ನನ್ನ ಕಣ್ಣೀರನ್ನೆಲ್ಲ ಕುಡಿದು ಖಾಲಿ ಮಾಡಿದ್ದೇನೆ, ಹಾಗಾಗಿ ಈಗ ನಗುತ್ತೇನೆ : ಉತ್ತಮ್ ಚಂದ್ರ ದಾಸ್

Update: 2017-05-29 07:38 GMT

ಮೊದಲ ದಿನ ನಾನಿಲ್ಲಿ ಕೆಲಸಕ್ಕೆ ಬಂದಾಗ ನನ್ನ ತಂದೆ ಹಿಂದೆ ಕೆಲಸ ಮಾಡುತ್ತಿದ್ದ ಸೇತುವೆಯ ಪಕ್ಕ ಕುಳಿತು ಅತ್ತಿದ್ದೆ. ನನ್ನ ತಂದೆ ಶೂ ಪಾಲಿಷ್ ಹೇಗೆ ಮಾಡುತ್ತಿದ್ದರೆಂಬ ನೆನಪುಗಳಿಲ್ಲದೆ ಹೇಗೆ ಕೆಲಸ ಮಾಡುವುದು ಎಂದು ನನಗೆ ತೋಚುತ್ತಿರಲಿಲ್ಲ.

ಮಳೆಗಾಲದ ಸಂದರ್ಭದಲ್ಲಿ ನನ್ನ ತಂದೆ ಅವರ ಹೆಗಲಲ್ಲಿ ನನ್ನನ್ನು ಕೂರಿಸಿ ಶಾಲೆಗೆ ಕರೆದೊಯ್ಯುತ್ತಿದ್ದರು. ನಮ್ಮ ಶಾಲೆಯಲ್ಲಿ ಮಳೆಗಾಲದ ಸಂದರ್ಭ ನಮ್ಮ ಪುಸ್ತಕಗಳನ್ನು ಪ್ಲಾಸ್ಟಿಕ್ ಲಕೋಟೆಯೊಳಗೆ ಇಡಬೇಕಿತ್ತು. ಶಾಲೆಯ ಟಿನ್ ಶೀಟಿನ ಮಾಡಿನ ತೂತುಗಳಿಂದ ಮಳೆ ನೀರು ಒಳಗೆ ಬೀಳುತ್ತಿತ್ತು. ಆದರೆ ನಾವು ಪದ್ಯಗಳನ್ನು ಓದುವುದನ್ನು ನಿಲ್ಲಿಸಿರಲಿಲ್ಲ.

ನಾನು ದೊಡ್ಡ ವ್ಯಕ್ತಿಯಾಗಬೇಕೆಂದು ನನ್ನ ತಂದೆ ಯಾವತ್ತೂ ಹೇಳುತ್ತಿದ್ದರು. ಅವರು ಸತ್ತು ಏಳು ದಿನಗಳ ನಂತರ ನಾನು ತುಂಬಾ ದೊಡ್ಡವನಾದೆ. ನಮಗೆ ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ನನ್ನ ಕಿರಿಯ ಸಹೋದರನಿಗೆ ಜ್ವರವಿತ್ತು ಹಾಗೂ ತಾಯಿಗೆ ಏನು ಮಾಡುವುದೆಂದು ತೋಚುತ್ತಿರಲಿಲ್ಲ. ನನ್ನ ತಂದೆಯ ಪೆಟ್ಟಿಗೆ ನನಗಿಂತ ಭಾರವಿತ್ತು.

ನನ್ನ ಸಹಪಾಠಿಗಳು ಶಾಲೆಗೆ ಹೋಗುವಾಗ ನನ್ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ನಾನು ಶಾಲೆಗೆ ಹೋಗಿ ಪದ್ಯ ಕಲಿಯಬೇಕಿತ್ತು, ದೊಡ್ಡ ವ್ಯಕ್ತಿಯಾಗಬೇಕಿತ್ತು ಆದರೆ ನಾನು ಮಗುವಿನಂತೆ ಅತ್ತು ಬಿಟ್ಟೆ. ಮೊದಲ ಗ್ರಾಹಕ ಆತನ ಶೂ ನನಗೆ ಪಾಲಿಷ್ ಮಾಡಲು ನೀಡಿದಾಗ ನನ್ನ ಕೈಗಳು ನಡುಗುತ್ತಿದ್ದವು ಹಾಗೂ ಆತ ನನ್ನನ್ನು ‘ಬ್ಲಡ್ಡಿ ಕಾಬ್ಲರ್’ ಎಂದು ಗದರಿದಾಗ ನನಗೆ ಕಣ್ಣೀರು ತಡೆಯಲಾಗಲಿಲ್ಲ. ಆತ ತನ್ನ ಶೂಗಳನ್ನು ನನಗೆ ಏನೂ ಹಣ ನೀಡದೆ ತೆಗೆದುಕೊಂಡು ಹೋದ. ಅಲ್ಲಿದ್ದ ಇತರ ಮಾರಾಟಗಾರರು ನನ್ನತ್ತ ಕರುಣೆಯಿಂದ ನೋಡಿದರು.

