ಅಪಾಯಕಾರಿ ಯುದ್ಧೋನ್ಮಾದ

Update: 2017-05-26 18:59 GMT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಮೂರು ವರ್ಷ ತುಂಬಿದೆ. ಈ ಸರಕಾರದ ಸಾಧನೆಗಳ ಬಗ್ಗೆ ಪರಾಮರ್ಶೆಗಳು ನಡೆಯುತ್ತಿವೆ. ಇದರೊಂದಿಗೆ ಸರಕಾರದ ವಿದೇಶಾಂಗ ನೀತಿಯ ಬಗ್ಗೆಯೂ ವಿಮರ್ಶೆ ನಡೆಯಬೇಕಾಗಿದೆ. ಉದಾಹರಣೆಗೆ ಭಾರತ ಮತ್ತು ಪಾಕಿಸ್ತಾನ. ಉಭಯ ದೇಶಗಳ ನಡುವೆ ಈಗ ಸಂಘರ್ಷದ ವಾತಾವರಣ ಉಂಟಾಗಿದೆ. ದಿನದಿಂದ ದಿನಕ್ಕೆ ಬಿಕ್ಕಟ್ಟು ಉಲ್ಬಣಿಸುತ್ತಲೇ ಇದೆ. ಎರಡೂ ದೇಶಗಳಲ್ಲಿ ಯುದ್ಧೋನ್ಮಾದದ ವಾತಾವರಣ ಉಂಟಾಗಲು ಮಾಧ್ಯಮಗಳ ಕೊಡುಗೆಯೂ ಸಾಕಷ್ಟಿದೆ.

ವಿಶೇಷವಾಗಿ ಟಿವಿ ಮಾಧ್ಯಮಗಳು ಯುದ್ಧಕ್ಕೆ ಪ್ರಚೋದನೆ ನೀಡುವಂತಹ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಲೇ ಇವೆ. ಇದಷ್ಟೇ ಅಲ್ಲ, ಈ ಸಂಘರ್ಷಮಯ ವಾತಾವರಣ ಉಂಟಾಗಲು ಪಾಕಿಸ್ತಾನದ ಅಪ್ರಚೋದಿತ ಕಿತಾಪತಿಯೂ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಲೇ ಬಂದಿದೆ. ಈ ಯುದ್ಧದ ವಾತಾವರಣ ಉಂಟಾಗಲು ಪಾಕಿಸ್ತಾನ ಎಷ್ಟು ಕಾರಣವೋ ಅಷ್ಟೇ ನಮ್ಮ ದೇಶದ ಕೋಮುವಾದಿ ಶಕ್ತಿಗಳೂ ಕಾರಣವಾಗಿವೆ. ಸ್ವಯಂ ಆಡಳಿತಕ್ಕಾಗಿ ಕಾಶ್ಮೀರಿ ಜನತೆ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ಹೋರಾಟದಲ್ಲಿ ಪಾಕಿಸ್ತಾನ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಲೇ ಇದರ ದಿಕ್ಕನ್ನು ತಪ್ಪಿಸುತ್ತಿದೆ.

ಎರಡು ವಾರಗಳ ಹಿಂದೆ ಪಾಕಿಸ್ತಾನದ ಸೈನಿಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿ ಹೋದರು. ಪಾಕಿಸ್ತಾನದ ಈ ಪುಂಡಾಟಿಕೆ ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಅದು ಇಂತಹ ದುಷ್ಕೃತ್ಯವನ್ನು ಎಸಗಿದೆ. ನಂತರ ಪರಿಸ್ಥಿತಿ ತಿಳಿಯಾದ ಉದಾಹರಣೆಗಳಿವೆ. ಆದರೆ, ಈ ಬಾರಿ ಹಾಗಾಗಲಿಲ್ಲ. ಪಾಕ್ ಸೈನಿಕರ ದುಷ್ಕೃತ್ಯದ ಪರಿಣಾಮವಾಗಿ ಭಾರತದ ಸೈನಿಕರ ಸಹನೆಯ ಕಟ್ಟೆ ಒಡೆದಿದೆ. ನಿರಂತರ ಕಿರಿಕಿರಿಯನ್ನು ಸಹಿಸಲು ಆಗದೆ ನಮ್ಮ ಸೈನಿಕರು ಕೂಡಾ ತಿರುಗೇಟು ನೀಡಿದ್ದಾರೆ. ಈ ಮುಂಚೆ ಭಾರತ ನಡೆಸಿದ ಸರ್ಜಿಕಲ್ ದಾಳಿ ಹಾಗೂ ಪಾಕ್ ಬಂಕರ್‌ಗಳ ಮೇಲೆ ನಡೆಸಿದ ದಾಳಿ ಇವೆಲ್ಲವುಗಳಿಂದ ಪರಿಸ್ಥಿತಿ ಹದಗೆಡುತ್ತಲೇ ಬಂದಿದೆ. ಭಾರತ ಮತ್ತು ಪಾಕಿಸ್ತಾನದ ಜನಸಾಮಾನ್ಯರಿಗೆ ಯುದ್ಧ ಬೇಕಾಗಿಲ್ಲ. ಎರಡೂ ದೇಶಗಳ ಜನತೆ ಶಾಂತಿ ಮತ್ತು ಸೌಹಾರ್ದದಿಂದ ಇರಲು ಬಯಸುತ್ತಾರೆ.

