×
Ad

ಸಚಿನ್ ಮೌನ ಮುರಿಯದ ಈ 6 ಪ್ರಶ್ನೆಗಳಿಗೆ ಚಿತ್ರ ಉತ್ತರಿಸುತ್ತದೆಯೇ?

Update: 2017-05-26 14:45 IST

ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಜೀವನ ಚರಿತ್ರೆಯನ್ನು ಆಧರಿಸಿರುವ ಚಿತ್ರ ‘ಸಚಿನ್:ಎ ಬಿಲಿಯನ್ ಡ್ರೀಮ್ಸ್ ’ಚಿತ್ರ ಶುಕ್ರವಾರ ಬೆಳ್ಳಿತೆರೆಗೆ ಲಗ್ಗೆ ಹಾಕುತ್ತಿದೆ. ಈ ಚಿತ್ರವು ಮಾಸ್ಟರ್ ಬ್ಲಾಸ್ಟರ್ ತನ್ನ ವೃತ್ತಿಜೀವನದಲ್ಲಿ ನಡೆಸಿದ್ದ ಹೋರಾಟವನ್ನೇನೋ ತೋರಿಸುತ್ತದೆ,ಸರಿ. ಆದರೆ ಅವರ ವೃತ್ತಿಜೀವನದ ವಿವಾದಾತ್ಮಕ ಮಗ್ಗಲಿನ ಮೇಲೂ ಅದು ಬೆಳಕು ಬೀರಿದೆಯೇ?

ನಾವು ಇನ್ನಷ್ಟು ಹೆಚ್ಚು ತಿಳಿದುಕೊಳ್ಳಬೇಕಾಗಿರುವ ಕೆಲವು ಘಟನೆಗಳತ್ತ ಒಮ್ಮೆ ಕಣ್ಣು ಹಾಯಿಸೋಣ......

►1999-2000:ಮ್ಯಾಚ್ ಫಿಕ್ಸಿಂಗ್ ಹಗರಣದ ಬಗ್ಗೆ ಸಚಿನ್‌ಗೆ ತಿಳಿದಿತ್ತೇ?

1999-2000ರ ಮ್ಯಾಚ್ ಫಿಕ್ಸಿಂಗ್ ಹಗರಣ ಭಾರತೀಯ ಕ್ರಿಕೆಟ್ ರಂಗವು ಕಂಡಿರುವ ಅತ್ಯಂತ ದೊಡ್ಡ ವಿವಾದವಾಗಿದ್ದು, ಅದು ಭಾರತೀಯ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಝರುದ್ದೀನ್ ಅವರಿಗೆ ಆಜೀವ ನಿಷೇಧ ವಿಧಿಸಲು ಕಾರಣವಾಗಿತ್ತು.

ಈ ವಿಷಯದಲ್ಲಿ ಸಚಿನ್ ನಕ್ಕೆ ಶರಣಾಗಿದ್ದರೆ, ಮ್ಯಾಚ್ ಫಿಕ್ಸಿಂಗ್ ಬಗ್ಗೆ ಸಚಿನ್‌ಗೆ ತಿಳಿದಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

‘‘ಸಚಿನ್ ಮುಂದೆ ಬಂದು ಈ ವಿಷಯದ ಬಗ್ಗೆ ಏಕೆ ಮಾತನಾಡಿರಲಿಲ್ಲ?’’ಎನ್ನುವುದು ಈವರೆಗೂ ಉತ್ತರ ಸಿಗದ ಪ್ರಶ್ನೆಯಾಗಿದೆ.

►2004: ಇನಿಂಗ್ಸ್ ಡಿಕ್ಲೇರ್ ಮಾಡುವ ರಾಹುಲ್ ದ್ರಾವಿಡ್ ನಿರ್ಧಾರ

2004ರಲ್ಲಿ ಮುಲ್ತಾನಿನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್‌ಪಂದ್ಯದ ಎರಡನೇ ದಿನ ಭಾರತದ ಗಳಿಕೆ 5 ವಿಕೆಟ್‌ಗಳಿಗೆ 675 ರನ್‌ಗಳಾಗಿದ್ದಾಗ ಇನಿಂಗ್ಸ್ ಡಿಕ್ಲೇರ್ ಮಾಡಲು ದ್ರಾವಿಡ್ ನಿರ್ಧರಿಸಿದ್ದರು. ಆಗ ಸಚಿನ್ 194 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದರು.

