ಮಾವನ ರಮಝಾನ್ ತಿಂಗಳ ಉಪವಾಸದ ಗುಟ್ಟು ಪ್ರೌಢತೆಗೆ ಬಂದಾಗ ತಿಳಿಯಿತು
"ನಾನಾಗ ಸಣ್ಣವ. ಬುದ್ಧಿ ಅಷ್ಟೊಂದು ಬಲಿತಿರಲಿಲ್ಲ. ಆದರೆ ಮುಸ್ಲಿಮರು ಒಂದು ತಿಂಗಳು ಉಪವಾಸ ಹಿಡಿಯುತ್ತಾರೆ ಎನ್ನುವುದು ತಿಳಿದಿತ್ತು. ಆ ಸಮಯದಲ್ಲಿ ನನ್ನ ಹಿರಿಯ ಮಾವ ರಮಝಾನ್ ತಿಂಗಳಲ್ಲಿ ಮುಸ್ಲಿಮರಂತೆ ಉಪವಾಸ ಹಿಡಿಯುತ್ತಿದ್ದರು. ಈಗಲೂ ಅದನ್ನು ಅವರು ಮುಂದುವರಿಸಿಕೊಂಡು ಬಂದಿದ್ದಾರೆ. ಮಾವ ಉಪವಾಸ ಹಿಡಿಯುವುದನ್ನು ಕಂಡು ನಾನು, ನನ್ನಂತಹ ಇತರ ಮಕ್ಕಳು ಸೇರಿ ತಮಾಷೆ ಮಾಡುತ್ತಿದ್ದೆವು. ಆದರೆ ನಾವು ಪ್ರೌಢತೆಗೆ ಬಂದಾಗ ಉಪವಾಸದ ಗುಟ್ಟು ನಮಗೆ ಮನವರಿಕೆಯಾಯಿತು". ಉಪವಾಸ ಎಂಬುದು ಯಾವುದೇ ಒಂದು ಧರ್ಮದ ನಿಯಮವಲ್ಲ. ಇದು ಮಾನಸಿಕ, ಶಾರೀರಿಕವಲ್ಲದೆ ಸಾಮಾಜಿಕ ಆರೋಗ್ಯದ ಗುಟ್ಟು. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ನಮ್ಮ ಹಿರಿಯರಾಗಲಿ, ವೈದ್ಯರಾಗಲಿ "ಉಪವಾಸ ಹಿಡಿ" ಎಂದು ಹೇಳಿದರೆ ಅದನ್ನು ಕೇಳುವವರು ನಾವಲ್ಲ. ಅದಕ್ಕೊಂದು ಧಾರ್ಮಿಕ ರೂಪಕೊಟ್ಟು ಧರ್ಮದ ಕರ್ಮ ಎನ್ನುವ ಕಟ್ಟಳೆಯನ್ನು ನೀಡಿ ಸುಮ್ಮನಾಗುತ್ತಿದ್ದೆವೋ ಏನೋ?. ಉಪವಾಸ ಎಲ್ಲ ಧರ್ಮಗಳಲ್ಲೂ ಇದೆ. ಕೆಲವು ಧರ್ಮಗಳಲ್ಲಿ ಒಂದು ತಿಂಗಳು ಉಪವಾಸ ಹಿಡಿಯುವುದಾದರೆ, ಇನ್ನು ಕೆಲವು ಧರ್ಮಗಳಲ್ಲಿ ಒಂದು ದಿನ, ಒಂದು ವಾರ ಉಪವಾಸದ ಕ್ರಮಗಳೂ ಇದೆ. ಒಟ್ಟಾರೆ ನಂಬಿಕೆಯ ಆಧಾರದಲ್ಲಿ ಆರೋಗ್ಯದ ಕಾಳಜಿಯೇ ಉಪವಾಸ. ಇಂದು ಸಮಾಜದಲ್ಲಿ ಆರೋಗ್ಯವಂತರಿಗಿಂತ ಅನಾರೋಗ್ಯ ಹೊಂದಿರುವ ಜನರೇ ಹೆಚ್ಚಿರುವುದು ಸತ್ಯ. ಈ ಮಧ್ಯೆ ಹನ್ನೆರಡರಿಂದ ಹದಿನಾಲ್ಕು ಗಂಟೆ ಹೊಟ್ಟೆಗೆ ನೀರು, ಆಹಾರವಿಲ್ಲದೆ ಇರಲು ತುಂಬಾ ಕಷ್ಟವೂ ಹೌದು. ಹೊಟ್ಟೆ ಖಾಲಿಯಾದಾಗ ನಿತ್ರಾಣ, ರಕ್ತದೊತ್ತಡ, ಮಧುಮೇಹದಲ್ಲಿ ಏರುಪೇರು ಸಹಜ. ಆದರೂ ಮುಸ್ಲಿಮರು ದೇಹ ದಂಡಿಸಿ ಉಪವಾಸ ಹಿಡಿದು ದೇವರ ನಂಬಿಕೆಯಲ್ಲಿ ಆರೋಗ್ಯ ಕಾಯುತ್ತಿರುವುದು ಉತ್ತಮ ಕಾರ್ಯ. ವರ್ಷದ ಒಂದು ತಿಂಗಳು ಉಪವಾಸ ಹಿಡಿದು ಉಳಿದ ಹನ್ನೊಂದು ತಿಂಗಳು ಆಹಾರ ಸೇವನೆಯಲ್ಲಿ ಶಿಸ್ತು ಇಲ್ಲದಿದ್ದರೆ ಆರೋಗ್ಯಕ್ಕೆ ಹಿತ ಹೇಗೆ ಸಾಧ್ಯ. ಪ್ರಕೃತಿ ವಿರುದ್ಧವಾದ ಆಹಾರ ಸೇವನೆ, ಸಮಯ ಮೀರಿ ಆಹಾರ ಸೇವನೆ, ಆರೋಗ್ಯಕ್ಕೆ ಒಪ್ಪದ ಪಾನೀಯ, ಪದಾರ್ಥ ತಿನ್ನುವುದರಿಂದ ಉಪವಾಸ ವ್ಯರ್ಥವಾದೀತು. ಪವಿತ್ರ ರಮಝಾನ್ ಮಾಸದ ಈ ಉಪವಾಸ ಕೇವಲ ದೇಹ ದಂಡನೆಯಾಗದೆ ಮನಸ್ಸು, ದೇಹ ಮತ್ತು ನಂಬಿಕೆಯ ಕೊಂಡಿಯಾಗಬೇಕು. ಉಪವಾಸದಿಂದ ದೇಹವನ್ನು ದಂಡಿಸುವುದರೊಂದಿಗೆ ಮನಸ್ಸನ್ನು ಆಸೆ, ದುರಾಸೆ, ಕಾಮ, ಕ್ರೋದ, ಮದ, ಮತ್ಸರಗಳಿಂದ ನಿಯಂತ್ರಿಸಿ, ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯ ಹೆಚ್ಚಿಸಬೇಕು. ಆಗ ಮಾತ್ರ ಉಪವಾಸದ ಪಾವಿತ್ರ್ಯತೆಗೆ ಅರ್ಥ ಬರುತ್ತದೆ. ಅದೇನೆ ಆಗಲಿ ನಮ್ಮ ಹಿರಿಯರು, ಸಂತರು, ಮಹಾ ಪುರುಷರು ಮಾಡಿದ, ಹೇಳಿದ ಕ್ರಮಗಳು ದೇವರ ನಂಬಿಕೆಯೊಂದಿಗೆ, ಭಕ್ತಿಯ ಜಾಗೃತಿಯೊಂದಿಗೆ ಆರೋಗ್ಯದ ಕಾಳಜಿಯ ಮಹತ್ವವನ್ನೂ ಸಾರಿದೆ ಎನ್ನುವುದು ಇಂದಿಗೂ ಪ್ರಸ್ತುತ -ಎಚ್.ಕೆ.ನಯನಾಡು, ರಂಗಕಲಾವಿದರು, ಬಂಟ್ವಾಳ