ಆದರೆ, ಉಭಯ ದೇಶಗಳ ಆಳುವ ವರ್ಗಗಳಿಗೆ ಯುದ್ಧ ಬೇಕಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮೋದಿ ಸರಕಾರ ವಿಫಲವಾದಂತೆ ಪಾಕಿಸ್ತಾನದ ನವಾಝ್ ಶರೀಫ್ ಸರಕಾರ ಕೂಡಾ ವಿಫಲವಾಗಿದೆ. ಕಾರ್ಪೊರೇಟ್ ಬಂಡವಾಳಶಾಹಿಯ ಹಿತವನ್ನು ರಕ್ಷಿಸುವ ಉದ್ದೇಶ ಹೊಂದಿರುವ ಉಭಯ ದೇಶಗಳ ಸರಕಾರಗಳು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಾಗೂ ಜನರ ಗಮನವನ್ನು ಬೇರೆಡೆ ಸೆಳೆಯಲು ಯುದ್ಧೋನ್ಮಾದದ ವಾತಾವರಣವನ್ನು ನಿರ್ಮಾಣ ಮಾಡುತ್ತಿವೆ. ಒಂದೆಡೆ ಕಾಶ್ಮೀರದಲ್ಲಿ ಪಾಕಿಸ್ತಾನ ಅಪ್ರಚೋದಿತ ಹಿಂಸೆಗೆ ಕಾರಣವಾಗುತ್ತಿದೆ. ಇನ್ನೊಂದೆಡೆ ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆಗಳು ಭಯೋತ್ಪಾದಕತೆಯ ದಮನದ ಹೆಸರಿನಲ್ಲಿ ಅಮಾಯಕ ಕಾಶ್ಮೀರಿಗಳ ಮನೆಗೆ ನುಗ್ಗಿ ಮಹಿಳೆಯರನ್ನು,ಮಕ್ಕಳು ಎನ್ನದೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಲೇ ಬಂದಿವೆ.

ಮಹಿಳೆಯರ ಮೇಲೆ ಭದ್ರತಾ ಪಡೆಯ ಯೋಧರಿಂದ ಅತ್ಯಾಚಾರ ನಡೆಸಿದ ಘಟನೆಗಳು ವರದಿಯಾಗಿವೆ. ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ಯಾವುದೇ ಅತಿರೇಕವನ್ನು ಕ್ಷಮಿಸುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ದೇಶದ ಅಧಿಕಾರ ಸೂತ್ರ ಹಿಡಿದಿರುವವರು ಕೊಂಚ ವಿವೇಚನೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಪಾಕಿಸ್ತಾನ ನಡೆಸುವ ಪ್ರಚೋದನಾಕಾರಿ ಚಟುವಟಿಕೆಗಳಿಗೆ ಪ್ರತಿಯಾಗಿ ಅಮಾಯಕ ಕಾಶ್ಮೀರಿಗಳ ಮೇಲೆ ಅಮಾನವೀಯ ದೌರ್ಜನ್ಯ ಎಸಗುವುದು ಸರಿಯಲ್ಲ. ಕಾಶ್ಮೀರಿಗಳು ತಮ್ಮ ಮಕ್ಕಳು ಮತ್ತು ಮಹಿಳೆಯರನ್ನು ಸುರಕ್ಷಿತ ತಾಣಗಳಿಗೆ ಕಳುಹಿಸಿ ಬದುಕಲು ಪರದಾಡುತ್ತಿರುವುದು ಶೋಚನೀಯವಾಗಿದೆ. ಪಾಕಿಸ್ತಾನದಂತೆಯೇ ಭಾರತದಲ್ಲೂ ಅಧಿಕಾರಾರೂಢ ಪಕ್ಷದ ಕೆಲ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಯುದ್ಧಕ್ಕೆ ನಿರಂತರ ಕರೆ ಕೊಡುತ್ತಲೇ ಇದ್ದಾರೆ. ಇವರಾಗಲಿ, ಇವರ ಮಕ್ಕಳಾಗಲಿ ಎಂದೂ ಗಡಿಯಲ್ಲಿ ಶತ್ರು ಸೈನಿಕರೊಂದಿಗೆ ಕಾದಾಡುವುದಿಲ್ಲ. ತಮ್ಮ ಮಕ್ಕಳನ್ನು ವಿದೇಶಗಳಿಗೆ ವ್ಯಾಸಂಗಕ್ಕೆ ಇಲ್ಲವೇ ಐಟಿ-ಬಿಟಿ ಕಂಪೆನಿಗಳಿಗೆ ಕೆಲಸಕ್ಕೆ ಕಳುಹಿಸಿ ಬಡವರ, ರೈತರ, ಕಾರ್ಮಿಕರ ಮಕ್ಕಳನ್ನು ನಿರಂತರವಾಗಿ ಹಿಮ ಬೀಳುವ ಗಡಿ ಪ್ರದೇಶಕ್ಕೆ ಕಳುಹಿಸುವಂತೆ ಉಪದೇಶ ನೀಡುವುದು ದೇಶಭಕ್ತಿ ಎನಿಸಿಕೊಳ್ಳುವುದಿಲ್ಲ.

