​ಅವಧಿ ಕೊನೆಯಲ್ಲಿ ಎರಡು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

Update: 2017-06-17 04:20 GMT

ಹೊಸದಿಲ್ಲಿ, ಜೂ. 17: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಕೇವಲ ಒಂದು ತಿಂಗಳು ಬಾಕಿ ಇರುವಾಗ, ಮತ್ತೆ ಎರಡು ಕ್ಷಮಾದಾನ ಅರ್ಜಿಗಳನ್ನು ಅವರು ತಿರಸ್ಕರಿಸಿದ್ದಾರೆ. ಇದರಿಂದ ಅವರ ಅಧಿಕಾರಾವಧಿಯಲ್ಲಿ ತಿರಸ್ಕೃತವಾದ ಕ್ಷಮಾದಾನ ಅರ್ಜಿಗಳ ಸಂಖ್ಯೆ 30ಕ್ಕೇರಿದೆ.

ಮೊದಲ ಪ್ರಕರಣದಲ್ಲಿ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಮೂವರಿಗೆ ಕ್ಷಮಾದಾನ ನಿರಾಕರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪುಣೆಯ ಟೆಕ್ಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಕಾರು ಚಾಲಕ ಹಾಗೂ ಸಹಚರರ ಅರ್ಜಿಯನ್ನೂ ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಅರ್ಜಿಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿತ್ತು.

ಇಂಧೋರ್ ಪ್ರಕರಣದಲ್ಲಿ ಬಾಬು ಅಲಿಯಾಸ್ ಖೇತನ್ (22), ಜಿತೇಂದ್ರ ಅಲಿಯಾಸ್ ಜಿತು (20), ದೇವೇಂದ್ರ ಅಲಿಯಾಸ್ ಸನ್ನಿ (22) ಎಂಬುವವರು, ವಿವಾಹ ಮೆರವಣಿಗೆ ವೀಕ್ಷಿಸುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ಅತ್ಯಾಚಾರ ಎಸಗಿದ ಬಳಿಕ ಪುಟ್ಟ ಬಾಲೆಯನ್ನು ಉಸಿರುಗಟ್ಟಿಸಿ ಸಾಯಿಸಿ ಚರಂಡಿಗೆ ಎಸೆದಿದ್ದರು.

ಪುಣೆ ಪ್ರಕರಣದಲ್ಲಿ 2007ರಲ್ಲಿ ವಿಪ್ರೋ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಕ್ಕಾಗಿ ಪುರುಷೋತ್ತಮ ದಶರಥ ಬೊರಾಟೆ ಹಾಗೂ ಪ್ರದೀಪ್ ಯಶವಂತ್ ಕೊಕಾಡೆ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

26/11 ಮುಂಬೈ ದಾಳಿಯ ರೂವಾರಿ ಅಜ್ಮಲ್ ಕಸಬ್, ಸಂಸತ್ ಭವನದ ದಾಳಿ ಪ್ರಕರಣದ ರೂವಾರಿ ಅಫ್ಝಲ್ ಗುರು, ಮುಂಬೈ ಸ್ಫೋಟದ ರೂವಾರಿ ಯಾಕುಬ್ ಮೆಮನ್ ಸೇರಿದಂತೆ 30 ಪ್ರಕರಣಗಳಲ್ಲಿ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಮ್ಮ ಅಧಿಕಾರಾವಧಿಯಲ್ಲಿ ತಿರಸ್ಕರಿಸಿದ್ದಾರೆ. ಹಿಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಒಂದು ಕ್ಷಮಾದಾನ ಅರ್ಜಿಯನ್ನೂ ಇತ್ಯರ್ಥಪಡಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News