ನೋಟು ರದ್ದತಿಯ ಪರಿಣಾಮ: ಭಾರತದ ಅಗ್ರಸ್ಥಾನ ಕಿತ್ತುಕೊಂಡ ಚೀನಾ!
ಹೊಸದಿಲ್ಲಿ, ಜೂ.1: ನೋಟು ರದ್ದತಿಯಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳಿಗೆ ತೀವ್ರ ಹೊಡೆತ ಬಿದ್ದಿದ್ದು, ಭಾರತ, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೂ ಇದೀಗ ಕುತ್ತು ಬಂದಿದೆ. ಮಾರ್ಚ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತ ಆರ್ಥಿಕತೆಯ ಪ್ರಗತಿದರ ಶೇಕಡ 6.1ಕ್ಕೆ ಕುಸಿದಿದ್ದು, 2016-17ರ ಪ್ರಗತಿದರ 7.1ಕ್ಕೆ ಕುಸಿದಿದೆ. ಇದು ಮೂರು ವರ್ಷಗಳಲ್ಲೇ ಕನಿಷ್ಠ. ಭಾರತದ ಅಗ್ರಸ್ಥಾನವನ್ನು ಕಿತ್ತುಕೊಂಡಿರುವ ಚೀನಾ, ಇದೀಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಅರ್ಥಿಕತೆ ಎಂಬ ಹೆಗ್ಗಳಿಕೆ ಪಡೆದಿದೆ.
ಉತ್ಪಾದನಾ ಮತ್ತು ಸೇವಾ ವಲಯದ ಸಾಧನೆ ಕುಸಿತವಾಗಿರುವುದು ಭಾರತದ ಒಟ್ಟಾರೆ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಮೋದಿ ಸರ್ಕಾರ ಮೂರನೇ ವರ್ಷದ ಸಂಭ್ರಮಾಚರಣೆಯಲ್ಲಿರುವಾಗಲೇ ಈ ಅಂಶ ಬಹಿರಂಗವಾಗಿದೆ. 2016-17ರಲ್ಲಿ ದಾಖಲಾದ ಪ್ರಗತಿದರ ಹಿಂದಿನ ಎರಡು ವರ್ಷಗಳಿಗಿಂತ ಕಡಿಮೆ. 2015-16ರಲ್ಲಿ ಶೇಕಡ 8 ಹಾಗೂ ಅದಕ್ಕೂ ಹಿಂದಿನ ವರ್ಷ ಶೇಕಡ 7.5ರಷ್ಟು ಪ್ರಗತಿದರ ದಾಖಲಾಗಿತ್ತು.
2017ರ ಜನವರಿ- ಮಾರ್ಚ್ ಅವಧಿಯಲ್ಲಿ ಚೀನಾ ಶೇಕಡ 6.8ರಷ್ಟು ಪ್ರಗತಿ ಸಾಧಿಸಿದೆ. 2015ರಲ್ಲಿ ಮೊದಲ ಬಾರಿಗೆ ಭಾರತ ಚೀನಾವನ್ನು ಮೀರಿಸುವ ಸಾಧನೆ ಮಾಡಿತ್ತು. ಇದೀಗ ಚೀನಾ ತನ್ನ ಅಗ್ರಸ್ಥಾನವನ್ನು ಮತ್ತೆ ಕಿತ್ತುಕೊಂಡಂತಾಗಿದೆ.
ಸಾಮಾನ್ಯ ಅಂಕಿ ಅಂಶಗಳ ಕಚೇರಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2015-16ರಲ್ಲಿ 8.7ರಷ್ಟಿದ್ದ ಒಟ್ಟಾರೆ ಮೌಲ್ಯವರ್ಧನೆ (ಜಿವಿಎ) ಪ್ರಮಾಣ ಕೊನೆಯ ತ್ರೈಮಾಸಿಕದಲ್ಲಿ ಶೇಕಡ 5.6ಕ್ಕೆ ಕುಸಿದಿದೆ. ಇಡೀ ವರ್ಷದಲ್ಲಿ ಜಿವಿಎ ಪ್ರಮಣ ಶೇಕಡ 6.6 ಆಗಿದ್ದು, ಹಿಂದಿನ ವರ್ಷ ಈ ಪ್ರಮಾಣ ಶೇಕಡ 7.9 ಆಗಿತ್ತು. 2016ರ ಮಾರ್ಚ್‌ನಿಂದ ನಿರಂತರವಾಗಿ 5 ತ್ರೈಮಾಸಿಕಗಳಲ್ಲಿ ಜಿವಿಎ ಪ್ರಮಾಣ ಕುಸಿತ ಕಂಡಿದೆ.
2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ, ಅಂದು ಚಲಾವಣೆಯಲ್ಲಿದ್ದ ಶೇಕಡ 87ರಷ್ಟು ನೋಟುಗಳನ್ನು ರದ್ದುಪಡಿಸಿದ್ದರಿಂದ, ದೇಶದಲ್ಲಿ ನಗದು ಕೊರತೆ ತೀವ್ರವಾಗಿ, ಅರ್ಥಿಕ ಚಟುವಟಿಕೆಗಳು ಅಸ್ತವ್ಯಸ್ತವಾಗಿದ್ದವು.