ನಾಳೆ ಭಾರತ-ಬಾಂಗ್ಲಾದೇಶ ಎರಡನೆ ಅಭ್ಯಾಸ ಪಂದ್ಯ

Update: 2017-05-29 18:33 GMT

ಲಂಡನ್, ಮೇ 29: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 45 ರನ್‌ಗಳ ಅಂತರದಲ್ಲಿ ಜಯ ಗಳಿಸಿದ್ದ ಭಾರತ ಮಂಗಳವಾರ ಇಲ್ಲಿ ನಡೆಯಲಿರುವ ಎರಡನೆ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

 ಭಾರತಕ್ಕೆ ಮೊದಲ ಅಭ್ಯಾಸ ಪಂದ್ಯದಲ್ಲಿ ಮಳೆಯಿಂದಾಗಿ ನ್ಯೂಝಿಲೆಂಡ್ ವಿರುದ್ಧ 26 ಓವರ್‌ಗಳ ಬ್ಯಾಟಿಂಗ್ ಮಾತ್ರ ನಡೆಸಲು ಸಾಧ್ಯವಾಗಿತ್ತು. 190 ರನ್‌ಗಳ ಸವಾಲನ್ನು ಪಡೆದ ಭಾರತ 26 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಅರ್ಧಕ್ಕೆ ನಿಂತಿತು. ಬಳಿಕ ಆಟ ಆರಂಭಗೊಳ್ಳಲಿಲ್ಲ.

ಡಿಎಲ್ ನಿಯಮದಂತೆ ಭಾರತ 26 ಓವರ್‌ಗಳಲ್ಲಿ 86 ರನ್ ಗಳಿಸಬೇಕಿತ್ತು. ಆಟ ನಿಂತಾಗ 129 ರನ್ ಗಳಿಸಿರುವ ಹಿನ್ನೆಲೆಯಲ್ಲಿ ಭಾರತ 45 ರನ್‌ಗಳ ಜಯ ಗಳಿಸಿತು.

ಭಾರತದ ಪರ ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ(7) ಬೇಗನೆ ಔಟಾಗಿದ್ದರು. ಆದರೆ ಎರಡನೆ ವಿಕೆಟ್‌ಗೆ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ 68 ರನ್‌ಗಳ ಜೊತೆಯಾಟ ನೀಡಿದರು. ಧವನ್ 40 ರನ್ ಗಳಿಸಿದರು.ಕೊಹ್ಲಿ ಔಟಾಗದೆ 52 ರನ್ ಗಳಿಸಿದ್ದರು.

    ಇದಕ್ಕೂ ಮೊದಲು ನ್ಯೂಝಿಲೆಂಡ್ 38.4 ಓವರ್‌ಗಳಲ್ಲಿ  189 ರನ್‌ಗಳಿಗೆ ಆಲೌಟಾಗಿತ್ತು. ಲೂಂಚಿ 66 ರನ್ ಮತ್ತು ಜೇಮ್ಸ್ ನಿಶಮ್ ಔಟಾಗದೆ 46 ರನ್ ಗಳಿಸಿದ್ದರು. ಭಾರತದ ಭುವನೇಶ್ವರ ಕುಮಾರ್28ಕ್ಕೆ3, ಮುಹಮ್ಮದ್ ಶಮಿ 47ಕ್ಕೆ 3 ವಿಕೆಟ್ ಪಡೆದು ಮಿಂಚಿದ್ದರು.

 ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.ಅವರು ಮೊದಲ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳುವಲ್ಲಿ ತಡವಾಗಿತ್ತು.

  ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮ ಅವರಿಗೆ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ ಭಡ್ತಿ ನೀಡಿದ್ದರು. ಅವರ ಪ್ರಯೋಗ ಯಶಸ್ವಿಯಾಗಿತ್ತು. ಮುಂದಿನ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಇವರು ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ.

