2012ರ ಮಲಾಲಾ ಮೇಲಿನ ದಾಳಿ ಪೂರ್ವ ನಿಯೋಜಿತ ನಾಟಕ: ಪಾಕ್ ಮಹಿಳಾ ಸಂಸದೆ

Update: 2017-05-23 05:00 GMT

ಇಸ್ಲಾಮಾಬಾದ್, ಮೇ 23: ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಝಾಯಿ ಮೇಲೆ 2012ರಲ್ಲಿ ತಾಲಿಬಾನಿನಿಂದ ನಡೆದ ದಾಳಿ ಒಂದು ಪೂರ್ವ ನಿಯೋಜಿತ ನಾಟಕವೆಂದು ಪಾಕಿಸ್ತಾನದ ಮಹಿಳಾ ಸಂಸದೆಯೋರ್ವರು ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ-ಇನ್ಸಾಫ್ ಪಕ್ಷದ ಸಂಸದೆಯಾಗಿರುವ ಮುಸ್ಸರತ್ ಅಹ್ಮದ್ಝೆಬ್ ಪ್ರಕಾರ ಮಲಾಲಾ ಬಿಬಿಸಿಗೆ ಬರೆದಿದ್ದು ಹಾಗೂ ನಂತರ ಆಕೆಯ ಮೇಲಿನ ದಾಳಿ ಈ ನಾಟಕದ ಭಾಗವಾಗಿದೆ.

‘‘ಮಲಾಲಾ ಮೇಲಿನ ದಾಳಿಯನ್ನು ಘಟನೆ ನಡೆಯುವುದಕ್ಕಿಂತ ಬಹಳಷ್ಟು ಹಿಂದೆಯೇ ಯೋಜಿಸಲಾಗಿತ್ತು’’ ಎಂದು ಉರ್ದು ಪತ್ರಿಕೆ ಉಮ್ಮತ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿರುವ ಅವರು, ಮಲಾಲಾ ತಲೆಯೊಳಗೆ ಯಾವುದಾದರೂ ಗುಂಡು ಹೊಕ್ಕಿದೆಯೇ ಎಂಬುದರ ಬಗ್ಗೆಯೂ ಸಂಶಯವಿದೆ. ಏಕೆಂದರೆ ಆಕೆಯ ತಲೆಗೆ ಗುಂಡು ಹೊಡೆಯಲಾಗಿತ್ತಾದರೂ ಸ್ವತ್ ನಲ್ಲಿ ನಡೆಸಲಾದ ಸಿ ಟಿ ಸ್ಕ್ಯಾನ್ ನಲ್ಲಿ ಆಕೆಯ ತಲೆಯಲ್ಲಿ ಯಾವುದೇ ಗುಂಡು ಇರುವುದು ಪತ್ತೆಯಾಗಿರಲಿಲ್ಲ. ಆದರೆ ಪೇಶಾವರದ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಯಲ್ಲಿ ಗುಂಡು ಆಕೆಯ ತಲೆಯೊಳಗಿತ್ತು,’’ ಎಂದು ಮುಸ್ಸರತ್ ಹೇಳಿದ್ದಾರೆ.

ಮಲಾಲಾಳಿಗೆ ಚಿಕಿತ್ಸೆ ನೀಡಲು ನೇಮಿಸಲಾಗಿದ್ದ ವೈದ್ಯರಿಗೆ ಹಾಗೂ ಆಕೆಯ ಸಿಟಿ ಸ್ಕ್ಯಾನ್ ಮಾಡಿದ ವೈದ್ಯರಿಗೂ ಸರಕಾರ ಮನೆ ನಿರ್ಮಿಸಲು ಭೂಮಿ ಒದಗಿಸಿತ್ತು ಎಂದೂ ಅವರು ಆರೋಪಿಸಿದ್ದಾರೆ. ಮಲಾಲಾ ಬಿಬಿಸಿಗೆ ಗುಲ್ ಮಕೈ ಎಂಬ ಹೆಸರಿನಲ್ಲಿ ಕಥೆ ಬರೆಯುತ್ತಿದ್ದಳು ಎಂದು ಹೇಳಲಾಗಿದ್ದರೂ ಆಗ ಆಕೆಗೆ ಓದಲು ಹಾಗೂ ಬರೆಯಲು ಬರುತ್ತಿರಲಿಲ್ಲ ಎಂದು ಮುಸ್ಸರತ್ ಹೇಳಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ- ಇನ್ಸಾಫ್ ಪಕ್ಷದ ವಕ್ತಾರ ಮಹಮೂದ್ ಶಫ್ಖತ್ ಹೇಳಿಕೆಯೊಂದನ್ನು ನೀಡಿ ಪಕ್ಷ ಮುಸ್ಸರತ್ ರನ್ನು 2014ರಲ್ಲಿಯೇ ಇನ್ನಿತರ ಇಬ್ಬರೊಂದಿಗೆ ಶಿಸ್ತು ಉಲ್ಲಂಘನೆಗಾಗಿ ಕೈಬಿಟ್ಟಿತ್ತು ಎಂದು ಹೇಳಿಕೆ ನೀಡಿದ್ದಾರೆ. ‘‘ಚುನಾವಣಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆದಾಗ ಮೂವರು ರಾಷ್ಟ್ರೀಯ ಅಸೆಂಬ್ಲಿ ಸದಸ್ಯರುಗಳಾದ ಮುಸ್ಸರತ್ ಅಹ್ಮದ್ಝಾಬ್, ಗುಲ್ಜಾರ್ ಅಹಮದ್ ಹಾಗೂ ಸಿರಾಜ್ ಮುಹಮ್ಮದ್ ಅವರು ಪಕ್ಷದ ನಿಯಮವನ್ನು ಪಾಲಿಸಲು ನಿರಾಕರಿಸಿದ್ದರು,’’ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ತಾಲಿಬಾನ್ ವಿಧಿಸಿದ್ದ ನಿಯಂತ್ರಣಗಳನ್ನು ವಿರೋಧಿಸಿದ್ದಕ್ಕೆ ಅಕ್ಟೋಬರ್ 2012ರಲ್ಲಿ ಆಗ 19 ವರ್ಷದವಳಾಗಿದ್ದ ಮಲಾಲಾಳ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾದ ಮಲಾಲಾ ಮುಂದೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತರು.

2013ರಲ್ಲಿ ಆಕೆ ತನ್ನ ತಂದೆಯ ಜತೆಗೂಡಿ ಮಲಾಲಾ ಫಂಡ್ ಸ್ಥಾಪಿಸಿ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯನ್ನಿಟ್ಟಿದ್ದರು.
ಡಿಸೆಂಬರ್ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಅತ್ಯಂತ ಕಿರಿಯ ವ್ಯಕ್ತಿಯೆಂಬ ಹೆಗ್ಗಳಿಕೆಗೂ ಆಕೆ ಪಾತ್ರರಾಗಿದ್ದಾರೆ. ಈ ಪ್ರಶಸ್ತಿಯನ್ನು ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಜತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News