ದೇಶದ ಬೆನ್ನೆಲುಬನ್ನೇ ಮುರಿದರೇ?

Update: 2017-06-07 03:48 GMT

ಈ ದೇಶದಲ್ಲಿ ಗೋರಕ್ಷಕರ ವೇಷದಲ್ಲಿ ಗೂಂಡಾಗಳು, ರೌಡಿಗಳು ದನ ಸಾಕುವ ರೈತರನ್ನು ಥಳಿಸಿ, ಲೂಟಿ ಮಾಡುತ್ತಿದ್ದರೆ ಪೊಲೀಸರು ಅಸಹಾಯಕರಾಗಿ ನೋಡುತ್ತಾರೆ. ಇದೇ ಹೊತ್ತಿನಲ್ಲಿ ದೇಶದ ರೈತರು ತಮ್ಮ ಬೇಡಿಕೆಗಳಿಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿದರೆ ಅವರ ಮೇಲೆ ಗೋಲಿಬಾರು ನಡೆಸುತ್ತಾರೆ.

ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆಯನ್ನು ಅಲ್ಲಿನ ಪೊಲೀಸರು ಬರ್ಬರವಾಗಿ ದಮನಿಸಲು ಯತ್ನಿಸಿದ್ದಾರೆ. ಪ್ರತಿಭಟನಾನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ್ದು, ಸುಮಾರು ಐವರು ರೈತರು ಮೃತಪಟ್ಟಿದ್ದಾರೆ. ಹಲವರು ಗಂಭೀರಗಾಯಗೊಂಡಿದ್ದಾರೆ. ರೈತರ ಕೈಯಲ್ಲಿ ಕೋವಿಗಳಿರಲಿಲ್ಲ, ತ್ರಿಶೂಲಗಳಿರಲಿಲ್ಲ. ರೈತರು ಸರಕಾರದಿಂದ ಸಹಾಯವನ್ನು ಕೇಳಿ ಅಲ್ಲಿ ನೆರೆದಿದ್ದರು. ರೈತರೇನೂ ತಾವು ಬೆಳೆದದ್ದನ್ನು ಅವರಷ್ಟೇ ಉಣ್ಣುವುದಿಲ್ಲ. ಅವರಿದ್ದರೆ ದೇಶ. ಆದುದರಿಂದ ಸ್ವತಃ ದೇಶದ ಒಳಿತಿಗಾಗಿ ಸರಕಾರವನ್ನು ಎಚ್ಚರಿಸಲು ನೆರೆದಿದ್ದರು.