ಅಜಿಂಕ್ಯ ರಹಾನೆ ಮೊದಲ ಅಭ್ಯಾಸ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವಲ್ಲಿ ಎಡವಿದ್ದರು. ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಆಲ್‌ರೌಂಡರ್ ಯುವರಾಜ್ ಸಿಂಗ್ ಜ್ವರದಿಂದ ಬಳಲುತ್ತಿದ್ದಾರೆ. ಅವರು ಆಡುವ ವಿಚಾರ ದೃಢಪಟ್ಟಿಲ್ಲ. ಒಂದು ವೇಳೆ ಅಭ್ಯಾಸ ಪಂದ್ಯದಲ್ಲಿ ಆಡದಿದ್ದರೆ ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ.

ಕೇದಾರ್ ಜಾಧವ್ ಅಭ್ಯಾಸ ಪಂದ್ಯದಲ್ಲಿ ಅವಕಾಶ ಪಡೆಯಲಿದ್ದಾರೆ. ಅವರನ್ನು ಮಧ್ಯಮ ಸರದಿಯಲ್ಲಿ ಕಣಕ್ಕಿಳಿಸಲು ನಾಯಕ ಕೊಹ್ಲಿ ಯೋಚಿಸುತ್ತಿದ್ದಾರೆ.

ಬಾಂಗ್ಲಾ ತಂಡ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದೆ. 2015ರಲ್ಲಿ ಆಸ್ಟ್ರೇಲಿಯ-ನ್ಯೂಝಿಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿತ್ತು.ಮುಸ್ತಫಿಝರ್ರಹ್ಮಾನ, ರುಬೆಲ್ ಹುಸೈನ್, ತಾಸ್ಕಿನ್ ಅಹ್ಮದ್ ಮತ್ತು ನಾಯಕ ಮಶ್ರಾಪೆ ಮೊರ್ತಾಝಾ ಇವರಿಂದಾಗಿ ತಂಡ ಬಲಿಷ್ಠವಾಗಿದೆ.

2015ರಲ್ಲಿ ಭಾರತವು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋಲು ಅನುಭವಿಸಿತ್ತು. ಭಾರತದ ಆಟಗಾರರು ಚೆನ್ನಾಗಿ ಅಭ್ಯಾಸ ನಡೆಸಿದರೆ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಲು ಸಾಧ್ಯ,

ಭಾರತದ ಬೌಲಿಂಗ್ ನ್ಯೂಝಿಲೆಂಡ್ ವಿರುದ್ಧ ಚೆನ್ನಾಗಿತ್ತು. ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ಉಮೇಶ್ ಯಾದವ್ ಅವರಿಂದಾಗಿ ವೇಗದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.

 ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಟೆಸ್ಸ್ ಕ್ರಿಕೆಟ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ. ಅವರು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲೂ ಮಿಂಚಿದರೆ ಭಾರತಕ್ಕೆ ಯಶಸ್ಸು ಸಾಧ್ಯ.

ಭಾರತ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಯುವರಾಜ್ ಸಿಂಗ್, ಎಂಎಸ್ ಧೋನಿ, ಕೆದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಅಜಿಂಕ್ಯ ರಹಾನೆ.

ಬಾಂಗ್ಲಾದೇಶ: ಮಶ್ರಾಫೆ ಮೊರ್ತಾಝ(ನಾಯಕ), ತಮೀಮ್ ಇಕ್ಬಾಲ್, ಇಮ್ರುಲ್ ಕೈಸ್ , ಸೌಮ್ಯ ಸರ್ಕಾರ್, ಸಬೀರ್ ರಹ್ಮಾನ್, ಮಹಮ್ಮುದುಲ್ಲಾ ರಿಯಾದ್ , ಶಾಕಿಬ್ ಅಲ್ ಹಸನ್, ಮುಶ್ಫಿಕುರ್ರಹ್ಮಾನ್, ತಾಸ್ಕಿನ್ ಅಹ್ಮದ್, ಮೆಹಾದಿ ಹಸನ್, ಮೊಸಾದಿಕ್ ಹುಸೈನ್, ಸುಂಝಾಮುಲ್ ಇಸ್ಲಾಂ, ಶಫಿಯುಲ್ ಇಸ್ಲಾಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News