ಪಾಳುಬಿದ್ದ ಮಸೀದಿಗಳ ನವೀಕರಣಕ್ಕೆ ಹಿಂದೂಗಳು, ಸಿಖ್ಖರ ಸಹಕಾರ

Update: 2017-06-12 11:26 GMT

ಅಮೃತಸರ್,ಜೂ.12 : ಮತೀಯ ಸೌಹಾರ್ದತೆಯ ಅದ್ಭುತ ಸಂಕೇತವಾಗಿ ರಾಜ್ಯದ ಹಿಂದೂ ಮತ್ತು ಸಿಕ್ಖ್ ಬಾಂಧವರು ಹೊರಹೊಮ್ಮಿದ್ದಾರೆ. ರಾಜ್ಯದಲ್ಲಿ ನಾದುರಸ್ತಿಯಲ್ಲಿರುವ ಮಸೀದಿಗಳನ್ನು ನವೀಕರಿಸಲು ಅವರೀಗ ಕೈಜೋಡಿಸಿದ್ದಾರೆ.

ದೇಶ ವಿಭಜನೆಯಾದಾಗ ಇಲ್ಲಿಂದ ಪಾಕಿಸ್ತಾನಕ್ಕೆ ಸಾವಿರಾರು ಮುಸ್ಲಿಮರು ವಲಸೆ ಹೋದ ನಂತರ ಅವರ ಪ್ರಾರ್ಥನಾ ಸ್ಥಳಗಳ ನಿರ್ವಹಣೆ ಮಾಡುವವರಿಲ್ಲದೆ ಅವುಗಳು ಪಾಳು ಬಿದ್ದಿದ್ದವು. ಪಂಜಾಬ್ ರಾಜ್ಯದ ಶಾಹಿ ಇಮಾಮ್ ಮೌಲಾನ ಹಬೀಬುರ್ ರೆಹಮಾನ್ ಸನಿ ಅವರು ಈ ಮಸೀದಿಗಳಿಗೆ ಮರುಜೀವ ನೀಡಲು ಅವಿರತ ಶ್ರಮ ಪಡುತ್ತಿದ್ದು ಅದಕ್ಕಾಗಿ ಈಗ ಅವರಿಗೆ ಹಿಂದೂ ಮತ್ತು ಸಿಕ್ಖ್ ಬಾಂಧವರ ಸಹಕಾರವೂ ದೊರೆತಿದೆ.

‘‘ದೇಶದ ಇತರ ಭಾಗಗಳಿಗೆ ಹೋಲಿಸಿದಾಗ ಪಂಜಾಬ್ ರಾಜ್ಯದ ಪರಿಸ್ಥಿತಿ ವಿಭಿನ್ನ. ಇಲ್ಲಿ ಮಸೀದಿಗಳನ್ನು ನವೀಕರಿಸಲು ಕೈಜೋಡಿಸಿರುವ ಸಿಕ್ಖ್ ಮತ್ತು ಹಿಂದೂ ಬಾಂಧವರು ಈ ಕಾರ್ಯಕ್ಕಾಗಿ ಸಾಕಷ್ಟು ದೇಣಿಗೆಗಳನ್ನೂ ನೀಡಿದ್ದಾರೆ,’’ ಎಂದು ಮಜ್ಲಿಸ್-ಇ-ಅಹ್ರರ್-ಇ-ಇಸ್ಲಾಮ್ ಇದರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಖ್ತೀಮ್ ಅಹ್ರರಿ ಹೇಳುತ್ತಾರೆ. ಕಳೆದ 70 ವರ್ಷಗಳಲ್ಲಿ ನಾವು 360ಕ್ಕೂ ಅಧಿಕ ಮಸೀದಿಗಳನ್ನು ನವೀಕರಿಸಿದ್ದೇವೆ. ಇವುಗಳಲ್ಲಿ ಕೆಲವೇ ಮುಸ್ಲಿಂ ಕುಟುಂಬಗಳಿರುವ ಕೆಲವು ಗ್ರಾಮೀಣ ಭಾಗದ ಮಸೀದಿಗಳೂ ಇವೆ,’ ಎಂದು ಅವರು ಹೇಳಿದರು.

