×
Ad

ಸಾತ್ವಿಕ ಬದ್ಧತೆ ನವೀಕರಿಸುವ ರಮದಾನ್

Update: 2017-05-27 10:38 IST

ಈ ಮಾಸದಲ್ಲಿ ಸಾಮೂಹಿಕವಾಗಿಯೂ ವೈಯಕ್ತಿಕವಾಗಿಯೂ ಜನರು ದೇವರ ಮುಂದೆ ಪಶ್ಚಾತ್ತಾಪ ಪಟ್ಟು ಕ್ಷಮೆ ಯಾಚಿಸುತ್ತಾರೆ ಮತ್ತು ಸಕಲ ಪಾಪಕೃತ್ಯಗಳಿಂದ ದೂರ ಉಳಿದು ದೇವಾದೇಶಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆ ತೊಡುತ್ತಾರೆ. ಮಸೀದಿಯಲ್ಲೂ ಮನೆಯಲ್ಲೂ ಏಕಾಂತದಲ್ಲಿ ಕುಳಿತು ಆತ್ಮ ವಿಮರ್ಶೆ ನಡೆಸುತ್ತಾರೆ. ತಾವು ಚಿತ್ತದ ಗುಲಾಮರಾಗುವ ಬದಲು, ಚಿತ್ತವನ್ನು ಪಳಗಿಸಿ ಅದನ್ನು ದೇವಾದೇಶಗಳಿಗೆ ಅಧೀನಗೊಳಿಸುತ್ತೇವೆಂದು ಪಣ ತೊಡುತ್ತಾರೆ.

ರಮದಾನ್ (ಅರಬೇತರ ಭಾಷಿಗರ ನಡುವೆ ಜನಪ್ರಿಯ ಬಳಕೆಯಲ್ಲಿ ರಮ್ಜಾನ್) ಪದದ ಅರ್ಥ ಹಾಗೂ ಹಿನ್ನೆಲೆಯ ಕುರಿತು ವಿದ್ವಾಂಸರು ಬಹಳಷ್ಟು ಚರ್ಚಿಸಿದ್ದಾರೆ. ಪ್ರಖ್ಯಾತ ಅರಬಿ ಭಾಷಾ ತಜ್ಞ ಇಮಾಮ್ ರಾಘಿಬ್ ಅಲ್ ಅಸ್‌ಫಹಾನಿ ಅವರ ಪ್ರಕಾರ ‘ರಮದಾನ್’ ಎಂಬ ಅರಬಿ ಪದವು ರಮದ್ ಅಥವಾ ರಮದಾ ಎಂಬ ಮೂಲ ಪದಗಳಿಂದ ಹೊಮ್ಮಿದ್ದು, ಅವು ಭಾರೀ ತೀವ್ರವಾದ ಬಿಸಿಲಿನ ಧಗೆಯಿಂದ ಸುಟ್ಟು ಹೋದ ವಸ್ತುವನ್ನು ಸೂಚಿಸುತ್ತವೆ. ರಮದಾನ್ ತಿಂಗಳು ಪಾಪಗಳನ್ನು ಸುಟ್ಟು ಹಾಕುವ ತಿಂಗಳೆಂಬ ಕಾರಣಕ್ಕಾಗಿ ಅದಕ್ಕೆ ಆ ಹೆಸರು ಬಂದಿದೆ.

