ಅನಿವಾರ್ಯವಾದ ವಲಸೆ

Update: 2017-06-06 18:30 GMT

ನನ್ನ ಸಹೋದ್ಯೋಗಿ ಮಿತ್ರರೊಂದಿಗೆ ಕಾಟಿಪಳ್ಳದ ಕೃಷ್ಣಾಪುರಕ್ಕೆ ನಾವಿಬ್ಬರು ದಂಪತಿ ಖರೀದಿಸುವ ಮನೆ ಹಿತ್ತಲು ನೋಡಲು ಹೋದೆವು. ಮನೆ ಮಣ್ಣಿನ ಗೋಡೆಯದ್ದು, ಮಾಡು ಹಂಚಿನದ್ದು. ಹಿತ್ತಲು ಖಾಲಿ. ಮರಗಿಡ ಬಳ್ಳಿಗಳು ಏನೂ ಇರಲಿಲ್ಲ. ಅಂಗಳದ ಬಲ ಬದಿಗೆ ಎತ್ತರವಾದ ಗುಡ್ಡ ಇದ್ದು, ಬಲಬದಿಯ ನೆರೆಮನೆ ಆ ಗುಡ್ಡದ ಎತ್ತರದಲ್ಲೇ ಇತ್ತು. ಈ ಜಾಗವು ಅಷ್ಟೇ ಎತ್ತರದಲ್ಲಿದ್ದು ಮನೆ ಕಟ್ಟುವುದಕ್ಕಾಗಿ ಅಷ್ಟು ಜಾಗ ಗುಡ್ಡ ಅಗೆದು ಸಮತಟ್ಟು ಮಾಡಲಾಗಿತ್ತು ಅನಿಸುತ್ತಿತ್ತು. ಈ ಮನೆಯೂ ರಸ್ತೆಯಿಂದ ಏಳೆಂಟು ಮೆಟ್ಟಲು ಎತ್ತರದಲ್ಲಿತ್ತು. ನನಗೆ ಅದೇಕೋ ಎತ್ತರದ ಜಾಗ ಮನೆ ಎಂದರೆ ಇಷ್ಟ.

ಮನೆಯ ಎಡಬದಿಯ ಮುಖ್ಯರಸ್ತೆ ಮುಂದುವರಿದು ಹಾಗೆ ತಗ್ಗಿಗೆ ಸಾಗಿ ಸಮತಟ್ಟಾಗಿತ್ತು. ರಸ್ತೆಯ ಎಡಬದಿ ತಗ್ಗಿನಲ್ಲೇ ಇದ್ದು ಅಲ್ಲಿ ಮನೆಗಳು ಕೂಡಾ ತಗ್ಗಿನಲ್ಲಿಯೇ ಇದ್ದು ಅದು, ಎಡಬದಿಯ ಕಡೆಗೆ ಎತ್ತರಕ್ಕೆ ಹೋದಂತೆ ಅದು ಗುಡ್ಡವೇ ಆಗಿದ್ದರೂ ಅಲ್ಲಿಯೂ ಹೀಗೆ ಎಡ ಬಲಗಳಲ್ಲಿ ಮನೆಗಳು ಇದ್ದುವು. ಹೀಗೆ ಎಡ ಬಲಗಳಲ್ಲಿ ಎರಡೆರಡು ಸೈಟ್‌ಗಳಾದ ಬಳಿಕ ನಡುವೆ ಉದ್ದಕ್ಕೂ, ಅಡ್ಡಕ್ಕೂ ರಸ್ತೆಗಳು ಇದ್ದು, ಬೆಂಗಳೂರಿನ ಬಡಾವಣೆಗಳನ್ನು ನೆನಪಿಸುತ್ತಿತ್ತು. ರಸ್ತೆಯ ಉದ್ದಕ್ಕೂ ಬೀದಿ ದೀಪಗಳ ವ್ಯವಸ್ಥೆ ಇತ್ತು. ಅಲ್ಲಲ್ಲಿ ಸಾರ್ವಜನಿಕವಾದ ಬಾವಿಗಳೂ ಇತ್ತು. ಹಾಗೆಯೇ ಸಾರ್ವಜನಿಕ ನಳ್ಳಿಗಳೂ ಇದ್ದವು. ಮನೆಗಳಿಗೆ ನಳ್ಳಿ ನೀರಿನ ವ್ಯವಸ್ಥೆಯಿರಲಿಲ್ಲ. ಹಾಗೆಯೇ ಸುತ್ತಲಿನ ಒಂದೆರಡು ಮನೆಗಳಲ್ಲಿ ತೆರೆದ ಬಾವಿಗಳು ಇದ್ದುವು.

