ರಾಷ್ಟ್ರಪತಿ ಆಯ್ಕೆಯ ಸವಾಲು

Update: 2017-05-17 18:38 GMT

ಮುಂಬರುವ ರಾಷ್ಟ್ರಪತಿ ಯಾರಾಗಬೇಕು? ಎನ್ನುವ ಚರ್ಚೆ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಮುಕ್ತಾಯ ಹಂತದಲ್ಲಿದೆ. ಆಳದಲ್ಲಿ ಮೃದು ಹಿಂದುತ್ವವಾದಿಯಾಗಿರುವ ಪ್ರಣವ್ ಮುಖರ್ಜಿ ತನ್ನ ಕಾರ್ಯವೈಖರಿಯನ್ನು ಮೋದಿ ಆಡಳಿತಕ್ಕೆೆ ಪೂರಕವಾಗಿ ನಿರ್ವಹಿಸಿ ಯಶಸ್ವೀ ‘ರಬ್ಬರ್ ಸ್ಟಾಂಪ್’ ಎನಿಸಿಕೊಂಡಿದ್ದಾರೆ. ಇದೀಗ ಆಳದಲ್ಲಿ ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರಕಾರದ ಆಡಳಿತಕ್ಕೆ ಕಡಿವಾಣ ಹಾಕಬಲ್ಲ ಸಮರ್ಥ ಮುತ್ಸದ್ದಿಯೊಬ್ಬನ ನಿರೀಕ್ಷೆಯಲ್ಲಿದೆ ದೇಶ. ರಾಷ್ಟ್ರಪತಿ ಸ್ಥಾನ ಪಕ್ಷಾತೀತವಾದುದು.

ಯಾವ ಪಕ್ಷದಿಂದಲೇ ಆಯ್ಕೆಯಾಗಿರಲಿ, ಆ ಸ್ಥಾನವನ್ನು ಏರಿದ ಆತ ತಟಸ್ಥನಾಗಿರಬೇಕು. ಹಾಗೆಂದು ಕಿವಿ, ಕಣ್ಣನ್ನು ಮುಚ್ಚಿಕೊಂಡು ಆಡಳಿತ ಪಕ್ಷದ ಸೂತ್ರಕ್ಕೆ ತಕ್ಕಂತೆ ಕುಣಿಯಬೇಕು ಎಂದು ಅರ್ಥವಲ್ಲ. ಯಾವುದೇ ರಾಜಕೀಯ ಪೂರ್ವಾಗ್ರಹಗಳಿಲ್ಲದೆ, ಸಂವಿಧಾನಕ್ಕೆ ಬದ್ಧನಾಗಿ, ಸರಕಾರವನ್ನು ಹದ್ದಿನ ಕಣ್ಣಿನಿಂದ ಕಾಯುತ್ತಿರುವುದು ರಾಷ್ಟ್ರಪತಿಯ ಹೊಣೆಗಾರಿಕೆ. ಸರಕಾರ ಹಾದಿ ತಪ್ಪಿದಾಗ ಯಾವ ದಾಕ್ಷಿಣ್ಯವೂ ಇಲ್ಲದೆ ಅದನ್ನು ಎಚ್ಚರಿಸುವ ಎದೆಗಾರಿಕೆಯನ್ನು ರಾಷ್ಟ್ರಪತಿ ಹೊಂದಿರಬೇಕು. ವಿರೋಧ ಪಕ್ಷವೇ ಇಲ್ಲದಂತಹ ಸದ್ಯದ ಸ್ಥಿತಿಯಲ್ಲಿ ಒಬ್ಬ ಮುತ್ಸದ್ದಿ, ನಿಷ್ಠುರ ರಾಷ್ಟ್ರಪತಿಯನ್ನು ದೇಶ ಬಯಸುತ್ತಿರುವುದಂತೂ ಸತ್ಯ. ಆದರೆ ಮೋದಿ ಸರಕಾರಕ್ಕೆ ಬೇಕಾಗಿರುವುದು ರಬ್ಬರ್‌ಸ್ಟಾಂಪ್ ಮಾತ್ರ.