ಇಮಾನ್ ಝಮಖ್ಶರಿ ಅವರ ಪ್ರಕಾರ ಅರಬಿ ಭಾಷೆಯ ಪ್ರಾಚೀನ ಇತಿಹಾಸದ ಒಂದು ಹಂತದಲ್ಲಿ ವರ್ಷದ ಹನ್ನೆರಡು ತಿಂಗಳುಗಳಿಗೆ ಇದ್ದ ಸಾಂಪ್ರದಾಯಿಕ ಹೆಸರುಗಳನ್ನು ಬದಲಿಸಿ ಹೊಸ ಹೆಸರುಗಳನ್ನು ನಿರ್ಧರಿಸಲಾಯಿತು. ಒಂಬತ್ತನೇ ತಿಂಗಳು ಬೇಸಿಗೆಯ ಉತ್ತುಂಗದ ವೇಳೆ ಬರುವುದರಿಂದ ಅದನ್ನು ‘ರಮದಾನ್’ ಅಥವಾ ಸುಡುವ ತಿಂಗಳು ಎಂದು ಹೆಸರಿಸಲಾಯಿತು. ಇಮಾಮ್ ಖುರ್ತುಬಿ ಅವರ ಪ್ರಕಾರ, ಇದು ಸತ್ಕರ್ಮಿಗಳ ಗತ ಪಾಪಗಳನ್ನು ಸುಡುವ ತಿಂಗಳಾದ್ದರಿಂದ ಇದನ್ನು ರಮದಾನ್ ಅಥವಾ ಸುಡುವ ತಿಂಗಳು ಎಂದು ಹೆಸರಿಸಲಾಗಿದೆ. ಇಲ್ಲಿ ಇಮಾಮ್ ಝಮಖ್ಷರಿ ಅವರ ತರ್ಕ ಪ್ರಶ್ನಾರ್ಹವಾಗಿದೆ.

ಸೌರಮಾನ ಕ್ಯಾಲೆಂಡರನ್ನು ಬಳಸುವವರ ಪಾಲಿಗೆ ಮಾತ್ರ ವರ್ಷದ ಬಹುತೇಕ ಎಲ್ಲಾ ಮಾಸಗಳು ಪ್ರತಿವರ್ಷ ನಿರ್ದಿಷ್ಟ ಋತುವಿನಲ್ಲೇ ಬರುತ್ತವೆ. ಅಂದರೆ ಜನವರಿ ಯಾವಾಗಲೂ ಚಳಿಗಾಲದಲ್ಲೇ ಬರುತ್ತದೆ ಮತ್ತು ಮೇ ತಿಂಗಳು ಸೆಖೆಗಾಲದಲ್ಲೇ ಬರುತ್ತದೆ. ಆದರೆ ಈ ನಿಯಮವು ಚಂದ್ರಮಾನ ಕ್ಯಾಲೆಂಡರಿಗೆ ಅನ್ವಯಿಸುವುದಿಲ್ಲ. ಸೌರಮಾನ ಹಾಗೂ ಚಂದ್ರಮಾನ ಕ್ಯಾಲೆಂಡರ್‌ಗಳನ್ನು ಹೋಲಿಸಿದರೆ ಅವುಗಳ ನಡುವೆ ಹಲವು ಪ್ರಮುಖ ವ್ಯತ್ಯಾಸಗಳಿವೆ. ಸೌರಮಾನ ಪ್ರಕಾರ ವರ್ಷದಲ್ಲಿ 365 ದಿನಗಳಿದ್ದರೆ ಚಂದ್ರಮಾನ ಪ್ರಕಾರ ವರ್ಷದಲ್ಲಿರುವುದು 354 ದಿನಗಳು ಮಾತ್ರ. ಅಂದರೆ ಒಂದೇ ವರ್ಷದಲ್ಲಿ 11 ದಿನಗಳ ವ್ಯತ್ಯಾಸ. ಹತ್ತು ವರ್ಷಗಳಲ್ಲಿ 110 ದಿನಗಳ ಮತ್ತು 30 ವರ್ಷಗಳಲ್ಲಿ 330 ದಿನಗಳ ವ್ಯತ್ಯಾಸ.