ಈ ಕಾಟಿಪಳ್ಳ ಪುನರ್ವಸತಿ ಬಡಾವಣೆಯ ಮುಖ್ಯ ರಸ್ತೆಗಳಲ್ಲಿ ಓಡಾಡುವುದಕ್ಕೆ ಸುರತ್ಕಲ್ ಮೂಲಕ ಮಂಗಳೂರಿನ ಪೇಟೆಗೆ 45 ನಂಬ್ರದ ಬಸ್ಸುಗಳು ಎ, ಬಿ, ಸಿ, ಡಿ ಎಂದು ಗುರುತಿಸಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಇತ್ತು. ಹೀಗೆ ಒಂದರ್ಥದಲ್ಲಿ ಮೇಲ್ನೋಟಕ್ಕೆ ಕಾಣುವಂತೆ ಬೇಕಾದ ಎಲ್ಲಾ ಸೌಲಭ್ಯಗಳು ಇದ್ದುದರಿಂದ ಮನೆ ಖರೀದಿಸುವುದಕ್ಕೆ ಒಪ್ಪಿಗೆ ಮಾತು ಆಡಿದೆವು. ಎತ್ತರದ ಮನೆಯ ಅಂಗಳದಿಂದ ನೋಡಿದಾಗ ಸುತ್ತಲೂ ಇರುವ ಮನೆಗಳಲ್ಲಿ ಕಾಯಿಗಳಿಂದ ತುಂಬಿದ ಹಸುರಾದ ತೆಂಗಿನ ಮರಗಳು, ಊರಿನ ಚೆಂದವನ್ನು ಹೆಚ್ಚಿಸಿತ್ತು. ಹಾಗೆಯೇ ಕಣ್ಣಿಗೆ ಎಟಕುವಷ್ಟು ದೂರಕ್ಕೆ ಕಾಣುತ್ತಿದ್ದ ನೀಲಿ ಆಕಾಶವೂ ವಿಶಾಲವಾಗಿ ಗೋಚರಿಸುತ್ತಿದ್ದುದರಿಂದ ಮನೆ ಮುಸುಕಿನಲ್ಲಿ ಇದ್ದಂತಾಗದೆ ಮನಸ್ಸಿಗೆ ಮುದ ನೀಡಿತ್ತು.

ಮನೆಯೂ ವಿಶಾಲವಾಗಿತ್ತು. ಪೇಟೆಯ ಸಿಟ್‌ಔಟ್ ಎನ್ನುವುದು ಇಲ್ಲದೆ ನೇರವಾಗಿ ಒಂದು ಸಣ್ಣ ಚಾವಡಿ. ಅದರ ಎಡಬದಿಗೆ ಸಣ್ಣ ಕೋಣೆ. ಒಳ ನಡೆದರೆ ಅಷ್ಟೇ ದೊಡ್ಡದಾದ ಕೋಣೆ. ಅದರ ಎಡ ಭಾಗಕ್ಕೆ ಅರ್ಧ ಗೋಡೆಯ ಇನ್ನೊಂದು ಕೋಣೆ. ಆ ಕೋಣೆಯ ಎಡ ಭಾಗಕ್ಕೆ ಇಳಿಸಿ ಕಟ್ಟಿದ ಮಾಡಿನಡಿಯಲ್ಲಿ ಮತ್ತೆರಡು ಕೋಣೆಗಳು ಇದ್ದು ಅಂಗಳದಿಂದ ಆ ಕೋಣೆಗಳಿಗೆ ಬರಲು ಸಾಧ್ಯವಾಗುವಂತೆ ಒಂದು ಬಾಗಿಲು. ಬಹುಶಃ ಇದು ಬಾಡಿಗೆಗೆ ಕೊಡಲು ಮಾಡಿಕೊಂಡದ್ದು ಎನ್ನುವ ಹಾಗೆ ಇತ್ತು.

