ಮೋದಿಯ ಅಮಾನ್ಯೀಕರಣ ನೀತಿ "ವಿಚ್ಛಿದ್ರಕಾರಿ ಪ್ರಯೋಗ": ಅಮೆರಿಕನ್ ನಿಯತಕಾಲಿಕ ವರದಿ

Update: 2017-06-17 07:18 GMT

ಹೊಸದಿಲ್ಲಿ, ಜೂ. 17: ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ನೋಟು ಅಮಾನ್ಯೀಕರಣ ಯೋಜನೆಯು ಇತ್ತೀಚಿಗಿನ ಆರ್ಥಿಕ ಇತಿಹಾಸದಲ್ಲಿಯೇ ಒಂದು ``ವಿಚ್ಛಿದ್ರಕಾರಕ ಪ್ರಯೋಗ'ವಾಗಿದೆ ಹಾಗೂ ಭಾರತದ ನಗದು ಆಧಾರಿತ ಆರ್ಥಿಕತೆ  ಅದರಿಂದ ಸ್ಥಬ್ಧಗೊಂಡಿತ್ತು ಎಂದು ಅಮೆರಿಕಾದ  ಖ್ಯಾತ ನಿಯತಕಾಲಿಕ `ಫಾರಿನ್ ಅಫೇರ್ಸ್ ' ವರದಿಯೊಂದು ಹೇಳಿದೆ.

ಮೋದಿಯ ಕ್ರಮ ``ಆರ್ಥಿಕವಾಗಿ'' ಹೆಚ್ಚು ಮಹತ್ವದ್ದಾಗಿಲ್ಲದೇ ಇದ್ದರೂ ಅದು ಬಹಳ ಜನಪ್ರಿಯಗೊಂಡಿತ್ತು ಎಂದೂ ನಿಯತಕಾಲಿಕ ಹೇಳಿದೆ.
ಈ ಅಮಾನ್ಯೀಕರಣದ ಕ್ರಮದಿಂದಾಗಿ ಮೋದಿ ಆಡಳಿತ ಈಗ ಎಲ್ಲಾ ತಪ್ಪು ಪಾಠಗಳನ್ನು ಕಲಿಯುವ ಅಪಾಯ ಎದುರಿಸುತ್ತಿದೆ ಎಂದು ಲೇಖಕ ಜೇಮ್ಸ್ ಕ್ರ್ಯಾಬ್ ಟ್ರೀ ಬರೆದಿದ್ದಾರೆ.

ಸಿಂಗಾಪುರದ  ಲೀ ಕುವಾನ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಎನ್‍ಯುಎಸ್  ಇಲ್ಲಿನ ಹಿರಿಯ ವಿಸಿಟಿಂಗ್ ರಿಸರ್ಚ್ ಫೆಲ್ಲೋ ಆಗಿರುವ  ಅವರು ಅಮಾನ್ಯೀಕರಣ ನೀತಿಯ ಕಟು ಟೀಕಾಕಾರರಲ್ಲೊಬ್ಬರಾಗಿದ್ದಾರೆ.

ಇಲ್ಲಿಯ ತನಕ ಮೋದಿಯ ಆರ್ಥಿಕ ಸಾಧನೆಗಳು ವಾಸ್ತವವಾಗಿದ್ದರೂ, ಅಭಿವೃದ್ಧಿಗೆ ಪೂರಕವಾದ ಸುಧಾರಣೆಗಳ ಬಗ್ಗೆ, ಮುಖ್ಯವಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಯೋಜನೆಗಳ ವಿಚಾರದಲ್ಲಿ ಅವರ ಸಾಧನೆಗೆ ಮಿಶ್ರ ಪ್ರತಿಕ್ರಿಯೆಯಿದೆ ಎಂದು ಅವರು ಬರೆದಿದ್ದಾರೆ.

ಅಲ್ಪಾವಧಿ ಬೆಳವಣಿಗೆಗೆ ಅಮಾನ್ಯೀಕರಣ ಪೂರಕವಾಗಿಲ್ಲ ಎಂಬುದು ನಿರ್ವಿವಾದಿತ. 2017ರ ಮೊದಲ ತ್ರೈಮಾಸಿಕದ ಜಿಡಿಪಿ ವಿವರಗಳನ್ನು  ಭಾರತ ಬಿಡುಗಡೆ ಮಾಡಿದು. ಈ ಅವಧಿಯಲ್ಲಿ ಮೋದಿಯ ಅಮಾನ್ಯೀಕರಣ ನೀತಿ ಅತಿ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ನೋಟು ಅಮಾನ್ಯೀಕರಣ ಕ್ರಮದಿಂದ ಉಂಟಾದ ನಗದು ಕೊರತೆ ಬಡವರನ್ನು ಅತಿಯಾಗಿ ಕಾಡಿತ್ತು ಎಂದೂ ಕ್ರ್ಯಾಬ್ ಟ್ರೀ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News