ಇದರಿಂದಾಗಿ ಚಂದ್ರಮಾನ ಕ್ಯಾಲೆಂಡರ್‌ನ ಒಂದು ನಿರ್ದಿಷ್ಟ ಮಾಸವು ಈ ವರ್ಷ ಚಳಿಗಾಲದಲ್ಲಿ ಬಂದರೆ ಹತ್ತು ವರ್ಷಗಳ ಬಳಿಕ ಅದೇ ಮಾಸವು ಸೆಖೆಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಬರಬಹುದು. ಮುಸ್ಲಿಮರು ಧಾರ್ಮಿಕ ವಿಷಯಗಳಲ್ಲಿ ಚಂದ್ರಮಾನ ಕ್ಯಾಲೆಂಡರ್ ಅನ್ನು ಬಳಸುವುದರಿಂದ ಅವರು ಉಪವಾಸ ಆಚರಿಸುವ ರಮದಾನ್ ತಿಂಗಳು ನಿರ್ದಿಷ್ಟವಾಗಿ ಇಂತಹದೇ ಋತುವಿನಲ್ಲಿ ಬರುತ್ತದೆ ಎನ್ನಲಿಕ್ಕಾಗುವುದಿಲ್ಲ. ಹೆಚ್ಚೆಂದರೆ 10 ವರ್ಷಗಳಲ್ಲಿ ರಮದಾನ್ ಬರುವ ಋತು ಸಂಪೂರ್ಣ ಬದಲಾಗಿರುತ್ತದೆ. ಪಾಪ, ಪುಣ್ಯ, ಪಾಪ ವಿಮೋಚನೆ, ಪ್ರಾಯಶ್ಚಿತ್ತ ಇವೆಲ್ಲಾ ಜಗತ್ತಿನ ಎಲ್ಲೆಡೆಯ ಹೆಚ್ಚಿನ ಆಸ್ತಿಕರು ಹಾಗೂ ಧರ್ಮ ವಿಶ್ವಾಸಿಗಳ ನಡುವೆ ಜನಪ್ರಿಯ ಪದಗಳು. ಕೆಲವರು ಪಾಪ ವಿಮೋಚನೆಗಾಗಿ ಕೆಲವು ನಿರ್ದಿಷ್ಟ ಪ್ರದೇಶ ಅಥವಾ ಕ್ಷೇತ್ರಗಳನ್ನು ಅವಲಂಬಿಸಿರುತ್ತಾರೆ. ಮತ್ತೆ ಕೆಲವರು ನಿರ್ದಿಷ್ಟ ಘಳಿಗೆ, ದಿವಸ ಅಥವಾ ಮಾಸವನ್ನು ಅವಲಂಬಿಸಿರುತ್ತಾರೆ. ಮೇಲೆ ಪ್ರಸ್ತಾಪಿಸಲಾದ ರಮದಾನ್ ತಿಂಗಳು ಪಾಪಗಳನ್ನು ಸುಟ್ಟು ಹಾಕುವ ತಿಂಗಳು ಎಂಬ ಮಾತು, ಇಸ್ಲಾಮ್ ಧರ್ಮದಲ್ಲೂ ಪಾಪ ಮುಕ್ತಿಗೆ ನಿರ್ದಿಷ್ಟ ಕಾಲವನ್ನು ಸೂಚಿಸುವ ಪದ್ಧತಿ ಇದೆಯೇ? ಎಂಬ ಸಂಶಯಕ್ಕೆ ಎಡೆ ಕೊಡುತ್ತದೆ.

