ಕ್ಯಾನ್ಸರ್ ಚಿಕಿತ್ಸೆಗೆ ಹೊಸ ವಿಧಾನ ಕಂಡುಹಿಡಿದ ವಿಜ್ಞಾನಿಗಳು

Update: 2017-05-31 03:37 GMT

ಲಂಡನ್, ಮೇ 31: ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಸಂಶೋಧಕರ ತಂಡ ಮೊಟ್ಟಮೊದಲ ಬಾರಿಗೆ ಕ್ಯಾನ್ಸರ್ ಹರಡುವ ಪ್ರಕ್ರಿಯೆ ನಿಧಾನ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ ಎನ್ನಲಾಗಿದೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ಯಾನ್ಸರ್ ಕಣಗಳು ಮೂಲದಿಂದ ಒಡೆದು, ದೇಹದ ಇತರ ಭಾಗಕ್ಕೆ ಹರಡುವುದರಿಂದ ಶೇಕಡ 90ರಷ್ಟು ಸಾವುಗಳು ಸಂಭವಿಸುತ್ತವೆ. ಇಂಥ ಹರಡುವಿಕೆಯನ್ನು ತಡೆಯಲು ಯಾವ ಔಷಧವೂ ಇಲ್ಲ. ಇದು ಕ್ಯಾನ್ಸರ್ ಚಿಕಿತ್ಸೆಗೆ ಸವಾಲಾಗಿ ಪರಿಣಮಿಸಿತ್ತು. ಕ್ಯಾನ್ಸರ್ ಕಣಗಳು ದಟ್ಟವಾಗಿ ತುಂಬಿದಾಗ, ಅದರಲ್ಲಿನ ಎರಡು ಪ್ರೊಟೀನ್ ಕಣಗಳು ವಿಭಜನೆಯ ಸಂದೇಶವನ್ನು ಕೋಶಗಳಿಗೆ ರವಾನಿಸುತ್ತವೆ. ಇದರಿಂದಾಗಿ ಕ್ಯಾನ್ಸರ್ ಕಣಗಳು ಸಿಡಿದು, ರಕ್ತನಾಳಗಳ ಮೂಲಕ ಹರಿಯುತ್ತದೆ. ಈ ಮೂಲದ ದೇಹದ ವಿವಿಧೆಡೆಗಳಿಗೆ ಇದು ಹರಡುತ್ತದೆ ಎನ್ನುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

"ಜನದಟ್ಟಣೆಯಿಂದ ಕೂಡಿರುವ ಹೋಟೆಲ್‌ನಲ್ಲಿ ಗ್ರಾಹಕರು ಟೇಬಲ್‌ಗಾಗಿ ಕಾಯುವಂಥ ಪ್ರಕ್ರಿಯೆ ಇದು. ಅಂತಿಮವಾಗಿ ನೀವು ಬೇರೆ ಹೋಟೆಲ್‌ಗೆ ಹೋಗಬೇಕಾಗುವಂಥ ಪರಿಸ್ಥಿತಿ" ಎಂದು ಸಂಶೋಧನಾ ಪ್ರಬಂಧ ಮಂಡಿಸಿರುವ ಶ್ರೀಲಂಕಾ ಮೂಲದ ಹಸಿನಿ ಜಯತಿಲಕ ಹೇಳಿದ್ದಾರೆ. ನೇಚರ್ ಕಮ್ಯುನಿಕೇಶನ್ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.

"ಕ್ಯಾನ್ಸರ್ ಕಣಗಳು ಹರಡಲು ಪ್ರಾಥಮಿಕ ಹಂತದ ಟ್ಯೂಮರ್‌ನ ಗಾತ್ರ ಕಾರಣವಲ್ಲ; ಆದರೆ ಈ ಕೋಶಗಳು ಬಿಗಿಯಾದ ದಟ್ಟಣೆಯಿಂದ ಕೂಡಿದಾಗ ಟ್ಯೂಮರ್‌ನಿಂದ ಸಿಡಿಯುತ್ತವೆ ಎನ್ನುವುದು ಇದೀಗ ದೃಢಪಟ್ಟಿದೆ’ ಎಂದು ಹೇಳಿದ್ದಾರೆ.

ಈ ಸೂಕ್ಷ್ಮ ಸಂದೇಶ ಕೋಶಗಳಿಗೆ ರವಾನೆಯಾಗದಂತೆ ತಡೆಯುವ ಔಷಧವನ್ನು ಕಂಡುಹಿಡಿಯುವಲ್ಲಿ ಜಯತಿಲಕ ತಂಡ ಯಶಸ್ವಿಯಾಗಿದೆ. ಆದರೆ ಸದ್ಯಕ್ಕೆ ಈ ಚಿಕಿತ್ಸೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದ್ದು, ಮನುಷ್ಯರಿಗೆ ಇನ್ನೂ ಪ್ರಯೋಗ ಮಾಡಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈ ಹೊಸ ಸಂಶೋಧನೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಭರವಸೆ ಮೂಡಲು ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News