ಹಾಗೆಂದು ದೇಶಕ್ಕಾಗಿ ಹೋರಾಟ ಮಾಡಬಾರದೆಂದಲ್ಲ. ಆದರೆ, ಯುದ್ಧ ಯಾವುದೇ ದೇಶಕ್ಕೆ ಒಳಿತನ್ನುಂಟು ಮಾಡುವುದಿಲ್ಲ. ಯುದ್ಧ ಎಂಬುದು ಅನೇಕರ ಸಾವು ನೋವುಗಳಿಗೆ ಕಾರಣವಾಗುತ್ತದೆ. ಯುದ್ಧದಲ್ಲಿ ಅಮಾಯಕ ಜನ ಸಾಯುತ್ತಾರೆ. ದೇಶದ ಆರ್ಥಿಕ ಮುನ್ನಡೆಗೆ ಕೂಡಾ ಯುದ್ಧ ಅಡ್ಡಿಯುಂಟುಮಾಡುತ್ತದೆ. ಯುದ್ಧ ಎಂಬುದು ಯಾರಿಗಾದರೂ ಬೇಕಾಗಿದ್ದರೆ ಅದು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿಗಳಿಗೆ ಮಾತ್ರ. ತಮ್ಮ ಆಯುಧಗಳ ಮಾರಾಟಕ್ಕಾಗಿ ಜಗತ್ತಿನ ಎಲ್ಲ ದೇಶಗಳು ಯುದ್ಧದಲ್ಲಿ ತೊಡಗಬೇಕೆಂದು ಅವರು ಮಾತ್ರ ಬಯಸುತ್ತಾರೆ. ಜಗತ್ತಿನಲ್ಲಿ ಈವರೆಗೆ ನಡೆದ ಹಲವಾರು ಯುದ್ಧಗಳಲ್ಲಿ ಕೋಟ್ಯಂತರ ಜನ ಸಾವಿಗೀಡಾಗಿದ್ದಾರೆ. ಭಾರತ ಮತ್ತು ಪಾಕ್ ನಡುವೆ, ಭಾರತ ಮತ್ತು ಚೀನಾ ನಡುವೆ ನಡೆದ ಯುದ್ಧಗಳಲ್ಲಿ ಕೂಡಾ ಅನೇಕ ಸಾವುನೋವುಗಳಾಗಿವೆ.

