ಐಟಿ ದೋಷ: ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ ರದ್ದು

Update: 2017-05-28 03:31 GMT

ಹೊಸದಿಲ್ಲಿ, ಮೇ 28: ಬ್ರಿಟನ್‌ನ ಹೀಥ್ರೋ ಮತ್ತು ಗ್ಯಾಟ್ವಿಕ್ ವಿಮಾನ ನಿಲ್ದಾಣಗಳಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ದಿಢೀರನೇ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಲಂಡನ್‌ನಿಂದ ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟವನ್ನು ಬ್ರಿಟಿಷ್ ಏರ್‌ವೇಸ್ ಹಠಾತ್ತನೇ ರದ್ದು ಮಾಡಿದ್ದು, ಹಲವು ಮಂದಿ ಪ್ರಯಾಣಿಕರು ಪರದಾಡುವಂತಾಯಿತು.

ಇದರ ಜತೆಗೆ ಈ ಮೂರು ನಗರಗಳಿಂದ ಲಂಡನ್‌ಗೆ ರವಿವಾರ ಮುಂಜಾನೆ ಹೊರಡಬೇಕಿದ್ದ ವಿಮಾನಗಳು ಕೂಡಾ ರದ್ದಾದವು. ದಿಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಹಾಗೂ ಚೆನ್ನೈಗೆ ಬ್ರಿಟಿಷ್ ಏರ್‌ವೇಸ್ ವಿಮಾನಯಾನ ಸೇವೆ ಕಲ್ಪಿಸಿದೆ. ಲಂಡನ್‌ಗೆ ದೆಹಲಿ ಮತ್ತು ಮುಂಬೈನಿಂದ ಎರಡು ದೈನಿಕ ವಿಮಾಗಳಿದ್ದು, ಇತರ ಮೂರು ನಗರಗಳಿಂದ ತಲಾ ಒಂದು ವಿಮಾನಗಳು ಹಾರಾಡುತ್ತವೆ.

ದಿಢೀರ್ ಐಟಿ ವೈಫಲ್ಯದಿಂದಾಗಿ ಭಾರತಕ್ಕೆ ಬರುವ ವಿಮಾನಗಳು ಮಾತ್ರವಲ್ಲದೇ, ಇತರ ಹಲವು ವಿಮಾನಗಳು ಲಂಡನ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಉಳಿಯಬೇಕಾಯಿತು ಮತ್ತು ಇತರ ಹಲವು ವಿಮಾನಗಳ ವೇಳೆ ಅಸ್ತವ್ಯಸ್ತವಾಯಿತು.

"ಪ್ರಮುಖ ಐಟಿ ವೈಫಲ್ಯದಿಂದಾಗಿ ವಿಶ್ವದ ವಿವಿಧೆಡೆಗಳಿಗೆ ಲಂಡನ್‌ನಿಂದ ಹಾರಾಡಬೇಕಿದ್ದ ವಿಮಾನಗಳ ಸೇವೆ ಅಸ್ತವ್ಯಸ್ತವಾಗಿದೆ. ಹೀಥ್ರೂ ಮತ್ತು ಗ್ಯಾಟ್ವಿಕ್ ಟರ್ಮಿನಲ್‌ಗಳು ಇದೀಗ ವಿಮಾನದಟ್ಟಣೆಯಿಂದ ಕೂಡಿದ್ದು, ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಈ ಅನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇವೆ. ಇದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಲು ಪ್ರಯತ್ನ ನಡೆದಿದೆ" ಎಂದು ಬ್ರಿಟಿಷ್ ಏರ್‌ವೇಸ್ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News