  ನಿಜವಾಗಿ ಇಸ್ಲಾಮ್ ಧರ್ಮದ ಪ್ರಕಾರ ಪಾಪ ವಿಮುಕ್ತಿಗೆ ಕಾಲ ಮತ್ತು ಪ್ರದೇಶದ ನಿರ್ಬಂಧವೇನೂ ಇಲ್ಲ. ಅಲ್ಲಾಹನ ಕ್ಷಮೆಯು ರಮದಾನ್ ತಿಂಗಳಿಗೆ ಮಾತ್ರ ಮೀಸಲಾಗಿರುವುದಿಲ್ಲ. ಅವನ ಕ್ಷಮೆಗೆ ಪಾತ್ರರಾಗಲು ಜನರು ಮಕ್ಕಾ ಅಥವಾ ಮದೀನಾ ಅಥವಾ ಅಂತಹ ಬೇರಾವುದಾದರೂ ಸ್ಥಳವನ್ನು ಸೇರಬೇಕೆಂಬ ಶರತ್ತು ಇಲ್ಲ. ದೇವರು ಸದಾ ಜನರನ್ನು ಶಿಕ್ಷಿಸುವುದಕ್ಕಾಗಿ ಕಾದು ಕುಳಿತಿರುವುದಿಲ್ಲ.

ಅವನು ಕ್ಷಮಿಸುವ ಅವಕಾಶಕ್ಕಾಗಿ ಸದಾ ಕಾಯುತ್ತಿರುವವನು. ಅವನ ಕ್ಷಮೆಗೆ ಅಸಾಮಾನ್ಯ ಶರತ್ತುಗಳೇನಿಲ್ಲ. ಅವನ ವಿಶೇಷತೆ ಏನೆಂದರೆ ಯಾರಾದರೂ ಅಜ್ಞಾನದ ಅಥವಾ ಮುಗ್ಧತೆಯ ಸ್ಥಿತಿಯಲ್ಲಿ ಉದ್ದೇಶಪೂರ್ವಕವಲ್ಲದೆ ಮಾಡುವ ಪ್ರಮಾದಗಳನ್ನು ಅವನು ಪಾಪಗಳ ಸಾಲಲ್ಲಿ ಗಣಿಸುವುದೇ ಇಲ್ಲ. ಒಂದು ವೇಳೆ ಯಾರಾದರೂ ತಿಳುವಳಿಕೆಯ ಸ್ಥಿತಿಯಲ್ಲಿ ಉದ್ದೇಶಪೂರ್ವಕ ದೇವಾದೇಶವನ್ನು ಉಲ್ಲಂಘಿಸಿ ಪಾಪ ಕೃತ್ಯವನ್ನು ಎಸಗಿದ್ದರೆ ಅಂಥವರ ಪಾಲಿಗೂ ಕ್ಷಮೆಯ ಬಾಗಿಲು ಸದಾ ತೆರೆದಿರುತ್ತದೆ. ಅವರು ತಮ್ಮ ತಪ್ಪಿನ ಕುರಿತು ಮನಸಾರೆ ಪಶ್ಚಾತ್ತಾಪ ಪಟ್ಟು ದೇವರ ಬಳಿ ಕ್ಷಮೆ ಬೇಡಿದರೆ ಸಾಕು, ಅವನು ಕ್ಷಮಿಸಿ ಬಿಡುತ್ತಾನೆ. ದೇವರು ಶಿಕ್ಷೆಯ ಕಡೆಗೆ ಯಾರನ್ನೂ ಕರೆಯುವುದಿಲ್ಲ. ಅವನು ಎಲ್ಲರನ್ನೂ ಕರೆಯುವುದು ತನ್ನ ಕ್ಷಮೆ ಹಾಗೂ ಔದಾರ್ಯದ ಕಡೆಗೆ ಮಾತ್ರ.

ಈ ಕುರಿತು ಕುರ್‌ಆನ್‌ನಲ್ಲಿರುವ ಕೆಲವು ಸೂಚನೆಗಳನ್ನು ಗಮನಿಸಿ:

‘‘ನೀವು ನಿಮ್ಮಾಡೆಯನ ಕ್ಷಮೆಯೆಡೆಗೆ ಹಾಗೂ ಭೂಮ್ಯಾಕಾಶಗಳಷ್ಟು ವ್ಯಾಪಕವಾಗಿರುವ ಅವನ ಸ್ವರ್ಗದೆಡೆಗೆ ಧಾವಿಸಿರಿ. .... ’’ (3: 133)