ಆದುದರಿಂದಲೇ ಬಿಜೆಪಿಯೊಳಗಿನ ಮುತ್ಸದ್ದಿ ನಾಯಕನನ್ನು ರಾಷ್ಟ್ರಪತಿಯನ್ನಾಗಿಸುವುದು ಸ್ವತಃ ಮೋದಿ ಬಳಗಕ್ಕೇ ಇಷ್ಟವಿಲ್ಲ. ಎಲ್. ಕೆ. ಅಡ್ವಾಣಿಯವರನ್ನು ರಾಷ್ಟ್ರಪತಿ ಸ್ಥಾನದಿಂದ ದೂರ ಇರಿಸುವ ಸಂಚು ನಡೆಯುತ್ತಿರುವುದೂ ಇದೇ ಕಾರಣಕ್ಕೆ. ಈ ಹಿಂದೆ ಒಂದು ವೇದಿಕೆಯಲ್ಲಿ ನರೇಂದ್ರ ಮೋದಿ ಬಹಿರಂಗವಾಗಿ ‘ಅಡ್ವಾಣಿಯವರೇ ಮುಂದಿನ ರಾಷ್ಟ್ರಪತಿ. ಇದು ಶಿಷ್ಯನಿಂದ ಗುರುವಿಗೆ ಕಾಣಿಕೆ’ ಎಂದು ಘೋಷಿಸಿದ್ದರು. ಆದರೆ ಇದಾದ ಬೆನ್ನಿಗೇ ಅಡ್ವಾಣಿಯವರನ್ನು ‘ಬಾಬರಿ ಮಸೀದಿ’ ಪ್ರಕರಣ ಸುತ್ತಿಕೊಂಡಿತ್ತು. ಇದರ ಹಿಂದೆ ಮೋದಿ ಮತ್ತು ಆರೆಸ್ಸೆಸ್ ಬಳಗದ ಸಂಚಿದೆ ಎಂಬ ಆರೋಪಗಳನ್ನು ತೀರಾ ನಿರ್ಲಕ್ಷಿಸಲು ಸಾಧ್ಯವಿಲ್ಲ.

ಬಿಜೆಪಿಯೊಳಗಿದ್ದೂ ಸದ್ಯಕ್ಕೆ ವಿರೋಧಪಕ್ಷದಂತೆ ಹೇಳಿಕೆ ನೀಡುತ್ತಾ ಮೋದಿ ಸರಕಾರಕ್ಕೆ ಹಲವು ಬಾರಿ ಅಡ್ವಾಣಿ ಮುಜುಗರ ತಂದಿದ್ದಾರೆ. ಅವರನ್ನೇನಾದರೂ ರಾಷ್ಟ್ರಪತಿಯನ್ನಾಗಿಸಿದರೆ, ಸರಕಾರಕ್ಕೇ ಕುತ್ತಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಆತಂಕ ಮೋದಿ ಬಳಗಕ್ಕಿದೆ. ಆದುದರಿಂದಲೇ ನಯವಾಗಿ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುವ ಸಂಚು ನಡೆದಿದೆ.

ಇದೇ ಸಂದರ್ಭದಲ್ಲಿ ಆರೆಸ್ಸೆಸ್ ಸಂಚಾಲಕನನ್ನೇ ರಾಷ್ಟ್ರಪತಿ ಸ್ಥಾನದಲ್ಲಿ ಕುಳ್ಳಿರಿಸುವ ವದಂತಿಗಳನ್ನು ತೇಲಿ ಬಿಡಲಾಗಿತ್ತು. ಸದ್ಯಕ್ಕೆ ಆರೆಸ್ಸೆಸ್‌ನ ನಾಯಕರು ಆ ಸ್ಥಾನವನ್ನೇರುವುದು ದೂರದ ಮಾತು. ಆದರೆ ರಾಷ್ಟ್ರಪತಿ ಯಾರಾಗಬೇಕು ಎನ್ನುವುದನ್ನು ಮಾತ್ರ ಆರೆಸ್ಸೆಸ್ ನಿರ್ಧರಿಸಲಿದೆ. ಈವರೆಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಸಂಖ್ಯೆ ಕಡಿಮೆಯಿತ್ತು. ಆದರೆ ಉತ್ತರ ಪ್ರದೇಶದ ಚುನಾವಣೆಯ ಭರ್ಜರಿ ಗೆಲುವಿನ ಬಳಿಕ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಆತ್ಮವಿಶ್ವಾಸ ಬಂದಿದೆ. ಆದುದರಿಂದಲೇ ರಾಷ್ಟ್ರಪತಿ ಸ್ಥಾನಕ್ಕೆ ಈ ಬಾರಿ ಪ್ರಬಲ ಸ್ಪರ್ಧೆ ನಡೆಯಲಿದೆ.

