ಇಟಾಲಿಯನ್ ಓಪನ್: ಜೊಕೊವಿಕ್ ಫೈನಲ್‌ಗೆ

Update: 2017-05-21 18:31 GMT

ರೋಮ್, ಮೇ 21: ಆಸ್ಟ್ರೀಯದ ಡೊಮಿನಿಕ್ ಥೀಮ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ನೊವಾಕ್ ಜೊಕೊವಿಕ್ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಜೊಕೊವಿಕ್ ಅವರು ಡೊಮಿನಿಕ್‌ರನ್ನು 6-1, 6-0 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ರೋಮ್ ಮಾಸ್ಟರ್ಸ್ ಟೂರ್ನಿಯಲ್ಲಿ 8ನೆ ಬಾರಿ ಫೈನಲ್‌ಗೆ ತಲುಪಿದ್ದಾರೆ.

23ರ ಹರೆಯದ ಡೊಮಿನಿಕ್‌ರನ್ನು ಸುಲಭವಾಗಿ ಮಣಿಸಿದ ಜೊಕೊವಿಕ್ 5-0 ಗೆಲುವಿನ ದಾಖಲೆಯನ್ನು ಕಾಯ್ದುಕೊಂಡರು. ಜೊಕೊವಿಕ್ ಮೊದಲ ಸೆಟ್‌ನ್ನು ಕೇವಲ 26 ನಿಮಿಷಗಳಲ್ಲಿ ಗೆದ್ದುಕೊಂಡಿದ್ದರು.

ಸರ್ಬಿಯ ಆಟಗಾರ ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಉದಯೋನ್ಮುಖ ಸ್ಟಾರ್ ಆಟಗಾರ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸಲಿದ್ದಾರೆ.

20ರ ಹರೆಯದ ಅಲೆಕ್ಸಾಂಡರ್ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತಲುಪಿದ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಅಲೆಕ್ಸಾಂಡರ್ ಅವರು ಮತ್ತೊಂದು ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೇರ್‌ರನ್ನು 6-4, 6-7(5/7), 6-1 ಸೆಟ್‌ಗಳ ಅಂತರದಿಂದ ಮಣಿಸಿದರು.

ಗಾಯದಿಂದ ಪಂದ್ಯದಿಂದ ಹಿಂದೆ ಸರಿದ ಮುಗುರುಝ:

ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುರುಗುಝ ಕುತ್ತಿಗೆ ನೋವಿನಿಂದಾಗಿ ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ನಿವೃತ್ತಿಯಾದರು.

ಮೊದಲ ಸೆಟ್‌ನ 22 ನಿಮಿಷಗಳ ಪಂದ್ಯದಲ್ಲಿ 1-4ರಿಂದ ಹಿನ್ನಡೆಯಲ್ಲಿದ್ದಾಗ ಸರ್ಬಿಯದ ಆಟಗಾರ್ತಿ ಮುಗುರುಝ ಪಂದ್ಯದಿಂದ ಹಿಂದೆ ಸರಿದರು. ಮುಗುರುಝ ಗಾಯಾಳು ನಿವೃತ್ತಿಯಾದ ಕಾರಣದಿಂದ 8ನೆ ಶ್ರೇಯಾಂಕಿತೆ ಸ್ವಿಟೊಲಿನಾ ಫೈನಲ್‌ಗೆ ತಲುಪಿದ್ದು, ಫೈನಲ್‌ನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ.

ಮುಗುರುಝ ಶುಕ್ರವಾರ ರಾತ್ರಿ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್‌ರನ್ನು ಮೂರು ಸೆಟ್‌ಗಳ ಅಂತರದಿಂದ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News