ಕಾಶ್ಮೀರದಲ್ಲಿ ಸೇನಾ ಜೀಪಿಗೆ ಕಟ್ಟಬೇಕಾದುದು ಯಾರನ್ನು?

Update: 2017-05-24 04:39 GMT

ಸಮಾಜ ಮೈಮರೆತಾಗ ತಟ್ಟಿ ಎಚ್ಚರಿಸುವಂತಹ ಮಹತ್ವದ ಜವಾಬ್ದಾರಿ ಕಲಾವಿದರದ್ದಾಗಿರುತ್ತದೆ. ವಿಶ್ವದ ಬಹುತೇಕ ಚಳವಳಿ, ಕ್ರಾಂತಿಗಳ ಹಿಂದೆ ರಂಗಭೂಮಿಯ ಪಾತ್ರ, ಕಲಾವಿದರ ಪಾತ್ರ ಬಹುದೊಡ್ಡದಿದೆ. ಸಾಧಾರಣವಾಗಿ ಒಂದು ದೇಶ ಸರ್ವಾಧಿಕಾರಿಯ ಕೈವಶವಾದಾಗ, ಆತನ ಮೊದಲ ಗುರಿ ಆ ದೇಶದ ಬರಹಗಾರರು ಮತ್ತು ಕಲಾವಿದರೇ ಆಗಿರುತ್ತಾರೆ. ಭಾರತದಲ್ಲೂ ಕೆಲವು ನಿರ್ಣಾಯಕ ಸಂದರ್ಭದಲ್ಲಿ ಕಲಾವಿದರು ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಇಲ್ಲಿನ ರಂಗಭೂಮಿ ಕಲಾವಿದರಂತೂ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.

ಬೀದಿ ನಾಟಕಗಳು ಸಮಾಜದಲ್ಲಿ ಜಾಗೃತಿ ಮೂಡಿಸಲು ವಹಿಸಿದ ಪಾತ್ರವನ್ನು ನಾವು ಮರೆಯುವಂತೆಯೇ ಇಲ್ಲ. ಈ ಸಂದರ್ಭದಲ್ಲಿ ಹಲವು ಕಲಾವಿದರು ಕೊಲೆಯಾಗಿದ್ದಾರೆ. ಹಲವರು ಜೈಲು ಪಾಲಾದ ಉದಾಹರಣೆಗಳೂ ಇವೆ. ಈ ನಿಟ್ಟಿನಲ್ಲಿ, ಬಾಲಿವುಡ್‌ನ ಕೊಡುಗೆಯನ್ನೂ ನಿರ್ಲಕ್ಷಿಸುವ ಹಾಗಿಲ್ಲ. ಕಲಾತ್ಮಕ ಚಿತ್ರಗಳ ಮೂಲಕ ಮಾತ್ರವಲ್ಲ, ವೈಯಕ್ತಿಕವಾಗಿಯೂ ಹಲವು ನಟರು ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಮೆರೆಯುತ್ತಾ ಬಂದಿದ್ದಾರೆ. ಈ ದೇಶದ ಬಡತನ, ಅನಕ್ಷರತೆ, ಅನಾರೋಗ್ಯಗಳಿಗೆ ಸ್ಪಂದಿಸಿದ್ದಾರೆ. ಅದಕ್ಕಾಗಿ ಕೆಲವು ಸಂಘಟನೆಗಳ ಜೊತೆಗೆ ಪಾಲುದಾರರಾಗಿ ದುಡಿಯುತ್ತಲೂ ಇದ್ದಾರೆ. ಇಷ್ಟೇ ಅಲ್ಲ, ಶ್ರೀಸಾಮಾನ್ಯನಿಗೆ ಅನ್ಯಾಯವಾದಾಗ, ಸಂವಿಧಾನಕ್ಕೆ ಧಕ್ಕೆ ತಂದಾಗ ಪ್ರಭುತ್ವವನ್ನೇ ಎದುರು ಹಾಕಿಕೊಂಡ ಕಲಾವಿದರು, ನಿರ್ದೇಶಕರೂ ನಮ್ಮ ಮುಂದಿದ್ದಾರೆ. ಇಂದಿಗೂ ಬಾಲಿವುಡ್‌ನ ತಳಹದಿ ಅಪ್ಪಟ ಜಾತ್ಯತೀತವಾಗಿರುವುದು ದೇಶದ ಅತಿ ದೊಡ್ಡ ಭರವಸೆ. ಇದೇ ಸಂದರ್ಭದಲ್ಲಿ ಕಲಾವಿದನೊಬ್ಬ ಪ್ರಭುತ್ವದ ಜೊತೆಗೆ ಅನೈತಿಕ ಸಂಬಂಧವನ್ನು ಹೊಂದಿದಾಗ ಸಂಭವಿಸುವ ದುರಂತಗಳಿಗೆ ನಮ್ಮ ನಡುವೆ ಉದಾಹರಣೆಗಳು ಹೆಚ್ಚುತ್ತಿವೆ. ಅತ್ಯಂತ ಸೂಕ್ಷ್ಮ ಕಲಾವಿದರೂ ಕೆಲವೊಮ್ಮೆ ಸಂವೇದನಾರಹಿತರಂತೆ ಮಾತನಾಡಿ ಪ್ರಭುತ್ವವನ್ನು ಓಲೈಸುವುದಕ್ಕೆ ಮುಂದಾಗುತ್ತಾರೆ. ಅದಕ್ಕೆ ಉದಾಹರಣೆಯಾಗಿ ಬಾಲಿವುಡ್‌ನ ಖ್ಯಾತ ಕಲಾವಿದ ಪರೇಶ್ ರಾವಲ್ ಅವರ ಹೇಳಿಕೆ ನಮ್ಮ ಮುಂದಿದೆ. ‘‘ಕಾಶ್ಮೀರದ ಸೇನಾ ಜೀಪಿಗೆ ಗುರಾಣಿಯಾಗಿ ಬರಹಗಾರ್ತಿ ಅರುಂಧತಿ ರಾಯ್ ಅವರನ್ನು ಕಟ್ಟಬೇಕು’’ ಎಂಬ ಹೇಳಿಕೆ ಸಾಮಾಜಿಕ ತಾಣಗಳಲ್ಲೂ, ಇತರ ಮಾಧ್ಯಮಗಳಲ್ಲೂ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಪರೇಶ್ ರಾವಲ್ ಬಿಜೆಪಿಯಿಂದ ಆರಿಸಲ್ಪಟ್ಟಿರುವ ಜನಪ್ರತಿನಿಧಿಯಾಗಿದ್ದಾರೆ. ಒಬ್ಬ ಕಲಾವಿದ ರಾಜಕೀಯ ಸೇರಬಾರದು ಎಂದಿಲ್ಲ. ಪ್ರಭುತ್ವದ ಜೊತೆಗೆ ಸಹಭಾಗಿಯಾಗಬಾರದು ಎಂದೂ ಇಲ್ಲ. ತನ್ನ ಸಂವೇದನಾಶೀಲ ಚಿಂತನೆಯ ಮೂಲಕ ಆ ಸರಕಾರಕ್ಕೆ, ಪಕ್ಷಕ್ಕೆ ತನ್ನಿಂದಾದ ಕೊಡುಗೆಯನ್ನು ನೀಡುವ ಅವಕಾಶ ಆತನಿಗೆ ಇದ್ದೇ ಇದೆ. ಕನಿಷ್ಠ ಉಳಿದ ರಾಜಕೀಯ ನಾಯಕರು ಮಾಡುವ ನೀಚ ರಾಜಕಾರಣವನ್ನು ಮಾಡದೆ ತನ್ನ ಕಲೆಯ ಘನತೆಯನ್ನು ಉಳಿಸುವ ಹೊಣೆಗಾರಿಕೆಯಂತೂ ಆತನಿಗಿದೆ.

