×
Ad

ಹೀಗೂ ಉಂಟೆ?: ಉತ್ತರ ಪ್ರದೇಶ ಸಚಿವರ ಭೇಟಿ ವೇಳೆ ಆಸ್ಪತ್ರೆ ಚೆನ್ನಾಗಿ ಕಾಣಲು ರೋಗಿಗಳನ್ನೇ ಹೊರಗಟ್ಟಿದರು!

Update: 2017-05-28 08:51 IST

ಆಗ್ರಾ, ಮೇ 28: ಆಸ್ಪತ್ರೆ ವೀಕ್ಷಣೆಗೆ ಸಚಿವರು ಆಗಮಿಸುತ್ತಾರೆ ಎಂಬ ಸುದ್ದಿ ತಿಳಿದು, ಅವರನ್ನು ಓಲೈಸುವ ಸಲುವಾಗಿ ರಾತ್ರೋರಾತ್ರಿ ರೋಗಿಗಳನ್ನೇ ಆಸ್ಪತ್ರೆಯಿಂದ ಹೊರಗಟ್ಟಿದ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ.

ಘಟನೆ ವಿವರ: ಉತ್ತರ ಪ್ರದೇಶದ ತಾಂತ್ರಿಕ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಅಶುತೋಶ್ ತಂಡನ್, ಎಸ್.ಎನ್.ಮೆಡಿಕಲ್ ಕಾಲೇಜಿಗೆ ಶನಿವಾರ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಇದು ಹಲವು ರೋಗಿಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿತು. ತುರ್ತು ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಹಲವು ಮಂದಿ ರೋಗಿಗಳೂ ಸೇರಿದಂತೆ ಹಲವು ಮಂದಿಯನ್ನು ತರಾತುರಿಯಲ್ಲಿ ಎತ್ತಂಗಡಿ ಮಾಡಲಾಯಿತು. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಮಿತಿಮೀರಿಲ್ಲ ಎಂದು ಸಾಬೀತುಪಡಿಸುವ ಸಲುವಾಗಿ ಈ ವ್ಯವಸ್ಥೆ ಮಾಡಲಾಯಿತು.

ಕೆಲ ರೋಗಿಗಳಂತೂ, ಆಸ್ಪತ್ರೆಯ ಎದುರಿನ ಮೈದಾನದಲ್ಲಿ ಸುಡು ಬಿಸಿಲಿನಲ್ಲೇ ಐವಿ ಫ್ಲೂಯಿಡ್ ಬಾಟಲಿ ಅಥವಾ ಆಮ್ಲಜನಕದ ಸಿಲಿಂಡರ್‌ಗಳೊಂದಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು. ಆಸ್ಪತ್ರೆ ಚೆನ್ನಾಗಿದೆ ಎಂದು ಬಿಂಬಿಸುವ ಸಲುವಾಗಿ ಆಸ್ಪತ್ರೆ ಅಧಿಕಾರಿಗಳು ಬೆಳಿಗ್ಗೆಯಿಂದಲೇ ಟಂಡನ್ ಭೇಟಿಗೆ ಸಿದ್ಧತೆ ಮಾಡತೊಡಗಿದರು. ಸ್ಟ್ರೆಚರ್‌ಗಳನ್ನು ಸ್ವಚ್ಛಗೊಳಿಸಿ, ಹೊಸ ಹೊದಿಕೆಗಳನ್ನು ಹಾಕಲಾಯಿತು. ವೈದ್ಯಕೀಯ ಸಾಧನ ಸಲಕರಣೆಗಳು ಹೊಳೆಯಲಾರಂಭಿಸಿದವು. ತುರ್ತು ನಿಗಾ ಘಟಕದಲ್ಲಿ ರೋಗಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ, ಬೇರೆ ವಾರ್ಡ್‌ಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಎಲ್ಲೂ ಜಾಗ ಸಿಗದ ಕೆಲ ರೋಗಿಗಳು 45 ಡಿಗ್ರಿಯ ಸುಡುಬಿಸಿಲಲ್ಲಿ ಒಣಗಬೇಕಾಯಿತು.

"ಎರಡು ಮೂರು ಗಂಟೆ ಕಾಲ ರೋಗಿಗಳನ್ನು ಹೊರಗೆ ಕಳುಹಿಸಲಾಯಿತು. ಸಚಿವರು ಹೋದ ತಕ್ಷಣ ಪರಿಸ್ಥಿತಿ ಸಹಜ ಸ್ಥಿತಿಗೆ ಬಂತು" ಎಂದು ಆಸ್ಪತ್ರೆಯ ವೈದ್ಯರು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News