ಯುಎಸ್ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಆದ ಅನನ್ಯಾ

Update: 2017-06-02 10:03 GMT

ಹೊಸದಿಲ್ಲಿ, ಜೂ.2: ಭಾರತೀಯ ಮೂಲದ ಬಾಲಕಿ ಅನನ್ಯಾ ವಿನಯ್ 90ನೇ ಯುಎಸ್ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಗುರುವಾರ ವಿಜಯಿಯಾಗಿ 40,000 ಡಾಲರ್ ನಗದು ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಅನನ್ಯಾ ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದಾಳೆ. 2013ರಿಂದೀಚೆಗೆ ಇದೇ ಮೊದಲ ಬಾರಿಯೆಂಬಂತೆ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಏಕೈಕ ಚಾಂಪಿಯನ್ ಘೋಷಿಸಲ್ಪಟ್ಟಿದ್ದಾರೆ. ಸಾಮಾನ್ಯವಾಗಿ ಅಂತಿಮ ಹಣಾಹಣಿ ಟೈ ಆಗುತ್ತಿತ್ತು.

ಅನನ್ಯಾ ಈ ಸ್ಪರ್ಧೆಯನ್ನು ಗೆದ್ದಿರುವ 13ನೇ ಭಾರತೀಯ-ಅಮೆರಿಕನ್ ಆಗಿದ್ದಾಳೆ. ಫ್ರೆಸ್ನೊ ದಲ್ಲಿ ಆರನೇ ಗ್ರೇಡ್ ವಿದ್ಯಾರ್ಥಿನಿಯಾಗಿರುವ ಅನನ್ಯಾ ಸ್ಪರ್ಧೆಯನ್ನು ‘ಮರೊಕೈನ್’ ಎಂಬ ಪದದ ಸ್ಪೆಲ್ಲಿಂಗ್ ಹೇಳುವ ಮೂಲಕ ಗೆದ್ದಿದ್ದಾಳೆ. ಇದೊಂದು ಫ್ರೆಂಚ್ ಮೂಲದ ಪದವಾಗಿದ್ದು, ರಿಬ್ಬ್ಡ್ ಕ್ರೇಪ್ ನಿಂದ ಮಾಡಲ್ಪಟ್ಟ ಬಟ್ಟೆ ಎಂಬ ಅರ್ಥ ನೀಡುತ್ತದೆ.

ಸ್ಪರ್ಧೆ ವಾಷಿಂಗ್ಟನ್ ನಗರದ ಗೇಲಾರ್ಡ್ ನ್ಯಾಷನಲ್ ರಿಸಾರ್ಟ್ ಆ್ಯಂಡ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದಿತ್ತು. ಅನನ್ಯಾ 12 ಗಂಟೆಗಳ ಕಾಲ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮರೊಕೈ ಹೊರತಾಗಿ ಗಿಫ್ಬ್ಲಾರ್, ವೇಗೂರ್, ಗೆಸಿತ್, ಗರ್ಗೊಲ್ಲೇಡ್ ಮುಂತಾದ ಪದಗಳ ಸ್ಪೆಲ್ಲಿಂಗ್ ಕೂಡ ಹೇಳುವಲ್ಲಿ ಸಫಲಳಾಗಿದ್ದಾಳೆ.

ಈ ಸ್ಪರ್ಧೆಯ ರನ್ನರ್-ಅಪ್ ಆಗಿರುವ ರೋಹನ್ ರಾಜೀವ್ ಗೆ ಮರ್ರಂ ಎಂಬ ಸ್ಕ್ಯಾಂಡಿನೇವಿಯಾ ಮೂಲದ ಪದದ ಸ್ಪೆಲ್ಲಿಂಗ್ ಹೇಳಲು ಸಾಧ್ಯವಾಗಿಲ್ಲ.

ಅನನ್ಯಾ ವಿನಯ್ ಈ ಹಿಂದೆ ಕ್ಯಾಲಿಫೋರ್ನಿಯಾ ಸ್ಟೇಟ್ ಎಲಿಮೆಂಟರಿ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಮೂರು ಬಾರಿ ಗೆದ್ದಿದ್ದಾಳೆ. ಒಟ್ಟು 291 ಮಂದಿ ಈ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಪೈಕಿ 15 ಮಂದಿ ಅಂತಿಮ ಹಣಾಹಣಿಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News