ವಿದೇಶಕ್ಕೆ ತೆರಳುವ ಕೇರಳೀಯರ ಸಂಖ್ಯೆ ಕುಸಿತ
ಹೊಸದಿಲ್ಲಿ, ಜೂ.14: ವಿದೇಶಕ್ಕೆ ಉದ್ಯೋಗಾರ್ಥಿಗಳಾಗಿ ತೆರಳುವ ಕೇರಳೀಯರ ಸಂಖ್ಯೆ 2016ರಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.
2016ರಲ್ಲಿ ವಿದೇಶಕ್ಕೆ ಉದ್ಯೋಗಿಗಳಾಗಿ ತೆರಳಿದ ಕೇರಳೀಯರ ಸಂಖ್ಯೆ ಸುಮಾರು 2.25 ಮಿಲಿಯನ್ ಆಗಿದ್ದು 2014ಕ್ಕೆ ಹೋಲಿಸಿದರೆ ಇದು 1,54,320ರಷ್ಟು ಕಡಿಮೆಯಾಗಿದೆ ಎಂದು ತಿರುವನಂತಪುರ ಮೂಲದ ‘ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್’ (ಸಿಡಿಎಸ್) ನಡೆಸಿದ ಸರ್ವೆಯಲ್ಲಿ ತಿಳಿದು ಬಂದಿದೆ. ಸಿಡಿಎಸ್ 1998ರಿಂದಲೂ ಈ ಸಮೀಕ್ಷೆ ನಡೆಸಿದ್ದು ಇದೇ ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆರಳುವ ಕೇರಳೀಯರ ಪ್ರಮಾಣ ಕುಸಿದಿದೆ. ವಿದೇಶದಲ್ಲಿ ನೆಲೆಸಿರುವ ಕೇರಳೀಯರು ಪ್ರತೀ ವರ್ಷ ಸುಮಾರು 1 ಸಾವಿರ ಬಿಲಿಯನ್ ರೂಪಾಯಿ ಹಣವನ್ನು ಕೇರಳಕ್ಕೆ ರವಾನಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ತೈಲಶ್ರೀಮಂತ ಪಶ್ಚಿಮ ಏಶ್ಯಾ ರಾಷ್ಟ್ರಗಳಾದ ಸೌದಿ ಅರೆಬಿಯ ಮತ್ತು ಯುಎಇಯಲ್ಲಿ ಉದ್ಯೋಗಿಗಳಾಗಿದ್ದಾರೆ.
30 ಮಿಲಿಯನ್ ಜನಸಂಖ್ಯೆ ಹೊಂದಿರುವ ಕೇರಳದ ಸುಮಾರು ಶೇ.10ರಷ್ಟು ಪ್ರಜೆಗಳು ವಿದೇಶದಲ್ಲಿ ನೆಲೆಸಿದ್ದು ಇವರು ಮನೆಗೆ ಕಳಿಸುವ ಹಣ ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ವರ್ಷ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿರುವುದು ರಾಜ್ಯದ ಅರ್ಥವ್ಯವಸ್ಥೆಗೆ ಮಾರಣಾಂತಿಕ ಹೊಡೆತ ನೀಡಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.