ಜಾರ್ಖಂಡ್‌ನಲ್ಲಿ ಹತ್ತು ಜನ ಅಮಾಯಕರನ್ನು ದುಷ್ಕರ್ಮಿಗಳು ಥಳಿಸಿಕೊಲ್ಲುತ್ತಿದ್ದಾಗ ವೌನವಾಗಿದ್ದ ಪೊಲೀಸರ ಕೋವಿ, ರಾಜಸ್ಥಾನದಲ್ಲಿ ಪೆಹ್ಲೂಖಾನ್ ಎನ್ನುವ ರೈತನನ್ನು ಗೋರಕ್ಷಕರ ವೇಷದಲ್ಲಿದ್ದ ರೌಡಿಗಳು ಥಳಿಸಿಕೊಂದಾಗ ವೌನವಾಗಿದ್ದ ಪೊಲೀಸರ ಕೋವಿ, ಅಖ್ಲಾಕ್ ಎನ್ನುವ ವೃದ್ಧರನ್ನು ಗೂಂಡಾಗಳು ಬರ್ಬರವಾಗಿ ಕೊಂದು ಹಾಕಿದಾಗಲೂ ವೌನವಾಗಿದ್ದ ಪೊಲೀಸರ ಕೋವಿ, ರೈತರು ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಿಳಿದಾಗ ಮಾತನಾಡಿರುವುದು ಈ ದೇಶದ ದುರಂತವಾಗಿದೆ. ಮಧ್ಯಪ್ರದೇಶದಲ್ಲಿ ಪೊಲೀಸರು ಮುರಿದು ಹಾಕಿದ್ದು ದೇಶದ ಬೆನ್ನೆಲುಬನ್ನಾಗಿದೆ. ರೈತರನ್ನೆಲ್ಲ ಕೊಂದು ಹಾಕಿ, ಗೂಂಡಾಗಳು, ರೌಡಿಗಳ ಮೂಲಕ ಈ ದೇಶವನ್ನು ಕಟ್ಟಲು ನಮ್ಮ ಸರಕಾರ ಮುಂದಾಗಿದೆಯೆ ಎಂಬ ಪ್ರಶ್ನೆ ತಲೆಯೆತ್ತುತ್ತಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಂತೂ ಪ್ರತಿಭಟನೆ ತೀವ್ರರೂಪವನ್ನು ತಲುಪಿದೆ. ರೈತರ ಪ್ರತಿಭಟನೆಯಿಂದಾಗಿ ಹಲವು ಹೊಟೇಲುಗಳಿಗೆ ಹಾಲು ತಲುಪುತ್ತಿಲ್ಲ. ಟೊಮೆಟೊ ದರ ನೂರು ರೂಪಾಯಿ ಮುಟ್ಟಿದೆ. ತರಕಾರಿ ದುಬಾರಿಯಾಗಿದೆ. ಸಾಲಮನ್ನಾ, ಬೆಂಬಲ ಬೆಲೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ರೈತರು ಇಟ್ಟು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಕ್ಕೂ ರೈತರು ಇಟ್ಟಿರುವ ಬಹುತೇಕ ಬೇಡಿಕೆಗಳು ಒಪ್ಪುವುದಕ್ಕೆ ಅಸಾಧ್ಯವಾದುದೇನೂ ಅಲ್ಲ. ಈ ದೇಶದಲ್ಲಿ ಮಲ್ಯರಂತಹ ಕಾರ್ಪೊರೇಟ್ ಶಕ್ತಿಗಳ ಸಾವಿರಾರು ಕೋಟಿ ಹಣವನ್ನು ಬೇರೆ ಬೇರೆ ಹೆಸರು ಕರೆದು ಬ್ಯಾಂಕುಗಳು ಮನ್ನಾ ಮಾಡುತ್ತಿವೆ.

ಇಂದು ಭಾರತದ ಅರ್ಥವ್ಯವಸ್ಥೆ ನುಚ್ಚು ನೂರಾಗಿರುವುದು, ಹಲವು ಬ್ಯಾಂಕುಗಳು ನಷ್ಟ ಅನುಭವಿಸಿರುವುದು ಇಂತಹ ಬೃಹತ್ ಉದ್ಯಮಿಗಳಿಂದಾಗಿಯೇ ಹೊರತು, ರೈತರಿಂದಲ್ಲ. ರೈತರ ಬೇಡಿಕೆಗಳನ್ನು ಆಲಿಸಿ ಅವರನ್ನು ಉಳಿಸಿದರೆ, ಅವರು ದೇಶವನ್ನು ಉಳಿಸುತ್ತಾರೆ. ರೈತರಿಗೆ ಸಬ್ಸಿಡಿ ಕೊಟ್ಟು ಅವರ ಕೃಷಿಯನ್ನು ಉದ್ಧರಿಸಿದರೆ, ಅವರ ಬೆಳೆಗಳಿಗೆ ಸೂಕ್ತ ಬೆಂಬಲಬೆಲೆಗಳನ್ನು ಕೊಟ್ಟರೆ ದೇಶಕ್ಕೆ ಲಾಭವೇ ಹೊರತು ನಷ್ಟವಲ್ಲ. ವರ್ಷದಿಂದ ವರ್ಷಕ್ಕೆ ಆಹಾರದ ಬೇಡಿಕೆ ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಕೃಷಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಸರಕಾರದ ಎಲ್ಲ ನೀತಿಗಳೂ ಇಂದು ರೈತರಿಗೆ ವಿರೋಧವಾಗಿದೆ ಮತ್ತು ಬೃಹತ್ ಉದ್ಯಮಿಗಳಿಗೆ ಪೂರಕವಾಗಿದೆ.

ರೈತರು ನಿಧಾನಕ್ಕೆ ಸಂಕಟಕಗಳ ಮೇಲೆ ಸಂಕಟಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಅನಿಲ್ ಅಂಬಾನಿ, ಅದಾನಿಯಂಥವರ ಪಿಆರ್‌ಓ ಕೆಲಸಗಳಿಗಾಗಿ ವಿದೇಶ ಪ್ರಯಾಣ ಮಾಡುತ್ತಿರುವ ಪ್ರಧಾನಿಯವರಿಗೆ ರೈತರ ಸಂಕಟಗಳು ಕೇಳಿಸುತ್ತಿಲ್ಲ. ಭಾಷಣದಲ್ಲಿ ಎರಡನೆ ಹಸಿರು ಕ್ರಾಂತಿಯನ್ನು ಮಾತನಾಡುವ ಪ್ರಧಾನಿ ಮೋದಿ, ವಾಸ್ತವದಲ್ಲಿ ರೈತರನ್ನು ಕೊಂದು ಕೆಂಪು ಕ್ರಾಂತಿಯನ್ನು ಮಾಡಲು ಹೊರಟಂತಿದೆ.

ನೋಟು ನಿಷೇಧದ ಆನಂತರ ರೈತರ ಬದುಕು ಮೂರಾಬಟ್ಟೆಯಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ರೈತರು ಕೃಷಿ ಕೈಕೊಟ್ಟಾಗ ನಗರ ಪ್ರದೇಶಗಳಿಗೆ ವಲಸೆ ಹೋಗುವ ಕ್ರಮವಿತ್ತು. ನೋಟು ನಿಷೇಧದ ಬಳಿಕ ನಗರ ಪ್ರದೇಶಗಳಲ್ಲೂ ಕೂಲಿ ಕೆಲಸಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಅತ್ತ ಕೃಷಿ ಉದ್ಯಮವೂ ಭಾರೀ ಕುಸಿತ ಕಂಡಿದೆ. ಸೂಕ್ತ ಬೆಲೆ ದಕ್ಕದೇ ಮಾರಾಟ ಮಾಡುವುದಕ್ಕೂ ಸಾಧ್ಯವಾಗದೇ, ಸಂಗ್ರಹಿಸಿಡುವ ವ್ಯವಸ್ಥೆಯೂ ಇಲ್ಲದೆ ರೈತರ ಕೃಷಿ ಬೆಳೆಗಳು ನಾಶವಾಗಿವೆ. ಮಧ್ಯವರ್ತಿಗಳಿಗೆ ಸಿಕ್ಕಿದ ದರಕ್ಕೆ ಮಾರಾಟ ಮಾಡಿ ರೈತರು ಕೈ ಸುಟ್ಟುಕೊಂಡಿದ್ದಾರೆ.