‘‘ಅಲ್ಲಾಹನು ನಿಮ್ಮೆಡೆಗೆ ಒಲಿಯ ಬಯಸುತ್ತಾನೆ.....’’ (4: 27)

‘‘ನೀವು ಕೃತಜ್ಞರಾದರೆ ಹಾಗೂ ವಿಶ್ವಾಸಿಗಳಾದರೆ ನಿಮ್ಮನ್ನು ಶಿಕ್ಷಿಸಿ ಅಲ್ಲಾಹನಿಗೆ ಏನಾಗಬೇಕಾಗಿದೆ?.....’’ (4: 147)

‘‘ಹೇಳಿರಿ: ಸ್ವತಃ ತಮ್ಮ ಮೇಲೆ ಅಕ್ರಮವೆಸಗಿ ಕೊಂಡಿರುವ ನನ್ನ (ಅಲ್ಲಾಹನ ) ದಾಸರೇ , ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲ ಪಾಪಗಳನ್ನು ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.’’ (39: 53)

‘‘ಧಾವಿಸಿರಿ, ನಿಮ್ಮ ಒಡೆಯನ ಕ್ಷಮೆಯೆಡೆಗೆ......’’ (57: 21)

    ಕುರ್‌ಆನ್‌ನಲ್ಲಿ ಮತ್ತು ಪ್ರವಾದಿವರ್ಯರ ಉಪದೇಶಗಳಲ್ಲಿ ಪರಿಚಯಿಸಲಾಗಿರುವ ದೇವರ ಸ್ವಭಾವ ಹೇಗೆಂದರೆ ಅವನು ತನ್ನ ದಾಸರನ್ನು ಕ್ಷಮಿಸುವುದಕ್ಕೆ ನೆಪ ಹುಡುಕುತ್ತಿರುತ್ತಾನೆ. ದಾಸರು ತನ್ನೆಡೆಗೆ ಒಂದು ಹೆಜ್ಜೆ ಮುಂದಿಟ್ಟರೆ ಅವನು ನೂರು ಹೆಜ್ಜೆಯಷ್ಟು ಅವರಿಗೆ ನಿಕಟನಾಗುತ್ತಾನೆ. ತನ್ನಕಡೆಗೆ ನಡೆದು ಬರುವವರ ಬಳಿಗೆ ಅವನು ಓಡೋಡಿ ಬರುತ್ತಾನೆ. ಆದರೆ ದಾಸರು ಹಲವೊಮ್ಮೆ ತಮ್ಮ ತಪ್ಪುಗಳ ಕಡೆಗೆ ಕುರುಡಾಗಿರುತ್ತಾರೆ. ಅವರಿಗೆ ತಮ್ಮ ಪಾಪಗಳ ಅರಿವಿರುವುದಿಲ್ಲ, ಅವರು ಆತ್ಮಾವಲೋಕನ ನಡೆಸುವುದಿಲ್ಲ. ಅಂಥವರು ದೇವರೆಡೆಗೆ ಒಂದು ಹೆಜ್ಜೆ ಮುನ್ನಡೆಯುವುದಕ್ಕೂ ಮನಸ್ಸು ಮಾಡುವುದಿಲ್ಲ.

