×
Ad

ಮಗುವಿನ ಓದಿಗಾಗಿ ಕಿಡ್ನಿ ಮಾರಲು ಮುಂದಾದ ಮಹಿಳೆ

Update: 2017-06-01 10:25 IST

ಆಗ್ರಾ, ಜೂ.1: ನಾಲ್ಕು ಮಕ್ಕಳ ಶಿಕ್ಷಣ ಶುಲ್ಕವನ್ನು ಭರಿಸಲು ಸಾಧ್ಯವಾಗದೇ, ಮಹಿಳೆಯೊಬ್ಬರು ಮಕ್ಕಳ ಶಾಲಾ ಶುಲ್ಕ ಪಾವತಿಸುವ ಸಲುವಾಗಿ ಕಿಡ್ನಿ ಮಾರಾಟ ಮಾಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ರೋಹ್ಟಾದ ಇಕೋ ಕಾಲನಿಯಲ್ಲಿ 330 ಚದರ ಅಡಿಯ ಪುಟ್ಟ ಮನೆಯಲ್ಲಿ ಎಂಟು ಮಂದಿಯ ಕುಟುಂಬದ ಜತೆ ವಾಸವಿರುವ ಆರತಿ ಶರ್ಮಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರದಿಂದಾಗಿ ತಮ್ಮ ಜೀವನಾಧಾರವಾಗಿದ್ದ ಸಿದ್ಧ ಉಡುಪು ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದ್ದು, ಇದರಿಂದ ಬಡತನದ ಸುಳಿಗೆ ಸಿಲುಕಿದ್ದಾಗಿ ಶರ್ಮಾ ಹೇಳಿಕೊಂಡಿದ್ದಾರೆ.

"ಇದೀಗ ನನಗೆ ಮೂವರು ಹೆಣ್ಣುಮಕ್ಕಳೂ ಸೇರಿ ನಾಲ್ಕು ಮಕ್ಕಳ ಫೀ ತುಂಬುವ ಚೈತನ್ಯ ಇಲ್ಲ. ಈ ಕಾರಣದಿಂದ ಅವರು ಹೊಸ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಹೋಗಿಲ್ಲ. ಆದ್ದರಿಂದ ಅವರ ಶಿಕ್ಷಣ ಮುಂದುವರಿಸುವ ಸಲುವಾಗಿ ಕಿಡ್ನಿ ಮಾರಾಟಕ್ಕೂ ಸಿದ್ಧ" ಎಂದು ಹೇಳಿದ್ದಾರೆ.

2016ರ ಆಗಸ್ಟ್‌ನಲ್ಲಿ ಇತರ ಸ್ಥಳೀಯರ ನೆರವಿನೊಂದಿಗೆ 11 ಬಡ ಹೆಣ್ಣುಮಕ್ಕಳ ವಿವಾಹ ಮಾಡಿದ್ದನ್ನು ನೆನಪಿಸಿಕೊಂಡಿರುವ ಅವರು, ಅಗತ್ಯದ ಸಂದರ್ಭದಲ್ಲಿ ನಮಗೆ ನೆರವಿನ ಹಸ್ತ ಚಾಚಲು ಜಿಲ್ಲಾಡಳಿತ ಕೂಡಾ ನಿರಾಕರಿಸಿದೆ. ಲಕ್ನೋಗೆ ತೆರಳಿ ಮುಖ್ಯಮಂತ್ರಿಯನ್ನು ಭೇಟಿಯಾಗಲು ಹಣ ಹೊಂದಿಸಲು ಎಲ್‌ಪಿಜಿ ಸಿಲಿಂಡರನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬೇಕಾಯಿತು. ಎಪ್ರಿಲ್ 29ರಂದು ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ ಅವರು ನೆರವಿನ ಭರವಸೆ ನೀಡಿದ್ದಾರೆ. ಅದರೆ ಇದುವರೆಗೂ ನೆರವು ಸಿಕ್ಕಿಲ್ಲ ಎಂದು ವಿವರಿಸಿದ್ದಾರೆ.

ಈ ಕಾರಣದಿಂದ ಕಿಡ್ನಿ ಮಾರಾಟ ಮಾಡಲು ಪತ್ನಿ ಮುಂದಾಗಿದ್ದಾಳೆ ಎಂದು ಪತಿ ಮನೋಜ್ ಶರ್ಮಾ ಹೇಳಿದ್ದಾರೆ. ಕಾರು ಚಾಲಕರಾಗಿ ದುಡಿಯುವ ಶರ್ಮಾ ತಿಂಗಳಿಗೆ 4ರಿಂದ 5 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮನೆ ಬಾಡಿಗೆ ನೀಡದ ಕಾರಣಕ್ಕೆ ಮನೆಯ ಮಾಲಕ ಕೂಡಾ ಮನೆಯಿಂದ ಹೊರಗಟ್ಟುವ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News