ಕತರ್ ವಿರುದ್ಧ ಸುಳ್ಳು ಅಭಿಯಾನ: ಅಮೀರ್ ಶೇಖ್ ತಮೀಮ್ ಆಕ್ರೋಶ

Update: 2017-05-25 15:01 GMT

ದೋಹಾ (ಕತರ್), ಮೇ 25: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲ್ಲಿ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಕತರ್ ವಿರುದ್ಧ ‘ಸುಳ್ಳು ಅಭಿಯಾನ’ವೊಂದನ್ನು ನಡೆಸಲಾಗಿತ್ತು ಎಂದು ಕತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ತಾನಿ ಹೇಳಿದ್ದಾರೆ.

ಕತರ್‌ಗೆ ಭಯೋತ್ಪಾದನೆಯೊಂದಿಗೆ ನಂಟು ಕಲ್ಪಿಸಲಾಗಿದೆ ಹಾಗೂ ಆ ಮೂಲಕ ವಲಯದಲ್ಲಿ ಸ್ಥಿರತೆಯನ್ನು ಸಾಧಿಸುವ ಅದರ ಪ್ರಯತ್ನಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಅವರು ಹೇಳಿದರು.

‘‘ಈ ಅಪಪ್ರಚಾರ ಅಭಿಯಾನದಲ್ಲಿ ತೊಡಗಿರುವ ದೇಶಗಳು ಮತ್ತು ಸಂಘಟನೆಗಳ ವಿರುದ್ಧ ನಾವು ಮೊಕದ್ದಮೆ ಹೂಡುತ್ತೇವೆ’’ ಎಂದರು.

ಇತ್ತೀಚೆಗೆ ರಾಷ್ಟ್ರೀಯ ಸೇವೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಶೇಖ್ ತಮೀಮ್, ಕತರ್ ನ್ಯೂಸ್ ಏಜನ್ಸಿಯೊಂದಿಗೆ ಮಾತನಾಡುತ್ತಿದ್ದರು.

‘‘ನಮ್ಮ ಸಹೋದರರೊಂದಿಗೆ ಸೇರಿ ಐಸಿಸ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇವೆ ಹಾಗೂ ಅದರ ದಮನ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮೈತ್ರಿ ಕೂಟದೊಂದಿಗೆ ಪಾಲ್ಗೊಂಡಿದ್ದೇವೆ. ಇದರ ಹೊರತಾಗಿಯೂ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಆರೋಪಗಳನ್ನು ನಮ್ಮ ಮೇಲೆ ಹೊರಿಸಿರುವುದನ್ನು ಖಂಡಿಸುತ್ತೇವೆ’’ ಎಂದರು.

‘‘ಮುಸ್ಲಿಮ್ ಬ್ರದರ್‌ಹುಡ್‌ನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಹೆಸರಿಸಿದ ಒಂದೇ ಕಾರಣಕ್ಕಾಗಿ, ನಮ್ಮ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸುವ ಹಕ್ಕು ಯಾರಿಗೂ ಇಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News