ಬೇಡಿ ಪಡೆದುಕೊಂಡ ಮುಖಭಂಗ

Update: 2017-06-16 18:42 GMT

ಉಪಚುನಾವಣೆಯ ಗೆಲುವಿನ ಹ್ಯಾಂಗೋವರ್‌ನಲ್ಲಿ ತೇಲಾಡುತ್ತಿದ್ದ ರಾಜ್ಯ ಕಾಂಗ್ರೆಸ್, ‘ವಿಧಾನಪರಿಷತ್ ಸಭಾಪತಿಯ ಪ್ರಕರಣ’ದಲ್ಲಿ ಅವಮಾನವನ್ನು ಬೇಡಿ ಪಡೆದುಕೊಂಡಿರುವುದನ್ನು ನಾವು ಒಂದು ರಾಜಕೀಯ ತಮಾಷೆಯೆಂದೇ ಪರಿಗಣಿಸಬೇಕು. ಇಂತಹದೊಂದು ಅಣಕು ಚುನಾವಣೆಯನ್ನು ತಾನಾಗಿಯೇ ಆಹ್ವಾನಿಸಿ, ಅದರಲ್ಲಿ ಸೋತು ತಲೆತಗ್ಗಿಸಿ ನಿಂತಿರುವ ರಾಜ್ಯ ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಯಲ್ಲೇ ಅದರ ಭವಿಷ್ಯವನ್ನು ನಾವು ಗುರುತಿಸಬಹುದು. ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಅತಿಯಾದ ಆತ್ಮವಿಶ್ವಾಸ, ಮುತ್ಸದ್ದಿತನದ ಕೊರತೆ, ಅವಿವೇಕಗಳಿಗೆ ಹಿಡಿದ ಕನ್ನಡಿಯಾಗಿದೆ ವಿಧಾನಪರಿಷತ್‌ನಲ್ಲಿ ಅದು ಮಂಡಿಸಿದ ಅವಿಶ್ವಾಸ ನಿರ್ಣಯ.

ಈ ಅವಿಶ್ವಾಸ ನಿರ್ಣಯದಲ್ಲಿ ಗೆದ್ದಿರುವುದು ಬಿಜೆಪಿಯಲ್ಲ; ಜೆಡಿಎಸ್. ಈ ಅವಿಶ್ವಾಸ ನಿರ್ಣಯದಲ್ಲಿ ಸೋತರೂ, ಗೆದ್ದರೂ ಜೆಡಿಎಸ್ ಪಡೆದುಕೊಳ್ಳುವುದರ ಹೊರತು ಕಳೆದುಕೊಳ್ಳುವುದಕ್ಕೆ ಏನೂ ಇದ್ದಿರಲಿಲ್ಲ. ಇಂತಹದೊಂದು ಅನಿರೀಕ್ಷಿತ ಅವಿಶ್ವಾಸ ನಿರ್ಣಯದಿಂದ ಜೆಡಿಎಸ್ ತನ್ನ ಅಸ್ತಿತ್ವವನ್ನು ಕಾಂಗ್ರೆಸ್-ಬಿಜೆಪಿಗೆ ಸಾಬೀತು ಪಡಿಸಲು ಸಿಕ್ಕಿದ ಒಂದು ಅವಕಾಶವೆಂದು ಭಾವಿಸಿತು. ಒಂದು ರೀತಿಯಲ್ಲಿ ಒಂದೇ ಕಲ್ಲಿನಲ್ಲಿ ಜೆಡಿಎಸ್ ಎರಡೆರಡು ಹಕ್ಕಿಗಳನ್ನು ತನ್ನದಾಗಿಸಿತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಮುಖಭಂಗ ಮಾಡುವುದು ಒಂದಾಗಿದ್ದರೆ, ಮುಂದಿನ ಕೆಲವೇ ದಿನಗಳಲ್ಲಿ ಖಾಲಿ ಬೀಳಲಿರುವ ವಿಧಾನಪರಿಷತ್ ಸಭಾಪತಿ ಸ್ಥಾನವನ್ನೂ ತನ್ನದಾಗಿಸಿಕೊಳ್ಳಲಿದೆ.

