ಅಸ್ಸಾಂ ಬೋರ್ಡ್ ಪರೀಕ್ಷೆ: ಟ್ರಕ್ ಚಾಲಕನ ಮಗ ನೂರುಲ್ ಹಕ್ ರಾಜ್ಯಕ್ಕೇ ದ್ವಿತೀಯ
ಗುವಾಹತಿ, ಜೂ.1: ಅಸ್ಸಾಂ ಶಿಕ್ಷಣ ಮಂಡಳಿ ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಟ್ರಕ್ ಚಾಲಕನ ಮಗ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾನೆ.
ಪಶ್ಚಿಮ ಅಸ್ಸಾಂನ ನಲ್ಬರಿ ಜಿಲ್ಲೆ ಮುಕಲ್ಮುವಾ ಎಂಬಲ್ಲಿನ ಸರ್ಕಾರಿ ರಘುನಾಥ್ ಚೌಧರಿ ಹೈಸ್ಕೂಲ್‌ನ ವಿದ್ಯಾರ್ಥಿ ನೂರುಲ್ ಹಕ್ 600 ಅಂಕಗಳ ಪೈಕಿ 588 ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದಾನೆ. ಇದೇ ಜಿಲ್ಲೆಯ ತಿಹು ಜೈತಿಯಾ ವಿದ್ಯಾಲಯದ ಪಾರ್ಥಪ್ರತಿಮ್ ಭೂಯಾನ್ 589 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾನೆ.
ನೂರುಲ್ ಹಕ್ ತಂದೆ ಮುಸ್ತಫಾ ಅಲಿ ಅವರು ಸೆಕೆಂಡ್ ಹ್ಯಾಂಡ್ ಟ್ರಕ್‌ನಲ್ಲಿ ಸರಕು ಸಾಗಣೆ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. "ಆತ ನಾವು ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾನೆ. ತನ್ನ ಅಧ್ಯಯನದಲ್ಲಿ ಆತ ತೀರಾ ಪ್ರಾಮಾಣಿಕ; ಆತ ಅದ್ಭುತಗಳನ್ನು ಮಾಡುತ್ತಾನೆ ಎಂಬ ವಿಶ್ವಾಸ ನಮಗಿತ್ತು" ಎಂದು ಅಲಿ ಹೆಮ್ಮೆಯಿಂದ ನುಡಿದಿದ್ದಾರೆ. ಇವರ ಇಬ್ಬರು ಹೆಣ್ಣುಮಕ್ಕಳು ಮಾನವೀಯ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.
ತನ್ನ ಯಶಸ್ಸಿಗೆ ಕುಟುಂಬ ಹಾಗೂ ಶಿಕ್ಷಕರ ಮಾರ್ಗದರ್ಶನ ಕಾರಣ ಎಂದು ಹಕ್ ಹೇಳುತ್ತಾನೆ. "ತಂದೆ ತಾಯಿ, ಅಕ್ಕಂದಿರು ಹಾಗೂ ಶಿಕ್ಷಕರ ಪ್ರೀತಿ, ಆಶೀರ್ವಾದ ಮತ್ತು ಮಾರ್ಗದರ್ಶನ ಈ ಸಾಧನೆಗೆ ಕಾರಣ. ಆದರೆ ಇದು ಅಲ್ಪ ಯಶಸ್ಸು. 12ನೇ ತರಗತಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಬೇಕಾಗಿದೆ. ಆ ಬಳಿಕ ವೃತ್ತಿಯ ಬಗ್ಗೆ ಯೋಚಿಸುತ್ತೇನೆ" ಎಂದು ಹೇಳುತ್ತಾನೆ. ನೂರುಲ್ ಹಕ್ ಸಾಧನೆಯನ್ನು ಪ್ರಾಚಾರ್ಯ ಸುದರ್ಶನ್ ಪಾಠಕ್ ಕೂಡಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹಕ್ 13 ವರ್ಷಗಳ ಬಳಿಕ ನಮ್ಮ ಶಾಲೆ ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾನೆ. ಇದಕ್ಕೂ ಮುನ್ನ 1997 ಮತ್ತು 2004ರಲ್ಲಿ ನಮ್ಮ ವಿದ್ಯಾರ್ಥಿಗಳು ಅಗ್ರಸ್ಥಾನ ಗಳಿಸಿದ್ದರು ಎಂದು ಅವರು ಹೇಳಿದ್ದಾರೆ.