ತಪ್ಪುಗಳು ಎಲ್ಲ ಮಾನವರಿಂದ ಸಂಭವಿಸುತ್ತವೆ. ಆದರೆ ದೇವರ ಬಗ್ಗೆ ಪ್ರಜ್ಞೆ ಉಳ್ಳವರು, ಮನಸ್ಸಿನಲ್ಲಿ ಅವನ ಭಯ ಭಕ್ತಿ ಇರುವವರು ಮತ್ತು ನಾಳೆ ತಾನು ದೇವರ ಮುಂದೆ ಹಾಜರಾಗಲಿಕ್ಕಿದೆ, ಹಾಗೂ ತನ್ನ ಕರ್ಮಗಳ ಕುರಿತು ವಿಚಾರಣೆಯನ್ನು ಎದುರಿಸಲಿಕ್ಕಿದೆ ಎಂಬ ಅರಿವುಳ್ಳವರು ಪದೇ ಪದೇ ಆತ್ಮಾವಲೋಕನ ನಡೆಸುತ್ತಲಿರುತ್ತಾರೆ. ತಾವು ಮಾಡಿರುವ ತಪ್ಪುಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಆ ಕುರಿತು ಪಾಪ ಪ್ರಜ್ಞೆ ಇರುತ್ತದೆ. ಅವರು ವಿನಯ ಶೀಲರಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಡುತ್ತಾರೆ ಮತ್ತು ದೇವರ ಬಳಿ ಪದೇ ಪದೇ ಕ್ಷಮೆ ಯಾಚಿಸುತ್ತಾರೆ.

ಇಸ್ಲಾಮ್ ಧರ್ಮದಲ್ಲಿ ರಮದಾನ್ ತಿಂಗಳನ್ನು ಪರಿಚಯಿಸಿರುವುದು ಕೇವಲ ಪಾಪ ಮುಕ್ತಿಯ ತಿಂಗಳೆಂದಲ್ಲ ಇದನ್ನು ಕುರ್‌ಆನ್‌ನ ತಿಂಗಳು, ಉಪವಾಸದ ತಿಂಗಳು, ಸಹನೆಯ ತಿಂಗಳು, ಆತ್ಮಾವಲೋಕನದ ತಿಂಗಳು, ಕ್ಷಮೆಯ ತಿಂಗಳು, ಪಶ್ಚಾತ್ತಾಪದ ತಿಂಗಳು, ಸಹತಾಪದ ತಿಂಗಳು, ಔದಾರ್ಯದ ತಿಂಗಳು, ದಾನ ಧರ್ಮದ ತಿಂಗಳು ಎಂದಿತ್ಯಾದಿಯಾಗಿಯೂ ಪರಿಚಯಿಸಲಾಗಿದೆ. ಪಾಪ ವಿಮುಕ್ತಿ ಎನ್ನುವುದು ರಮದಾನ್ ಜೊತೆ ತಾನಾಗಿ ಬಂದು ಬಿಡುವುದಿಲ್ಲ. ನಿಜವಾಗಿ ರಮದಾನ್ ಎಂಬ ತಿಂಗಳು, ಪ್ರವಾದಿ ಮುಹಮ್ಮದ್(ಸ) ರ ಆಗಮನಕ್ಕೆ ಮುನ್ನ ಹಾಗೂ ಕುರ್ ಆನ್‌ನ ಅನಾವರಣಕ್ಕೆ ಮುನ್ನವೂ ಅರಬ್ ಜನರಿಗೆ ಪರಿಚಿತವಾಗಿತ್ತು.

ಆದರೆ ಅದಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಹಾಗೂ ಮಾನ್ಯತೆ ದಕ್ಕಿದ್ದು, ಅದು ಪವಿತ್ರ ಕುರ್‌ಆನ್‌ನ ರೂಪದಲ್ಲಿ ಮಾನವ ಕುಲಕ್ಕೆ ವಿಶ್ವದೊಡೆಯನ ಸಂದೇಶ ಹಾಗೂ ಮಾರ್ಗ ದರ್ಶನ ಪ್ರಾಪ್ತವಾದ ಮಾಸ ಎಂಬ ಕಾರಣಕ್ಕಾಗಿ. ದೇವರು, ದೇವ ದೂತರು ಮತ್ತು ದೇವಗ್ರಂಥ ಇವುಗಳನ್ನೆಲ್ಲಾ ನಂಬುವವರ ಪಾಲಿಗೆ ಈ ತಿಂಗಳಲ್ಲಿ ಉಪವಾಸಾಚರಣೆ ಕಡ್ಡಾಯವಾಗಿದೆ. ದೇವಾರಾಧನೆ, ದೇವಸ್ಮರಣೆ, ಸಹನೆ, ಸಹತಾಪ, ಆತ್ಮಾವಲೋಕನ, ಚಿತ್ತದ ಶುಚೀಕರಣ, ಚಿತ್ತ ನಿಯಂತ್ರಣದ ತರಬೇತಿ, ತಪ್ಪೊಪ್ಪಿಗೆ, ಪಶ್ಚಾತ್ತಾಪ, ಕ್ಷಮಾಯಾಚನೆ ಇವೆಲ್ಲಾ ರಮದಾನ್ ತಿಂಗಳ ಅವಿಭಾಜ್ಯ ಅಂಗಗಳಾಗಿವೆ. ಪಾಪ ವಿಮುಕ್ತಿ ಎಂಬುದು ಈ ಎಲ್ಲ ಚಟುವಟಿಕೆಗಳ ಸಂಯುಕ್ತ ಫಲಿತಾಂಶವಾಗಿರುತ್ತದೆ.

