×
Ad

ಕಸಾಯಿಖಾನೆಗೆ ಕೊರಳು ಕೊಡಲಿರುವ ಗ್ರಾಮೀಣ ರೈತರು

Update: 2017-05-29 09:50 IST

ಹತ್ಯೆ ಮಾಡುವ ಉದ್ದೇಶಕ್ಕಾಗಿ ಪ್ರಾಣಿಗಳ ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಪ್ರಾಣಿಗಳ ಕ್ರೌರ್ಯ ತಡೆ ಮತ್ತು ಜಾನುವಾರು ಮಾರುಕಟ್ಟೆಗಳ ನಿಯಂತ್ರಣವೇ ಇದರ ಅಂತಿಮ ಉದ್ದೇಶ. ಅಂದರೆ ಮೇಲ್ನೋಟಕ್ಕೆ ಗೋಹತ್ಯೆಯನ್ನು ತಡೆಯುವ ಉದ್ದೇಶವೇ ಪ್ರಮುಖ ಎಂಬಂತೆ ಕಂಡರೂ, ಹತ್ಯೆಗಾಗಿ ‘ಗೋವನ್ನು ಯಾರು ಮಾರಬಹುದು ಯಾರು ಮಾರಬಾರದು’ ಎನ್ನುವುದನ್ನು ನಿರ್ಧರಿಸುವುದೇ ಕಾಯ್ದೆಯ ಅಂತಿಮ ಗುರಿ. 

ಅಂದರೆ ಈ ಕಾಯ್ದೆಯ ನೇರ ಗುರಿ ಹೈನುಗಾರಿಕೆ ನಡೆಸುವ ಸಣ್ಣ ಪುಟ್ಟ ಗ್ರಾಮೀಣ ರೈತರು. ಅವರು ತಮ್ಮ ಹಟ್ಟಿಯ ನಿಷ್ಪ್ರಯೋಜಕ ಗೋವುಗಳನ್ನು ಮಾರುವಂತಿಲ್ಲ. ಅಂದರೆ ಹತ್ಯೆಗಾಗಿ ಮಾರುವಂತಿಲ್ಲ. ನಿಷ್ಪ್ರಯೋಜಕ ಗೋವುಗಳನ್ನು ಹತ್ಯೆಗಾಗಿ ಮಾರುವಂತಿಲ್ಲ ಎಂದ ಮೇಲೆ, ಮತ್ತೇಕೆ ಇವನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುತ್ತಾರೆ? ಯಾರಾದರೂ ವೈದಿಕರು ಪೂಜೆಗಾಗಿ ಇದನ್ನು ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಆದುದರಿಂದ, ಗ್ರಾಮೀಣಪ್ರದೇಶದ ರೈತರು ಮತ್ತು ನಗರ ಪ್ರದೇಶದ ವ್ಯಾಪ್ತಿಯ ಸಣ್ಣ ಪುಟ್ಟ ದನ ಸಾಕುವ ರೈತರಿಗೆ ಈ ನಿಷ್ಪ್ರಯೋಜಕ ಗೋವುಗಳು ಸಮಸ್ಯೆಯಾಗಲಿವೆ. ಇವನ್ನು ಹಟ್ಟಿಯಲ್ಲೇ ಇಟ್ಟುಕೊಂಡರೆ ಅವುಗಳಿಗೆ ಹುಲ್ಲು ಹಾಕಿ ಸಾಕಬೇಕು.

ಅಂತೆಯೇ ಇವನ್ನು ಹಸಿವಿನಿಂದ ಕೆಡವಿ ಸಾಯಿಸುವಂತೆಯೂ ಇಲ್ಲ. ಬೀದಿಯಲ್ಲಿ ಬಿಡುವಂತೆಯೂ ಇಲ್ಲ. ಹಿಂದೆಲ್ಲ, ಇಂತಹ ನಿಷ್ಪ್ರಯೋಜಕ ಹಸುಗಳನ್ನು ಮಾರಿ ಮನೆಯ ಅಗತ್ಯ ಗಳನ್ನು ಅಥವಾ ಉಳಿದ ಹಸುಗಳ ಅಗತ್ಯಗಳ ವೆಚ್ಚವನ್ನು ರೈತರು ತುಂಬಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಷ್ಪ್ರಯೋಜಕ ಹಸುಗಳಿಂದಾಗಿ ಉಳಿದ ಹಸುಗಳನ್ನು ಸಾಕುವುದು ಅವರಿಗೆ ದುಬಾರಿಯಾಗಲಿದೆ. ಆದುದರಿಂದ ಇಲ್ಲದ ಕಾನೂನುಗಳನ್ನು ಮೈಮೇಲೆ ಎಳೆದುಕೊಂಡು ಜೈಲು ಪಾಲಾಗುವುದರಿಂದ ತಪ್ಪಿಸಲು ಹಟ್ಟಿಗಳನ್ನು ಮುಚ್ಚುವುದಷ್ಟೇ ಕೊನೆಯ ದಾರಿ.

