ನಿಮ್ಮ ಮಕ್ಕಳ ಜೊತೆ ಹೇಗೆ ಮಾತನಾಡಬೇಕು ?
ನಿಮ್ಮ ಮಗುವಿನ ಭವಿಷ್ಯ ನೀವು ಅವರೊಂದಿಗೆ ಹೇಗೆ ಮಾತನಾಡುತ್ತೀರಿ ಎನ್ನುವುದನ್ನು ಅವಲಂಬಿಸಿದೆ ಎನ್ನುತ್ತಾರೆ ಖ್ಯಾತ ವ್ಯಕ್ತಿತ್ವ ವಿಕಸನ ತಜ್ಞ ಟೋನಿ ರಾಬಿನ್ಸ್.
ರಾಬಿನ್ಸ್ ಈ ಜಗತ್ತು ಕಂಡಿರುವ ಅತ್ಯಂತ ಯಶಸ್ವಿ ಸ್ಫೂರ್ತಿದಾಯಕ ಭಾಷಣಕಾರರು ಮತ್ತು ನಾಯಕತ್ವ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಅವರಿಂದ ನೇರವಾಗಿ ತರಬೇತಿ ಪಡೆಯಲು ಉನ್ನತ ಕಂಪನಿಗಳ ಸಿಇಒಗಳು ವರ್ಷವೊಂದಕ್ಕೆ ಒಂದು ಮಿಲಿಯನ್ ಡಾ.ಅಥವಾ ಅದಕ್ಕೂ ಹೆಚ್ಚಿನ ಶುಲ್ಕವನ್ನು ಪಾವತಿಸುತ್ತಾರೆ. ವರ್ಷದಲ್ಲಿ ಏನಿಲ್ಲವೆಂದರೂ 200 ದಿನಗಳ ಕಾಲ ಅವರು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ವ್ಯಸ್ತರಾಗಿರುತ್ತಾರೆ. ಅವರ ಈ ಕಾರ್ಯಕ್ರಮಗಳಿಗೆ ಪ್ರವೇಶದರ ನಾಲ್ಕಂಕಿಗಳನ್ನು ಮೀರಿರುತ್ತದೆ. ‘ಮನಿ:ಮಾಸ್ಟರ್ ದಿ ಗೇಮ್’ ಮತ್ತು ‘ಅವೇಕನ್ ದಿ ಜೈಂಟ್ ವಿಥಿನ್’ ಸೇರಿದಂತೆ ಅತ್ಯುತ್ತಮ ಮಾರಾಟ ದಾಖಲೆ ಹೊಂದಿರುವ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.
ರಾಬಿನ್ಸ್ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರಲ್ಲ. ಅವರ ಬಾಲ್ಯ ತುಂಬ ಕಠಿಣವಾಗಿತ್ತು. ಅವರಿಗೆ ಏಳು ವರ್ಷವಾಗಿದ್ದಾಗ ತಂದೆ-ತಾಯಿ ವಿಚ್ಛೇದನಗೊಂಡಿದ್ದರು. ಬಡತನ ಸದಾ ಕಾಡುತ್ತಿತ್ತು. ಮದ್ಯವ್ಯಸನಿಯಾಗಿದ್ದ, ಸದಾ ಮಾತ್ರೆಗಳನ್ನು ಸೇವಿಸುತ್ತಿದ್ದ ತಾಯಿ ಮತ್ತು ಹಲವಾರು ಮಲತಂದೆಯರು ಮತ್ತು ತಂದೆಯಂತಹ ವ್ಯಕ್ತಿಗಳ ನಡುವೆಯೇ ಅವರು ಬೆಳೆದಿದ್ದರು.