ರಾಜಕೀಯದ ಆಳಕ್ಕೆ ಕಲಾವಿದ ಎಲ್ಲಿಯವರೆಗೆ ಇಳಿಯಬಹುದು ಎನ್ನುವ ಗಡಿರೇಖೆಗಳನ್ನು ಸ್ವತಃ ಅವನಿಗೆ ಅವನೇ ವಿಧಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಅವನ ವ್ಯಕ್ತಿತ್ವವನ್ನು ರೂಪಿಸಿರುವುದು, ಅವನಿಗೆ ರಾಜಕೀಯ ಅಧಿಕಾರವನ್ನು ನೀಡಿರುವುದು ಆತನೊಳಗಿರುವ ಕಲಾಪ್ರತಿಭೆ. ಅದನ್ನು ಗೌರವಿಸಿದ ಶ್ರೀಸಾಮಾನ್ಯನ ಕುರಿತಂತೆ ತನ್ನದೇ ಆದ ಋಣಸಂದಾಯದ ಜವಾಬ್ದಾರಿ ಕಲಾವಿದನೊಬ್ಬನಿಗಿದೆ. ಋಣ ಸಂದಾಯ ಮಾಡದಿದ್ದರೂ ಪರವಾಗಿಲ್ಲ, ಕನಿಷ್ಠ ಕಲೆಗೆ ಮತ್ತು ಶ್ರೀಮಾನ್ಯನಿಗೆ ದ್ರೋಹ ಬಗೆಯದೆ ತನ್ನ ಹುದ್ದೆಯನ್ನು ನಿಭಾಯಿಸುವ ಅಗತ್ಯವಾದರೂ ಇದೆ. ಆದರೆ ಪರೇಶ್ ರಾವೆಲ್ ತನ್ನ ಹೇಳಿಕೆಯ ಮೂಲಕ, ಯಾವುದೋ ಸಂಘಪರಿವಾರದ ತಳಸ್ತರದ ರಾಜಕೀಯ ಗೂಂಡಾನೊಬ್ಬನನ್ನು ಅನುಕರಿಸಿದ್ದಾರೆ. ಈ ಮೂಲಕ ಅವರು ಮೋದಿಯನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ನಾವು ಭಾವಿಸಬಹುದಾದರೂ, ಒಬ್ಬ ಕಲಾವಿದನ ಆಳದಲ್ಲಿ ಇಷ್ಟರಮಟ್ಟಿಗೆ ಕ್ರೌರ್ಯ ಬಚ್ಚಿಟ್ಟುಕೊಂಡಿರಲು ಸಾಧ್ಯವೇ ಎಂದು ಅಚ್ಚರಿ ಪಡುವಂತಹ ಹೇಳಿಕೆ ಅವರಿಂದ ಹೊರ ಬಿದ್ದಿದೆ. ಪರೇಶ್ ರಾವಲ್ ಏಕಕಾಲದಲ್ಲಿ ತನ್ನ ಹೇಳಿಕೆಯ ಮೂಲಕ ಒಬ್ಬ ಸಂವೇದನಾಶೀಲ ಬರಹಗಾರ್ತಿ ಹಾಗೂ ಕಾಶ್ಮೀರದ ಶ್ರೀಸಾಮಾನ್ಯನ ಮೇಲೆ ಏಕಕಾಲದಲ್ಲಿ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಇತ್ತೀಚೆಗಷ್ಟೇ ಸೇನಾ ಪಡೆ, ಕಾಶ್ಮೀರದ ಒಬ್ಬ ಅಮಾಯಕ ಶ್ರೀಸಾಮಾನ್ಯನನ್ನು ಜೀಪಿನ ಮುಂದುಗಡೆ ಕಟ್ಟಿ ಪರೇಡ್ ನಡೆಸಿತ್ತು. ಈ ಮೂಲಕ ಕಲ್ಲುತೂರಾಟಗಾರರನ್ನು ತಡೆಯುವುದು ಸೇನಾಪಡೆಯ ತಂತ್ರವಂತೆ. ಒಬ್ಬ ಅಮಾಯಕ ಮನುಷ್ಯನನ್ನು ಸೇನೆ ತನ್ನ ಗುರಾಣಿಯಾಗಿ ಬಳಸಿದ ಕ್ರೌರ್ಯವನ್ನು ಖಂಡಿಸಲು ಒಬ್ಬ ಕಲಾವಿದನೇ ಆಗಿರಬೇಕಾಗಿಲ್ಲ. ಮನುಷ್ಯನಾಗಿದ್ದರೆ ಸಾಕಾಗುತ್ತದೆ.

