ಭಾರತಕ್ಕೂ ಕಾಲಿಟ್ಟಿದೆ ಝೀಕಾ ವೈರಸ್!

Update: 2017-05-28 03:25 GMT

ಹೊಸದಿಲ್ಲಿ, ಮೇ 28: ಸೊಳ್ಳೆಗಳ ಮೂಲಕ ಹರಡುವ ಮಾರಕ ಝೀಕಾ ವೈರಸ್ ಭಾರತದಲ್ಲೂ ಪತ್ತೆಯಾಗಿದ್ದು, ಅಹ್ಮದಾಬಾದ್‌ನಲ್ಲಿ ಗರ್ಭಿಣಿ ಮಹಿಳೆ ಸೇರಿದಂತೆ, ಮೂವರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಗುಜರಾತ್‌ನ ದೊಡ್ಡ ನಗರವಾದ ಅಹ್ಮದಾಬಾದ್‌ನ ಬಾಪುನಗರ ಪ್ರದೇಶದಲ್ಲಿ ಈ ಪ್ರಕರಣ ಪತ್ತೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಭಾರತಲ್ಲಿ ಮೊಟ್ಟಮೊದಲ ಝೀಕಾ ಪ್ರಕರಣ ಪತ್ತೆಯಾಗಿತ್ತು. ನವೆಂಬರ್ ಹಾಗೂ ಜನವರಿಯಲ್ಲಿ ಮತ್ತೆರಡು ಪ್ರಕರಣಗಳು ಪತ್ತೆಯಾಗಿವೆ. ಆದರೆ ಆ ಬಳಿಕ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.

ಇದು ಕನಿಷ್ಠ ಪ್ರಮಾಣದ ಹರಡುವಿಕೆಯಾಗಿದ್ದರೂ, ಭವಿಷ್ಯದಲ್ಲಿ ಈ ಸೋಂಕಿನಿಂದಾಗಿ ಮೆದುಳು ಬೆಳವಣಿಗೆ ಕಡಿಮೆ ಇರುವ ಮಕ್ಕಳು ಹುಟ್ಟುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ ಎಂದು ಎಚ್ಚರಿಸಿದೆ. ಅಹ್ಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಸಾಮಾನ್ಯ ನಿಗಾ ಮತ್ತು ಸಮೀಕ್ಷೆ ಕೈಗೊಂಡಾಗ, 64 ವರ್ಷದ ಪುರುಷ, 34 ವರ್ಷದ ಮಹಿಳೆ ಹಾಗೂ 22 ವರ್ಷದ ಗರ್ಭಿಣಿಯಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಡಬ್ಲ್ಯುಎಚ್‌ಒ ವಿವರಿಸಿದೆ.

"ಮಗುವಿನ ಬಗ್ಗೆ ನಮಗೆ ಕಳವಳ ಉಂಟಾಗಿತ್ತು. ಆದರೆ ಅದೃಷ್ಟವಶಾತ್ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ" ಎಂದು ಐಎಂಸಿಆರ್ ಮಹಾನಿರ್ದೇಶಕರಾದ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಮೂರನೇ ಪ್ರಕರಣದಲ್ಲಿ ಜ್ವರಪೀಡಿತ ಪುರುಷರೊಬ್ಬರ ರಕ್ತ ತಪಾಸಣೆ ನಡೆಸಿದಾಗ, ಡೆಂಗ್ ಹಾಗೂ ಚಿಕೂನ್‌ಗುನ್ಯಾ ಇಲ್ಲ ಎನ್ನುವುದು ದೃಢಪಟ್ಟಿತು. ಆದರೆ ಝೀಕಾ ಇರುವುದು ಪರೀಕ್ಷೆಯಿಂದ ಖಚಿತವಾಯಿತು. ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಡೆಂಗ್ ಹಾಗೂ ಚಿಕೂನ್‌ಗುನ್ಯಾ ರೋಗವನ್ನು ಕೂಡಾ ಇದೇ ಸೊಳ್ಳೆ ಹರಡುತ್ತದೆ.
ಗರ್ಭಿಣಿ ಮಹಿಳೆಯರಿಗೆ ಝೀಕಾ ಸೋಂಕು ತಗುಲಿದರೆ ಹುಟ್ಟುವ ಮಗು ಸಣ್ಣ ತಲೆ ಸಮಸ್ಯೆಯಿಂದ ಬಳಲುತ್ತದೆ. ಗರ್ಭದಲ್ಲೇ ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತವಾಗುವ ಅಪಾಯ ಇರುತ್ತದೆ. ಇದು ಕೆಲವೊಮ್ಮೆ ಪಾರ್ಶ್ವವಾಯುವಿಗೆ ಕಾರಣವಾಗುವ ನರದೋಷಕ್ಕೂ ಕಾರಣವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News