ರಾಂಚಿ ಬಳಿ ಕೋಮುಘರ್ಷಣೆ, 25 ಜನರಿಗೆ ಗಾಯ,93 ಜನರ ಸೆರೆ

Update: 2017-06-06 13:41 GMT

ರಾಂಚಿ(ಜಾರ್ಖಂಡ್),ಜೂ.6: ರಾಂಚಿ ಸಮೀಪದ ಸುಕುರ್ಹುಟ್ಟು ಗ್ರಾಮದಲ್ಲಿ ಸೋಮವಾರ ರಾತ್ರಿ ಗುಂಪೊಂದು ಮಹಿಳೆಯನ್ನು ಚುಡಾಯಿಸಿದ ಬಳಿಕ ಹಿಂದುಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆಗಳು ಭುಗಿಲೆದ್ದಿದ್ದು, ಎಂಟು ಪೊಲೀಸ್ ಅಧಿಕಾರಿಗಳು ಸೇರಿದಂತೆ 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಉಭಯ ಗುಂಪುಗಳೂ ಪರಸ್ಪರರತ್ತ ಕಲ್ಲು ತೂರಾಟ ನಡೆಸಿದ್ದು, ಮನೆಗಳಿಗೆ ಹಾನಿಯನ್ನುಂಟು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಉಭಯ ಕೋಮುಗಳಿಗೆ ಸೇರಿದ 93 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘರ್ಷಣೆಯ ಮಾಹಿತಿ ತಿಳಿದು ಕಂಕೆ ಠಾಣೆಯಿಂದ ಕೇವಲ 15 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದ ಬೆರಳೆಣಿಕೆ ಸಂಖ್ಯೆಯಲ್ಲಿದ್ದ ಪೊಲೀಸರ ಮೇಲೆ ದೊಣ್ಣೆ ಮತ್ತು ತಲವಾರುಗಳಿಂದ ಸಜ್ಜಿತರಾಗಿದ್ದ ದಂಗೆಕೋರರು ಹಲ್ಲೆ ನಡೆಸಿದ್ದಾರೆ. ಠಾಣಾಧಿಕಾರಿ ರಾಜೀವ ರಂಜನ್‌ಗೆ ಕಲ್ಲೇಟಿನಿಂದ ತಲೆಗೆ ತೀವ್ರ ಗಾಯವಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ 300ರಷ್ಟು ಹೆಚ್ಚುವರಿ ಪೊಲೀಸರನ್ನು ಗ್ರಾಮಕ್ಕೆ ರವಾನಿಸಲಾಗಿತ್ತು. ಗಲಭೆಕೋರರು ಪೊಲೀಸರ ವಾಹನಗಳನ್ನೂ ಜಖಂಗೊಳಿಸಿದ್ದಾರೆ. ಲಾಠಿ ಪ್ರಹಾರ ನಡೆಸಿದ ಬಳಿವಷ್ಟೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.

ಗಾಮದಲ್ಲಿ ಮಂಗಳವಾರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ರಾಂಚಿಯ ಎಸ್‌ಎಸ್‌ಪಿ ಕುಲ್ದೀಪ್ ದ್ವಿವೇದಿ ತಿಳಿಸಿದರು.

ಸೋಮವಾರ ರಾತ್ರಿ ಗ್ರಾಮದ ಕೆರೆಯಿಂದ ವಾಪಸಾಗುತ್ತಿದ್ದ ಮಹಿಳೆಯನ್ನು ಮಾದಕ ದ್ರವ್ಯ ಅಥವಾ ಮದ್ಯದ ನಶೆಯಲ್ಲಿತ್ತೆನ್ನಲಾದ ಗುಂಪೊಂದು ಚುಡಾಯಿಸಿದ್ದು ಘರ್ಷಣೆಗಳಿಗೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಸುಮಾರು ಎಂಟು ಪೊಲೀಸರು ಗಾಯಗೊಂಡಿದ್ದಾರೆ.

ಇತ್ತೀಚಿಗಷ್ಟೇ ಕೋಮು ಗಲಭೆ ನಡೆದಿದ್ದ ರಾಂಚಿ ಸಮೀಪದ ಬರ್ಗಾಯಿ ಈಗಷ್ಟೇ ಸಹಜಸ್ಥಿತಿಗೆ ಮರಳುತ್ತಿರುವಾಗಲೇ ಸುಕುರ್ಹುಟ್ಟು ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾ ಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News