ಆದ್ದರಿಂದಲೇ ನಮ್ಮ ದೇಶದ ವಿದೇಶಾಂಗ ನೀತಿ ನೆಹರೂ ಕಾಲದಿಂದ ನೆರೆಹೊರೆ ದೇಶಗಳೊಂದಿಗೆ ಶಾಂತಿ ಮತ್ತು ಸೌಹಾರ್ದವನ್ನು ಬಯಸುತ್ತಾ ಬಂದಿದೆ. ಆದರೆ ಚೀನಾ ಮತ್ತು ಪಾಕಿಸ್ತಾನ ಅನೇಕ ಬಾರಿ ಕಾಲುಕೆರೆದು ನಮ್ಮಾಂದಿಗೆ ಜಗಳಕ್ಕೆ ಬಂದಿವೆ. ಭಾರತೀಯ ಸೇನಾಪಡೆಗಳು ಕೂಡಾ ಯುದ್ಧದ ಹೆಸರಿನಲ್ಲಿ ಕಾಶ್ಮೀರದಂತಹ ಪ್ರದೇಶದಲ್ಲಿ ಅತಿ ರೇಕಗಳನ್ನು ನಡೆಸುತ್ತಾ ಬಂದಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಭಾರತ ಮತ್ತು ಪಾಕಿಸ್ತಾನ ಸಂಬಂಧಗಳ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ನಿಜ. ಇದಕ್ಕಾಗಿ ಲಾಹೋರ್ ಬಸ್ ಸಂಚಾರವನ್ನೂ ಅವರು ಆರಂಭಿಸಿದ್ದರು. ಆದರೆ, ಸಂಘಪರಿವಾರದಲ್ಲಿರುವ ಕೆಲ ಶಕ್ತಿಗಳಿಗೆ ಪಾಕಿಸ್ತಾನದೊಂದಿಗೆ ಭಾರತ ಸೌಹಾರ್ದದಿಂದ ಇರುವುದು ಬೇಕಾಗಿಲ್ಲ. ಅವರಲ್ಲಿ ಅನೇಕರು ಇನ್ನೂ ಅಖಂಡ ಭಾರತದ ಕನಸು ಕಾಣುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಆರಂಭದಲ್ಲಿ ತಮ್ಮ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿಗಳನ್ನು ಆಹ್ವಾನಿಸಿ ಉಭಯ ದೇಶಗಳ ಸಂಬಂಧ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದರು. ಆನಂತರ ದಿಢೀರನೆ ಕರಾಚಿಗೆ ಹೋಗಿ ನವಾಝ್ ಶರೀಫ್‌ರನ್ನು ಭೇಟಿಯಾಗಿ ಬಂದರು. ಇನ್ನೇನು ಎಲ್ಲ ಸರಿಯಾಯಿತು ಎನ್ನುವಾಗ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಯುದ್ಧದಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಈಗಲೂ ಕಾಲ ಮಿಂಚಿಲ್ಲ. ರಾಜತಾಂತ್ರಿಕ ಮಾರ್ಗದ ಮೂಲಕ ಉಭಯ ದೇಶಗಳ ನಡುವೆ ಸಂಬಂಧ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.

ಕೇವಲ ಒಂದೇ ದೇಶ ಸ್ನೇಹಹಸ್ತ ಚಾಚಿದರೆ ಸಾಲದು. ಭಾರತ ಮತ್ತು ಪಾಕಿಸ್ತಾನ ಸಂಬಂಧ ಸುಧಾರಣೆಗೆ ಪರಸ್ಪರ ಸ್ಪಂದಿಸಬೇಕು. ಉಭಯ ದೇಶಗಳ ನಡುವೆ ಸಾಂಸ್ಕೃತಿಕವಾಗಿ ಅನೇಕ ಸಾಮ್ಯತೆಗಳಿವೆ. ಎರಡೂ ದೇಶಗಳ ಜನತೆ ಒಡಹುಟ್ಟಿದ ಅಣ್ಣತಮ್ಮಂದಿರಂತಿದ್ದಾರೆ. ಅವರು ಶಾಂತಿಯನ್ನು ಬಯಸುತ್ತಾರೆ. ಸರಕಾರಗಳು ಜನರ ಭಾವನೆಗೆ ಸ್ಪಂದಿಸಬೇಕಾಗಿದೆ. ಕಾಶ್ಮೀರದ ಸಮಸ್ಯೆಗಳ ಬಗ್ಗೆ ಭಾರತ ಸಹಾನೂಭೂತಿಯಿಂದ ನಡೆದುಕೊಳ್ಳಬೇಕಾಗಿದೆ. ಅಲ್ಲಿಯ ಜನತೆಯ ಭಾವನೆಯನ್ನು ಗೌರವಿಸಿ ಸಂಧಾನ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಪಾಕಿಸ್ತಾನ ಯಾವುದೇ ಕಾರಣಕ್ಕೂ ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು. ಕಾಶ್ಮೀರಿಗಳನ್ನು ಅವರ ಪಾಡಿಗೆ ಬಿಡಬೇಕು. ಈ ವಾಸ್ತವವನ್ನು ಅರಿತರೆ ಸಮಸ್ಯೆ ಇತ್ಯರ್ಥವಾಗುತ್ತದೆ. ಯುದ್ಧದ ವಾತಾವರಣವನ್ನು ತಿಳಿಗೊಳಿಸಿ ರಾಜತಾಂತ್ರಿಕ ಪರಿಹಾರಕ್ಕೆ ಉಭಯ ದೇಶಗಳು ಮುಂದಾಗುವುದು ತುರ್ತು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News