ಅತ್ಯಂತ ಮುಖ್ಯವಾದ ಇನ್ನೊಂದು ಅಂಶ ಈ ತಿದ್ದುಪಡಿಯಲ್ಲಿದೆ. ಇದು ಯಾವ ಕಾರಣಕ್ಕೂ ಗೋಹತ್ಯೆಯನ್ನು ನಿಷೇಧಿಸುವುದಿಲ್ಲ. ಅಧಿಕೃತ ಕಸಾಯಿಖಾನೆಗಳು ಸಾಮಾನ್ಯ ರೈತರಿಂದ ಗೋವುಗಳನ್ನು ಪಡೆಯಬಾರದು ಎನ್ನುವುದನ್ನಷ್ಟೇ ಒತ್ತಿ ಹೇಳುತ್ತದೆ. ಅಂದರೆ ಅಧಿಕೃತ ಫಾರ್ಮ್‌ಗಳಿಂದಲೇ ಗೋವುಗಳನ್ನು ಕಸಾಯಿಖಾನೆಗಳು ಪಡೆಯಬೇಕು. ಅಂದರೆ ಇದು ವ್ಯವಸ್ಥಿತವಾಗಿ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಹೈನೋದ್ಯಮಗಳನ್ನು, ಸಹಕಾರಿ ಸಂಘಗಳನ್ನು ನಾಶ ಮಾಡಿ, ಇಡೀ ಹೈನೋದ್ಯಮ ವ್ಯವಹಾರಗಳನ್ನು ಬೃಹತ್ ಫಾರ್ಮ್ ಗಳಿಗೆ ಕೊಡುವ ಇನ್ನೊಂದು ಹುನ್ನಾರದ ಭಾಗ ಆಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಗೋಮಾಂಸ ರಫ್ತು ಮಾಡುವವರಿಗೆ ಇದರಿಂದ ಯಥೇಚ್ಛ ಲಾಭವಾಗಲಿದೆ. ಒಂದು ಕಾಲದಲ್ಲಿ ಕೇಂದ್ರ ಸರಕಾರ ಹೈನೋದ್ಯಮಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಗ್ರಾಮೀಣ ಪ್ರದೇಶದ ರೈತರಿಗೆ ಗೋವುಗಳನ್ನು ಪಡೆಯುವುದಕ್ಕಾಗಿ ಸಾಲಮೇಳಗಳನ್ನು ಘೋಷಿಸಿತ್ತು. ಈ ಸಾಲಮೇಳಗಳು ಹಲವೆಡೆ ದುರುಪಯೋಗವಾಗಿರುವುದೂ ನಿಜ. ಆದರೆ ಮೊತ್ತ ಮೊದಲ ಬಾರಿಗೆ ರೈತರು ಮುಕ್ತವಾಗಿ ಬ್ಯಾಂಕ್ ಮೆಟ್ಟಿಲನ್ನು ಏರಲು ಸಾಧ್ಯವಾಗಿರುವುದು ಇದೇ ‘ಸಾಲ ಮೇಳ’ಗಳಿಂದ. ಈ ಸಂದರ್ಭದಲ್ಲಿ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ದೇಶಾದ್ಯಂತ ಸಾವಿರಾರು ಕುಟುಂಬಗಳು ದನಗಳನ್ನು ಸಾಕಿ ಬದುಕನ್ನು ರೂಪಿಸಿಕೊಂಡಿದ್ದವು.