ನಡುವಿನ ಕೋಣೆಯ ಬಲ ಭಾಗಕ್ಕೆ ಅಡುಗೆ ಕೋಣೆ ಇದ್ದು, ಅಲ್ಲಿಂದ ಅಂಗಳಕ್ಕೆ ಮತ್ತೆ ತೆರೆದುಕೊಳ್ಳುವ ಬಾಗಿಲು. ನಾವು ಇಲ್ಲಿ ಅಂಗಳದ ಕಡೆಯ ಬಾಗಿಲು ಮುಚ್ಚಿ, ಅಡುಗೆ ಕೋಣೆಗೆ ತಾಗಿದಂತೆಯೇ ಬಲ ಭಾಗಕ್ಕೆ ಎರಡು ಕೋಣೆಗಳನ್ನು ಸೇರಿಸಿ ಕಟ್ಟಿ, ಅವುಗಳಲ್ಲಿ ಶೌಚಾಲಯ, ಬಚ್ಚಲು ಮನೆ ಹಾಗೆಯೇ ಒಂದನ್ನು ಒಳಗೆಯೇ ಬಟ್ಟೆ ಒಗೆಯುವ ವ್ಯವಸ್ಥೆಗೆ ಬೇಕಾದಂತೆ ಬದಲಾಯಿಸಿಕೊಂಡೆವು. ನಡುಕೋಣೆಯ ಅರ್ಧ ಗೋಡೆಯನ್ನು ತೆಗೆದಾಗ ವಿಶಾಲವಾದ ನಡುಕೋಣೆ ಸಿದ್ಧವಾಯಿತು. ಒಟ್ಟಿನಲ್ಲಿ ಸಕಲ ಸೌಕರ್ಯಗಳನ್ನು ಒಳಗೊಂಡ ಮನೆ ಪೇಟೆಯ ಮನೆಯಂತಾದರೆ ಹೊರಗಿನ ವಾತಾವರಣ ಹಳ್ಳಿಯಂತೆ ಗೋಚರಿಸುತ್ತಿತ್ತು.

ಮುಖ್ಯರಸ್ತೆಗೆ ಬಂದಾಗ ಮತ್ತೆ ವಾಹನಗಳ ಓಡಾಟದಿಂದ ಹಳ್ಳಿಯೊಳಗೆ ಪೇಟೆ, ಪೇಟೆಯೊಳಗೆ ಹಳ್ಳಿ ಎಂಬಂತೆ ಇದ್ದ ಈ ವ್ಯವಸ್ಥೆ ಒಂದು ಮಾದರಿ ಬಡಾವಣೆಯಂತೆ ಇತ್ತು ಎಂದು ಭಾವಿಸುವುದಕ್ಕೆ ಯಾವ ಅಡ್ಡಿಯೂ ಕಾಣಲಿಲ್ಲ. ಹದಿನೈದು ಸಾವಿರ ಪಾವತಿಸಿ, ಮನೆಯೊಳಗಿನ ವ್ಯವಸ್ಥೆಯ ಕೆಲಸವನ್ನು ನಮಗೆ ಮನೆ ನೀಡಿದ ಅಜ್ಜಿಯ ತಮ್ಮ ವೆಂಕಪ್ಪ ಮೇಸ್ತ್ರಿಗಳು ಹಾಗೂ ಅವರ ಜೊತೆಯ ಕೆಲಸಗಾರರು ಜೂನ್ ತಿಂಗಳ ಒಳಗೆ ಮುಗಿಸಿಕೊಟ್ಟರು. ಆ ಮನೆಯನ್ನೂ ಈ ಮೊದಲು ಕೂಡಾ ಅವರೇ ಕಟ್ಟಿರುವುದು ಜೊತೆಗೆ ಸ್ವಂತಕ್ಕೇ ಕಟ್ಟಿರುವುದರಿಂದ ಕಾಮಗಾರಿಯ ಕೆಲಸ ಗಟ್ಟಿ ಮುಟ್ಟಾಗಿತ್ತು. ಕಾವೆ ಬಣ್ಣದ ನೆಲದ ಚಂದ ಮರೆಯುವಂತಹುದೇ ಅಲ್ಲ.

ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಎಂಬ ಹೆಸರುಗಳನ್ನೊಳಗೊಂಡ ಈ ಪುನರ್ವಸಿತರ ವಸತಿ ವಲಯ ಬಹಳಷ್ಟು ವಿಸ್ತಾರವಾಗಿತ್ತು. ಸುರತ್ಕಲ್‌ನಿಂದ ಪೂರ್ವಕ್ಕೆ ನೇರವಾಗಿ ಕಾನ, ಬಾಳ ಎಂಬ ಊರಿನ ರಸ್ತೆಯಲ್ಲಿ ಮಂಗಳಪೇಟೆಯ ಮುನ್ನ ಉತ್ತರ ದಿಕ್ಕಿಗೆ ಎಡಕ್ಕೆ ತಿರುಗುವ ತಿರುವಿನಿಂದ ಸ್ವಲ್ಪ ಮೊದಲೇ ಪ್ರಾರಂಭವಾಗುವ ಕಾಟಿಪಳ್ಳದ ಊರಿನಲ್ಲಿ 1, 2ನೆ ಬ್ಲಾಕ್‌ಗಳಿಂದ ತೊಡಗಿದ ಊರು ಎಡ ಬಲಗಳಲ್ಲಿ ಸಾಕಷ್ಟು ಅಡ್ಡ ರಸ್ತೆಗಳಲ್ಲಿ ಅನೇಕಾನೇಕ ಸೈಟ್‌ಗಳಿಂದ ತುಂಬಿ ಸೂರಿಂಜೆಯ ರಸ್ತೆಯಲ್ಲಿ ಸಾಗಿ ಶಂಸುದ್ದೀನ್ ಸರ್ಕಲ್ (ಪ್ರಾರಂಭದಲ್ಲಿ ಆ ಹೆಸರಿರಲಿಲ್ಲ) ಅಥವಾ ಮಸೀದಿಯ ಬಳಿ ಸರ್ಕಲ್‌ನಲ್ಲಿ ಮತ್ತೆ ಪಶ್ಚಿಮಕ್ಕೆ ತಿರುಗುತ್ತದೆ. ಈ ರಸ್ತೆಯ ಎಡ ಬದಿಗಳಲ್ಲಿ ಮುಂದೆ ಹೋದಂತೆಯೇ 3, 4, 5, 6, 7ನೆ ಬ್ಲಾಕ್‌ಗಳು ಇದ್ದು ಅಲ್ಲಿಯೂ ಅಡ್ಡ ರಸ್ತೆಗಳಲ್ಲಿ ಒಳಗೆ ಮತ್ತೆ ಸಾಕಷ್ಟು ಮನೆಗಳು.

