ಕೃಪಾಂಕ ವಿವಾದ: ಸಿಬಿಎಸ್‌ಇ ವಿದ್ಯಾರ್ಥಿಗಳು ನಿರಾಳ

Update: 2017-05-24 03:34 GMT

ಹೊಸದಿಲ್ಲಿ, ಮೇ 24: ಕೇಂದ್ರೀಯ ಸೆಕೆಂಡರಿ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪರೀಕ್ಷೆಯಲ್ಲಿ ಕಠಿಣ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಸಂಪ್ರದಾಯವನ್ನು ಸದ್ಯಕ್ಕೆ ಮುಂದುವರಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಸೂಚನೆ ನೀಡಿದೆ. ಇದರಿಂದ 10 ಮತ್ತು 12ನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಕೃಪಾಂಕ ನೀತಿಯನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಸಿಬಿಎಸ್‌ಇ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ಫಲಿತಾಂಶ ಗಣನೀಯವಾಗಿ ಕುಸಿಯುವ ಭೀತಿ ಎದುರಾಗಿತ್ತು. 12ನೇ ತರಗತಿ ಪರೀಕ್ಷೆ ಬರೆದ 11 ಲಕ್ಷ ವಿದ್ಯಾರ್ಥಿಗಳು ಮತ್ತು 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ 9 ಲಕ್ಷ ವಿದ್ಯಾರ್ಥಿಗಳು ಈ ಬೆಳವಣಿಗೆಯಿಂದ ಸಂತಸಗೊಂಡಿದ್ದಾರೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಪರೀಕ್ಷಾ ನೋಂದಣಿ ಅರ್ಜಿಯನ್ನು ಕಳೆದ ವರ್ಷವೇ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಆಗ ಇದ್ದ ನಿಯಮಾವಳಿಯೇ ಕಳೆದ ವರ್ಷದ ಪರೀಕ್ಷೆಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. "ಪರೀಕ್ಷೆಗೆ ಹಾಜರಾಗುವ ಮುನ್ನವೇ ಕೃಪಾಂಕ ನೀತಿಯನ್ನು ರದ್ದುಪಡಿಸುವ ನಿರ್ಧಾರ ಪರೀಕ್ಷಾರ್ಥಿಗೆ ತಿಳಿಸಬೇಕಿತ್ತು. ಆದ್ದರಿಂದ ಹೊಸ ನಿರ್ಧಾರವನ್ನು ಮುಂದಿನ ವರ್ಷ ಜಾರಿಗೆ ತನ್ನಿ. ಆಟ ಆರಂಭವಾದ ಬಳಿಕ ನಿಯಮಾವಳಿ ಬದಲಿಸಲು ಅವಕಾಶವಿಲ್ಲ" ಎಂದು ನ್ಯಾಯಪೀಠ ತೀರ್ಪು ನೀಡಿದೆ.

"ದಿಢೀರನೇ ಅಂಥ ನಿಯಮಾವಳಿ ಜಾರಿಗೊಳಿಸುವುದು ವಿದ್ಯಾರ್ಥಿಗಳ ಆಘಾತಕ್ಕೆ ಕಾರಣವಾಗಲಿದೆ. ನೀವು ಏನು ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ಬಹುಶಃ ಅವರು ಹೆಚ್ಚು ಆತಂಕಿತರಾಗಿದ್ದಾರೆ. ಅವರಲ್ಲಿ ಅಭದ್ರತೆಯನ್ನು ಸೃಷ್ಟಿಸಬೇಡಿ" ಎಂದು ಸಿಬಿಎಸ್‌ಇ ಪರ ವಕೀಲರಿಗೆ ತಾಕೀತು ಮಾಡಿದೆ.

ಪರೀಕ್ಷೆ ನಡೆದ ಬಳಿಕ ಕೃಪಾಂಕ ನಿಯಮಾವಳಿ ಬದಲಿಸಿರುವ ಸಿಬಿಎಸ್‌ಇ ಕ್ರಮದ ಬಗ್ಗೆ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಕ್ರಮದಿಂದ ಫಲಿತಾಂಶ ಕನಿಷ್ಠ ಶೇಕಡ 15ರಷ್ಟು ಕುಸಿಯುವ ಭೀತಿ ಇದೆ ಎಂದು ಅರ್ಜಿದಾರರ ಪರ ವಕೀಲ ಬಲಬೀರ್ ಸಿಂಗ್ ವಾದಿಸಿದ್ದರು. ಇದರಿಂದಾಗಿ ದಿಲ್ಲಿ ವಿವಿಯ ಪ್ರವೇಶ ಮಾನದಂಡವನ್ನು ಪೂರೈಸುವ ಅವಕಾಶದಿಂದ ಹಲವು ವಿದ್ಯಾರ್ಥಿಗಳನ್ನು ವಂಚಿಸಿದಂತಾಗುತ್ತದೆ ಎಂದು ಅವರು ವಾದ ಮಂಡಿಸಿದ್ದರು.
ಈ ಬೆಳವಣಿಗೆ ಬಳಿಕ ಸಿಬಿಎಸ್‌ಇ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News