ದೇಶದಲ್ಲಿ ಹೈನುಗಾರಿಕೆ ಉದ್ಯಮ ಅಭಿವೃದ್ಧಿಯ ಕಡೆಗೆ ಮುಂದುವರಿಯಲು ಕಾರಣವಾಯಿತು. ಗ್ರಾಮೀಣ ಪ್ರದೇಶದ ರೈತರು ನಾಲ್ಕೈದು ಹಸುಗಳನ್ನು ಸಾಕಿ, ಹಾಲು ಕರೆದು ಅದನ್ನು ಸ್ಥಳೀಯ ಸಹಕಾರಿ ಸಂಘಗಳಿಗೆ ಮಾರಿ ತಮ್ಮ ಬದುಕನ್ನು ಹಸನುಗೊಳಿಸಿದರು. ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆಯನ್ನು ಇದು ನಿವಾರಿಸಿತು. ಆದರೆ ಇದೀಗ ಕೇಂದ್ರ ಸರಕಾರದ ನೀತಿ, ಗ್ರಾಮೀಣ ಪ್ರದೇಶದ ಕಿರು ಹೈನೋದ್ಯಮಿಗಳನ್ನು ಅಂದರೆ ಸಣ್ಣ ಪುಟ್ಟ ಹಟ್ಟಿಗಳನ್ನಿಟ್ಟುಕೊಂಡು ಎಳೆಂಟು ದನಗಳನ್ನು ಸಾಕಿ ಬದುಕು ಸಾಗಿಸುವ ರೈತರ ಮೇಲೆ ನೇರ ಪ್ರಹಾರವನ್ನು ಮಾಡಿದೆ.

ಈವರೆಗೆ ಅವರು ಅದು ಹೇಗೋ ಸರಿದೂಗಿಸುತ್ತಿದ್ದ ಈ ಉದ್ಯಮ ಅವರ ಪಾಲಿಗೆ ಮುಳುವಾಗಲಿದೆ. ಅಂದರೆ ಮುಂದಿನ ದಿನಗಳಲ್ಲಿ ಈ ರೈತರ ಹಟ್ಟಿಗಳು ಸಂಪೂರ್ಣ ಮುಚ್ಚಿದರೆ ಅದರ ಜಾಗದಲ್ಲಿ ಬೃಹತ್ ಫಾರ್ಮ್‌ಗಳು ತಲೆಯೆತ್ತುತ್ತವೆ. ಹೈನೋದ್ಯಮವನ್ನು ಈ ಬೃಹತ್ ಬಂಡವಾಳಗಾರರೇ ನಿಯಂತ್ರಿಸಲಿದ್ದಾರೆ. ಇದೊಂದು ರೀತಿಯಲ್ಲಿ ಊರಿನ ಸಣ್ಣ ಪುಟ್ಟ ದಿನಸಿ ಅಂಗಡಿಗಳನ್ನೆಲ್ಲ ಸರ್ವನಾಶ ಮಾಡಿ, ಆ ಜಾಗದಲ್ಲಿ ಬೃಹತ್ ಮಾಲ್‌ಗಳನ್ನು, ಸೂಪರ್ ಬಝಾರ್‌ಗಳನ್ನು ತಂದು ನಿಲ್ಲಿಸಿದ ಹಾಗೆ. ನೋಟು ನಿಷೇಧದ ಬಳಿಕವಂತೂ ದಿನಸಿ ಅಂಗಡಿಗಳು ಒಂದೊಂದಾಗಿ ಮುಚ್ಚುತ್ತಾ ಬರುತ್ತಿವೆ. ಸಣ್ಣ ಪುಟ್ಟ ಉದ್ದಿಮೆಗಳು ಸರ್ವನಾಶದ ಹಂತದಲ್ಲಿವೆ.

ಕ್ಯಾಶ್‌ಲೆಸ್‌ನ ಗುರಿಯೇ ಕಾರ್ಪೊರೇಟ್ ಸಂಸ್ಥೆಗಳನ್ನು ಜನಪ್ರಿಯಗೊಳಿಸುವುದು. ಬಿಡಿ ಮಾರಾಟಗಾರರೆಲ್ಲ ಸರ್ವನಾಶವಾಗಿ ಹೋಗುತ್ತಿದ್ದಾರೆ. ಇದೀಗ ಆ ಸ್ಥಿತಿ ಗ್ರಾಮೀಣ ಪ್ರದೇಶದ ಗೋಸಾಕಣೆ ಮಾಡುತ್ತಿರುವ ರೈತರಿಗೆ ಒದಗಿ ಬಂದಿದೆ. ಗೋಸಾಕಣೆ ಮಾಡಬೇಕಾದರೆ ಇವರು ತಮ್ಮಲ್ಲಿ ಇಟ್ಟುಕೊಳ್ಳಬೇಕಾದ ‘ಲೈಸನ್ಸ್’ಗಳ ಲೆಕ್ಕಗಳು ಯಾವ ರೀತಿಯಲ್ಲೂ ರೈತರಿಗೆ ಅರ್ಥವಾಗಲಾರದಂತಹದು. ಒಂದೆಡೆ ಸರಕಾರದ ಕಾನೂನು, ಮಗದೊಂದೆಡೆ ಗೋರಕ್ಷಕರ ವೇಷದಲ್ಲಿರುವ ಗೂಂಡಾಗಳ ಉಪಟಳದಿಂದ ರೈತರು ಗೋಸಾಕಣೆಯನ್ನು ಸಂಪೂರ್ಣ ತೊರೆಯದೇ ಬೇರೆ ದಾರಿಯೇ ಇಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ನಿರುದ್ಯೋಗಗಳು ಇನ್ನಷ್ಟು ಹೆಚ್ಚಲಿವೆ.

