×
Ad

ಚಂಡಮಾರುತ: ರೊಹಿಂಗ್ಯರ ಶಿಬಿರಗಳು ಧ್ವಂಸ

Update: 2017-05-31 23:55 IST

ಢಾಕಾ, ಮೇ 31: ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುತವು ರೊಹಿಂಗ್ಯ ನಿರಾಶ್ರಿತರ ಬದುಕನ್ನು ಛಿದ್ರಗೊಳಿಸಿದೆ. ಒಂದು ರಾತ್ರಿಯನ್ನು ಮಳೆಯಲ್ಲೇ ಕಳೆದ ಬಳಿಕ, ಬುಧವಾರ ತಾವು ವಾಸಿಸುತ್ತಿದ್ದ ಶಿಬಿರಗಳ ಅವಶೇಷಗಳ ನಡುವೆ ಅವರು ಪರಿಹಾರಕ್ಕಾಗಿ ಹತಾಶೆಯಿಂದ ಕಾಯುತ್ತಿದ್ದಾರೆ.

‘ಮೊರ’ ಚಂಡಮಾರುತಕ್ಕೆ ಕನಿಷ್ಠ ಏಳು ಮಂದಿ ಬಲಿಯಾಗಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ ಎಂದು ಕಾಕ್ಸ್ ಬಝಾರ್ ಜಿಲ್ಲೆಯ ಮುಖ್ಯ ಆಡಳಿತಾಧಿಕಾರಿ ಮುಹಮ್ಮದ್ ಅಲಿ ಹುಸೇನ್ ತಿಳಿಸಿದರು.

ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನ ಗಡಿಭಾಗ ಚಂಡಮಾರುತದ ಪ್ರಕೋಪದ ಹೆಚ್ಚಿನ ಪರಿಣಾಮಕ್ಕೆ ಗುರಿಯಾಗಿದೆ. ಇದೇ ಸ್ಥಳದಲ್ಲಿ ರೊಹಿಂಗ್ಯ ಮುಸ್ಲಿಮರ ನಿರಾಶ್ರಿತ ಶಿಬಿರಗಳಿವೆ. ಮ್ಯಾನ್ಮಾರ್ ಸೇನೆಯ ದಬ್ಬಾಳಿಕೆ ಮತ್ತು ಕೋಮು ಹಿಂಸಾಚಾರಕ್ಕೆ ಬೆದರಿ ವಾಯುವ್ಯ ಮ್ಯಾನ್ಮಾರ್‌ನಲ್ಲಿರುವ ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿರುವ ರೊಹಿಂಗ್ಯ ಮುಸ್ಲಿಮರು ಇಲ್ಲಿ ನೆಲೆಸಿದ್ದಾರೆ.

 ‘‘ರೊಹಿಂಗ್ಯ ನಿರಾಶ್ರಿತರಿಗೆ ಆಶ್ರಯ ನೀಡಿರುವ ಶಿಬಿರಗಳಿಗೆ ತೀವ್ರ ಹಾನಿಯಾಗಿದೆ. ಹಾನಿಯ ಪ್ರಮಾಣ ಕಾಕ್ಸ್ ಬಝಾರ್‌ನ ಬಲುಖಾಲಿ ಮತ್ತು ಶಾಮ್ಲಾಪುರ್‌ಗಳಲ್ಲಿ ಅಧಿಕವಾಗಿದೆ’’ ಎಂದು ವಿಶ್ವಸಂಸ್ಥೆಯ ಬಾಂಗ್ಲಾದೇಶ ಸ್ಥಾನಿಕ ಸಮನ್ವಯಕಾರರ ಕಚೇರಿ ವರದಿಯೊಂದರಲ್ಲಿ ತಿಳಿಸಿದೆ.

‘‘ಈಗಾಗಲೇ ಜಗತ್ತಿನ ಅತ್ಯಂತ ಅಪಾಯಕ್ಕೆ ಈಡಾಗಿರುವ ಜನಾಂಗಗಳ ಪೈಕಿ ಒಂದಾಗಿರುವ ರೊಹಿಂಗ್ಯ ಮುಸ್ಲಿಮರು ಈಗ ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾರೆ’’ ಎಂದು ವಾಶಿಂಗ್ಟನ್‌ನಲ್ಲಿ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯೊಂದರಲ್ಲಿ ಮಾನವಹಕ್ಕುಗಳ ವಕೀಲ ಡೇನಿಯಲ್ ಸಲಿವನ್ ಹೇಳಿದ್ದಾರೆ.

 ‘‘ಮಣ್ಣು ಮತ್ತು ಟಾರ್ಪಾಲಿನ್‌ನಿಂದ ನಿರ್ಮಿಸಲ್ಪಟ್ಟಿರುವ ಅವರ ಗುಡಿಸಲುಗಳು ಚಂಡಮಾರುತದಲ್ಲಿ ಕೊಚ್ಚಿಕೊಂಡು ಹೋಗಿವೆ. ಇದಕ್ಕೆ ತುರ್ತಾಗಿ ಪ್ರತಿಕ್ರಿಯಿಸಬೇಕಾದ ಅಗತ್ಯವಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News