ಇದರ ಜೊತೆಗೆ, ಗಣಿ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಜೈಲಿಗೆ ಹೋಗಬೇಕಾದ ಪ್ರಸಂಗ ಬಂದರೆ ಕೇಂದ್ರ ಸರಕಾರದ ಸಹಾಯ ಅತ್ಯಗತ್ಯವಾಗಿ ಬೇಕಾಗುತ್ತದೆ. ಅಷ್ಟೇ ಅಲ್ಲ, ಒಂದು ವೇಳೆ ಕೇಂದ್ರ ಸರಕಾರ ತನ್ನ ಕುಣಿಕೆಯನ್ನೇನಾದರೂ ಬಿಗಿಗೊಳಿಸಿದರೆ ಅವರನ್ನು ಜೈಲಿಗೆ ಕಳುಹಿಸುವುದಕ್ಕೂ ಅದು ಹಿಂಜರಿಯಲಾರದು. ನಿರೀಕ್ಷಣಾ ಜಾಮೀನು ನಿರಾಕರಣೆಯ ಅನಂತರ ಅಂತಹದೊಂದು ಅತಂತ್ರ ಸ್ಥಿತಿಯಲ್ಲಿ ಕುಮಾರಸ್ವಾಮಿ ಸಿಲುಕಿಕೊಂಡಿದ್ದರು. ವಿಧಾನಪರಿಷತ್‌ನ ಸಭಾಪತಿಯ ವಿರುದ್ಧ ಅವಿಶ್ವಾಸ ಮಂಡನೆಗೆ ಪರೋಕ್ಷವಾಗಿ ಬೆಂಬಲ ನೀಡಿದಂತೆ ಮಾಡಿ, ತನ್ನ ಅಗತ್ಯವನ್ನು ಬಿಜೆಪಿಗೆ ಕುಮಾರಸ್ವಾಮಿ ಮನಗಾಣಿಸಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯ ಜೊತೆಗೆ ಕೈ ಜೋಡಿಸಿತು. ತಾನೇ ಕೈಯಾರೆ ಆಹ್ವಾನಿಸಿಕೊಂಡ ಅವಮಾನವನ್ನು ಜೀರ್ಣಿಸಿಕೊಳ್ಳಲಾಗದ ಕಾಂಗ್ರೆಸ್ ಪಕ್ಷ ‘‘ಜೆಡಿಎಸ್ ಕೋಮುವಾದಿ ಪಕ್ಷದ ಜೊತೆಗೆ ಕೈಜೋಡಿಸಿದೆ’’ ಎಂದು ಅಲವತ್ತುಕೊಳ್ಳುತ್ತಿದೆ.

ಮುಖ್ಯವಾಗಿ ಸಭಾಪತಿ ಡಿ. ಎಚ್. ಶಂಕರಮೂರ್ತಿಯವರನ್ನು ಕೆಳಗಿಳಿಸುವುದು ಕಾಂಗ್ರೆಸ್ ಪಕ್ಷದ ಅಥವಾ ಸರಕಾರದ ಸದ್ಯದ ತುರ್ತು ಅಗತ್ಯವಾಗಿರಲೇ ಇಲ್ಲ. ಇನ್ನು ಮೂರು ತಿಂಗಳಲ್ಲಿ ರಾಜೀನಾಮೆ ನೀಡಲಿದ್ದ ಡಿ. ಎಚ್. ಶಂಕರಮೂರ್ತಿಯನ್ನು ಅಷ್ಟೊಂದು ಅವಸರವಸರವಾಗಿ ಕೆಳಗಿಳಿಸುವ ಅನಿವಾರ್ಯ ಕಾಂಗ್ರೆಸ್‌ನೊಳಗಿರುವ ಕೆಲವು ನಾಯಕರಿಗಿತ್ತೇ ಹೊರತು, ಅದು ಇಡೀ ಸದನದ ಅಗತ್ಯವಾಗಿರಲಿಲ್ಲ. ವೈಯಕ್ತಿಕ ಪ್ರತಿಷ್ಠೆಯೇ ಇಲ್ಲಿ ಮುಖ್ಯವಾಗಿತ್ತು. ಕಳೆದ ಉಪಚುನಾವಣೆಯಲ್ಲಿ ಜೆಡಿಎಸ್ ಪರೋಕ್ಷವಾಗಿ ಕಾಂಗ್ರೆಸ್‌ಗೆ ಸಹಕರಿಸಿರುವುದನ್ನೂ ನಾವಿಲ್ಲಿ ಗಮನಿಸಬೇಕು. ಆದರೆ ಈ ಸಹಕಾರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಏನೂ ಸಿಕ್ಕಿಲ್ಲ ಎನ್ನುವ ಅಸಮಾಧಾನ ಕುಮಾರಸ್ವಾಮಿಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಗಣಿ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವಲ್ಲಿ ವಿರೋಧಿಗಳು ಸಂಪೂರ್ಣ ಯಶಸ್ವಿಯಾಗಿರುವಾಗ, ರಾಜ್ಯ ಸರಕಾರ ಯಾವ ರೀತಿಯಲ್ಲೂ ತನ್ನ ಪರವಾಗಿ ಸ್ಪಂದಿಸದೇ ಇರುವುದು ಕುಮಾರಸ್ವಾಮಿಯವರನ್ನು ಕೆರಳಿಸಿತ್ತು. ಸಿದ್ದರಾಮಯ್ಯ ಅವರೂ ಈ ಪ್ರಕರಣದಲ್ಲಿ ಸ್ಪಷ್ಟ ಅಂತರವನ್ನು ಕಾಪಾಡಿಕೊಂಡಿದ್ದರು. ಇಂತಹ ಸಂದರ್ಭದಲ್ಲಿ, ವಿಧಾನಪರಿಷತ್ ಸಭಾಪತಿಯ ಕುರಿತಂತೆ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯ ಜೆಡಿಎಸ್‌ಗೆ ಹೆಚ್ಚು ಲಾಭದಾಯಕವಾಗಿ ಪರಿಣಮಿಸಿತು. ಆದುದರಿಂದಲೇ ಕೊನೆಯವರೆಗೂ ಕಾಂಗ್ರೆಸ್ ಜೊತೆಗೆ ಇದ್ದಂತೆಯೇ ನಟಿಸಿ, ಬಿಜೆಪಿಯನ್ನು ಬ್ಲಾಕ್‌ಮೇಲ್ ಮಾಡಿದ ಜೆಡಿಎಸ್, ತನಗೆ ಬೇಕಾದುದನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಪೆಚ್ಚಾಗಿದೆ.