ಅಷ್ಟೇ ಅಲ್ಲ, ರೈತರ ನಿಷ್ಪ್ರಯೋಜಕ ಗೋವುಗಳನ್ನು ಸಾಕಲು ಸರಕಾರ ಒಂದು ಪ್ರತ್ಯೇಕ ಬಜೆಟ್‌ನ್ನೇ ಘೋಷಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಷ್ಪ್ರಯೋಜಕ ಗೋವುಗಳಿಗೆ ಸರಕಾರ ಕೋಟಿಗಟ್ಟಳೆ ಅನುದಾನಗಳನ್ನು ಬಿಡುಗಡೆ ಮಾಡುವುದರಿಂದ ನಾಡಿನ ಅಭಿವೃದ್ಧಿಗಾಗಲಿ, ಹೈನುಗಾರಿಕೆಗಾಗಲಿ ಏನು ಕೊಡುಗೆ ನೀಡಿದಂತಾಯಿತು? ಈ ಹಣವನ್ನು ಗೋವು ಸಾಕುವ ರೈತರಿಗಾಗಿ ಮೀಸಲಿಟ್ಟಿದ್ದಿದ್ದರೆ ಹೈನುಗಾರಿಕೆಯಾದರೂ ಅಭಿವೃದ್ಧಿ ಹೊಂದುತ್ತಿತ್ತು. ಬದಲಿಗೆ ನಿಷ್ಪ್ರಯೋಜಕ ಗೋವುಗಳು ಆಹಾರವಾಗಿ ಬಳಕೆಯಾದರೆ, ಬಡವರಿಗೆ ಉಚಿತ ಪೌಷ್ಟಿಕಾಂಶ ದೊರೆತಂತಾಗುತ್ತಿತ್ತು. ರೈತರಿಗೆ ವೆಚ್ಚಕ್ಕೆ ಒಂದಿಷ್ಟು ದುಡ್ಡು ದೊರೆಯುವಂತಾಗುತ್ತಿತ್ತು. ಸರಕಾರದ ಖಜಾನೆಗೆ ಹಣ ಉಳಿತಾಯವಾಗುತ್ತಿತ್ತು.

ಗೋ ಹತ್ಯೆ ನಿಷೇಧ ಮುಸ್ಲಿಮರ ಸಮಸ್ಯೆ ಎಂದು ರೈತರ ದಾರಿ ತಪ್ಪಿಸುವ ಪ್ರಯತ್ನವೂ ಇನ್ನೊಂದೆಡೆ ನಡೆಯುತ್ತಿದೆ. ಗೋಮಾಂಸ ಸೇವಿಸುವುದು ಮುಸ್ಲಿಮರಿಗೇನೂ ಕಡ್ಡಾಯವಲ್ಲ. ಅದು ಅವರ ಧಾರ್ಮಿಕ ಸಮಸ್ಯೆಯೂ ಅಲ್ಲ. ಕಡಿಮೆ ಬೆಲೆಗೆ ಹೆಚ್ಚು ಮಾಂಸ ದೊರಕುತ್ತದೆ ಎಂದು ಬಡ ಮುಸ್ಲಿಮರು ಗೋಮಾಂಸವನ್ನು ನೆಚ್ಚಿಕೊಂಡಿದ್ದಾರೆ ಅಷ್ಟೇ. ಈ ದೇಶದ ಎಲ್ಲ ಸಮುದಾಯದ ಬಹುಸಂಖ್ಯೆಯ ಬಡವರ್ಗ ಇದೇ ಮಾಂಸವನ್ನು ಕಡಿಮೆ ದರ ಎನ್ನುವ ಕಾರಣಕ್ಕಾಗಿಯೇ ನೆಚ್ಚಿಕೊಂಡಿದೆ. ರೈತರಿಗೆ ನಿಷ್ಪ್ರಯೋಜಕವಾಗಿರುವ ಗೋವುಗಳ ಮಾರಾಟಕ್ಕೆ ಮುಸ್ಲಿಮರಲ್ಲಿ ಒಂದು ಸಣ್ಣ ವರ್ಗ ಸಹಕರಿಸುತ್ತಿತ್ತು. ಅದು ಹೈನೋದ್ಯಮದ ಒಂದು ಭಾಗವಷ್ಟೇ ಆಗಿತ್ತು.

