ಯುದ್ಧೋನ್ಮಾದದ ದೇಶಗಳಿಗೆ ರಮಝಾನ್ ಉಪವಾಸ ಹಿಡಿಸಿ: ಎಂ.ಬಾಲಕೃಷ್ಣ ನಾಯಕ್

Update: 2017-05-31 11:40 GMT

ಮಾನವನು ತನ್ನ ತಾಯಿಯ ಒಡಲಿನಿಂದ ಧರೆಗೆ ಬರುವಾಗ ನಿರ್ಮಲನೂ, ಪರಿಶುದ್ಧನೂ ಆಗಿರುತ್ತಾನೆ. ಒಳ್ಳೆಯದೂ ಕೆಟ್ಟದ್ದನ್ನೂ ಅರಿಯದೆ ದ್ವೇಷ-ಅಸೂಯೆ ತಿಳಿಯದೇ ಮುಗ್ದನಾಗಿರುತ್ತಾನೆ. ಕ್ರಮೇಣ ಬೆಳೆದಂತೆಯೇ ಪಾಪದ ಜಗತ್ತು ಆತನನ್ನು ಮುತ್ತಿಕೊಳ್ಳುತ್ತದೆ. ಪಾಪಗಳೆಂಬ ಶೈತಾನನ ಕೊಂಡಿಯೊಳಗೆ ಬಿದ್ದು ಹೊರಬರಲಾರದೆ ಒದ್ದಾಡುತ್ತಾನೆ. ಬೆಳೆಯುತ್ತಾ ಬಂದಂತೆ ಜಗತ್ತಿನ ಆಡಂಬರಗಳ ಬಗ್ಗೆ, ಸುಖಭೋಗಗಳ ಬಗ್ಗೆ ಅರಿತು ಅದರ ಹಿಂದೆ ಬೀಳುತ್ತಾನೆ. ಕಾಮ, ಕ್ರೋಧ, ಮದ, ಮತ್ಸರ, ಲೋಭಗಳಲ್ಲಿ ಬಂಧಿಯಾಗಿ ಸೃಷ್ಟಿಕರ್ತನನ್ನು ಮರೆಯುತ್ತಾನೆ.

ಯುದ್ಧಗಳಂತಹ ಜಗತ್ತಿನ ಅನೇಕ ಸಮಸ್ಯೆಗಳಿಗೆ ಕಾರಣ ಹಸಿವಿನ ನೋವು ಗೊತ್ತಿಲ್ಲದೇ ಇರುವುದು. ಅಧರ್ಮ, ಅನೀತಿಗಳಿಗೆ ಪ್ರಮುಖ ಕಾರಣಗಳಲ್ಲೊಂದು ಹೊಟ್ಟೆ ತುಂಬಿರುವುದೇ ಆಗಿದೆ. ಹಸಿವಿನ ಮಹತ್ವ ಗೊತ್ತಾದರೆ ಮನುಷ್ಯ ತನ್ನಿಂತಾನೇ ತನ್ನ ಸೃಷ್ಟಿಕರ್ತನ ಬಗ್ಗೆ ಚಿಂತಿಸುತ್ತಾನೆ. ಅಷ್ಟೇ ಏಕೆ ತನ್ನ ಜೊತೆಗಿರುವ ಬಡವರ ಬಗ್ಗೆಯೂ ಆಲೋಚಿಸುವಂತಾಗುತ್ತಾನೆ. ಈ ನಿಟ್ಟಿನಲ್ಲಿ ಇಸ್ಲಾಂನಲ್ಲಿರುವ ಉಪವಾಸ ಬಹಳ ಮಹತ್ವಪೂರ್ಣವಾಗಿದೆ. ರಮಝಾನ್ ಉಪವಾಸವು ಬಡವರ ನೋವನ್ನು ಅರ್ಥೈಸುವ ಶಕ್ತಿಯನ್ನು ನೀಡುತ್ತದೆ. ಶ್ರೀಮಂತರು ಹಾಗೂ ಬಡವರೆಲ್ಲರಿಗೂ ಉಪವಾಸ ಕಡ್ಡಾಯವಾಗಿರುವುದರಿಂದ ಪರಸ್ಪರ ತಾರತಮ್ಯವನ್ನು ಹೋಗಲಾಡಿಸುತ್ತದೆ.

ಜಗತ್ತಿನ ಒಂದು ಭಾಗದ ಜನರು ಇಂದಿಗೂ ಹಸಿವು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿನ ಜನರು ಶುಶ್ರೂಷೆ ಇಲ್ಲದೇ ಅನಾರೋಗ್ಯ ಪೀಡಿತರಾಗಿ ಸಾವುಬದುಕಿನ ಹೋರಾಟ ನಡೆಸುತ್ತಿದ್ದಾರೆ. ಆದರೆ ಹಸಿವು ಮುಕ್ತ ದೇಶಗಳು ಸದಾ ಯುದ್ಧೋನ್ಮಾದದಲ್ಲಿದೆ. ಯಾರು ಹಿಂಸಾಪ್ರಿಯರೋ ಅವರು ಉಪವಾಸವನ್ನು ಆಚರಿಸಿದಲ್ಲಿ ಅವರಿಗೆ ಹಸಿವಿನ ಸಂಕಟದ ಅನುಭವ ಖಂಡಿತಾ ಆಗುತ್ತದೆ. ರಮಝಾನ್ ಆರಂಭವಾದ ಹಿನ್ನೆಲೆಯಲ್ಲಿ ಉಪವಾಸದ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾನು ಹುಡುಕುತ್ತಿದ್ದಾಗ "ಮಧುಪ್ರಪಂಚ" ಎಂಬ ಪತ್ರಿಕೆ ಕಣ್ಣಿಗೆ ಬಿತ್ತು. ಅದರಲ್ಲಿನ ಒಂದು ವಾಕ್ಯ ನನ್ನನ್ನು ಬಹಳ ಸೆಳೆಯಿತು. ಪ್ರವಾದಿ (ಸ.ಅ.) ರ ನುಡಿ ಪ್ರಕಾರ ಅಲ್ಲಾಹನು ಹೇಳುತ್ತಾನೆ, "ಆದಮನ ಮಕ್ಕಳ ಎಲ್ಲಾ ಕ್ರಿಯೆಗಳು ಅವರಿಗಾಗಿಯೇ ಇದೆ. ಆದರೆ ಉಪವಾಸ ನನಗೆ ಸಂಬಂಧಿಸಿದ್ದಾಗಿದೆ ಮತ್ತು ನಾನೇ ಅದರ ಪ್ರತಿಫಲ ನೀಡುವೆ. ಹಾಗಿರುವಾಗ ಅಲ್ಲಾಹು ಉಪವಾಸಕ್ಕೆ ತಕ್ಕ ಪ್ರತಿಫಲವನ್ನು ಖಂಡಿತವಾಗಿ ನೀಡಿ, ಆತನ ಉಪವಾಸವನ್ನು ತನ್ನದಾಗಿಸಿಕೊಂಡಿದ್ದಾನೆ". ಇದು ಉಪವಾಸದ ಮಹತ್ವವನ್ನು ತೋರಿಸುತ್ತದೆ. ಹಾಗೂ ಮುಸ್ಲಿಮರು ಅಲ್ಲಾಹನಿಗೆ ಋಣಿಯಾಗಿರಲು ಸಹಕಾರಿಯಾಗಿದೆ.

-ಎಂ. ಬಾಲಕೃಷ್ಣ ನಾಯಕ್, ಮೂಡುಬಿದಿರೆ, (ನಿವೃತ್ತ ಅಂಚೆ ವಿತರಕ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News