"ಮರೆಯಲಾಗದ ಮರಳುನಾಡಿನ ಇಫ್ತಾರ್"

Update: 2017-07-01 16:54 GMT

ರಮಝಾನ್ ತಿಂಗಳು ಬಂತೆಂದರೆ ಅರಬ್ ನಾಡಿನ ಬೀದಿಗಳೆಲ್ಲಾ ಝಗಮಗಿಸುತ್ತವೆ. ಮುಸ್ಸಂಜೆಯ ಬಳಿಕ ಅಂಗಡಿ ಮುಂಗಟ್ಟು, ಬಜಾರು, ಮಾಲುಗಳಲ್ಲಿ ಜನ ಕಿಕ್ಕಿರಿದು ಸೇರುತ್ತಾರೆ. ಕಣ್ಣುಕುಕ್ಕುವ ದೀಪಾಲಂಕಾರ, ಮಸೀದಿಗಳಿಂದ ಸುಶ್ರಾವ್ಯ ಆಝಾನ್, ಕುರ್ ಆನ್ ಪಠಣ, ಇವೆಲ್ಲದರ ಮಧ್ಯೆ ಊರಿನ ರಮಝಾನ್ ವಿಶೇಷತೆಗಳನ್ನು ತಮ್ಮ ಮನೆಗೂ, ಸ್ನೇಹಿತರಿಗೂ ಫೋನಾಯಿಸಿ ಕೇಳಿ ಅಲ್ಲಿನ ನೆನಪುಗಳನ್ನಷ್ಟೇ ಆನಂದಿಸುವ ಅನಿವಾಸಿ. 

ಅರಬ್ ನಾಡಿನಲ್ಲಿ ದುಡಿಯುತ್ತಿರುವ ಅನಿವಾಸಿ ಬ್ಯಾಚುಲರ್ ಗಳೇ ಇರುವ ರೂಮುಗಳಲ್ಲಿ ಒಂದಿಬ್ಬರಿಗಾದರೂ ಎಣ್ಣೆಯಲ್ಲಿ ಕರಿದು ತಯಾರಿಸುವ ಒಂದೆರಡು ಐಟಂಗಳಾದರೂ ಗೊತ್ತಿರುತ್ತದೆ ಅಥವಾ ರಮಝಾನ್ ಗೆ ಕೆಲವು ದಿನಗಳ ಮುಂಚೆಯೇ ಮನೆಯವರಿಂದ ಕೇಳಿ ತಿಳಿದುಕೊಂಡಿರುತ್ತಾರೆ. ಆರಂಭದಲ್ಲಿ ತಯಾರಿಸಿದ ಐಟಮ್ ಗಳ ಬಗ್ಗೆ ಇತರರು ನೀಡುವ ಜೋಕು, ಪ್ರತಿಕ್ರಿಯೆಗಳು ಮೊಬೈಲ್ ನಲ್ಲಿ ಸೆರೆಯಾಗಿ ಊರಿಗೂ ತಲುಪಿರುತ್ತದೆ.

ಸಮೋಸ, ನೀರುಳ್ಳಿ ಬಜೆ, ರೂಹಫ್ಝ, ಸೀರ್ ಕುರ್ಮ, ಹಣ್ಣುಹಂಪಲು ಸೇವಿಸಿ ಮಗ್ರಿಬ್ ನಮಾಝ್ ನಿರ್ವಹಿಸಿ ನೌಕರಿಗೆ ಹೋದರೆ "ಸಹರಿ"ಗೆ ವಾಪಸಾಗುವವರೂ ಇದ್ದಾರೆ. ಅವರವರ ಕೆಲಸದ ರೀತಿಗೆ ಹೊಂದಿಕೊಂಡು "ಇಫ್ತಾರ್" "ಸಹರಿ"ಯ ಆಸ್ವಾದಿಸಿ ಖುಷಿಪಡುತ್ತಾರೆ. ಎಲ್ಲರೂ ಒಟ್ಟು ಸೇರಿ ಸಹರಿಗೆ ಅನ್ನ ಸಾರು, ಮೀನು ಫ್ರೈ ಅಥವಾ ಚಿಕನ್ ಫ್ರೈ ತಯಾರಿಸಿ ಅದಕ್ಕೊಂದಿಷ್ಟು ಊರಿಂದ ತಾಯಿ ಕಳುಹಿಸಿದ ಉಪ್ಪಿನಕಾಯಿಯನ್ನು ಚಪ್ಪರಿಸಿ ಉಣ್ಣುವ ಸಹರಿ ಅನಿವಾಸಿಯ ಪಾಲಿಗೆ ತೃಪ್ತಿದಾಯಕವಾಗಿರುತ್ತದೆ. ಕೆಲವೊಮ್ಮೆ ಅನ್ನ ಬೇಯಿಸಲು ಸಮಯವಿಲ್ಲದಿದ್ದಲ್ಲಿ ಅಥವಾ ಇನ್ಯಾವುದೇ ಆಪದ್ಭಾಂಧವನಂತಿರುವ ಕುಬ್ಬೂಸು ಎಲ್ಲ ಸಮಯದಲ್ಲೂ ರೆಡಿಯಾಗಿರುತ್ತದೆ.

 

- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್

Writer - ನಿಝಾಮುದ್ದೀನ್

contributor

Editor - ನಿಝಾಮುದ್ದೀನ್

contributor

Similar News