‘ಜೆಡಿಎಸ್ ಕೋಮುವಾದಿಗಳ ಜೊತೆಗೆ ಕೈ ಜೋಡಿಸಿದೆ’ ಎಂದು ಕಾಂಗ್ರೆಸ್ ಪಕ್ಷ ಚೀರಾಡುತ್ತಿದೆ. ಆದರೆ ಅದರಲ್ಲಿ ಹೊಸತೇನೂ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಅದು ರಾಷ್ಟ್ರೀಯ ಪಕ್ಷಗಳ ಜೊತೆಗೆ ಒಂದಲ್ಲ ಒಂದು ರೀತಿ ಕೈ ಜೋಡಿಸಲೇ ಬೇಕಾಗಿದೆ. ಬಿಜೆಪಿಯನ್ನು ತೋರಿಸಿ ಕಾಂಗ್ರೆಸ್ ಜೊತೆಗೆ, ಕಾಂಗ್ರೆಸ್‌ನ್ನು ತೋರಿಸಿ ಬಿಜೆಪಿಯ ಜೊತೆಗೆ ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡೇ ಅದು ಅಧಿಕಾರವನ್ನು ಸವಿಯುತ್ತಾ ಬಂದಿದೆ. ಜೆಡಿಎಸ್ ತನ್ನ ಅಸ್ತಿತ್ವಕ್ಕಾಗಿ ಯಾವ ಸಿದ್ಧಾಂತದ ಜೊತೆಗೆ ಯಾವುದೇ ಕ್ಷಣದಲ್ಲೂ ರಾಜಿ ಮಾಡಿಕೊಳ್ಳಬಹುದು ಎನ್ನುವುದನ್ನು ಕಾಂಗ್ರೆಸ್ ಇನ್ನೂ ಮನವರಿಕೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ತಕ್ಕ ಬೆಲೆಯನ್ನು ಆ ಪಕ್ಷ ತೆರಲೇಬೇಕಾಗುತ್ತದೆ. ಇದೀಗ ತೆತ್ತಿದೆ ಕೂಡ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರವಾಗಿ ಅನುಕಂಪ ವ್ಯಕ್ತಪಡಿಸುವವರೂ ಇಲ್ಲ. ಅದರ ದುಃಖದಲ್ಲಿ ಅದು ಒಬ್ಬಂಟಿ. ಜೆಡಿಎಸ್‌ನ ಜೊತೆಗೆ ಬಲವಾದ ಒಪ್ಪಂದ ಮಾಡಿದ ಬಳಿಕವೇ ಕಾಂಗ್ರೆಸ್ ವಿಶ್ವಾಸ ಮತ ಸಾಬೀತು ಮಾಡುವ ಸಾಹಸಕ್ಕೆ ಇಳಿಯಬೇಕಾಗಿತ್ತು. ‘ಜಾತ್ಯತೀತತೆ’ ‘ಕೋಮುವಾದ’ ಎಂದೆಲ್ಲ ಗುಮ್ಮನನ್ನು ತೋರಿಸಿ ತನ್ನ ಪರವಾಗಿ ಆ ಪಕ್ಷ ನಿಲ್ಲಬೇಕೆಂದು ಬಯಸುವುದು ಕಾಂಗ್ರೆಸ್‌ನ ಮೂರ್ಖತನವಾಗಿದೆ. ದೇವೇಗೌಡರು ಒಂದು ಬಲಿಷ್ಠ ಜಾತಿಯ ಹಿನ್ನೆಲೆಯಿರುವ, ತನ್ನದೇ ಕುಟುಂಬ ಹಿತಾಸಕ್ತಿಯನ್ನು, ಅಧಿಕಾರಕ್ಕಾಗಿ ಎಂತಹ ದುಸ್ಸಾಹಸಕ್ಕೂ ಕೈ ಹಾಕುವ ಚಾಲಾಕಿ ನಾಯಕರು. ಕುಮಾರಸ್ವಾಮಿ ಒಂದು ಕಾಲದಲ್ಲಿ ‘ಜಾತ್ಯತೀತ’ ಎಂದರೆ ಏನು ಎನ್ನುವುದು ನನಗೆ ಗೊತ್ತಿಲ್ಲ ಎಂದು ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಆಡಿಕೊಂಡಿರುವವರು.

