ನವಜಾತ ಶಿಶುಗಳ ಬದುಕುಳಿಯುವ ಸಾಧ್ಯತೆ: ಭಾರತದ ಸ್ಥಿತಿ ಸೊಮಾಲಿಯಕ್ಕಿಂತಲೂ ಚಿಂತಾಜನಕ

Update: 2017-05-20 06:03 GMT

ಹೊಸದಿ‍ಲ್ಲಿ, ಮೇ 20: ಭಾರತದಲ್ಲಿನ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆ ಅಫ್ಘಾನಿಸ್ತಾನ ಹಾಗೂ ಸೊಮಾಲಿಯಾಕ್ಕಿಂತಲೂ ಕಡಿಮೆಯಾಗಿದೆ ಎಂದು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನವೊಂದು ತಿಳಿಸಿದೆ. ಅಧ್ಯಯನದ ವಿವರಗಳು ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಟ್ ನಲ್ಲಿ ಪ್ರಕಟವಾಗಿದೆ.

ಆರೋಗ್ಯ ಸೇವಾ ಸೌಲಭ್ಯ ಹಾಗೂ ಗುಣಮಟ್ಟದ ಜಿಬಿಡಿ ರ್ಯಾಂಕಿಂಗಿನಲ್ಲಿ ಭಾರತ 11 ಸ್ಥಾನ ಕೆಳಗಿಳಿದು 195 ದೇಶಗಳ ಪೈಕಿ 154ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, ಭಾರತದ ಹೆಲ್ತ್ ಕೇರ್ ಇಂಡೆಕ್ಸ್ 44.8 ಆಗಿದ್ದು, ಇದು ಶ್ರೀಲಂಕಾ (72.8), ಬಾಂಗ್ಲಾದೇಶ (51.7), ಭೂತಾನ್ (52.7), ನೇಪಾಳ (50.8)ಕ್ಕಿಂತಲೂ ಕಡಿಮೆಯಾಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಅಂದೋರ್ರ ದೇಶಕ್ಕೆ (95) ಹೋಗಿದ್ದರೆ, ಕಡೆಯ ಸ್ಥಾನ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಗೆ (29) ಹೋಗಿದೆ.

ನವಜಾತ ಶಿಶುಗಳು ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳು, ತಾಯಿಯ ಆರೋಗ್ಯ, ಟಿಬಿ ಹಾಗೂ ರುಮೇಟಿಕ್ ಹಾರ್ಟ್ ಡಿಸೀಸ್ ಮುಂತಾದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಭಾರತ ಎಡವಿರುವುದೇ ಜಿಬಿಡಿ ರ್ಯಾಂಕಿಂಗಿನಲ್ಲಿ ಅದು ಹಿಂದುಳಿಯಲು ಕಾರಣವೆಂದು ಅಂದಾಜಿಸಲಾಗಿದೆ. ಕಳೆದ ವರ್ಷ ಭಾರತ 188 ದೇಶಗಳ ಪೈಕಿ 143ನೇ ಸ್ಥಾನದಲ್ಲಿತ್ತು.

ಆರೋಗ್ಯ ಸೇವಾ ಸೌಲಭ್ಯ ಹಾಗೂ ಗುಣಮಟ್ಟ -ಹೆಲ್ತ್ ಕೇರ್ ಎಸ್ಸೆಸ್ ಆ್ಯಂಡ್ ಕ್ವಾಲಿಟಿ -ಎಚ್‌ಎಕ್ಯು ಇಂಡೆಕ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಅಂಕಗಳು 100ರಲ್ಲಿ 14 ಆಗಿದ್ದರೆ, ಅಫ್ಘಾನಿಸ್ತಾನ, ಸೊಮಾಲಿಯಾ ಕ್ರಮವಾಗಿ 19 ಹಾಗೂ 21 ಅಂಕಗಳನ್ನು ಪಡೆದಿವೆ. ಅದೇ ರೀತಿ ಟಿಬಿ ಚಿಕಿತ್ಸೆಯ ವಿಚಾರದಲ್ಲಿ 100ರಲ್ಲಿ ಭಾರತಕ್ಕೆ 26 ಅಂಕಗಳು ದೊರೆತರೆ, ಪಾಕಿಸ್ತಾನ ಹಾಗೂ ಕಾಂಗೊ ದೇಶಗಳಿಗೆ ಕ್ರಮವಾಗಿ 29 ಹಾಗೂ 30 ಅಂಕಗಳು ದೊರೆತಿವೆ.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News