×
Ad

ಕೇರಳ ಮಾದರಿ!: ಪಿಣರಾಯಿ ಸರಕಾರಕ್ಕೆ ವರ್ಷ; ದೇಶದಲ್ಲೇ 8 ಪ್ರಥಮಗಳು

Update: 2017-05-25 20:37 IST

ಕೊಚ್ಚಿ, ಮೇ 25: ಪಿಣರಾಯಿ ವಿಜಯನ್ ನೇತೃತ್ವದ, ಕೇರಳದ ಕಮ್ಯುನಿಸ್ಟ್ ಸರಕಾರ ಗುರುವಾರ ಒಂದನೆ ವರ್ಷಕ್ಕೆ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಕೇರಳ ಸರಕಾರ ಕೆಲ ಗಮನಾರ್ಹ ಕ್ರಮಗಳನ್ನು ಕೈಗೊಂಡಿದ್ದು, ಅವುಗಳ ವಿವರ ಈ ಕೆಳಗಿನಂತಿದೆ.

ಫ್ಯಾಟ್ ಟ್ಯಾಕ್ಸ್ ಅಥವಾ ಕೊಬ್ಬು ತೆರಿಗೆ: 2016ರ ಜುಲೈ 8ರಂದು ತನ್ನ ಪ್ರಥಮ ಬಜೆಟನ್ನು ಮಂಡಿಸಿದ್ದ ಕೇರಳ ಸರಕಾರ ಬ್ರಾಂಡೆಂಡ್ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ ಮಾರುವ ಬರ್ಗರ್, ಪಿಝ್ಝಾ, ಡ್ರೋನಟ್ಸ್ ಹಾಗೂ ಟಾಕೋಸ್ ಗಳ ಮೇಲೆ ನೂತನ “ಕೊಬ್ಬು ತೆರಿಗೆ”ಯನ್ನು ಜಾರಿಗೆ ತಂದಿತ್ತು. ಆರೋಗ್ಯದ ಬಗೆಗಿನ ಕಾಳಜಿ ಹಾಗೂ  ಸರಕಾರದ ಆದಾಯ ಹೆಚ್ಚಳದ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

1,000 ಉಚಿತ ಸಾರ್ವಜನಿಕ ವೈ-ಫೈಗಳು-20 ಲಕ್ಷ ಬಡವರ ಮನೆಗಳಿಗೆ ಉಚಿತ ಇಂಟರ್ ನೆಟ್: ಮಾರ್ಚ್ ನಲ್ಲಿ ಮಂಡಿಸಲಾದ ಸರಕಾರದ ಮೊದಲ ಸಂಪೂರ್ಣ ಬಜೆಟ್ ನಲ್ಲಿ 20 ಲಕ್ಷ ಬಡವರ ಮನೆಗಳಿಗೆ ಉಚಿತ ಇಂಟರ್ ನೆಟ್ ಹಾಗೂ 1,000 ಉಚಿತ ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ಗಳನ್ನು ನಿರ್ಮಿಸಲು 1,000 ಕೋಟಿ ರೂ.ಗಳನ್ನು ಘೋಷಿಸಲಾಯಿತು.

ವಲಸಿಗರಿಗೆ ಆರೋಗ್ಯ ವಿಮೆ: ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ಇನ್ನೊಂದು ಮಹತ್ವದ ಕ್ರಮವೆಂದರೆ ವಲಸಿಗರಿಗೆ ಆರೋಗ್ಯ ವಿಮೆ. “ಆವಾಝ್” ಎಂಬ ಹೆಸರಿನ ಯೋಜನೆಯನ್ನು ಜಾರಿಗೊಳಿಸಿದ ಕೇರಳ ಸರಕಾರ 34 ಲಕ್ಷ ವಲಸೆ ಕಾರ್ಮಿಕರಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಘೋಷಿಸಿತ್ತು.

ಕೊಚ್ಚಿ ಮೆಟ್ರೋದಲ್ಲಿ ತೃತೀಯ ಲಿಂಗಿಗಳಿಗೆ ಉದ್ಯೋಗ: ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಕೊಚ್ಚಿ ಮೆಟ್ರೋ ರಾಜ್ಯದ ಮೊದಲ ಮೆಟ್ರೋ ಸೇವೆಯಾಗಿದ್ದು, ಸಮಾಜದಲ್ಲಿನ ಪೂರ್ವಾಗ್ರಹ ಪೀಡಿತ ಆಲೋಚನೆಯನ್ನು ತೊಡೆದುಹಾಕಲು ಹಾಗೂ ನಿರ್ಲಕ್ಷಿಸಲ್ಪಟ್ಟ ಜನರನ್ನು ಸಮಾಜದ ಮುನ್ನೆಲೆಗೆ ಕರೆತರಲು ಕೇರಳ ಸರಕಾರ ಇದರಲ್ಲಿ 60 ತೃತೀಯಲಿಂಗಿಗಳಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಈಗಾಗಲೇ 23 ಮಂದಿ  ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ, ಸರಕಾರಿ ಸ್ವಾಮ್ಯದ ಸಂಸ್ಥೆಯೊಂದು ತೃತೀಯ ಲಿಂಗಿಗಳಿಗೆ ಬೃಹತ್ ಪ್ರಮಾಣದ ಉದ್ಯೋಗ ನೀಡಿರುವುದು ಇದೇ ಮೊದಲ ಬಾರಿಯಾಗಿದೆ.

