ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್‌ಗೆ ನೋಟಿಸ್

Update: 2017-05-26 03:51 GMT

ಹೊಸದಿಲ್ಲಿ, ಮೇ 26: ಟಿವಿ ನಿರೂಪಕ ಮತ್ತು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯವರಿಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಟೈಮ್ಸ್ ನೌ ಸಮೂಹದ ಬೌದ್ಧಿಕ ಆಸ್ತಿ ದುರ್ಬಳಕೆ ಮತ್ತು ಉದ್ಯೋಗದ ಗುತ್ತಿಗೆಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ನೋಟಿಸ್ ನೀಡಲಾಗಿದೆ. ಟೈಮ್ಸ್ ನೌ ಸಂಪಾದಕರಾಗಿದ್ದ ಗೋಸ್ವಾಮಿ ಇದೀಗ ಹೊಸ ಚಾನಲ್ ಆರಂಭಿಸಿದ್ದಾರೆ.

ದೇಶದ ಅತಿದೊಡ್ಡ ಪ್ರಕಾಶನ ಸಂಸ್ಥೆಯಾ ಬೆನಟ್ ಆ್ಯಂಡ್ ಕೋಲ್‌ಮನ್ ಮಾಲಕತ್ವದ ಟೈಮ್ಸ್ ನೌ ಇತ್ತೀಚೆಗೆ ಗೋಸ್ವಾಮಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿತ್ತು. ರಿಪಬ್ಲಿಕ್ ಟಿವಿಯ ಎರಡು ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾದ ಸುನಂದಾ ಪುಷ್ಕರ್ ಹಾಗೂ ಲಾಲೂ ಪ್ರಸಾದ್ ಯಾದವ್ ಬಗೆಗಿನ ಆಡಿಯೊ ಟೇಪ್‌ಗಳು, ಟೈಮ್ಸ್ ನೌ ಚಾನಲ್‌ನಲ್ಲಿ ಉದ್ಯೋಗದಲ್ಲಿದ್ದ ಅವಧಿಯಲ್ಲಿ ಸಿದ್ಧಪಡಿಸಿದ್ದು ಎಂದು ಟೈಮ್ಸ್ ನೌ ವಾದಿಸಿದೆ.

ಗೋಸ್ವಾಮಿ ಹಾಗೂ ಟೈಮ್ಸ್ ನೌ ಮಾಜಿ ವರದಿಗಾರ್ತಿ ಪ್ರೇಮಾ ಶ್ರೀದೇವಿ ಇದನ್ನು ಸಿದ್ಧಪಡಿಸಿದ್ದಾಗಿ ಟೈಮ್ಸ್ ನೌ ದೂರು ನೀಡಿದೆ. ಮೇ 6ರಂದು ರಿಪಬ್ಲಿಕ್ ಟಿವಿ ಚಾಲನಾ ಸಮಾರಂಭದಲ್ಲಿ ಲಾಲೂ ಪ್ರಸಾದ್ ಯಾದವ್ ಬಗೆಗಿನ ಸ್ಫೋಟಕ ವರದಿಯನ್ನು ಚಾನೆಲ್ ಪ್ರಸಾರ ಮಾಡಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಜೈಲಿನಲ್ಲಿರುವ ಶಹಾಬುದ್ದೀನ್ ನಡುವಿನ ಸಂಭಾಷಣೆಯ ಆಡಿಯೊ ಪ್ರಸಾರ ಮಾಡಲಾಗಿತ್ತು.

ಅಂತೆಯೇ ಮೇ 8ರಂದು ಪ್ರಸಾರ ಮಾಡಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ ಪ್ರೇಮಾ ಶ್ರೀದೇವಿ ಹಾಗೂ ಸುನಂದಾ ಪುಷ್ಕರ್ ಮತ್ತು ಸಹಾಯಕ ನಾರಾಯಣ್ ನಡುವಿನ ಸಂಭಾಷಣೆಯ ತುಣುಕನ್ನು ಪ್ರಸಾರ ಮಾಡಿತ್ತು. ಈ ಎರಡೂ ಆಡಿಯೊಗಳನ್ನು ಗೋಸ್ವಾಮಿ ಹಾಗೂ ಶ್ರೀದೇವಿ ಟೈಮ್ಸ್ ನೌ ಸಂಸ್ಥೆಯಲ್ಲಿದ್ದಾಗ ಸಿದ್ಧಪಡಿಸಲಾಗಿತ್ತು ಎನ್ನುವುದು ಟೈಮ್ಸ್ ನೌ ಆಂತರಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಆಡಿಯೊ ಕಳ್ಳತನವಾಗಿರುವುದು ರಿಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಬಳಿಕ ಗಮನಕ್ಕೆ ಬಂದಿದೆ ಎಂದು ಟೈಮ್ಸ್ ನೌ ಸಿಇಒ ಎಂ.ಕೆ.ಆನಂದ್ ಹೇಳಿದ್ದಾರೆ. ಇಂಥ ಘನತೆಯ ವ್ಯಕ್ತಿಗಳು ಕಳ್ಳತನದಂಥ ಹೀನ ಕೃತ್ಯಕ್ಕೆ ಇಳಿದಿರುವುದು ವಿಷಾದನೀಯ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದರು.
ಗೋಸ್ವಾಮಿ ಕಳೆದ ನವೆಂಬರ್‌ನಲ್ಲಿ ಟೈಮ್ಸ್ ನೌ ಬಿಟ್ಟು, ಈ ತಿಂಗಳು ಹೊಸ ಚಾನಲ್ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News