ಪರೇಶ್ ಅವರು ಒಬ್ಬ ರಾಜಕಾರಣಿಯಾಗಿ ಖಂಡಿಸದಿದ್ದರೂ ಪರವಾಗಿರಲಿಲ್ಲ, ಆದರೆ ಇಲ್ಲಿ ಅವರು ಸಮರ್ಥಿಸಿದ್ದಾರೆ. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ಧೀಮಂತಿಕೆಯಿಂದ ಖಂಡಿಸುತ್ತಾ ಬಂದಿದ್ದ ಅರುಂಧತಿ ರಾಯ್ ಅವರನ್ನು ತಮ್ಮ ವ್ಯಂಗ್ಯಕ್ಕೆ ಈಡು ಮಾಡಿದ್ದಾರೆ. ಸೇನೆಯ ಜೀಪಿಗೆ ಆಕೆಯನ್ನೇ ಕಟ್ಟಬೇಕಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ತಮ್ಮ ಕಲೆಗೇ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಕಾಶ್ಮೀರದ ಸಮಸ್ಯೆಯನ್ನು ಅವರು ಎಷ್ಟು ತೆಳುವಾಗಿ ಅರ್ಥೈಸಿದ್ದಾರೆ ಎನ್ನುವುದನ್ನೂ ಇದು ತಿಳಿಸುತ್ತದೆ.