ರಾಷ್ಟ್ರಪತಿಯಾದಾಕ್ಷಣ ಓರ್ವ ನಾಯಕ ರಬ್ಬರ್ ಸ್ಟಾಂಪ್‌ಗೆ ಸೀಮಿತವಾಗಬೇಕಾಗಿಲ್ಲ. ಮುತ್ಸದ್ದಿಯಾದ ನಾಯಕನೊಬ್ಬ ತನ್ನ ಸೀಮಿತ ಅಧಿಕಾರವನ್ನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಲ್ಲ. ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಆ ಉನ್ನತ ಹುದ್ದೆಗೆ ನ್ಯಾಯ ನೀಡಬಲ್ಲ. ಈ ಹಿಂದೆ ಚುನಾವಣಾ ಆಯೋಗವೆನ್ನುವುದು ಅಸ್ತಿತ್ವದಲ್ಲಿರುವುದೇ ಯಾರಿಗೂ ಅರಿವಿದ್ದಿರಲಿಲ್ಲ. ಆದರೆ ಟಿ. ಎನ್. ಶೇಷನ್ ಆ ಸ್ಥಾನವನ್ನು ವಹಿಸಿಕೊಂಡದ್ದೇ ಅದಕ್ಕೊಂದು ಘನತೆಯನ್ನು ತಂದುಕೊಟ್ಟರು. ಅವರಿಂದ ಆ ಸ್ಥಾನಕ್ಕೊಂದು ತೂಕ ಬಂತು. ರಾಷ್ಟ್ರಪತಿ ಸ್ಥಾನ ಬಹುತೇಕ ಆಡಳಿತ ಪಕ್ಷಕ್ಕೆ ತಲೆದೂಗುತ್ತಾ ಬಂದುದೇ ಅಧಿಕ.

ಈ ಹಿಂದೆ ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ಅವರಿಗೂ ಅಂದಿನ ರಾಷ್ಟ್ರಪತಿ ಜೈಲ್‌ಸಿಂಗ್‌ಗೆ ಸಣ್ಣದೊಂದು ತಿಕ್ಕಾಟ ನಡೆದಿತ್ತು. ಹಾಗೆಯೇ ವಾಜಪೇಯಿ ಪ್ರಧಾನಿಯಾಗಿದ್ದಾಗ ಕೆ. ಆರ್. ನಾರಾಯಣನ್ ಅವರು ತನ್ನ ಹುದ್ದೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಯತ್ನಿಸಿದ್ದರು. ಹಲವು ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ಮುಜುಗರ ತಂದಿದ್ದರು. ಒಂದು ಹಂತದಲ್ಲಿ ನಾರಾಯಣನ್ ಅವರೇ ನಿಜವಾದ ವಿರೋಧ ಪಕ್ಷ ಎಂದು ರಾಜಕೀಯ ತಜ್ಞರು ರಾಷ್ಟ್ರಪತಿಯನ್ನು ಶ್ಲಾಘಿಸಿದ್ದರು. ಸಾಧಾರಣವಾಗಿ ಆಡಳಿತ ಪಕ್ಷದಿಂದ ಆಯ್ಕೆಯಾಗಿರುವ ರಾಷ್ಟ್ರಪತಿಗಳು ತನ್ನ ಋಣವನ್ನು ಜೊತೆಗಿಟ್ಟುಕೊಂಡು ಕೆಲಸ ನಿರ್ವಹಿಸಿದ ಉದಾಹರಣೆಗಳೇ ಅಧಿಕ.

ಸದ್ಯದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿಯಾಗಿದ್ದರೂ, ಅವರ ಕಾರ್ಯವೈಖರಿ ಸರ್ವಾಧಿಕಾರಿ ಲಕ್ಷಣಗಳಿಂದ ಕೂಡಿದೆ. ‘ತಾನೇನು ಮಾಡಿದರೂ ದೇಶ ಒಪ್ಪುತ್ತದೆ, ಒಪ್ಪಬೇಕು’ ಎನ್ನುವಂತಹ ನಿಲುವುಗಳನ್ನು ಅವರು ಪ್ರದರ್ಶಿಸುತ್ತಾ ಬಂದಿದ್ದಾರೆ. ನೋಟು ನಿಷೇಧ, ಕಾಶ್ಮೀರ ಸಮಸ್ಯೆ, ಬೆಲೆಯೇರಿಕೆ, ಗೋರಕ್ಷಕರ ಹಿಂಸಾಚಾರ...ಇವೆಲ್ಲದಕ್ಕೂ ತಾನು ಉತ್ತರದಾಯಿತ್ವ ಹೊಂದಿದ್ದೇನೆ ಎನ್ನುವುದನ್ನು ಅವರು ಮರೆತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಎಚ್ಚರಿಸುವಂತಹ, ಆಡಳಿತ ಪಕ್ಷದ ಎಗರಾಟಕ್ಕೆ ಮೂಗುದಾರ ಹಾಕಬಲ್ಲಂತಹ ಒಬ್ಬ ರಾಷ್ಟ್ರಪತಿಯ ಅಗತ್ಯ ಇಂದು ಹೆಚ್ಚಿದೆ.

