ನೋಟು ರದ್ದತಿಯ ಪರಿಣಾಮ: ಎಂಟು ಪ್ರಮುಖ ಕ್ಷೇತ್ರಗಳ ಬೆಳವಣಿಗೆಯಲ್ಲಿ ಭಾರೀ ಕುಸಿತ
ಹೊಸದಿಲ್ಲಿ, ಜೂ.1: ಕಳೆದ ವರ್ಷದ ನೋಟು ಅಮಾನ್ಯೀಕರಣ ನೀತಿಯಿಂದ ದೇಶಕ್ಕೆ ಹಲವು ರೀತಿಯಲ್ಲಿ ಲಾಭವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ ಇದೀಗ ಸರ್ಕಾರಿ ಅಂಕಿಅಂಶಗಳೇ ಹೇಳುವಂತೆ ಕಲ್ಲಿದ್ದಲು, ಕಚ್ಛಾ ತೈಲ ಹಾಗೂ ಸಿಮೆಂಟ್ ಉತ್ಪಾದನೆ ಕುಂಠಿತಗೊಂಡಿವೆ. ಇದರಿಂದ ದೇಶದ ಎಂಟು ಪ್ರಮುಖ ಕ್ಷೇತ್ರಗಳ ಬೆಳವಣಿಗೆಯು ಎಪ್ರಿಲ್ ತಿಂಗಳಲ್ಲಿ ಶೇ.2.5ರಷ್ಟು ಕುಸಿತ ಕಂಡಿದೆ.
ಎಂಟು ಪ್ರಮುಖ ಕ್ಷೇತ್ರಗಳಾದ ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಹಾಗೂ ವಿದ್ಯುತ್ - ಇವುಗಳು ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಶೇ.8.7ರಷು ಪ್ರಗತಿ ದಾಖಲಿಸಿದ್ದವು. ಆದರೆ ಬುಧವಾರ ಬಿಡುಗಡೆಗೊಳಿಸಲಾದ ಸರ್ಕಾರಿ ಮಾಹಿತಿ ಪ್ರಕಾರ ಕಲ್ಲಿದ್ದಲು, ಕಚ್ಛಾ ತೈಲ ಹಾಗೂ ಸಿಮೆಂಟ್ ಉತ್ಪಾದನೆಯಲ್ಲಿ ಕ್ರಮವಾಗಿ ಶೇ.3.8, ಶೇ.0.6 ಹಾಗೂ ಶೇ.3.7 ಕುಸಿತ ದಾಖಲಾಗಿದೆ.
ಈ ಕ್ಷೇತ್ರಗಳ ಬೆಳವಣಿಗೆಯಲ್ಲಿನ ಕುಸಿತ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಮೇಲೂ ಪರಿಣಾಮ ಬೀರಲಿದ್ದು, ಒಟ್ಟು ಉತ್ಪಾದನೆಯ ಶೇ.41ರಷ್ಟು ಈ ಕ್ಷೇತ್ರಗಳಿಂದ ಬರುವುದೇ ಇದಕ್ಕೆ ಕಾರಣ.
ರಿಫೈನರಿ ಉತ್ಪನ್ನಗಳು ಹಾಗೂ ವಿದ್ಯುತ್ ಕ್ಷೇತ್ರದ ಬೆಳವಣಿಗೆಯಲ್ಲಿ ಎಪ್ರಿಲ್ ತಿಂಗಳಲ್ಲಿ ಶೇ.0.2 ಹಾಗೂ ಶೇ. 4.7ರಷ್ಟು ಕುಸಿತ ಕಂಡಿದ್ದರೆ ನೈಸರ್ಗಿಕ ಅನಿಲ, ರಸಗೊಬ್ಬರ ಮತ್ತು ಉಕ್ಕು ಕ್ಷೇತ್ರಗಳಲ್ಲಿ ಶೇ.2, ಶೇ.6.2 ಹಾಗೂ ಶೇ.9.3ರಷ್ಟು ಪ್ರಗತಿ ದಾಖಲಾಗಿದೆ.
ನೋಟು ಅಮಾನ್ಯೀಕರಣದಿಂದಾಗಿ ದೇಶದ ಜಿಡಿಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಾಗಿ ಕಳೆದ ವರ್ಷವೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಎಚ್ಚರಿಕೆ ನೀಡಿದ್ದನ್ನು ಹಾಗೂ ಜಿಡಿಪಿ ಶೇ.2ರಷ್ಟು ಕುಸಿಯಬಹುದೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.