ಮಿಶ್ರ ಡಬಲ್ಸ್:ಬೋಪಣ್ಣ ಜೋಡಿ ಸೆಮಿಫೈನಲ್‌ಗೆ

Update: 2017-06-06 18:08 GMT

ಪ್ಯಾರಿಸ್, ಜೂ.5: ರೋಹನ್ ಬೊಪಣ್ಣ ಹಾಗೂ ಅವರ ಕೆನಡಾದ ಜೊತೆಗಾರ್ತಿ ಗ್ಯಾಬಿಯೆಲಾ ಡಾಬ್ರೊಸ್ಕಿ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಸೋಮವಾರ ಇಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏಳನೆ ಶ್ರೇಯಾಂಕದ ಬೋಪಣ್ಣ-ಡಾಬ್ರೊಸ್ಕಿ ಜೋಡಿ ದ್ವಿತೀಯ ಶ್ರೇಯಾಂಕದ ಸಾನಿಯಾ ಮಿರ್ಝಾ ಹಾಗೂ ಇವಾನ್ ಡೊಡಿಗ್ ಜೋಡಿಯನ್ನು 52 ನಿಮಿಷಗಳ ಹೋರಾಟದಲ್ಲಿ 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಕೊಡಗಿನ ಕುವರ ಬೋಪಣ್ಣ ಫ್ರೆಂಚ್ ಓಪನ್ ಟೂರ್ನಮೆಂಟ್‌ನಲ್ಲಿ ಸ್ಪರ್ಧಾಕಣದಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಬೋಪಣ್ಣ ಈಗಾಗಲೇ ಪುರುಷರ ಡಬಲ್ಸ್ ವಿಭಾಗದಲ್ಲಿ ಸೋತಿದ್ದಾರೆ.

ಸೋಮವಾರ ನಡೆದ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸೋತಿರುವ ಸಾನಿಯಾರ ಫ್ರೆಂಚ್ ಓಪನ್ ಅಭಿಮಾನ ಕೊನೆಗೊಂಡಿದೆ. ಸಾನಿಯಾ ಅವರು ಕಝಕ್‌ನ ಜೊತೆಗಾರ್ತಿ ಯರೊಸ್ಲಾವಾ ಶ್ವೆಡೋವಾರೊಂದಿಗೆ ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲೇ ಸೋತಿದ್ದಾರೆ.

ಅಂತಿಮ-8ರ ಸುತ್ತಿಗೇರಿದ ಪ್ಲಿಸ್ಕೋವಾ

ಪ್ಯಾರಿಸ್, ಜೂ.6: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ವಿಶ್ವದ ನಂ.3ನೆ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 ಸೋಮವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪರಾಗ್ವೆಯ ವೆರೊನಿಕಾ ಸೆಪೆಡ್ ವಿರುದ್ಧ ಮೊದಲ ಸೆಟ್‌ನ್ನು 2-6 ರಿಂದ ಸೋತು ಆತಂಕಕ್ಕೀಡಾಗಿದ್ದ ಪ್ಲಿಸ್ಕೋವಾ ಆ ನಂತರ ಚೇತರಿಕೆಯ ಪ್ರದರ್ಶನ ನೀಡಿ ಉಳಿದೆರಡು ಸೆಟ್‌ಗಳನ್ನು 6-3, 6-4 ಅಂತರದಿಂದ ಗೆದ್ದುಕೊಂಡರು.

2016ರ ಅಮೆರಿಕನ್ ಓಪನ್ ರನ್ನರ್-ಅಪ್ ಆಗಿದ್ದ ಪ್ಲಿಸ್ಕೋವಾ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಫ್ರಾನ್ಸ್‌ನ ಕರೊಲಿನ್ ಗಾರ್ಸಿಯಾರನ್ನು ಎದುರಿಸಲಿದ್ದಾರೆ.

ವಾವ್ರಿಂಕ ಕ್ವಾರ್ಟರ್ ಫೈನಲ್‌ಗೆ

ಪ್ಯಾರಿಸ್,ಜೂ.6: ಸ್ವಿಸ್‌ನ ಸ್ಟಾನ್ ವಾವ್ರಿಂಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ವಾವ್ರಿಂಕ ಫ್ರಾನ್ಸ್‌ನ ಗೇಲ್ ಮಾನ್ಫಿಲ್ಸ್‌ರನ್ನು 7-5, 7-6(7), 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ವಾವ್ರಿಂಕ ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಷಿಯದ ಮರಿನ್ ಸಿಲಿಕ್‌ರನ್ನು ಎದುರಿಸಲಿದ್ದಾರೆ.

15ನೆ ಶ್ರೇಯಾಂಕದ ಮಾನ್ಫಿಲ್ಸ್ ಕೂಟದಿಂದ ನಿರ್ಗಮಿಸುವುದರೊಂದಿಗೆ 34 ವರ್ಷಗಳ ಬಳಿಕ ಫ್ರೆಂಚ್ ಆಟಗಾರ ಚಾಂಪಿಯನ್ ಆಗುವ ವಿಶ್ವಾಸವೂ ಕಮರಿಹೋಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News