ಅಧಿಕಾರಕ್ಕಾಗಿ ಎಂತಹ ಕಳಂಕವನ್ನೂ ತನ್ನ ಮೈಮೇಲೆ ಎಳೆದುಕೊಳ್ಳಲು ಸಿದ್ಧ ಎನ್ನುವುದನ್ನು ದೇವೇಗೌಡರ ಪುತ್ರರು ಪದೇ ಪದೇ ಅವರು ನಿರೂಪಿಸಿರುವಾಗ, ಸಭಾಪತಿಯ ಒಂದು ಸಣ್ಣ ಪ್ರಕರಣದಲ್ಲಿ ಅವರಿಂದ ಸಿದ್ಧಾಂತವನ್ನು, ಬದ್ಧತೆಯನ್ನು ಕಾಂಗ್ರೆಸ್‌ನ ನಾಯಕರು ನಿರೀಕ್ಷಿಸಿದರೆ ಅದು ಅವರ ರಾಜಕೀಯ ದಿವಾಳಿತನದ ಸಂಕೇತ. ಜೆಡಿಎಸ್ ಮತ್ತೊಮ್ಮೆ ತನ್ನ ಸಮಯಸಾಧಕ ರಾಜಕೀಯವನ್ನು ಪ್ರದರ್ಶಿಸುವ ಮೂಲಕ ಕಾಂಗ್ರೆಸ್‌ಗೆ ಎಚ್ಚರಿಕೆಯನ್ನು ನೀಡಿದೆ.

ಮುಂದಿನ ಚುನಾವಣೆಯಲ್ಲಿ ಯಾವ ಸಂದರ್ಭದಲ್ಲೂ ತಾನು ಬಿಜೆಪಿಯ ಜೊತೆಗೆ ಕೈ ಜೋಡಿಸಬಲ್ಲೆ ಎನ್ನುವಂತಹ ಎಚ್ಚರಿಕೆ ಅದು. ಸದ್ಯದ ನಿಲುವಿನಿಂದ ಜೆಡಿಎಸ್‌ಗೆ ಪಕ್ಷಕ್ಕೆ ಧಕ್ಕೆಯಾಗಿದೆ ನಿಜ. ಜಾತ್ಯತೀತ ಮತಗಳು ಜೆಡಿಎಸ್‌ನಿಂದ ಒಂದಿಷ್ಟು ದೂರ ಸರಿಯಲಿರುವುದನ್ನು ನಾವು ಅಲ್ಲಗಳೆಯಲಾಗದು. ಆದರೆ ಮುಂದಿನ ಚುನಾವಣೆಯಲ್ಲಿ ಮತಗಳನ್ನು ಒಡೆಯುವ ಸಾಮರ್ಥ್ಯ ಈಗಲೂ ಜೆಡಿಎಸ್‌ಗೆ ಇದೆ. ಆದುದರಿಂದ ಜೆಡಿಎಸ್ ರಾಜ್ಯ ಕಾಂಗ್ರೆಸ್‌ಗೆ ನೀಡಿರುವ ಸಂದೇಶವನ್ನು ಅದೆಷ್ಟರ ಮಟ್ಟಿಗೆ ಗಂಭೀರವಾಗಿ ಸ್ವೀಕರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News