7ನೆ ಬ್ಲಾಕ್‌ನಿಂದ ಮುಂದುವರಿಯುವ ಊರು ಮತ್ತೆ ಚೊಕ್ಕಬೆಟ್ಟುವಿನಲ್ಲಿ ಪುನಃ ದಕ್ಷಿಣಕ್ಕೆ ತಿರುಗಿ ಕಾನ ಬಾಳ ರಸ್ತೆಯನ್ನು ಸೇರಿದಾಗ ಈ ವೃತ್ತ ಪೂರ್ಣವಾಗುತ್ತದೆ. ಚೊಕ್ಕಬೆಟ್ಟು ಎನ್ನುವಲ್ಲಿ ಪಶ್ಚಿಮಕ್ಕೆ 8ನೆ ಬ್ಲಾಕ್ ಇದೆ. ಹೀಗೆ ವೃತ್ತಾಕಾರವಾಗಿರುವ ಈ ವಸತಿಗಳ ಬಡಾವಣೆಗಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಎರಡೂ ದಿಕ್ಕುಗಳಿಂದ ಬಸ್ಸುಗಳು ಮುಖಾಮುಖಿಯಾಗಿ ಹದಿನೈದು ನಿಮಿಷಗಳಿಗೊಂದರಂತೆ ಓಡಾಡುವುದು ಕೂಡಾ ವಿಶೇಷವಾದುದೇ. ಕಾನ, ಬಾಳ ರಸ್ತೆಯ ಮೂಲಕ 45ಎ, ಬಿ ನಂಬ್ರಗಳ ಬಸ್ಸುಗಳು 7ನೆ ಬ್ಲಾಕ್‌ನವರೆಗೆ ಬಂದು ಹಿಂದಿರುಗಿ ಅದೇ ದಾರಿಯಲ್ಲಿ ಸಾಗಿದರೆ, 45ಸಿ, ಡಿ ನಂಬ್ರದ ಬಸ್ಸುಗಳು ಕಾನ ಬಾಳ ರಸ್ತೆಯಲ್ಲಿ ಹೋಗದೆ ಚೊಕ್ಕಬೆಟ್ಟಿಗೆ ಎಡಕ್ಕೆ ತಿರುಗಿ ಚೊಕ್ಕಬೆಟ್ಟುವಿನಿಂದ ಕೃಷ್ಣಾಪುರವಾಗಿ ಕಾಟಿಪಳ್ಳಕ್ಕೆ ಹೋಗಿ ಅಲ್ಲಿ ತಿರುಗಿ ಪುನಃ ಬಂದ ದಾರಿಯಲ್ಲೇ ಸಾಗುವುದು. ಜನರಿಗೆ ಸುರತ್ಕಲ್‌ಗೆ ಅಥವಾ ಮಂಗಳೂರಿಗೆ ಹೋಗಲು ಯಾವ ದಾರಿಯ ಬಸ್ಸುಗಳೂ ಆಗುತ್ತಿತ್ತು ಎನ್ನುವುದು ಕೂಡಾ ಈ ರಸ್ತೆಯ ನಿರ್ಮಾಣದ ವೈಶಿಷ್ಟ.

ಹಾಗೆಯೇ ನಿಗದಿತ ಸಮಯಕ್ಕೆ, ನಿಗದಿತ ಸ್ಥಳಕ್ಕೆ ಹೋಗಲು ಜನರಿಗೆ ಬಸ್ಸುಗಳನ್ನು ಆಯ್ಕೆ ಮಾಡುವ ಅವಕಾಶವೂ ಇದ್ದು ಸರಿ ಸುಮಾರಿಗೆ ಇಂತಹ ವೇಳೆಗೆ ಇಂತಹ ಬಸ್ಸಿನಲ್ಲಿ ಇವರೇ ಜನರಿರುತ್ತಾರೆ ಎನ್ನುವುದು ನಿತ್ಯ ಪ್ರಯಾಣಿಕರಿಗೆ ತಿಳಿಯುವುದು ಸಾಧ್ಯವಾಗಿ ಜನರನ್ನು ಒಂದರ್ಥದಲ್ಲಿ ಬೆಸೆದುಕೊಳ್ಳುವುದಕ್ಕೆ, ಹಾಗೆಯೇ ತಮ್ಮ ಹಳೆಯ ಊರಿನ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿಯೂ ಈ ಬಸ್ಸುಗಳು ಸಹಕಾರಿಯಾಗಿತ್ತು ಎನ್ನುವುದು ನನ್ನ ಅನುಭವ. ನಾನಾದರೋ ಉರ್ವಸ್ಟೋರ್ ಮನೆಯಿಂದ ಬಜ್ಪೆ ಹೋಲಿ ಫ್ಯಾಮಿಲಿ ಶಾಲೆಗೆ ಕಾನ ಬಾಳ ರಸ್ತೆಯಿಂದ ಮಂಗಳಪೇಟೆ, ಕಳವಾರು, ಪೇಜಾವರದ ರಸ್ತೆಯಲ್ಲಿ ಮಿಸ್ಕಿತ್ ಬಸ್ಸಿನಲ್ಲಿ ಹೋಗುವಾಗ ಕಾಟಿಪಳ್ಳದ ಒಂದು ಬದಿಯ ದರ್ಶನವಾಗಿತ್ತು.