ಡಿಸೆಂಬರ್ 2016ರಲ್ಲಿ 70 ವರ್ಷಗಳ ನಂತರ ಫಗ್ವಾರಾದ ಸರಾಯಿ ರಸ್ತೆ ಸಮೀಪವಿರುವ ಮಸ್ಜಿದ್ ಉಮರ್ ಇದರ ಬಾಗಿಲುಗಳು ತೆರೆದುಕೊಂಡಿದ್ದವು. ಫಗ್ವಾರದಲ್ಲಿ ಕಳೆದ ಜುಲೈ ತಿಂಗಳಲ್ಲಿ ಸಣ್ಣ ಮತೀಯ ಸಂಘರ್ಷವೇರ್ಪಟ್ಟ ಹೊರತಾಗಿಯೂ ವಿವಿಧ ಸಮುದಾಯಗಳು ಈ ಮಸೀದಿಯನ್ನು ನವೀಕರಿಸಲು ಮುಂದೆ ಬಂದಿದ್ದು ಇದೀಗ ಅಲ್ಲಿ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.

ಮೋಗಾ ಜಿಲ್ಲೆಯ ಅಜಿತ್ವಾಲ್ ಹಾಗೂ ಲುಧಿಯಾನದ ಹಂಸ್ ಕಲನ್ ಇಲ್ಲಿನ ಸಿಖ್ ಯುವಕರು ಲುಧಿಯಾನ ಜಮಾ ಮಸ್ಜಿದ್ ಇಮಾಮ್ ಅವರನ್ನು ಸಂಪರ್ಕಿಸಿ ತಮ್ಮ ಗ್ರಾಮಗಳ ಹಳೆಯ ಮಸೀದಿಗಳಿಗೆ ಮರುಜೀವ ನೀಡುವುದಾಗಿ ಹೇಳಿದ್ದರು. ಇದಕ್ಕೆ ಸಹಾಯ ಮಾಡಲು ಹಲವಾರು ಮಂದಿ ಮುಂದೆ ಬಂದಿದ್ದರು. ಈ ಪ್ರದೇಶದಲ್ಲಿ ಮುಸ್ಲಿಂ ನಿವಾಸಿಗಳಿಲ್ಲದೇ ಇದ್ದರೂ ವಲಸಿಗ ಮುಸ್ಲಿಂ ಕಾರ್ಮಿಕರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರತಿ ಶುಕ್ರವಾರ ಇಲ್ಲಿ ನೆರೆಯ ಗ್ರಾಮದ ಮೌಲ್ವಿ ಆಗಮಿಸಿ ಪ್ರಾರ್ಥನೆಗಳನ್ನು ನಡೆಸುತ್ತಾರೆ.

‘‘ಮುಸ್ಲಿಮರು ಹಾಗೂ ಮುಸ್ಲಿಮೇತರರು, ಎಲ್ಲರೂ ಈ ಮಸೀದಿಗಳ ನವೀಕರಣಕ್ಕೆ ಜತೆಯಾಗಿದ್ದಾರೆ. ಹೀಗೆ ಮರುಜೀವ ನೀಡಲ್ಪಟ್ಟ 360 ಮಸೀದಿಗಳಲ್ಲಿ 52 ಮಸೀದಿಗಳು ರಾಜ್ಯದ ಪ್ರಮುಖ ನಗರಗಳಲ್ಲಿವೆ.

ರಮಝಾನ್ ತಿಂಗಳಲ್ಲಿ ಮಸೀದಿಗೆ ನಮಾರ್ ಸಲ್ಲಿಸಲು ಬರುವವರಿಗೆ ವಿವಿಧ ಧಾರ್ಮಿಕ ಸಮುದಾಯಗಳ ಜನರು ಇಲ್ಲಿ ಆಹಾರ ಕೂಡ ಒದಗಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News