ನೋಟು ನಿಷೇಧದ ಬಳಿಕ ಕೃಷಿ ಉದ್ಯಮದ ಮೇಲೆ ಆಗಿರುವ ಪರಿಣಾಮಗಳ ಒಂದು ಸಮೀಕ್ಷೆಯನ್ನು ಸರಕಾರ ಅತ್ಯವಶ್ಯವಾಗಿ ನಡೆಸಬೇಕಾಗಿತ್ತು ಮತ್ತು ನೋಟು ನಿಷೇಧದಿಂದ ಏನು ಲಾಭವಾಗಿದೆಯೆಂದು ಸರಕಾರ ಹೇಳುತ್ತಿದೆಯೋ ಆ ಲಾಭಗಳ ಒಂದು ಭಾಗವನ್ನು ಕೃಷಿ ಮತ್ತು ಕೃಷಿ ಉದ್ಯಮವನ್ನು ಮೇಲೆತ್ತುವುದಕ್ಕೆ ಬಳಕೆ ಮಾಡಬೇಕಾಗಿತ್ತು. ಆದರೆ ಗ್ರಾಮೀಣ ಪ್ರದೇಶದ ಸಣ್ಣ ಉದ್ಯಮಗಳನ್ನು ನಾಶ ಮಾಡುವುದಕ್ಕಾಗಿಯೇ ನೋಟು ನಿಷೇಧ ಮಾಡಲಾಗಿದೆಯೋ ಎಂದು ಅನುಮಾನ ಪಡುವಂತೆ ಸರಕಾರ ವರ್ತಿಸುತ್ತಿದೆ. ನೋಟು ನಿಷೇಧದ ಬೆನ್ನಿಗೇ ಗೋವುಗಳನ್ನು ರೈತರು ಮಾರಾಟ ಮಾಡದಂತೆ ಅವರ ಕೈಯನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಸರಕಾರ ಇಳಿಯಿತು. ಹೈನೋದ್ಯಮವನ್ನೇ ನಂಬಿದ ರೈತರ ಪಾಲಿಗೆ ಇದು ನೋಟುನಿಷೇಧದಷ್ಟೇ ಭೀಕರವಾದ ಕಾನೂನಾಗಿದೆ.

ತಮ್ಮ ಹಟ್ಟಿಯಲ್ಲಿದ್ದ ದನ, ಕರುಗಳನ್ನು ತಮ್ಮ ಆಸ್ತಿ, ಸಂಪತ್ತು ಎಂದು ರೈತರು ತಿಳಿದುಕೊಳ್ಳುತ್ತಾರೆ. ಯಾವುದೇ ಅಗತ್ಯ ಕಾರ್ಯಗಳು ಬಂದಾಗ, ನಷ್ಟ ಸಂಭವಿಸಿದಾಗ ಎತ್ತುಗಳು, ಕರುಗಳನ್ನು ಮಾರಿ ಹಣ ಹೊಂದಿಸುವ ಪರಿಪಾಠ ರೈತರಲ್ಲಿ ಸಂಪ್ರದಾಯವಾಗಿ ಬಂದಿದೆ. ಹಟ್ಟಿಯ ದನಗಳೆಂದರೆ ರೈತರಿಗೆ ತಮ್ಮ ತಿಜೋರಿಯಲ್ಲಿರುವ ಹಣದಷ್ಟೇ ಅಮೂಲ್ಯ. ಒಂದು ರೀತಿಯಲ್ಲಿ ಆಪತ್ಕಾಲಕ್ಕೆ ಸಂಗ್ರಹಿಸಿಟ್ಟ ಹಣದಂತೆ ಹಸು, ಕರುಗಳು ಕೆಲಸ ಮಾಡುತ್ತಿದ್ದವು. ಇದೀಗ ಸರಕಾರ ಕಸಾಯಿಖಾನೆಗೆ ರೈತರು ಮಾರಾಟ ಮಾಡುವಂತಿಲ್ಲ ಎಂದು ಆದೇಶ ನೀಡಿರುವುದರಿಂದ ತಮ್ಮ ಹಟ್ಟಿಯಲ್ಲಿರುವ ದನವನ್ನು ಮಾರುವ ಸ್ಥಿತಿಯಲ್ಲಿ ಅವರಿಲ್ಲ. ಅಷ್ಟೇ ಅಲ್ಲ, ಹಟ್ಟಿಯಲ್ಲಿರುವ ನಿಷ್ಪ್ರಯೋಜಕ ಎತ್ತುಗಳನ್ನು ಅವರು ತಮ್ಮ ಖರ್ಚಿನಲ್ಲಿ ಸಾಕಬೇಕಾದ ಸನ್ನಿವೇಶ. ಇದರಿಂದಾಗಿ ಲಕ್ಷಾಂತರ ರೈತರು ದೇಶಾದ್ಯಂತ ನಷ್ಟಕ್ಕೊಳಗಾಗಿದ್ದಾರೆ. ಬೀದಿಗೆ ಬಿದ್ದಿದ್ದಾರೆ. ಈವರೆಗೆ ಹೈನೋದ್ಯಮವನ್ನು ನಂಬಿದವರು ಈಗ ಬೇರೆ ಕೆಲಸವನ್ನು ನೆಚ್ಚಿಕೊಳ್ಳಬೇಕು. ಅಂತಹ ಕೆಲಸಗಳನ್ನಾದರೂ ಸರಕಾರ ಒದಗಿಸುವುದಕ್ಕೆ ಯಶಸ್ವಿಯಾಗಿದೆಯೇ ಎಂದರೆ ಅದೂ ಇಲ್ಲ. ಇವೆಲ್ಲದರ ಒಟ್ಟು ಪರಿಣಾಮವಾಗಿಯೇ ದೇಶಾದ್ಯಂತ ರೈತರು ಬೀದಿಗಿಳಿಯುತ್ತಿದ್ದಾರೆ.