ದ್ರಾವಿಡ್‌ರ ಈ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಸಚಿನ್ ಇದನ್ನು ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದರಾದರೂ ಆ ನಿರ್ಧಾರದ ಬಗ್ಗೆ ತನ್ನ ಭಾವನೆಗಳ ಕುರಿತು ಅವರೆಂದೂ ಮಾತನಾಡಲಿಲ್ಲ. ಈ ಬಗ್ಗೆ ಇನ್ನಷ್ಟು ತಿಳಿಯಲು ಅಭಿಮಾನಿಗಳು ಇಷ್ಟಪಡುತ್ತಾರೆ.

►ಮಾಜಿ ಕೋಚ್ ಗ್ರೆಗ್ ಚಾಪೆಲ್ ಜೊತೆ ಸಚಿನ್ ಗುದ್ದಾಟ

ಸಚಿನ್ ತನ್ನ ಶಾಂತಸ್ವಭಾವಕ್ಕೆ ಹೆಸರಾಗಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಜೊತೆ ಅವರ ಹಗ್ಗಜಗ್ಗಾಟದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಚಾಪೆಲ್ ಭಾರತೀಯ ಕ್ರಿಕೆಟ್‌ನ್ನು ನಾಶ ಮಾಡುತ್ತಿದ್ದಾರೆ ಮತ್ತು ಅದನ್ನು ಐದು ವರ್ಷ ಹಿಂದಕ್ಕೊಯ್ದಿದ್ದಾರೆ ಎಂದು ಸಚಿನ್ ಆರೋಪಿಸಿದ್ದರು.

ಚಾಪೆಲ್ ಆರಂಭಿಕ ಆಟಗಾರರಾಗಿದ್ದ ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ಅವರಿಗೆ ನಂತರದ ಕ್ರಮಾಂಕಗಳಲ್ಲಿ ಆಡುವಂತೆ ಸಲಹೆ ನೀಡಿದ್ದರು ಮತ್ತು ಈ ಸಲಹೆ ಅವರಿಬ್ಬ ರಿಗೂ ಪಥ್ಯವಾಗಿರಲಿಲ್ಲ.

►ಫೆರಾರಿ ವಿವಾದ

2002ರಲ್ಲಿ ಡಾನ್ ಬ್ರಾಡಮನ್ ಅವರ ಟೆಸ್ಟ್‌ ಪಂದ್ಯಗಳಲ್ಲಿ 29 ಶತಕಗಳ ವಿಶ್ವದಾಖಲೆ ಯನ್ನು ಸರಿಗಟ್ಟಿದ ಬಳಿಕ ಸಚಿನ್‌ಗೆ ಫೆರಾರಿ-360 ಮೊಡೆನಾ ಕಾರನ್ನು ಕಾಣಿಕೆಯಾಗಿ ನೀಡಲಾಗಿತ್ತು.

ಆದರೆ ಕಾರನ್ನು ಭಾರತಕ್ಕೆ ತರಲು ಶೇ.120(1.13 ಕೋ.ರೂ.) ಸುಂಕ ವಿನಾಯಿತಿ ಗಾಗಿ ಸಚಿನ್ ಕೇಂದ್ರವನ್ನು ಕೋರಿದ್ದರು. ಅಂತಿಮವಾಗಿ ದಿಲ್ಲಿ ನ್ಯಾಯಾಲಯವು ಸಚಿನ್, ಕೇಂದ್ರ ಹಣಕಾಸು ಮತ್ತು ಕ್ರೀಡಾ ಸಚಿವಾಲಯಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ ಬಳಿಕ ಫಿಯಟ್ ಇಂಡಿಯಾ ಈ ಮೊತ್ತವನ್ನು ಪಾವತಿಸಿತ್ತು.

