ಮತ್ತೊಬ್ಬ ಎನ್‌ಡಿಎ ಸಂಸದನಿಂದ ವಿಮಾನದಲ್ಲಿ ಅಸಭ್ಯ ವರ್ತನೆ

Update: 2017-06-16 04:03 GMT

ವಿಶಾಖಪಟ್ಟಣಂ, ಜೂ.16: ಶಿವಸೇನೆ ಸಂಸದನ ಬಳಿಕ ಇದೀಗ ತೆಲುಗು ದೇಶಂ ಪಕ್ಷದಿಂದ ಆಯ್ಕೆಯಾಗಿರುವ ಅನಂತಪುರ ಸಂಸದ ಜೆ.ಸಿ.ದಿವಾಕರ ರೆಡ್ಡಿ ವಿಮಾನದಲ್ಲಿ ಅಸಭ್ಯ ವರ್ತನೆಯಿಂದ ಸುದ್ದಿ ಮಾಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಈ ಕಾರಣಕ್ಕೆ ವಿಮಾನಯಾನದಿಂದ ನಿಷೇಧಕ್ಕೆ ಒಳಪಡುತ್ತಿರುವ ಎರಡನೇ ಸಂಸದ ಎಂಬ ಕುಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

ಗುರುವಾರ ಬೆಳಗ್ಗೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ರೆಡ್ಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಇಂಡಿಗೋ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಸಂಜೆಯೇ ಅವರ ವಿರುದ್ಧ ವಿಮಾನಯಾನ ನಿಷೇಧ ಹೇರಲಾಗಿದೆ. ಇದನ್ನು ಅನುಸರಿಸಿದ ಏರ್‌ ಇಂಡಿಯಾ ಹಾಗೂ ಸ್ಪೈಸ್‌ಜೆಟ್ ಕೂಡಾ ನಿಷೇಧ ಹೇರಿದ್ದು, ಇತರ ವಿಮಾನಯಾನ ಕಂಪೆನಿಗಳೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ರೆಡ್ಡಿಯವರ ಅಸಭ್ಯ ವರ್ತನೆ ಹೊರತಾಗಿಯೂ ಸ್ಥಳದಲ್ಲೇ ಇದ್ದ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿರಾಜು ಅವರ ಮಧ್ಯಸ್ಥಿಕೆಯಿಂದಾಗಿ ಗುರುವಾರ ವಿಮಾನಯಾನ ಸಾಧ್ಯವಾಗಿತ್ತು.

ವಿಮಾನ ಹೊರಡಲು ಕೇವಲ 28 ನಿಮಿಷಗಳು ಇದ್ದಾಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರೆಡ್ಡಿಯವರಿಗೆ ಬೋರ್ಡಿಂಗ್ ಪಾಸ್ ನಿರಾಕರಿಸಲಾಗಿತ್ತು. ಡಿಜಿಸಿಎ ನಿಯಮಾವಳಿ ಪ್ರಕಾರ, ವಿಮಾನ ಹೊರಡುವ 45 ನಿಮಿಷ ಮೊದಲು ಚೆಕ್ ಇನ್ ಪ್ರಕ್ರಿಯೆ ಮುಗಿಸಿರಬೇಕು. ಈ ಹಂತದಲ್ಲಿ ರೆಡ್ಡಿ, ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ ಡೆಸ್ಕ್ ಎಳೆದಾಡಿ ಹಾನಿಗೊಳಿಸಿದರು. ಅವರ ಆಟಾಟೋಪ ನೋಡಿದ ಸಿಬ್ಬಂದಿ ಪಕ್ಕಕ್ಕೆ ತೆರಳಿದರು. ಆದರೆ ಆ ಕ್ಷಣಕ್ಕೆ ವಿಮಾನಯಾನ ಖಾತೆ ಸಚಿವರು ರೆಡ್ಡಿ ನೆರವಿಗೆ ಬಂದರು ಎಂದು ಉನ್ನತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News