1ನೆ ಬ್ಲಾಕಲ್ಲಿ ಸ್ವಲ್ಪ ಕ್ರಿಶ್ಚಿಯನ್ ಸಮುದಾಯದವರಿದ್ದರೆಂದು ನನ್ನ ಅನಿಸಿಕೆ. ಅಲ್ಲಿಯೇ ಚರ್ಚ್ ಕೂಡಾ ಇತ್ತು. ಇದು ಈ ಬಡಾವಣೆಯ ಮೊದಲೇ ಇತ್ತೋ, ಬಳಿಕ ಆದುದೋ ಎಂಬ ಬಗ್ಗೆ ನನಗೆ ತಿಳುವಳಿಕೆ ಇಲ್ಲ. ಅಲ್ಲೊಂದು ಚರ್ಚ್ ಸ್ಟಾಪ್ ಇದ್ದುದರಿಂದ ನನ್ನ ಊಹೆ ಅಷ್ಟೇ. ಹಾಗೆಯೇ ಮುಸ್ಲಿಮರು, ಹಿಂದೂಗಳೂ ಸೇರಿದಂತೆ ಇದ್ದ ಈ ಬ್ಲಾಕಿನ ಬಳಿಕ 2, 3, 4ನೆ ಬ್ಲಾಕ್‌ಗಳಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ ಇದ್ದು ಹಿಂದೂಗಳ ಸಂಖ್ಯೆ ಕಡಿಮೆ ಇದ್ದಂತೆ ಕಾಣುತ್ತದೆ. ಆ ಕಾರಣದಿಂದಲೇ ಅಲ್ಲಿ ಮಸೀದಿ ಇತ್ತು. 5ನೆ ಬ್ಲಾಕಲ್ಲಿ ಪೂರ್ಣ ಹಿಂದೂಗಳೇ ಇದ್ದುದು ವಿಶೇಷವೇ ಆಗಿದ್ದರೂ, ಒಂದೆರಡು ಕ್ರಿಶ್ಚಿಯನ್ ಮನೆಗಳು ನನ್ನ ಮನೆಯ ರಸ್ತೆಯಲ್ಲಿ ಹಾಗೂ ಪಕ್ಕದ ರಸ್ತೆಯಲ್ಲಿದ್ದುದ್ದನ್ನು ಗಮನಿಸಿದ್ದೇನೆ. 6, 7ನೆ ಬ್ಲಾಕ್‌ಗಳಲ್ಲಿ ಕೂಡಾ ಮುಸ್ಲಿಮರೇ ಇದ್ದರು ಮತ್ತು ಇಲ್ಲಿ ಮಸೀದಿ ಇತ್ತು.