ರಮದಾನ್ ತಿಂಗಳ ವಿಶೇಷತೆ ಏನೆಂದರೆ ಈ ಮಾಸದಲ್ಲಿ ಸಂಪೂರ್ಣ ಮುಸ್ಲಿಂ ಸಮಾಜವು ತುಂಬಾ ಸಕ್ರಿಯವಾಗಿ ಬಿಡುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆಗಳು ಉತ್ತುಂಗದಲ್ಲಿರುತ್ತವೆ. ಮಸೀದಿಗಳು ತುಂಬಿ ತುಳುಕುತ್ತಿರುತ್ತವೆ. ಖಾಸಗಿಯಾಗಿಯೂ ಸಾಮೂಹಿಕವಾಗಿಯೂ ಜನರು ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಜನರೆಲ್ಲಾ ಪ್ರತಿದಿನ ಏಕ ಕಾಲದಲ್ಲಿ ಉಪವಾಸ ಆರಂಭಿಸಿ ಏಕ ಕಾಲದಲ್ಲಿ ಉಪವಾಸ ಮುಗಿಸುತ್ತಾರೆ. ಐದು ಹೊತ್ತಿನ ಕಡ್ಡಾಯ ನಮಾಝನ್ನು ಹಾಗೂ ರಾತ್ರಿಯ ದೀರ್ಘ ‘ತರಾವೀಹ್’ ನಮಾಝನ್ನು ಸಾಮೂಹಿಕವಾಗಿ ಮಸೀದಿಯಲ್ಲಿ ಸಲ್ಲಿಸಲಾಗುತ್ತದೆ. ಅದೇ ವೇಳೆ ‘ನಫಿಲ್’ ನಮಾಝ್‌ಗಳನ್ನು ಖಾಸಗಿಯಾಗಿ ಸಲ್ಲಿಸಲಾಗುತ್ತದೆ.