17 ವರ್ಷವಾಗಿದ್ದಾಗ ಅದೊಂದು ದಿನ ತಾಯಿ ಚೂರಿ ತೋರಿಸಿ ಬೆದರಿಸಿ ಮಗನನ್ನು ಮನೆಯಿಂದ ಹೊರದಬ್ಬಿದ್ದಳು. ಹೊಟ್ಟೆಪಾಡಿಗಾಗಿ ಭದ್ರತಾ ಸಿಬ್ಬಂದಿಯಾಗಿ ರಾಬಿನ್ಸ್ ಕೆಲಸ ಮಾಡಿಕೊಂಡಿದ್ದರು. ಆದರೆ 1980ರ ದಶಕದಲ್ಲಿ ಅವರು ಸ್ವಸಹಾಯ ಗುರು ಜಿಮ್ ರಾನ್ ಅವರ ಸಂಪರ್ಕಕ್ಕೆ ಬಂದಿದ್ದರು ಮತ್ತು ಅದು ಅವರ ಜೀವನದ ದಿಕ್ಕನ್ನೇ ಬದಲಿಸಿತ್ತು. ತನ್ನದೇ ಆದ ಪುಸ್ತಕಗಳನ್ನು ಬರೆಯುವುದರ ಜೊತೆಗೆ ಕಾರ್ಯಕ್ರಮಗಳನ್ನೂ ನೀಡಲು ಆರಂಭಿಸಿದ್ದು, ಅವು ಭಾರೀ ಜನಪ್ರಿಯವಾಗಿದ್ದವು.
ರಾಬಿನ್ಸ್ ಅವರ ಪುತ್ರ ಜೇರಿಕ್ ರಾಬಿನ್ಸ್ ಕೂಡ ತಂದೆಯಂತೆಯೇ ಸ್ಫೂರ್ತಿದಾಯಕ ಭಾಷಣಕಾರನಾಗಿರುವ ಜೊತೆಗೆ ವ್ಯಕ್ತಿತ್ವ ವಿಕಸನ ತರಬೇತುದಾರರೂ ಆಗಿದ್ದಾರೆ. ಮಕ್ಕಳನ್ನು ಉದ್ಯಮಿಗಳನ್ನಾಗಿ ಬೆಳೆಸುವುದು ಹೇಗೆ ಎಂಬ ಬಗ್ಗೆ ರಾಬಿನ್ಸ್‌ರ ಅತ್ಯುತ್ತಮ ಚಿಂತನೆಗಳ ಬಗ್ಗೆ ಕೇಳಿದರೆ, ಮಕ್ಕಳು ಪ್ರಗತಿಪರ ಮಾನಸಿಕತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಹೆತ್ತವರು ಅವರೊಂದಿಗೆ ಮಾತನಾಡಬೇಕು, ಇದು ಮಕ್ಕಳು ಯಶಸ್ಸು ಸಾಧಿಸುವಲ್ಲಿ ನೆರವಾಗುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.
ಪ್ರಗತಿಪರ ಮಾನಸಿಕತೆ
ಮಕ್ಕಳನ್ನು ಹೊಗಳುವಾಗ ಅವರು ಎಷ್ಟೊಂದು ಪರಿಪೂರ್ಣರಾಗಿದ್ದಾರೆ, ಎಷ್ಟು ಸುಂದರವಾಗಿದ್ದಾರೆ, ಎಷ್ಟು ಬುದ್ಧಿವಂತರು ಮತ್ತು ವಿಶಿಷ್ಟರಾಗಿದ್ದಾರೆ ಎಂಬ ಮಾತುಗಳೇ ಬೇಡ ಎನ್ನುತ್ತಾರೆ ರಾಬಿನ್ಸ್. ಬದಲಿಗೆ ಸಮಸ್ಯೆಗಳನ್ನು ಬಗೆಹರಿಸುವ ಅವರ ಪ್ರಯತ್ನಗಳಿಗೆ ಉತ್ತೇಜನ ನೀಡುವ ಪ್ರಶಂಸೆಗಳನ್ನು ಮಾಡಿ. ನಿರಂತರ ಪ್ರಯತ್ನ, ದೃಢ ನಿರ್ಧಾರದ ಗುಣಗಳು ಅವರಲ್ಲಿ ಮೊಳಕೆಯೊಡೆಯುವಂತೆ ಮಾಡಿ ಎನ್ನುವುದು ಅವರ ಸಲಹೆ.