ಗೋ ಮಾರಾಟ ನಿಷೇಧದಿಂದ ದೇಶದ ಉಳಿದ ರೈತ ಸಮೂಹಕ್ಕೆ ಆಗಿರುವ ಸಮಸ್ಯೆಗೆ ಹೋಲಿಸಿದರೆ ಮುಸ್ಲಿಮರಿಗೆ ಆಗುವ ನಷ್ಟ ಅತ್ಯಲ್ಪ. ಯಾಕೆಂದರೆ ಮುಸ್ಲಿಮರಲ್ಲಿ ಗೋಸಾಕಣೆಯನ್ನೇ ನೆಚ್ಚಿಕೊಂಡವರು ಕಡಿಮೆ. ಆದುದರಿಂದ ಇದು ಯಾವ ರೀತಿಯಲ್ಲೂ ಮುಸ್ಲಿಮರ ಸಮಸ್ಯೆಯಲ್ಲ. ಈ ಸಮಸ್ಯೆಗೆ ಮುಸ್ಲಿಮರು ತಾವಾಗಿ ತಲೆಕೊಡುವುದೂ ಸರಿಯಲ್ಲ. ಗೋಹತ್ಯೆ ಸಂಪೂರ್ಣ ನಿಷೇಧವಾಗಲಿ, ರಫ್ತು ಸಂಪೂರ್ಣ ನಿಲುಗಡೆಯಾಗಲಿ ಎಂದು ಮುಸ್ಲಿಮರು ಒತ್ತಾಯಿಸಿದಾಗ ಮಾತ್ರ ಇದು ದೇಶದ ಯಾರ ಸಮಸ್ಯೆ ಎನ್ನುವುದು ಬಹಿರಂಗವಾಗುತ್ತದೆ.

ದೇಶದ ನಾಲ್ಕು ಶೇಕಡ ಜನರ ನಂಬಿಕೆಗಾಗಿ ಈ ದೇಶದ ಗ್ರಾಮೀಣ ಹೈನೋದ್ಯಮವನ್ನು ನಾಶ ಮಾಡುವ ಮೂಲಕ, ಬಹುದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಲು ಮೋದಿ ಸರಕಾರ ಹೊರಟಿದೆ. ಅದನ್ನು ಈ ದೇಶದ ಬಹುಜನರು ಸಹಿಸಬಲ್ಲರೆಂದಾದರೆ, ಮುಸ್ಲಿಮ್ ಸಮುದಾಯವೂ ಸಹಿಸಬೇಕಾಗುತ್ತದೆ. ಒಂದು ಕಾಲದಲ್ಲಿ ಸಂಸ್ಕೃತವನ್ನು ದೇವ ಭಾಷೆ ಎಂದು ತಳಸ್ತರದ ಜನರಿಂದ ದೂರವಿರಿಸಿ ಅದನ್ನು ಸಾಯಿಸಲಾಯಿತು. ಇಂದು ಗೋವನ್ನು ದೇವರೆಂದು ಘೋಷಿಸಿ, ಅದರ ಸಂತಾನವನ್ನೇ ಅಳಿಸಲು ಮುಂದಾಗಿದೆ. ಜೊತೆಗೆ ಗ್ರಾಮೀಣ ಹೈನುಗಾರಿಕೆಯನ್ನು ನಾಶ ಮಾಡಿ, ಅತ್ಯಾಧುನಿಕ ರೀತಿಯಲ್ಲಿ ಗೋ ಮಾಂಸದ ಲಾಭಗಳನ್ನು ಕಾರ್ಪೊರೇಟ್ ಜನರಿಗೆ ಒದಗಿಸಲು ಈ ಆದೇಶ ಹೊರಡಿಸಲಾಗಿದೆ.. ಮುಂದೆಯೂ ದೇಶದಲ್ಲಿ ಗೋಹತ್ಯೆ ಯಥೇಚ್ಛವಾಗಿ ನಡೆಯುತ್ತದೆ. ಈ ಬಾರಿ ನಮ್ಮ ಸರಕಾರ ಹೊಸ ತಿದ್ದು ಪಡಿಯ ಮೂಲಕ ಗ್ರಾಮೀಣ ಪ್ರದೇಶದ ರೈತರನ್ನೇ ಕಸಾಯಿಖಾನೆಯ ಕಡೆಗೆ ಎಳೆದೊಯ್ಯ ಹೊರಟಿದೆ, ಅಷ್ಟೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News