ಒಂದಷ್ಟು ಆರ್ಥಿಕ ಅನುಕೂಲವಿರುವ ಎಲ್ಲರೂ ಆರ್ಥಿಕವಾಗಿ ತಮಗಿಂತ ಕೆಳಸ್ತರದಲ್ಲಿರುವವರಿಗೆ ಗುಟ್ಟಾಗಿ ಝಕಾತ್ (ಕಡ್ಡಾಯ ದಾನ) ಅಥವಾ ’ಸದ್ಖ’ (ಐಚ್ಛಿಕ ದಾನ)ವನ್ನು ತಲುಪಿಸುತ್ತಾರೆ. ತಮ್ಮಿಂದ ಯಾರಿಗಾದರೂ ಅನ್ಯಾಯವಾಗಿದೆ ಅಥವಾ ಮನಸ್ಸಿಗೆ ನೋವಾಗಿದೆ ಎಂಬ ಪ್ರಜ್ಞೆ ಇರುವವರು ಅವರ ಬಳಿಗೇ ಹೋಗಿ ಕ್ಷಮೆ ಕೇಳುತ್ತಾರೆ. ಸಾಲ ಬಾಕಿ ಇರುವವರು ಸಾಲ ಸಂದಾಯ ಮಾಡುತ್ತಾರೆ. ಏಕೆಂದರೆ ಜನರ ಹಕ್ಕನ್ನು ಸ್ವತಃ ಅವರೇ ಕ್ಷಮಿಸುವ ತನಕ ದೇವರು ಕೂಡ ಅದನ್ನು ಕ್ಷಮಿಸುವುದಿಲ್ಲ ಎಂದು ಮಸೀದಿಗಳಲ್ಲಿ ಅವರಿಗೆ ನೆನೆಪಿಸಲಾಗಿರುತ್ತದೆ. ರಮದಾನ್ ತಿಂಗಳಾದ್ಯಂತ ಜನರು ಕುರ್‌ಆನ್ ಗ್ರಂಥದ ಪಠಣ ಹಾಗೂ ಅಧ್ಯಯನ ನಡೆಸುತ್ತಾರೆ.

ಕೆಲವರು ಕೇವಲ ಔಪಚಾರಿಕವಾಗಿ 30 ಕಾಂಡಗಳನ್ನು ಓದಿ ಮುಗಿಸಿದರೆ ಉಳಿದವರು ಕುರ್‌ಆನ್ ಅಧ್ಯಯನ ತರಗತಿಗಳಲ್ಲಿ ಭಾಗವಹಿಸಿ ಅದರ ತಾತ್ಪರ್ಯವನ್ನು ಅರಿತು ಸ್ಫೂರ್ತಿ ಪಡೆಯುತ್ತಾರೆ. ಈ ಮಾಸದಲ್ಲಿ ಸಾಮೂಹಿಕವಾಗಿಯೂ ವೈಯಕ್ತಿಕವಾಗಿಯೂ ಜನರು ದೇವರ ಮುಂದೆ ಪಶ್ಚಾತ್ತಾಪ ಪಟ್ಟು ಕ್ಷಮೆ ಯಾಚಿಸುತ್ತಾರೆ ಮತ್ತು ಸಕಲ ಪಾಪಕೃತ್ಯಗಳಿಂದ ದೂರ ಉಳಿದು ದೇವಾದೇಶಗಳನ್ನು ಪಾಲಿಸುತ್ತೇವೆಂದು ಪ್ರತಿಜ್ಞೆ ತೊಡುತ್ತಾರೆ. ಮಸೀದಿಯಲ್ಲೂ ಮನೆಯಲ್ಲೂ ಏಕಾಂತದಲ್ಲಿ ಕುಳಿತು ಆತ್ಮ ವಿಮರ್ಶೆ ನಡೆಸುತ್ತಾರೆ. ತಾವು ಚಿತ್ತದ ಗುಲಾಮರಾಗುವ ಬದಲು, ಚಿತ್ತವನ್ನು ಪಳಗಿಸಿ ಅದನ್ನು ದೇವಾದೇಶಗಳಿಗೆ ಅಧೀನಗೊಳಿಸುತ್ತೇವೆಂದು ಪಣ ತೊಡುತ್ತಾರೆ. ಇಂತಹವರ ಪಾಲಿಗೆ ರಮದಾನ್ ತಿಂಗಳು ಪಾಪ ವಿಮೋಚನೆಯ ತಿಂಗಳಾಗಿ ಬಿಡುತ್ತದೆ.

Writer - ಡಾ. ಫೌಝಿಯ ಶಹಾದತ್, ಬೋಳಾರ್

contributor

Editor - ಡಾ. ಫೌಝಿಯ ಶಹಾದತ್, ಬೋಳಾರ್

contributor

Similar News

ಜಗದಗಲ

ಜಗ ದಗಲ