ಖಂಡಿತವಾಗಿಯೂ, ರಾಬಿನ್ಸ್ ಇಂತಹ ಸಲಹೆಗಳನ್ನು ನೀಡುವ ಮೊದಲಿಗರೇನೂ ಅಲ್ಲ. ಅವರೇ ಹೇಳಿಕೊಂಡಿರುವಂತೆ ಅವರು ನೀಡುವ ಸಲಹೆಗಳು ಸ್ಟಾನ್‌ಫೋರ್ಡ್ ವಿವಿಯ ಮನಃಶಾಸ್ತ್ರಜ್ಞೆ ಕ್ಯಾರೋಲ್ ಡ್ವೆಕ್ ಅವರ ಅಧ್ಯಯನಗಳನ್ನು ಆಧರಿಸಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಪ್ರಗತಿಪರ ಮಾನಸಿಕತೆಯನ್ನು ಅದರ ಸರಿ ವಿರುದ್ಧವಾದ ಜಡ ಮಾನಸಿಕತೆಗೆ ಹೋಲಿಸಿದಾಗ ಮಾತ್ರ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಹೆಸರೇ ಸೂಚಿಸುವಂತೆ ಜಡ ಮಾನಸಿಕತೆಯ ವ್ಯಕ್ತಿ ಮಾನವನ ಸಾಧನೆಯು ಆತನಿಗೆ ಜನ್ಮದತ್ತವಾಗಿ ಬಂದಿರುವ ಗುಣಗಳನ್ನು ಆಧರಿಸಿದೆ ಎಂಬ ನಂಬಿಕೆಗೆ ಜೋತು ಬಿದ್ದಿರುತ್ತಾನೆ. ಇದು ಒಂದು ರೀತಿಯಲ್ಲಿ ‘ಹಣೆಯಲ್ಲಿ ಬರೆದಂತೆ ಆಗುತ್ತದೆ ’ಎಂಬಂತೆ. ಪರಿಣಾಮವಾಗಿ ಜಡ ಮಾನಸಿಕತೆಯ ವ್ಯಕ್ತಿಯು ಯಶಸ್ಸಿನಲ್ಲಿ ಪ್ರಯತ್ನ, ದೃಢನಿರ್ಧಾರ ಅಥವಾ ಸರಿಯಾದ ಸಮಯದಲ್ಲಿ ಸರಿಯಾದ ಕಾರ್ಯ ಇತ್ಯಾದಿಗಳ ಪಾತ್ರಕ್ಕೆ ಬೆಲೆ ಕೊಡುವುದಿಲ್ಲ.
ಆದರೆ ಪ್ರಗತಿಪರ ಮಾನಸಿಕತೆಯ ವ್ಯಕ್ತಿಯಲ್ಲಿ ಏನನ್ನಾದರೂ ಸಾಧಿಸಬಲ್ಲ ಮಾನವನ ಸಾಮರ್ಥ್ಯವನ್ನು ಹೇಗೆ ಬೇಕಾದರೂ ಹಿಗ್ಗಿಸಬಹುದು ಮತ್ತು ನಿಯಂತ್ರಿಸಬಹುದು ಎಂಬ ದೃಢವಾದ ನಂಬಿಕೆ ಅಂತರ್ಗತವಾಗಿರುತ್ತದೆ. ಅಂದರೆ ಕಾಲ ಸರಿದಂತೆ ನಾವು ನಮ್ಮ ಬುದ್ಧಿವಂತಿಕೆ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕಠಿಣ ಪರಿಶ್ರಮ,ಮನೋನಿರ್ಧಾರ ಮತ್ತು ದೃಢನಿಷ್ಠೆ ಇವುಗಳು ನಮ್ಮ ಜನ್ಮದತ್ತ ಸಾಮರ್ಥ್ಯದಷ್ಟೇ ಮಹತ್ವದ್ದಾಗಿರುತ್ತವೆ.