ನನಗೆ ಶಾಲೆಗೆ ಓಡಿ ಹೋಗಿ, ಮಳೆಯಲ್ಲಿ ನೆನೆದು ಪದ್ಯ ಕಲಿಯಬೇಕೆಂದೆನಿಸಿತು. ಆಗ ಒಬ್ಬ ವ್ಯಕ್ತಿ ಬಂದ. ಆತ ನೋಡಲು ಅಪಾಯಕಾರಿಯಂತೆ ಕಾಣುತ್ತಿದ್ದ, ಆತನ ದನಿಯೂ ಗಡುಸಾಗಿತ್ತು. ತನ್ನ ಶೂ ಅನ್ನು ಕನ್ನಡಿಯಂತೆ ಹೊಳೆಯುವ ಹಾಗೆ ಪಾಲಿಷ್ ಮಾಡಲು ಆತ ಹೇಳಿದ. ನಾನು ತುಟಿ ಕಚ್ಚಿದೆ, ನನ್ನ ಕಣ್ಣೀರು ಅದುಮಿ ಹಿಡಿದೆ ಹಾಗೂ ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ. ಆತ ಪುನಃ ಪಾಲಿಷ್ ಮಾಡಲು ಹೇಳಿದ. ನಾನು ಮಾಡಿದೆ ಹಾಗೂ ಆತ ಮತ್ತೆ ಮಾಡಲು ಹೇಳಿದ. ನಂತರ ಶೂ ನಲ್ಲಿ ಒಂದು ಗೀಟು ತೋರಿಸಿ ಮಗದೊಮ್ಮೆ ಮಾಡಲು ಹೇಳಿದ. ನಾನು ಮಾಡಿದೆ. ಅಳುವುದನ್ನು ನಿಲ್ಲಿಸಿದೆ. ಆತನ ಶೂ ಕನ್ನಡಿಯಂತೆ ಹೊಳೆಯುತ್ತಿತ್ತು.

ಆತ ಒಂದು 100 ಟಕಾ ನೋಟು ನನ್ನ ಕೈಗಿತ್ತು ‘‘ನಿನ್ನ ಸಮಯ ಹಾಗೂ ಶಕ್ತಿಯನ್ನು ಕೆಲಸ ಮಾಡಲು ಉಪಯೋಗಿಸು ಆಳುವುದಕ್ಕಲ್ಲ. ಕಣ್ಣೀರು ಏನನ್ನೂ ತರುವುದಿಲ್ಲ,’’ ಎಂದು ಹೇಳಿ ಅಲ್ಲಿಂದ ಹೊರಟು ಹೋದ. ಆ ದಿನ ನಾನು 300 ಟಕಾ ದುಡಿದೆ. ಇದಾಗಿ ಈಗ ಮೂರು ವರ್ಷಗಳಾಗಿವೆ ಹಾಗೂ ನಾನು ಅಳುತ್ತಾ ಸಮಯ ಹಾಳು ಮಾಡದೆ ಕೆಲಸ ಮಾಡುತ್ತಿದ್ದೇನೆ. ನನ್ನ ಇಬ್ಬರು ಕಿರಿಯ ಸಹೋದರರನ್ನು ಶಾಲೆಗೆ ಕಳುಹಿಸುತ್ತಿದ್ದೇನೆ. ನನ್ನ ಹಿರಿಯ ಸಹೋದರಿಯನ್ನು ಕಳೆದ ವರ್ಷ ಮದುವೆ ಮಾಡಿ ಕೊಟ್ಟಿದ್ದೇನೆ. ಮೂರು ವರ್ಷಗಳಿಂದ ಕಲಿಯಲು ಅಸಾಧ್ಯವಾಗಿದ ಪದ್ಯವನ್ನು ನಾನು ಕಲಿತಿದ್ದೇನೆ. ನನ್ನ ಎಲ್ಲಾ ಕಣ್ಣೀರು ಕುಡಿದು ಕೇವಲ ನನ್ನ ಕನಸಿನೊಂದಿಗೆ ಬದುಕುತ್ತಿದ್ದೇನೆ. ಈಗ ಜನರು ನನ್ನನ್ನು ಮೋಚಿ ಎಂದು ಹೇಳಿದಾಗ ನಾನು ಅಳುವುದಿಲ್ಲ. ಅವರನ್ನು ನೋಡಿ ನಕ್ಕು ಬಿಡುತ್ತೇನೆ.

- ಉತ್ತಮ್ ಚಂದ್ರ ದಾಸ್ (15)

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News