ಜೋಕೆ....ವಾರಾಂತ್ಯಗಳಲ್ಲಿ ಹೆಚ್ಚಿನ ನಿದ್ರೆ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು

Update: 2017-06-13 08:26 GMT

ವಾರಾಂತ್ಯದಲ್ಲಿ ವಾರದ ದಿನಗಳಿಗಿಂತ ಹೆಚ್ಚಿನ ನಿದ್ರೆ ಮಾಡುವವರಿಗೆ ಇಲ್ಲೊಂದು ಕಹಿ ಸುದ್ದಿಯಿದೆ. ಅಂತಹವರು ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ‘ಸೋಷಿಯಲ್ ಜೆಟ್ ಲ್ಯಾಗ್(ಎಸ್‌ಜೆಎಲ್)’ಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ ಬಹಳ ತಡವಾಗಿ ಹಾಸಿಗೆ ಬಿಟ್ಟೆದ್ದಾಗ ಉಂಟಾಗುವ ಎಸ್‌ಜೆಎಲ್‌ನ ಪ್ರತಿಯೊಂದು ಗಂಟೆಯೂ ಹೃದ್ರೋಗದ ಸಾಧ್ಯತೆಯಲ್ಲಿ ಶೇ.11ರಷ್ಟು ಹೆಚ್ಚಳದೊಂದಿಗೆ ಗುರುತಿಸಿಕೊಂಡಿದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ.

ಎಸ್‌ಜೆಎಲ್ ಅನಾರೋಗ್ಯ, ಕೆಟ್ಟ ಮೂಡ್, ಹೆಚ್ಚಿನ ನಿದ್ರೆಯ ಮಂಪರು ಮತ್ತು ಆಲಸ್ಯತನಕ್ಕೂ ಕಾರಣವಾಗುತ್ತದೆ.

ಮಾಮೂಲು ನಿದ್ರೆಗಿಂತ ಹೆಚ್ಚಿನ ನಿದ್ರೆಯು ನಮ್ಮ ಆರೋಗ್ಯ ಏರುಪೇರಾಗುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎನ್ನುತ್ತಾರೆ ಅಧ್ಯಯನ ವರದಿಯ ಮುಖ್ಯ ಲೇಖಕ ರಾಗಿರುವ ಅಮರಿಕದ ಅರಿಜೋನಾ ವಿವಿಯ ಸಂಶೋಧನಾ ಸಹಾಯಕ ಸಿಯೆರಾ ಬಿ. ಫೋರ್ಬಷ್.

ಇದರರ್ಥ ನಿಯಮಿತ ಅವಧಿಯ ನಿದ್ರೆಯು ಹೃದ್ರೋಗ ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ, ಸರಳ ಮತ್ತು ಖರ್ಚಿಲ್ಲದ ಚಿಕಿತ್ಸಾ ವಿಧಾನವಾಗಬಹುದು ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್‌ನ ಶಿಫಾರಸುಗಳಂತೆ ವಯಸ್ಕ ವ್ಯಕ್ತಿಗಳು ಸಾಮಾನ್ಯ ಆರೋಗ್ಯವನ್ನು ಕಾಯ್ದುಕೊಳ್ಳಲು ಪ್ರತಿದಿನ ರಾತ್ರಿ ನಿಯಮಿತವಾಗಿ ಕನಿಷ್ಠ ಏಳು ಗಂಟೆ ನಿದ್ರೆ ಮಾಡುವುದು ಅಗತ್ಯವಾಗಿದೆ.

ಜರ್ನಲ್ ಸ್ಲೀಪ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು 22ರಿಂದ 60 ವರ್ಷ ವಯೋಮಾನದ 984 ವಯಸ್ಕ ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News