ಶಾಲೆಗಳಲ್ಲಿ ಸ್ಯಾನಿಟರ್ ಪ್ಯಾಡ್ ವಿತರಣಾ ಯಂತ್ರ: ಎಲ್ಲಾ ಶಾಲೆಗಳಲ್ಲೂ ಸ್ಯಾನಿಟರಿ ಪ್ಯಾಡ್ ವಿತರಣಾ ಯಂತ್ರವನ್ನು ಅಳವಡಿಸಲಿರುವ ಮೊದಲ ರಾಜ್ಯವಾಗಲಿದೆ ಕೇರಳ. ಸುಮಾರು 30 ಕೋಟಿ ರೂ, ವೆಚ್ಚದ ಈ ಯೋಜನೆಗೆ “ಶಿ ಪ್ಯಾಡ್” (She Pad) ಎಂದು ಹೆಸರಿಡಲಾಗಿದೆ.

ವಿಶೇಷಚೇತನರಿಗೆ ವಿಶೇಷ ಪುಸ್ತಕ: ಮುಂದಿನ ಶೈಕ್ಷಣಿಕ ವರ್ಷದಿಂದ ವಿಶೇಷಚೇತನ ಮಕ್ಕಳಿಗೆ ವಿಶೇಷ ಪುಸ್ತಕಗಳನ್ನು ನೀಡುವುದಾಗಿ ವಿಜಯನ್ ಮೇ 22ರಂದು ಘೋಷಿಸಿದ್ದಾರೆ. ದೇಶದಲ್ಲೇ ಇದು ಮೊದಲ ಪ್ರಯೋಗವಾಗಿದ್ದು, ಪುಸ್ತಕವನ್ನು ತಜ್ಞವೈದ್ಯರು, ಮನಃಶಾಸ್ತ್ರಜ್ಞರು ಹಾಗೂ ಮಕ್ಕಳ ಶಿಕ್ಷಣ ಕ್ಷೇತ್ರದ ಪರಿಣಿತರ ಸಲಹೆ ಪಡೆದು ರಚಿಸಲಾಗಿದೆ.

900 ಕೋಟಿಯ ಶಿಕ್ಷಣಸಾಲ ಮರುಪಾವತಿ ಯೋಜನೆ: ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆಯಿರುವ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ಕೇರಳ ಸರಕಾರ ಎಪ್ರಿಲ್ ನಲ್ಲಿ 900 ಕೋಟಿ ರೂ,ಗಳ ಶೈಕ್ಷಣಿಕಕ ಸಾಲ ಮರುಪಾವತಿ ಯೋಜನೆಯನ್ನು ಜಾರಿಗೆ ತಂದಿದೆ. ಆರ್ಥಿಕ ಸಂಕಷ್ಟದಿಂದ ಶಿಕ್ಷಣವಂಚಿತರಾಗುವ ವಿದ್ಯಾರ್ಥಿಗಳಿಗೆ ಈ ಯೋಜನೆ ಸಹಕಾರಿಯಾಗಲಿದೆ.

ಎಲ್ಲಾ ಮನೆಗಳಿಗೂ ವಿದ್ಯುತ್: ಸರಕಾರ ಒಂದನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಮೇ 29ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಘೋಷಿಸಲಿದ್ದಾರೆ. 40 ಸಾವಿರ ಪರಿಶಿಷ್ಟ ಕುಟುಂಬಗಳು ಹಾಗೂ 20 ಸಾವಿರ ಬುಡಕಟ್ಟು ಮನೆಗಳು ಸೇರಿದಂತೆ 1.30 ಲಕ್ಷ ಮನೆಗಳು ಈ ಯೋಜನೆಯ ಫಲಾನುಭವಿಗಳಾಗಲಿವೆ.

ಬಯಲುಶೌಚಮುಕ್ತ ರಾಜ್ಯ: ಕೇರಳ ರಾಜ್ಯವನ್ನು ಬಯಲುಶೌಚಮುಕ್ತ ರಾಜ್ಯವಾಗಿ ನವೆಂಬರ್ 1ರಂದು ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ಸಿಕ್ಕಿಂ ಹಾಗೂ ಹಿಮಾಚಲ ಪ್ರದೇಶ ಈ ಹಿಂದೆ ಬಯಲುಶೌಚ ಮುಕ್ತ ರಾಜ್ಯವಾಗಿ ಘೋಷಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News