ದೂರದೂರಿನ ಮಸೀದಿಗೆ ತೆರಳುವ ಮುಸ್ಲಿಮರಿಗೆ ಸಿಖ್ಖರು, ಹಿಂದೂಗಳಿಂದ ರಮಝಾನ್ ಉಡುಗೊರೆ!

Update: 2017-05-28 05:10 GMT

ಲುಧಿಯಾನ, ಮೇ 28: ಪವಿತ್ರ ರಮಝಾನ್ ತಿಂಗಳಲ್ಲಿ ಪ್ರಾರ್ಥನೆ ಸಲ್ಲಿಸಲು ದೂರದೂರಿಗೆ ಮುಸ್ಲಿಮರು ತೆರಳಬೇಕಾದ ಅನಿವಾರ್ಯತೆಯನ್ನು ಮನಗಂಡು ಗ್ರಾಮದಲ್ಲೇ ಮಸೀದಿ ನಿರ್ಮಿಸಿದ ಘಾಲಿಬ್ ರಾಣ್ ಸಿಂಗ್ ವಾಲ್ ಗ್ರಾಮದ ಹಿಂದೂ ಹಾಗೂ ಸಿಖ್ ಧರ್ಮೀಯರು ಸೌಹಾರ್ದತೆ ಮೆರೆದಿದ್ದಾರೆ.

ಮಸೀದಿ ಇತ್ತೀಚೆಗೆ ಉದ್ಘಾಟನೆಗೊಂಡಿದೆ. “ಗ್ರಾಮಸ್ಥರ ನೆರವಿನಿಂದ ನಮ್ಮ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಇದೊಂದು ಸುಂದರ ಮಸೀದಿ. ರಮಝಾನ್ ತಿಂಗಳಿನಾದ್ಯಂತ ಪ್ರಾರ್ಥನೆ ಸಲ್ಲಿಸಲು ನಮಗೆ ಸಾಧ್ಯವಾಗಲಿದ್ದು, ಈ ಮಸೀದಿ ಈದ್ ಕೊಡುಗೆಯಾಗಿದೆ” ಎಂದು ಗ್ರಾಮಸ್ಥ ಲಿಕಾಯತ್ ಅಲಿ ಎಂಬವರು ಪ್ರತಿಕ್ರಿಯಿಸಿದ್ದಾರೆ.

“ಇದು ಗ್ರಾಮಸ್ಥರ ನಡುವಿಮನ ಸಹೋದರತೆಗೆ ಉದಾಹರಣೆಯಾಗಿದೆ. ಹಝ್ರತ್ ಅಬೂಬಕರ್ ಮಸೀದಿ ನಿರ್ಮಾಣಕ್ಕಾಗಿ ಗ್ರಾಮಸ್ಥರೆಲ್ಲರೂ ಸಹಕರಿಸಿದ್ದಾರೆ.” ಎಂದು ಪಂಜಾಬ್ ನ ಶಹೀ ಇಮಾಮ್ ಮೌಲಾನಾ ಹಬೀಬುರ್ರಹ್ಮಾನ್ ಸಾನಿ ಹೇಳಿದ್ದಾರೆ.

1998ರಲ್ಲೇ ಮಸೀದಿ ನಿರ್ಮಾಣದ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಗ್ರಾಪಂ ಕೂಡ ಭೂಮಿ ಮಂಜೂರು ಮಾಡಿತ್ತು. ಆದರೆ ಗ್ರಾಮಸ್ಥರ ನೆರವಿನೊಂದಿಗೆ 2017ರ ಮೇ 2ರಂದಷ್ಟೇ ಮಸೀದಿ ನಿರ್ಮಾಣ ಕಾರ್ಯ ಆರಂಭವಾಗಿತ್ತು.” ಎಂದು ಗ್ರಾಮ ಸರಪಂಚ್ ಜಗ್ದೀಪ್ ಕೌರ್ ಹೇಳಿದ್ದಾರೆ.

ಗ್ರಾಮದ ಕೋಮು ಸಾಮರಸ್ಯದ ಬಗ್ಗೆ ಹೆಮ್ಮೆಯಿದೆ. ಎಲ್ಲಾ ಗ್ರಾಮಸ್ಥರ ನೆರವಿನಿಂದ ಶೀಘ್ರದಲ್ಲೇ ದೇವಸ್ಥಾನವೊಂದನ್ನು ನಿರ್ಮಾಣ ಮಾಡಲಾಗುವುದು ಎಂದವರು ಹೇಳಿದ್ದಾರೆ.

“ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಿರುವವರಿಗೆ ಮನುಷ್ಯರಾಗಿ ಒಂದಾಗಿ ಬದುಕಿ ಎಂದು ಹೇಳಲು ನಾವು ಇಚ್ಛಿಸುತ್ತೇವೆ. ಇನ್ನೊಬ್ಬರ ನಂಬಿಕೆಯನ್ನು ಗೌರವಿಸಲು ಹಾಗೂ ಶಾಂತಿಯಿಂದ ವಿವಿಧ ಧರ್ಮಗಳ ಜನರು ಹೇಗೆ ಒಂದಾಗಬಹುದು ಎನ್ನುವುದಕ್ಕೆ ನಮ್ಮ ಗ್ರಾಮ ಉದಾಹರಣೆಯಾಗಿದೆ’” ಎನ್ನುತ್ತಾರೆ ಗ್ರಾಮಸ್ಥ  ಓಂ ಕುಮಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News