ಹಿಂದೂಗಳಿಗಾಗಿ ದೇವಸ್ಥಾನಗಳು ಇರಲಿಲ್ಲವಾದರೂ ಅವರವರ ಜಾಗಗಳಲ್ಲಿದ್ದ ದೈವಗಳನ್ನು ತಮ್ಮ ಮನೆ ಸೈಟುಗಳಲ್ಲಿಯೇ ಒಂದು ಕಲ್ಲು ಹಾಕಿ ಆರಾಧಿಸುವುದಕ್ಕೆ ಅವೈದಿಕ ಹಿಂದೂಗಳು ಅವಕಾಶ ಮಾಡಿಕೊಂಡದ್ದನ್ನು ನೋಡಿದ್ದೇನೆ. ಹಾಗೆಯೇ 5ನೆ ಬ್ಲಾಕ್‌ನ ಕೊನೆಯಲ್ಲಿ ದಲಿತರ ಮನೆಗಳಿದ್ದು ಅಲ್ಲಿ ಕೋರ್ದಬ್ಬು ದೈವದ ಗುಡಿ ಇತ್ತು. ಹಿಂದೂಗಳ ನಂಬಿಕೆಯಂತೆ ಪಣಂಬೂರಿನಿಂದ ನಿರ್ವಸಿತರಾದವರಿಗೆ ಪಣಂಬೂರಿನ ನಂದನೇಶ್ವರ ದೇವಸ್ಥಾನವೇ ಆಗಿದ್ದು, ಅಲ್ಲಿನ ಜಾತ್ರೆಗೆ ಊರಿಗೇ ಊರೇ ಹೋಗುತ್ತಿತ್ತು. ಆ ದೇವಸ್ಥಾನವನ್ನು ಸ್ಥಳಾಂತರಿಸುವುದಕ್ಕೆ ಸಾಧ್ಯವಾಗಿಲ್ಲ ಯಾಕೆ ಎಂಬ ಪ್ರಶ್ನೆಗೆ ನನಗೆ ಗೊತ್ತಾದ ವಿಷಯವೆಂದರೆ ಅಲ್ಲಿ ಪ್ರತಿಷ್ಠಾಪಿಸಿದ ದೇವರ ಮೂರ್ತಿಯನ್ನು ಅಗೆದು ತೆಗೆಯಲು ಸಾಧ್ಯವಾಗದಂತೆ ಸರ್ಪವೊಂದು ಅಡ್ಡಿ ಮಾಡುತ್ತಿತ್ತು ಎನ್ನುತ್ತಿದ್ದರು ಸಂಬಂಧಪಟ್ಟ ಪುರೋಹಿತ ಮನೆಯ ಹಿರಿಯರು.

ಹಾಗೆಯೇ ವಾಸ್ತವವಾಗಿ ಪ್ರಾಚೀನವಾದ ಆ ದೇವಸ್ಥಾನವನ್ನು ಕೆಡವಬಾರದು. ಕೆಡವಿದರೆ ತೊಂದರೆಯಾಗುತ್ತದೆ ಎನ್ನುವ ಭಯದ ನಂಬಿಕೆಯೂ ಇದ್ದಿರಬಹುದು. ಜೊತೆಗೆ ಆಗ ಎನ್‌ಎಂಪಿಟಿ ಅಂದರೆ ನವ ಮಂಗಳೂರು ಬಂದರಿನ ಮುಖ್ಯ ಅಧೀಕ್ಷಕ ಅಭಿಯಂತರರಾಗಿದ್ದ ಪಂಡಿತಾರಾಧ್ಯರು ಅದನ್ನು ತಮ್ಮ ಇಲಾಖೆಯ ವತಿಯಲ್ಲೇ ನೋಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವ ಒಪ್ಪಂದವನ್ನು ಮಾಡಿಕೊಂಡರು. ಈ ಕಾರಣದಿಂದ ಕಾಟಿಪಳ್ಳ ಪುನರ್ವಸತಿ ವಲಯದಲ್ಲಿ ದೇವಸ್ಥಾನ ಇರಲಿಲ್ಲ ಎನ್ನುವುದು ವಾಸ್ತವ. ದೇವಸ್ಥಾನವಿಲ್ಲದಿದ್ದರೂ ಆಸ್ತಿಕರಾದವರಿಗೆ ಅದರ ಕೊರತೆ ಸುಮಾರು ಹದಿನೈದು ವರ್ಷಗಳಷ್ಟು ಕಾಲ ಕಾಡಿರಲಿಲ್ಲ ಎನ್ನುವುದು ಕೂಡಾ ಸತ್ಯ.

