ಒಂದು ಕೋ.ರೂ.ಗಳ ಹಳೆಯ ನೋಟು ನೀಡಿರಿ,ಒಂಭತ್ತು ಲ.ರೂ.ಗಳ ಹೊಸನೋಟು ಪಡೆಯಿರಿ...!

Update: 2017-06-14 12:04 GMT

ಮುಂಬೈ,ಜೂ.14: ಹಳೆಯ 500 ಮತ್ತು 1,000 ರೂ.ನೋಟುಗಳ ಕಾಲ ಮುಗಿದಿ ದ್ದರೂ ಈಗಲೂ ಅಲ್ಲಲ್ಲಿ ಕೋಟ್ಯಂತರ ರೂ.ವೌಲ್ಯದ ಹಳೆಯ ನೋಟುಗಳು ಪತ್ತೆಯಾಗುತ್ತಲೇ ಇವೆ. ಜನರು ಈಗ ಈ ನೋಟುಗಳನ್ನು ತೆಗೆದುಕೊಂಡು ಏನು ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಿನವರಲ್ಲಿದೆ. ನೋಟುಗಳ ವಿನಿಮಯಕ್ಕೆ ಆರ್‌ಬಿಐ ನಿಗದಿಗೊಳಿಸಿದ್ದ 2016,ಡಿ.30ರ ಗಡುವು ಕಳೆದಿದೆಯಾದರೂ ಈ ನೋಟುಗಳು ಇನ್ನೂ ಇವೆ. ಭಾರೀ ಕಮಿಷನ್ ನೀಡಲು ಸಿದ್ಧರಿದ್ದರೆ ಈಗಲೂ ಈ ಹಳೆಯ ನೋಟುಗಳ ಬದಲಿಗೆ ಗರಿಗರಿಯಾದ ಹೊಸ ನೋಟುಗಳನ್ನು ಪಡೆಯಬಹುದು.

ಈ ವರ್ಷದ ಜೂನ್ 30ರವರೆಗೆ ಹಳೆಯ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿಕೊಳ್ಳಲು ಅವಕಾಶ ಹೊಂದಿರುವ ಅನಿವಾಸಿ ಭಾರತೀಯರು ಬೇರೆಯವರ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಟ್ಟರೆ ಅವರಿಗೆ ಆಕರ್ಷಕ ಕಮಿಷನ್ ನೀಡುವ ಜಾಲಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ.

ಹಳೆಯ ನೋಟುಗಳಿಗೆ ಈಗಿನ ವಿನಿಮಯ ದರ 100 ರೂ.ಗಳಿಗೆ 9 ರೂ. ಆಗಿದೆ. ಅಂದರೆ ಒಂದು ಕೋಟಿ ರೂ.ಗಳ ಹಳೆಯ ನೋಟುಗಳ ಬದಲಾಗಿ ಒಂಭತ್ತು ಲಕ್ಷ ರೂ.ಗಳ ಹೊಸ ನೋಟುಗಳನ್ನು ನೀಡಲಾಗುತ್ತದೆ ಎಂದು ಈ ಜಾಲದಲ್ಲಿ ಭಾಗಿಯಾಗಿರುವ ಪ್ರವೀಣ್(ಹೆಸರು ಬದಲಿಸಿದೆ) ಈ ಬಗ್ಗೆ ತನಿಖೆಗಿಳಿದಿದ್ದ ಸುದ್ದಿಗಾರರಿಗೆ ತಿಳಿಸಿದ.

  ಯಾರೇ ಆಗಲಿ, ಒಂದು ಕೋ.ರೂ.ಗಳನ್ನು ಕೊಟ್ಟು ಒಂಭತ್ತು ಲ.ರೂ.ಗಳನ್ನು ಪಡೆಯಲು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆತ, ಈ ಜನರೆಲ್ಲ ತಮ್ಮ ಆದಾಯ ಮೂಲಗಳನ್ನು ಸರಕಾರಕ್ಕೆ ತೋರಿಸಲು ಬಯಸದ ವ್ಯಕ್ತಿಗಳಾಗಿದ್ದಾರೆ. ಈಗ ನೋಟು ವಿನಿಮಯದಿಂದ ಅವರು ಅನುಭವಿಸುವ ಹಾನಿ ಮುಖ್ಯವಲ್ಲ, ತಮ್ಮ ಭವಿಷ್ಯದ ಆದಾಯ ಮೂಲಗಳು ತೆರಿಗೆ ಅಧಿಕಾರಿಗಳಿಗೆ ಬಹಿರಂಗಗೊಳ್ಳಬಹುದೆಂದು ತಮ ಕಪ್ಪುಹಣವನ್ನು ಈ ಜನರು ಘೋಷಿಸಿಲ್ಲ. ಹೀಗಾಗಿ ಈಗಿನ ನಷ್ಟ ಅವರ ಪಾಲಿಗೆ ದೊಡ್ಡದಲ್ಲ ಎಂದು ತಿಳಿಸಿದ.

   ನಾವು ಶೇ.1ರಷ್ಟು ಕಮಿಷನ್ ಪಡೆದುಕೊಂಡು ಹಳೆಯ ನೋಟುಗಳನ್ನು ಎನ್ನಾರೈಗಳಿಗೆ ದಾಟಿಸುತ್ತೇವೆ ಎಂದ ಪ್ರವೀಣ್, ಎನ್ನಾರೈಗಳು ನಮ್ಮ ಸಂಪರ್ಕದಲ್ಲಿದ್ದಾರೆ. ಒಂದು ಕೋಟಿ ರೂ.ಗಳ ಹಳೆಯ ನೋಟುಗಳಿಗೆ ಬದಲಾಗಿ 10 ಲ.ರೂ.ಗಳ ಹೊಸ ನೋಟುಗಳನ್ನು ನಮಗೆ ನೀಡುವಂತೆ ನಾವು ಅವರಿಗೆ ಸೂಚಿಸುತ್ತವೆ. ಹೀಗೆ ಈ ವ್ಯವಹಾರ ನಡೆಯುತ್ತದೆ. ಒಂದು ಕೋ.ರೂ.ಗೆ ನಮಗೆ 50,000 ರೂ.ನಿಂದ ಒಂದು ಲ.ರೂ.ವರೆಗೆ ಕಮಿಷನ್ ದೊರೆಯುತ್ತದೆ ಎಂದು ತಿಳಿಸಿದ.

ಆರ್‌ಬಿಐ ಗಡುವು ಜೂ.30ರವರೆಗೆ ಇದೆಯಾದರೂ ನಾವು ಜೂ.25ಕ್ಕೇ ಈ ದಂಧೆ ನಿಲ್ಲಿಸುತ್ತೇವೆ. ಆನಂತರ ನೋಟುಗಳನ್ನು ಸಾಗಿಸುವುದು ಕಷ್ಟವಾಗುತ್ತದೆ ಎಂದೂ ಆತ ಹೇಳಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News