನ್ನ ಮಗಳ ಮನೆಗೆ ಹೊರಡಲು ಕಾಯುತ್ತಿದ್ದೆ. ಆದರೆ ನಾನು ಹೊರಡುವ ಮುನ್ನ ನನ್ನ ಮಗಳು ತೀರಿ ಹೋದಳು ಎಂಬ ಸುದ್ದಿ ನನಗೆ ಸಿಕ್ಕಿತು. ಅಲ್ಲಿಗೆ ನಾನು ಗ್ರಾಮಸ್ಥರೊಂದಿಗೆ ಹೋದಾಗ ಆಕೆಯ ಅತ್ತೆ ಮನೆಯವರು ಆಕೆಗಿದ್ದ ಹೃದಯದ ರೋಗವನ್ನು ವಿವರಿಸಿದರು.

ಆಕೆಯ ಮುಖವನ್ನು ನೋಡಿದೆ ಅದು ನೇರಳೆ ಬಣ್ಣಕ್ಕೆ ತಿರುಗಿತ್ತು, ದೇಹದ ತುಂಬೆಲ್ಲಾ ಇಂತಹುದೇ ಗುರುತುಗಳಿದ್ದವು. ಅಲ್ಲಿ ಒಂದು ನಿಮಿಷವೂ ತಡ ಮಾಡದೆ ಆಕೆಯ ದೇಹವನ್ನು ಜಾಗರೂಕತೆಯಿಂದ ನಮ್ಮ ಮನೆಗೆ ತಂದೆ. ನಾನು ತಡ ಮಾಡಿ ಬಿಟ್ಟಿದ್ದೆ ಇದೇ ಕಾರಣಕ್ಕೆ ಆಕೆ ಕಣ್ಣು ತೆರೆಯಲಿಲ್ಲ. ನಾನು ತುಂಬಾ ತಡ ಮಾಡಿ ಬಿಟ್ಟಿದ್ದೆ. ಆಕೆಯನ್ನು ದಫನಭೂಮಿಗೆ ಕೊಂಡೊಯ್ಯುವ ಮುನ್ನ ಗ್ರಾಮಸ್ಥರಿಗೆ ನನ್ನೊಂದಿಗೆ ಬರಲು ಹೇಳಿದೆ.

ಆ ದಿನ ಆ ಮನೆಯ ಪ್ರತಿಯೊಂದು ಪ್ರಾಣಿಯನ್ನು ನಾನು ಶಿಕ್ಷಿಸಿದೆ. ಗ್ರಾಮಸ್ಥರು ಅವರಿಗಾಗಿ ಪೊಲೀಸರನ್ನು ಕರೆ ತಂದರು. ಆ ಘಟನೆ ನಡೆದು 23 ವರ್ಷಗಳಾಗಿವೆ, ಆಂದಿನಿಂದ ಈ ಗ್ರಾಮದ ಯಾವೊಬ್ಬ ಹೆಣ್ಣುಮಗಳೂ ವರದಕ್ಷಿಣೆಗಾಗಿ ಅಸಹಾಯಕಳಾಗಿ ಸಾವನ್ನಪ್ಪದಂತೆ ನಾನು ನೋಡಿಕೊಂಡಿದ್ದೇನೆ. ನನ್ನ ಶಪ್ಲಾ ನನ್ನನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದು ನನಗೆ ಗೊತ್ತು ಏಕೆಂದರೆ ಆಕೆಯನ್ನು ನನ್ನ ಮನೆಗೆ ತರಲು ನಾನು ತುಂಬಾ ತಡ ಮಾಡಿ ಬಿಟ್ಟಿದ್ದೆ. ಆದರೆ ಆಕೆಯನ್ನು ನಾನು ಮಿಸ್ ಮಾಡಿಕೊಂಡಾಗಲೆಲ್ಲಾ ಆ ಕರವಸ್ತ್ರವನ್ನು ನೋಡುತ್ತೇನೆ. ಆದರಲ್ಲಿ ‘ಬಾಬಾ’ ಎಂದು ಬರೆದಿದೆ.

- ಅಲಿ ಅಹ್ಮದ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News