ಆದರೆ ಪುನರ್ವಸತಿ ವಲಯದ ಮಕ್ಕಳಿಗೆ ಪ್ರತಿಯೊಂದು ಬ್ಲಾಕ್‌ನಲ್ಲಿಯೂ ಶಾಲೆಗಳಿದ್ದುದ್ದನ್ನು ಮೆಚ್ಚಲೇಬೇಕು. ಹಾಗೆಯೇ ಚೊಕ್ಕಬೆಟ್ಟಿನಲ್ಲಿದ್ದ ಶಾಲೆ ಉರ್ದು ಶಾಲೆ ಎಂದು ಪರಿಗಣಿಸಲ್ಪಟ್ಟಿತ್ತು. ಅಲ್ಲಿ ಉರ್ದು ಕಲಿಯುವುದಕ್ಕೆ ಅವಕಾಶವಿತ್ತು. ನಿಜವಾಗಿಯೂ ಈ ಪರಿಸರದಲ್ಲಿ ಉರ್ದು ಮನೆ ಮಾತಿನ ಮುಸ್ಲಿಮರ ಸಂಖ್ಯೆ ಇಲ್ಲವೆಂದೇ ಹೇಳಬೇಕು. ಇದ್ದರೂ ಬೆರಳೆಣಿಕೆಯ ಮಂದಿ ಇದ್ದಿರಬಹುದೋ ಏನೋ? ಕರ್ನಾಟಕದಲ್ಲಿ ಮುಸ್ಲಿಮರೆಂದರೆ ಉರ್ದು ಮನೆ ಮಾತಿನವರು ಎಂಬ ಕಲ್ಪನೆ ಇದ್ದರೂ ನಮ್ಮ ಜಿಲ್ಲೆಯ ಮುಸ್ಲಿಮರ ಮನೆ ಮಾತು ಬ್ಯಾರಿ ಎನ್ನುವುದು ಆ ದಿನಗಳಲ್ಲಿ ಆಡಳಿತ ವರ್ಗಕ್ಕೆ ತಿಳುವಳಿಕೆ ಇಲ್ಲದ ವಿಷಯವಾಗಿದ್ದುದೂ ಕೂಡಾ ಸತ್ಯ.

ಇಂದು ವಾಸ್ತವ ಅರಿವಾದುದರಿಂದಲೇ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿರ್ಮಾಣವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹೀಗೆ ಒಟ್ಟಾಗಿ ಈ ಪುನರ್ವಸತಿ ವಲಯವನ್ನು ಅವಲೋಕಿಸಿದರೆ ಸ್ಥಳಾಂತರಗೊಂಡವರಲ್ಲಿ ಮುಸ್ಲಿಮರೇ ಹೆಚ್ಚು. ಹಿಂದೂಗಳು ಕಡಿಮೆ. ಕ್ರಿಶ್ಚಿಯನ್ನರು ಬೆರಳೆಣಿಕೆಯವರು ಎಂದು ಗೋಚರಿಸುವುದಾದರೂ ಪಣಂಬೂರಿನಲ್ಲಿ ಪ್ರಮುಖರಾಗಿದ್ದ ಹಿಂದೂಗಳು ಎಲ್ಲರೂ ಕಾಟಿಪಳ್ಳಕ್ಕೆ ವಲಸೆ ಹೋಗಿಲ್ಲ. ಅದಕ್ಕೆ ಕಾರಣವಾಗಿದ್ದುದು ಕೃಷಿಕರಾಗಿ, ವಿದ್ಯಾವಂತರಾಗಿದ್ದು ಆರ್ಥಿಕ ಹಿನ್ನೆಲೆಯಲ್ಲಿ ಸಶಕ್ತರಾಗಿದ್ದುದು. ಕೃಷಿ ಕಾರ್ಮಿಕರಾಗಿದ್ದ, ಗೇಣಿ ಒಕ್ಕಲಿನ ಮಂದಿ ಅನಿವಾರ್ಯವಾಗಿ ವಲಸೆ ಹೋದರು. ಹಾಗೆಯೇ ಮುಸ್ಲಿಮರಲ್ಲಿ ಕೃಷಿ ಕಾರ್ಮಿಕರ ಸಂಖ್ಯೆಯು ಕಡಿಮೆಯಾಗಿದ್ದು, ಹೆಚ್ಚಿನವರು ಇತರೇ ಸಣ್ಣಪುಟ್ಟ ವ್ಯಾಪಾರಿಗಳಾದ್ದರಿಂದ ಅವರ ಗ್ರಾಹಕರಿದ್ದ ಕಡೆಗೆ ವಲಸೆ ಅನಿವಾರ್ಯವಾಯಿತು. ಆದರೆ ನಿತ್ಯ ಉಣ್ಣಬಹುದಾಗಿದ್ದ ದುಡಿಮೆಯ ಬಟ್ಟಲು ಮಾತ್ರ ಪಲ್ಲಟವಾಯಿತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News