ದುರಂತವೆಂದರೆ ಕಾಶ್ಮೀರದ ಕುರಿತಂತೆ ಪರೇಶ್ ರಾವೆಲ್ ಅಷ್ಟೇ ಅಲ್ಲ, ಕೇಂದ್ರ ಸರಕಾರವೇ ಇಂತಹದೊಂದು ಮನಸ್ಥಿತಿಯನ್ನು ಹೊಂದಿದೆ. ನೋಟು ನಿಷೇಧದ ಮೂಲಕ ಕಾಶ್ಮೀರದ ಕಲ್ಲು ತೂರಾಟದ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಸರಕಾರ ನಂಬಿತ್ತು ಮತ್ತು ದೇಶವನ್ನು ನಂಬಿಸಲು ಪ್ರಯತ್ನಿಸಿತು. ಆದರೆ ಅದು ಸುಳ್ಳಾಯಿತು. ಪೆಲೆಟ್ ಗನ್ನಿನ ಮೂಲಕ ಪ್ರತಿಭಟನೆಯನ್ನು ದಮನಿಸಲು ಯತ್ನಿಸಿತು. ಆದರೆ ಅದರಿಂದ ಕಾಶ್ಮೀರಿಗಳ ಆಕ್ರೋಶ ಸ್ಫೋಟಗೊಂಡಿತು. ಎನ್‌ಕೌಂಟರ್‌ಗಳೂ ತನ್ನ ಪರಿಣಾಮವನ್ನು ಬೀರಲು ವಿಫಲವಾಯಿತು. ಇದೆಲ್ಲದರ ಬೆನ್ನಿಗೆ ಒಬ್ಬ ಅಮಾಯಕ ಕಾಶ್ಮೀರಿಯನ್ನೇ ಸೇನಾ ಜೀಪಿಗೆ ಕಟ್ಟಿ ಪರೇಡ್ ನಡೆಸಿ, ಕಾಶ್ಮೀರಿಗಳ ಎದೆಯ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯಿತು. ಇಂತಹ ಕೃತ್ಯವನ್ನು ಎಸಗಿದ ಸೇನಾ ಮುಖ್ಯಸ್ಥನಿಗೆ ಅಧಿಕಾರಿಯೊಬ್ಬ ಸನ್ಮಾನವನ್ನೂ ಮಾಡಿದ. ಈ ಕೃತ್ಯವನ್ನು ಕೇಂದ್ರ ಸರಕಾರದ ಭಾಗವಾಗಿರುವ ಜನಪ್ರತಿನಿಧಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಪರೇಶ್ ರಾವೆಲ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅನಾಗರಿಕವಾಗಿ ಸಮರ್ಥಿಸಿದ್ದಾರೆ. ಇವರೆಲ್ಲರ ಮಾತಿನಲ್ಲೂ ಧ್ವನಿಸುವುದು ಒಂದೇ ಅಂಶ. ಇವರಿಗೆ ಕಾಶ್ಮೀರದ ಭೂಮಿ ಬೇಕೇ ಹೊರತು, ಕಾಶ್ಮೀರಿಗಳು ಬೇಡ. ಇವರ ಪಾಲಿಗೆ ಕಾಶ್ಮೀರವೆಂದರೆ ಭೌಗೋಳಿಕ ಗಡಿರೇಖೆಗಳು ಮಾತ್ರ. ಅಲ್ಲಿರುವ ಸಜೀವ ಮನುಷ್ಯರಲ್ಲ. ಇಂತಹ ಮನಸ್ಥಿತಿಯ ಮೂಲಕ ಕಾಶ್ಮೀರವನ್ನು ತಮ್ಮದಾಗಿಸಲು ಹೊರಟ ಕಾರಣದಿಂದಲೇ ಇಂದು ಕಾಶ್ಮೀರದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕಾಶ್ಮೀರಿಗಳು ಭಾರತದಿಂದ ಮಾನಸಿಕವಾಗಿ ದೂರವಾಗುತ್ತಿದ್ದಾರೆ.

ಪರೇಶ್ ರಾವೆಲ್ ಒಂದನ್ನು ತಿಳಿದುಕೊಳ್ಳಬೇಕು. ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆಗೆ ಮೃದುಧೋರಣೆ ಹೊಂದಿರುವ ಪಿಡಿಪಿ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದುದರಿಂದ ಜೀಪಿನ ಮುಂದೆ ಒಬ್ಬ ಅಮಾಯಕ ಕಾಶ್ಮೀರಿಯನ್ನು ಕಟ್ಟುವುದಕ್ಕಿಂತ, ಈ ಮೈತ್ರಿಯ ನೇತೃತ್ವವನ್ನು ವಹಿಸಿದ ಉಭಯ ಪಕ್ಷಗಳ ಮುಖಂಡರನ್ನು ಕಟ್ಟುವುದೇ ಕಾಶ್ಮೀರದ ಸದ್ಯದ ಸಮಸ್ಯೆಗೆ ಇರುವ ಏಕೈಕ ಪರಿಹಾರ. ಇದನ್ನು ತಮ್ಮ ನಾಯಕರಿಗೆ ಮನವರಿಕೆ ಮಾಡಿದರೆ, ಬಾಲಿವುಡ್‌ನಲ್ಲಿ ಕಾಮಿಡಿ ಪಾತ್ರ ನಿರ್ವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News