ಆದರೆ ಸಚಿನ್ ಈ ಫೆರಾರಿ ಕಾರನ್ನು ಸೂರತ್‌ನ ಉದ್ಯಮಿಯೋರ್ವರಿಗೆ ಮಾರಾಟ ಮಾಡಿದ್ದೇಕೆ ಎಂಬ ಅಚ್ಚರಿ ಈಗಲೂ ಉಳಿದುಕೊಂಡಿದೆ.

►ಮಂಕಿಗೇಟ್: ಸಚಿನ್‌ಗೆ ಏನಾದರೂ ಕೇಳಿಸಿತ್ತೇ ಅಥವಾ ಇಲ್ಲವೇ?

ಹರ್ಭಜನ್ ಸಿಂಗ್ ಅವರು ಆ್ಯಂಡ್ರೂ ಸೈಮಂಡ್ಸ್ ಅವರನ್ನು ‘ಮಂಗ ’ ಎಂದು ಕರೆದಿದ್ದರು ಎಂದು ಆಸ್ಟ್ರೇಲಿಯಾದ ಕ್ರಿಕೆಟಿಗರು ಆರೋಪಿಸಿದ್ದ ಕುಖ್ಯಾತ ‘ಮಂಕಿಗೇಟ್ ’ ಪ್ರಕರಣದಲ್ಲಿ ಸಚಿನ್ ಅವರ ಹೇಳಿಕೆಯ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟಿಗರು ಅವರ ವಿರುದ್ಧ ಆಕ್ರೋಶದ ಕಿಡಿಗಳನ್ನು ಕಾರಿದ್ದರು.

ತನಗೆ ಏನೂ ಕೇಳಿಸಿರಲಿಲ್ಲ ಎಂದು ಪ್ರಾಥಮಿಕ ಹೇಳಿಕೆಯಲ್ಲಿ ಸಚಿನ್ ತಿಳಿಸಿದ್ದರು. ಆದರೆ ಬಳಿಕ ತನ್ನ ಹೇಳಿಕೆಯನ್ನು ಬದಲಿಸಿದ್ದ ಅವರು, ತಾನು ಏನನ್ನೋ ಕೇಳಿದ್ದೆ, ಆದರೆ ‘ಮಂಗ ’ಎಂಬ ಶಬ್ದವನ್ನು ಕೇಳಿರಲಿಲ್ಲ ಎಂದು ತಿಳಿಸಿದ್ದರು.

►ಸತ್ಯಾಂಶ: ಐಎಎಫ್‌ನ ಬ್ರಾಂಡ್ ರಾಯಭಾರಿ ಸ್ಥಾನದಿಂದ ಸಚಿನ್ ವಜಾ

ಎರಡು ವರ್ಷಗಳ ಕಾಲ ಭಾರತೀಯ ವಾಯುಪಡೆಯ ಬ್ರಾಂಡ್ ರಾಯಭಾರಿ ಯಾಗಿದ್ದ ಸಚಿನ್‌ರನ್ನು ಬಳಿಕ ಕೈಬಿಡಲಾಗಿತ್ತು. ಈ ಒಡನಾಟ ಯೋಜಿಸಿದ್ದಂತೆ ನಡೆದಿರಲಿಲ್ಲ ಮತ್ತು ಮಧ್ಯದಲ್ಲಿಯೇ ರದ್ದುಗೊಂಡಿತ್ತು. ಸಚಿನ್ ಈ ಗೌರವ ಪಡೆದಿದ್ದ,ವೈಮಾನಿಕ ಹಿನ್ನೆಲೆಯಿಲ್ಲದಿದ್ದ ಮೊದಲ ಗಣ್ಯರಾಗಿದ್ದರು.

ಕೃಪೆ : newsbytesapp.com

Writer - ರಿಷಿಕೇಶ್ ಮಾಲ್ಕೆಡ್

contributor

Editor - ರಿಷಿಕೇಶ್ ಮಾಲ್ಕೆಡ್

contributor

Similar News