ಅಂತಹ ಆಯ್ಕೆಗೆ ಕೇಂದ್ರ ಸರಕಾರ ಅವಕಾಶ ನೀಡುವುದು ಅಸಾಧ್ಯ ಎನ್ನುವುದೂ ಅಷ್ಟೇ ವಾಸ್ತವ ಅಂಶವಾಗಿದೆ. ಆದರೆ ವಿರೋಧ ಪಕ್ಷಗಳೆಲ್ಲ ಒಂದಾಗಿ ನಿಂತು, ದೇಶದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಸಮರ್ಥ ವ್ಯಕ್ತಿಯನ್ನು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧೆಗಿಳಿಸಿದರೆ ಕೆಲವೊಮ್ಮೆ ಮೋದಿಗೆ ಮುಖಭಂಗವುಂಟಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಇತರೆಲ್ಲ ಜಾತ್ಯತೀತ ಪಕ್ಷಗಳು ಎಷ್ಟರಮಟ್ಟಿಗೆ ಬದ್ಧತೆಯನ್ನು ರಾಷ್ಟ್ರಪತಿ ಆಯ್ಕೆಯಲ್ಲಿ ಪ್ರದರ್ಶಿಸುತ್ತದೆ ಎನ್ನುವುದು ಇನ್ನೂ ಅನುಮಾನವಾಗಿಯೇ ಉಳಿದಿದೆ. ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರತಿಷ್ಠೆಯನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಪ್ರಾದೇಶಿಕ ಪಕ್ಷಗಳೂ ತಮ್ಮ ಹಿತಾಸಕ್ತಿಗಷ್ಟೇ ಸೀಮಿತವಾಗಿವೆ. ಜಾತ್ಯತೀತ ಪಕ್ಷಗಳ ಈ ಸಮಯಸಾಧಕತನವನ್ನು ಬಳಸಿಕೊಂಡೇ ಬಿಜೆಪಿ ಈ ಮಟ್ಟಕ್ಕೆ ದೇಶದಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು.

ರಾಷ್ಟ್ರಪತಿ ಆಯ್ಕೆ ವಿರೋಧ ಪಕ್ಷಗಳಿಗಿರುವ ಕೊನೆಯ ಅವಕಾಶ. ಸರ್ವ ರಾಜಕೀಯ ತಂತ್ರಗಳನ್ನು ಬಳಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಒಂದು ವೇಳೆ ರಾಷ್ಟ್ರಪತಿಯಾಗಿ ಆರೆಸ್ಸೆಸ್‌ನ ಅಭ್ಯರ್ಥಿಯೇನಾದರೂ ಆಯ್ಕೆಯಾದರೆ, ದೇಶದ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಲಿದೆ ಮಾತ್ರವಲ್ಲ, ಜಾತ್ಯತೀತ ಪಕ್ಷಗಳೂ ಇನ್ನಷ್ಟು ಮೂಲೆಗುಂಪಾಗಲಿವೆ. ಕೇಂದ್ರ ಸರಕಾರದ ಯಾವ ಆಮಿಷಗಳಿಗೂ ಬಗ್ಗದೆ, ಎಲ್ಲ ಪಕ್ಷಗಳು ಒಂದಾಗಿ ಬಿಜೆಪಿಯ ಅಭ್ಯರ್ಥಿಯನ್ನು ಎದುರಿಸಿದರೆ, ಮೋದಿಯ ಸರ್ವಾಧಿಕಾರಿ ನಡೆಗೆ ನೀಡುವ ಮೊದಲ ತಡೆ ಅದಾಗಿರುತ್ತದೆ. ಈ ನಿಟ್ಟಿನಲ್ಲಿ, ವಿರೋಧಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News