ಕೋವಿಗಳ ಮೂಲಕ ರೈತರ ಆಕ್ರೋಶವನ್ನು ದಮನಿಸಬಹುದು ಎಂದು ಸರಕಾರ ಭಾವಿಸಿದ್ದರೆ ಅದು ಅದರ ಮೂರ್ಖತನವಾಗಿದೆ. ಪೊಲೀಸರ ಕೋವಿಗಳು ರೈತರ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಬದುಕಿನಲ್ಲಿ ಭಾರೀ ಏರು ಪೇರುಗಳಾಗಿವೆ. ಇನ್ನಾದರೂ ಪ್ರಧಾನಿ ಮೋದಿ ವಿದೇಶ ಪ್ರವಾಸ ನಿಲ್ಲಿಸಿ, ಹಳ್ಳಿಗಳ ಕಡೆಗೆ ಪ್ರವಾಸ ಹೊರಡಬೇಕು. ಅವರ ಸಂಕಟಗಳನ್ನು ಆಲಿಸುವ ಕೆಲಸಕ್ಕೆ ಮುಂದಾಗಬೇಕು. ಬೃಹತ್ ಉದ್ಯಮಿಗಳ ಸಾಲಮನ್ನಾ ಮಾಡುವುದು ಕೇಂದ್ರ ಸರಕಾರಕ್ಕೆ ಸಾಧ್ಯವಾಗುವುದಾದರೆ, ದೇಶದ ಬೆನ್ನೆಲುಬಾಗಿರುವ ರೈತರ ಸಾಲವನ್ನೂ ಮನ್ನಾಮಾಡಲು ಸರಕಾರಕ್ಕೆ ಸಾಧ್ಯವಾಗಬೇಕು. ಹಾಗೆಯೇ ಕೃಷಿಯನ್ನು, ಕೃಷಿ ಉದ್ಯಮವನ್ನು ಪ್ರೋತ್ಸಾಹಿಸುವಂಥ ಗಟ್ಟಿ ಯೋಜನೆಗಳನ್ನು ಜಾರಿಗೊಳಿಸುವ ಕಡೆಗೆ ಸರಕಾರ ಇನ್ನಾದರೂ ಮುಂದಾಗಬೇಕು. ಇಲ್ಲವಾದರೆ ಬೀದಿ ಬೀದಿಗಳಲ್ಲಿ ರೈತರ ಹೆಣಗಳು ಕಾಣಿಸಿಕೊಳ್ಳುವ ದಿನ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News