ಡಬ್ಲುಟಿಎ ಸ್ಟಾನ್‌ಫೋರ್ಡ್ ಟೂರ್ನಿ: ಮರಿಯಾ ಶರಪೋವಾಗೆ ಆಹ್ವಾನ

Update: 2017-06-15 18:34 GMT

ಲಾಸ್ ಏಂಜಲಿಸ್, ಜೂ.15: ಮುಂದಿನ ತಿಂಗಳಾಂತ್ಯದಲ್ಲಿ ನಡೆಯಲಿರುವ ಡಬ್ಲುಟಿಎ ಸ್ಟಾನ್‌ಫೋರ್ಟ್ ಟೂರ್ನಮೆಂಟ್‌ನಲ್ಲಿ ಆಡಲು ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾ ಆಹ್ವಾನ ಸ್ವೀಕರಿಸಿದ್ದಾರೆ.

ಇತ್ತೀಚೆಗಷ್ಟೇ 15 ತಿಂಗಳ ಡೋಪಿಂಗ್ ನಿಷೇಧದಿಂದ ವಾಪಸಾಗಿರುವ ಶರಪೋವಾ ಜು.31 ರಿಂದ ಆ.6ರ ತನಕ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಆರು ವರ್ಷಗಳ ಬಳಿಕ ಮೊದಲ ಬಾರಿ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲು ಅಧಿಕಾರಿಗಳು 30ರ ಹರೆಯದ ಶರಪೋವಾಗೆ ವೈರ್ಲ್ಡ್‌ಕಾರ್ಡ್ ಪ್ರವೇಶ ನೀಡಿದ್ದಾರೆ.

‘‘ಸ್ಟಾನ್‌ಫೋರ್ಡ್ ಟೂರ್ನಿಯಲ್ಲಿ ಆಡಲು ತುದಿಗಾಲಲ್ಲಿ ನಿಂತಿರುವೆ. ನನಗೆ ಈ ಟೂರ್ನಿಯಲ್ಲಿ ಆಡಲು ಅವಕಾಶ ಕಲ್ಪಿಸಿರುವ ಆಯೋಜಕರಿಗೆ ಕೃತಜ್ಞತೆ ಸಲ್ಲಿಸುವೆನು’’ ಎಂದು ಶರಪೋವಾ ಹೇಳಿದ್ದಾರೆ.

28 ಸಿಂಗಲ್ಸ್ ಆಟಗಾರರಿರುವ ಟೂರ್ನಿಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಅವರು ಭಾಗವಹಿಸಲಿದ್ದಾರೆ.
ವಿಶ್ವದ ನಂ.173ನೆ ರ್ಯಾಂಕಿನ ಆಟಗಾರ್ತಿ ಶರಪೋವಾ ಎಪ್ರಿಲ್‌ನಲ್ಲಿ ಸ್ಟಟ್‌ಗರ್ಟ್ ಟೂರ್ನಿಯಲ್ಲಿ ಆಡುವುದರೊಂದಿಗೆ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು. ಆ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ವಿಂಬಲ್ಡನ್ ಟೂರ್ನಿಗೆ ಅರ್ಹತೆ ಪಡೆಯಲು ಪ್ರಯತ್ನಿಸಿದ್ದ ಶರಪೋವಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News